

೨೦೨೪ ರ ಮೊದಲು ಬಿ.ಜೆ.ಪಿ.ಯ ಪ್ರಯೋಗಶಾಲೆಯಂತಾಗಿದ್ದ ಕರಾವಳಿ ಮಲೆನಾಡಿನಲ್ಲಿ ಈ ವರ್ಷ ಉರಿಬಿಸಿಲಿನೊಂದಿಗೆ ರಾಜಕೀಯ ಕಾವು ಪ್ರಾರಂಭವಾಗಿದೆ. ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಸಿದ್ದೇಶ್ವರ ಕುಟುಂಬದ ವಿರುದ್ಧ ಮಾಜಿ ಶಾಸಕ ರೇಣುಕಾಚಾರ್ಯ ಬಂಡಾಯದ ಬಾವುಟ ಹಾರಿಸಿದ್ದಾರೆ.
ಅಲ್ಲಿಂದ ಮಲೆನಾಡು ಪ್ರವೇಶಿಸುವ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಹಳೆ ದೋಸ್ತಿಗಳ ರಾಜಕೀಯ ಕಾದಾಟ ಸದಾ ಸುದ್ದಿಯ ಕೇಂದ್ರ ಬಿಂದುವಾಗಿದೆ.
ಕಳೆದ ವರ್ಷದ ವಿಧಾನ ಸಭೆಯ ಚುನಾವಣೆಯ ಬಿ.ಜೆ.ಪಿ. ಟಿಕೇಟ್ ವಂಚಿತ ಈಶ್ವರಪ್ಪ ಆದ ಅವಮಾನ ನುಂಗಿಕೊಂಡು ನೋವಿನಲ್ಲೂ ನಗುತ್ತಾ ಸುಧಾರಿಸಿಕೊಂಡಿದ್ದರು. ಆದರೆ ಈ ಬಾರಿ ಈಶ್ವರಪ್ಪ ಸಿಟ್ಟಾಗಿ ಮಾಜಿ ಗೆಳೆಯ ಬಿ.ಎಸ್. ಯಡಿಯೂರಪ್ಪನವರ ಕುಟುಂಬದ ವಿರುದ್ಧ ಕೆಂಡ ಕಾರಿ ಬಿ.ಜೆ.ಪಿ.ಯಲ್ಲಿ ಕುಟುಂಬ ರಾಜಕಾರಣ ಮಾಡುತ್ತಿರುವ ಯಡಿಯೂರಪ್ಪನವರನ್ನು ನಿಯಂತ್ರಿಸದ ಮೋದಿ ಉಧಾರತೆಗೆ ಬಂಡೆದ್ದು ಸ್ವತಂತ್ರ ಸ್ಫರ್ಧೆಯ ಸುಳಿವು ನೀಡಿದ್ದಾರೆ.
ಅಲ್ಲಿಂದ ಮಂಗಳೂರಿನತ್ತ ಕಣ್ಣು ಹಾಯಿಸಿದರೆ ಅಲ್ಲಿ ಕೂಡಾ ಸಂಘ ನಿಷ್ಟರು ಇತ್ತೀಚಿನ ಬಿ.ಜೆ.ಪಿ. ರಾಜಕಾರಣ, ಟಿಕೆಟ್ ಹಂಚಿಕೆಗಳ ಬಗ್ಗೆ ಸಮಾಧಾನ ಕಳೆದುಕೊಂಡು ಮಾತನಾಡಿದ್ದಾರೆ. ನಳಿನ್ ಕುಮಾರ್ ಕಟೀಲು ಬದಲು ಹೊಸಮುಖಕ್ಕೆ ಮಣೆಹಾಕಿರುವ ಬಿ.ಜೆ.ಪಿ. ನಿರ್ಧಾರಕ್ಕೆ ನಳಿನ್ ಕಟೀಲು ಪಕ್ಷದ ವಿರುದ್ಧ ಸಮರ ಸಾರದಿದ್ದರೂ ಅಲ್ಲಿಯ ಹಳೆಮುಖಗಳು ತಕರಾರು ಎತ್ತಿದ್ದಾರೆ.
ದಕ್ಷಿಣ ಕನ್ನಡದೊಂದಿಗೆ ಈ ಬಾರಿ ಉತ್ತರ ಕನ್ನಡದಲ್ಲಿ ಕೂಡಾ ಹಿರಿಯ ಸಂಸದ ಅನಂತಕುಮಾರ ಹೆಗಡೆಯವರಿಗೆ ಟಿಕೆಟ್ ಇಲ್ಲ ಎನ್ನುತ್ತಿರುವುದು ಹೊಸ ಬೆಳವಣಿಗೆಗಳಿಗೆ ಕಾರಣವಾಗಿದೆ.
ಅನಂತಕುಮಾರ ಹೆಗಡೆ ಕಳೆದ ನಾಲ್ಕು ವರ್ಷಗಳಿಂದ ನೇಪಥ್ಯದಲ್ಲಿದ್ದು ಈಗ ನಾನೇ ಅಭ್ಯರ್ಥಿ ಎನ್ನುವಂತೆ ಕ್ಷೇತ್ರ ಸುತ್ತಿದ್ದರು. ಆದರೆ ಈ ಬಾರಿ ಅನಂತಕುಮಾರ ಹೆಗಡೆ ಯೋಜನೆ ತಲೆಕೆಳಕಾಗಿದೆ. ಅನಂತಕುಮಾರ ಬದಲು ಹಿರಿಯ ನಾಯಕ ಮಾಜಿ ಸ್ಫೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಥವಾ ಚಕ್ರವರ್ತಿ ಸೂಲಿಬೆಲೆಗೆ ಟಿಕೇಟ್ ಎನ್ನುತ್ತಿರುವಂತೆ ಅನಂತಕುಮಾರ ಮೌನಕ್ಕೆ ಶರಣಾಗಿದ್ದಾರೆ. ಇದರ ಮಧ್ಯೆ ಕುಮಾರ ಬಂಗಾರಪ್ಪನವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಅಭ್ಯರ್ಥಿ ಮಾಡಲು ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಪಕ್ಷಗಳು ಸಂಪರ್ಕಿಸಿವೆ ಎನ್ನಲಾಗುತ್ತಿದೆ!
ತಮ್ಮ ವಿರೋಧಿಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಚಕ್ರವರ್ತಿ ಸೂಲಿಬೆಲೆ ಬದಲು ತಮ್ಮ ಸಂಬಂಧಿ ರಾಮಕೃಷ್ಣ ಹೆಗಡೆ ಕುಟುಂಬದ ಡಾ. ಶಶಿಭೂಷಣ ಹೆಗಡೆಯವರಿಗೆ ಟಿಕೇಟ್ ನೀಡಲು ಅನಂತಕುಮಾರ್ ಸೂಚಿಸಿದ್ದಾರಂತೆ. ಅನಂತಕುಮಾರ ಸೂಚನೆಯನ್ನು ಪಕ್ಷ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಆಗ ಮತ್ತದೇ ಕಾಗೇರಿ ವಿಶ್ವೇಶ್ವರ ಹೆಗಡೆ ಅಥವಾ ಚಕ್ರವರ್ತಿ ಸೂಲಿಬೆಲೆ, ಮಾಜಿ ಸಚಿವ ಕುಮಾರಬಂಗಾರಪ್ಪ ಅಭ್ಯರ್ಥಿಯಾಗುತ್ತಾರೆ. ಇವರೆಲ್ಲ ರೂ ಈ ಕ್ಷೇತ್ರಕ್ಕೆ ಹೊಸ ಮುಖಗಳು. ಕಾಗೇರಿ ಶಿರಸಿ ಕ್ಷೇತ್ರಕ್ಕೆ ಸೀಮಿತವಾಗಿದ್ದ ಹಿರಿಯ ನಾಯಕ, ಚಕ್ರವರ್ತಿ ಸೂಲಿಬೆಲೆ ಸ್ಥಳೀಯವಾಗಿ ಜನಪ್ರೀಯರಲ್ಲದ ಪ್ರಚಾರಕ. ಕುಮಾರ ಬಂಗಾರಪ್ಪ ಹೊರಗಿನವರು.
ಈ ಸ್ಥಿತಿಯಲ್ಲಿ ಕಾಂಗ್ರೆಸ್ ಎದುರಿಸಲು ಮೋದಿ ಅಲೆ ನೆರವಾಗುವುದು ಕಷ್ಟ. ಹೀಗೆ ಬಿ.ಜೆ.ಪಿ. ಯ ಭದ್ರ ಕೋಟೆಗಳಂತಿದ್ದ ಮಲೆನಾಡು ಕರಾವಳಿಯ ಇನ್ನೊಂದು ಕ್ಷೇತ್ರ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಜ್ಜನ, ಸರಳ ನಾಯಕ ಶ್ರೀನಿವಾಸ್ ಪೂಜಾರಿ ಬಿ.ಜೆ.ಪಿ. ಅಭ್ಯರ್ಥಿ ಅಲ್ಲಿಕೂಡಾ ಪರಿಸ್ಥಿತಿ ಬೂದಿಮುಚ್ಚಿದ ಕೆಂಡವೇ. ಶೋಭಾ ಕರಂದ್ಲಾಜೆ ವಿರುದ್ಧ ಶೀಥಲ ಸಮರ ಸಾರಿದ್ದ ಕೆಲವು ಪ್ರಮುಖ ನಾಯಕರು ಶ್ರೀನಿವಾಸ ಪೂಜಾರಿ ಪರ ಕೆಲಸಮಾಡುವುದು ಅನುಮಾನ. ನೆರೆ ಹೊರೆಯ ಕ್ಷೇತ್ರಗಳಂತೆ ಇಲ್ಲಿಯೂ ಅಸಮಧಾನದ ಹೊಗೆ ಬಂಡಾಯದ ಬೆಂಕಿಯಾದರೆ ಬಿ.ಜೆ.ಪಿ. ನಿರೀಕ್ಷೆ ಸುಳ್ಳಾಗುವ ಸಾಧ್ಯತೆಗಳೇ ಹೆಚ್ಚು. ಹೊಸ ಸುದ್ದಿ ಎಂದರೆ ಬಿ.ಜೆ.ಪಿ. ನಾಯಕ ಸದಾನಂದ ಗೌಡ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎನ್ನಲಾಗುತ್ತಿದೆ!
ಸದ್ಯಕ್ಕೆ ಬಿ.ಜೆ.ಪಿ. ಅಭ್ಯರ್ಥಿಗಳ ಘೊಷಣೆಯ ನಂತರದ ಸ್ಥಿತಿ ಇದು. ಇದರ ನಂತರ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ನಂತರ ಈ ರೀತಿ ಅಸಮಾಧಾನ ಭುಗಿಲೇಳುವ ಅವಕಾಶಗಳಿಲ್ಲ, ಯಾಕೇಂದರೆ ಕಾಂಗ್ರೆಸ್ ನಲ್ಲಿ ಈ ರೀತಿ ನಾಯಕತ್ವದ ಸ್ಫರ್ಧೆ, ಪೈಪೋಟಿ ಇಲ್ಲ.
ಚುನಾವಣೆ ಘೋಷಣೆಯ ಮೊದಲ ವಾರದಲ್ಲಿ ಈ ಸ್ಥಿತಿಯಾದರೆ ಇನ್ನೂ ಒಂದೂವರೆ ತಿಂಗಳ ಅವಧಿಯಲ್ಲಿ ಏನಾಗುವುದೋ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಆದರೆ ಇದೇ ಮೊದಲ ಬಾರಿ ಬಿ.ಜೆ.ಪಿ. ಈ ಪ್ರಮಾಣದಲ್ಲಿ ಆಂತರಿಕ ವಿರೋಧ,ಸಂಘರ್ಷ ಕ್ಕೆ ತುತ್ತಾಗಿದೆ. ಈ ಉರಿಯಲ್ಲೂ ಮೈ ಕಾಯಿಸಿಕೊಳ್ಳದಿದ್ದರೆ ಕಾಂಗ್ರೆಸ್ ಕೊಟ್ಟ ಕುದುರೆ ಏರದ ಧೀರನಂತಾಗುವುದಂತೂ ಸತ್ಯ.
