


ಉತ್ತರ ಕನ್ನಡ ಸಂಸತ್ ಕ್ಷೇತ್ರದಲ್ಲಿ ಮಾಜಿ ಶಾಸಕಿ ಮತ್ತು ಮಾಜಿ ಸ್ಫೀಕರ್ ನಡುವೆ ಸಮರಾಂಗಣ ಸಿದ್ಧವಾಗಿದೆ. ಈಗಿನ ಉತ್ತರ ಕನ್ನಡ ಅಥವಾ ಹಿಂದಿನ ಕೆನರಾ ಕ್ಷೇತ್ರದಲ್ಲಿ ಇದೇ ಮೊಟ್ಟ ಮೊದಲ ಬಾರಿ ಬೆಳಗಾವಿ ಜಿಲ್ಲೆಯ ಖಾನಾಪುರಕ್ಕೆ ಕಾಂಗ್ರೆಸ್ ಅವಕಾಶ ನೀಡಿದೆ.ಸ್ವತಂತ್ರ ಭಾರತದಲ್ಲಿ ನಡೆದ ಚುನಾವಣೆಯಲ್ಲಿ ಈ ವರೆಗೆ ಒಮ್ಮೆಯೂ ಅವಕಾಶ ಪಡೆಯದಿದ್ದ ಕಿತ್ತೂರು ಖಾನಾಪುರದ ಮತದಾರರು ಈ ಬಾರಿ ಉತ್ತರ ಕನ್ನಡ ಕ್ಷೇತ್ರದ ಟಿಕೇಟ್ ತಮಗೆ ದೊರೆತಿದೆ ಎಂದು ಸಂಬ್ರಮಿಸುತಿದ್ದಾರೆ.
ವೃತ್ತಿಯಿಂದ ವೈದ್ಯೆಯಾಗಿರುವ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಈ ಬಾರಿ ಉತ್ತರ ಕನ್ನಡ ಕ್ಷೇತ್ರದ ಅಭ್ಯರ್ಥಿಯಾಗಿದ್ದು.ಮೊದಲ ಬಾರಿ ಬೆಳಗಾವಿ ಜಿಲ್ಲೆ ಮತ್ತು ಆ ಭಾಗದ ಮರಾಠಾ ಸಮೂದಾಯದ ಪ್ರತಿನಿನಿಧಿಯಾಗಿ ಕಣದಲ್ಲಿದ್ದಾರೆ. ಡಾ. ಅಂಜಲೀ ನಿಂಬಾಳ್ಕರ್ ಈ ಕ್ಷೇತ್ರದ ದೊಡ್ಡ ಮತದಾರರಾದ ಮರಾಠಿಮಾತನಾಡುವವರ ಪ್ರತಿನಿಧಿ, ಉತ್ತರ ಕನ್ನಡ ಸಂಸತ್ ಕ್ಷೇತ್ರದಲ್ಲಿ ಕಾರವಾರದಿಂದ ಬೆಳಗಾವಿಯವರೆಗೆ ಮರಾಠಿ ಮಾತನಾಡುವ ಕನಿಷ್ಠ ೫ ಲಕ್ಷ ಜನಸಂಖ್ಯೆ ಇದೆ. ಇದೇ ಜನರು ಈ ಕ್ಷೇತ್ರದ ದೊಡ್ಡ ಸಂಖ್ಯೆಯ ಮತದಾರರು ಕೂಡಾ. ಇವರ ನಂತರ ದೊಡ್ಡ ಜನಸಂಖ್ಯೆ ದೀವರೆನ್ನುವ ನಾಮಧಾರಿ- ಬಿಲ್ಲವ ಈಡಿಗರದ್ದು, ಮೂರನೇ ಅತಿ ದೊಡ್ಡ ಮತದಾರರು ಅಲ್ಪಸಂಖ್ಯಾತರು.ನಂತರ ಒಕ್ಕಲಿಗರು ಇವರ ನಂತರ ಬ್ರಾಹ್ಮಣರನ್ನುಸರಿಸಿ ಇತರ ಸಣ್ಣ -ಪುಟ್ಟ ಸಮೂದಾಯಗಳು.

ಕಾಂಗ್ರೆಸ್ ತಮ್ಮ ಈ ಚುನಾವಣೆಯ ಪಂಚನ್ಯಾಯ ಭರವಸೆ ರಾಜ್ಯದ ಪಂಚಗ್ಯಾರಂಟಿ ಯೋಜನೆಗಳು ಹಾಗೂ ಇತರ ಅನುಕೂಲಗಳನ್ನು ಅವಲಂಬಿಸಿದೆ. ಈ ಕ್ಷೇತ್ರದ ಒಟ್ಟೂ ೮ ವಿಧಾನಸಭಾ ಕ್ಷೇತ್ರಗಳಲ್ಲಿ ೫ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಮೂರುಕ್ಷೇತ್ರಗಳಲ್ಲಿ ಬಿ.ಜೆ.ಪಿ. ಶಾಸಕರಿದ್ದಾರೆ. ಈ ಮೂವರಲ್ಲಿ ಯಲ್ಲಾಪುರ ಕ್ಷೇತ್ರದ ಬಿ.ಜೆ.ಪಿ. ಶಾಸಕ ಶಿವರಾಮ ಹೆಬ್ಬಾರ್ ಬಿ.ಜೆ.ಪಿ. ಜೊತೆ ಉತ್ತಮ ಸಂಬಂಧ- ಸಂಪರ್ಕದಲ್ಲಿ ಇಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ನೇತೃತ್ವ, ಸಚಿವ ಮಧು ಬಂಗಾರಪ್ಪ ಜವಾಬ್ಧಾರಿಯಲ್ಲಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ಉತ್ತರ ಕನ್ನಡ, ಬೆಳಗಾವಿಯ ಬಂಗಾರಪ್ಪ ಅಭಿಮಾನಿಗಳುಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎನ್ನುವ ಭರವಸೆಯಲ್ಲಿ ಕಾಂಗ್ರೆಸ್ ಇದೆ. ಸಾಂಪ್ರದಾಯಿಕ ಬಿ.ಜೆ.ಪಿ. ಯ ಹಿಂದುತ್ವದ ಮತದಾರರಾದ ಮರಾಠರಿಗೆ ಕಾಂಗ್ರೆಸ್ ಅವಕಾಶ ನೀಡಿರುವುದರಿಂದ ಬಿ.ಜೆ.ಪಿ. ಯ ಮತಬಾಚಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.
ಈ ಅನುಕೂಲಗಳ ಜೊತೆಗೆ ಕಾಂಗ್ರೆಸ್ ಗೆ ಕೆಲವು ಅನಾನುಕೂಲಗಳೂ ಇವೆ. ಕಾಂಗ್ರೆಸ್ ಅಭ್ಯರ್ಥಿ ಉತ್ತರ ಕನ್ನಡ ಜಿಲ್ಲೆ ಮತ್ತು ಈ ಕ್ಷೇತ್ರಕ್ಕೆ ಹೊಸಬರು. ಖಾನಾಪುರದಲ್ಲಿ ಕಳೆದ ಬಾರಿ ಭಾರೀ ಅಂತರದಿಂದ ಸೋತ ಈ ಮಾಜಿ ಶಾಸಕಿ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಶಾಸಕರು ಮತ್ತು ಇಲ್ಲಿಯ ನಾಯಕರನ್ನು ಅವಲಂಬಿಸಿದ್ದಾರೆ.ಈ ಹಿಂದೆ ಒಮ್ಮೆ ಮಾರ್ಗರೇಟ್ ಆಳ್ವರನ್ನು ಆಯ್ಕೆ ಮಾಡಿದ್ದ ಈ ಕ್ಷೇತ್ರದ ಮತದಾರರು ಮತ್ತೆ ಮಹಿಳಾ ಸಂಸರನ್ನು ಬೆಂಬಲಿಸುವ ಭರವಸೆಯಲ್ಲಿ ಕಾಂಗ್ರೆಸ್ ಇದೆ.
ಡಾ. ಅಂಜಲಿ ನಿಂಬಾಳ್ಕರ್ ಗೆ ಹಾಲಿ ಸಂಸದ ಅನಂತಕುಮಾರ ಹೆಗಡೆ ಪ್ರತಿಸ್ಫರ್ಧಿ ಆಗಬಹುದೆನ್ನುವ ನಿರೀಕ್ಷೆ ಇತ್ತು. ಆಡಳಿತ ವಿರೋಧಿ ಅಲೆಗೆ ತುತ್ತಾಗಿದ್ದ ಸಂಸದ ಅನಂತಕುಮಾರ ಎದುರು ಮರಾಠರ ಪ್ರತಿನಿಧಿ ಅಂಜಲಿ ಉತ್ತಮ ಪ್ರತಿಸ್ಫರ್ಧಿ ಎನ್ನುವ ನಂಬಿಕೆ ಕಾಂಗ್ರೆಸ್ ಗೆ ಇತ್ತು. ಆದರೆ ಈಗ ಅನಂತಕುಮಾರ ಹೆಗಡೆಯವರಿಗೆ ಟಿಕೇಟ್ ಕೈತಪ್ಪಿ ಅವರ ಬದಲು ಮಾಜಿ ಸ್ಫೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಿ.ಜೆ.ಪಿ. ಅಭ್ಯರ್ಥಿಯಾಗಿದ್ದಾರೆ.
ಉಗ್ರ ಹಿಂದುತ್ವವಾದಿಯಾಗಿದ್ದ ಅನಂತಕುಮಾರ ಹೆಗಡೆ ಬದಲು ಸೌಮ್ಯ ಹಿಂದುತ್ವವಾದಿ ವಿಶ್ವೇಶ್ವರ ಹೆಗಡೆಯವರನ್ನು ಕಣಕ್ಕಿಳಿಸಿರುವ ಬಿ.ಜೆ.ಪಿ. ನಮ್ಮಲ್ಲಿ ಅಭ್ಯರ್ಥಿ ಗಿಂತ ಪಕ್ಷ ಮತ್ತು ಮೋದಿ ವರ್ಚಸ್ಸಿನ ಮೇಲೆ ಚುನಾವಣೆ ಎದುರಿಸುತ್ತೇವೆ ಎನ್ನುತ್ತಿದೆ.
ಈ ಅಂಶ ಕೆಲಸ ಮಾಡಿದರೆ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಶಾಸಕ, ಸಚಿವ, ವಿಧಾನಸಭಾ ಅಧ್ಯಕ್ಷತೆಯ ಸುದೀರ್ಘ ಅನುಭವ ಗಣನೆಗೆ ಬರಲಿದೆ..ಕಾಗೇರಿ ವಿಶ್ವೇಶ್ವರ ಹೆಗಡೆ ತಲಾ ಮೂರು ಬಾರಿ ಈ ಕ್ಷೇತ್ರದ ಅಂಕೋಲಾ ಮತ್ತು ಶಿರಸಿ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸಿದವರು, ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆ ಸುತ್ತಾಡಿದವರು. ಇವರು ನೆಚ್ಚಿಕೊಂಡಿರುವ ಮೇಲ್ವರ್ಗದ ಬಿ.ಜೆ.ಪಿ. ಮತದಾರರು ಇವರ ಆತ್ಮವಿಶ್ವಾಸಕ್ಕೆ ಕಾರಣ ಜೊತೆಗೆ ಅನಂತಕುಮಾರ ಹೆಗಡಯವರಂತೆ ನೇರ, ನಿಷ್ಠೂರ ವ್ಯಕ್ತಿಯಲ್ಲದ ವಿಶ್ವೇಶ್ವರ ಹೆಗಡೆ ಉತ್ತರ ಕನ್ನಡ ಜನರ ಸ್ವಭಾವಕ್ಕೆ ಅನುರೂಪವೆ ನ್ನುವಂತಿದ್ದಾರೆ.
ಅನುಭವಿ, ಜನಪ್ರೀಯ ವ್ಯಕ್ತಿಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಎದುರು ಡಾ. ಅಂಜಲಿ ನಿಂಬಾಳ್ಕರ್ ಹೊಸಬರು. ಜೊತೆಗೆ ಬಿ.ಜೆ.ಪಿ. ವ್ಯಕ್ತಿಗಿಂತ ಮೋದಿ ಅಲೆ ಮತ್ತು ಪಕ್ಷವೇ ಮುಖ್ಯ ಅಭ್ಯರ್ಥಿ ನಗಣ್ಯ ಎನ್ನುತ್ತಿದೆ. ಈ ಅಂಶಗಳ ಆಧಾರದಲ್ಲಿ ವಿಶ್ವೇಶ್ವರ ಹೆಗಡೆಯವರಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಬಹುದಾದರೂ ಪ್ರತಿಸ್ಫರ್ಧಿ ಅನಂತಕುಮಾರ ಹೆಗಡೆ ಬಣ ವಿಶ್ವೇಶ್ವರ ಹೆಗಡೆಯವರನ್ನು ವಿರೋಧಿಸುತ್ತಿದೆ. ಇಂಥ ಒಳ ವಿರೋಧಗಳಿಂದಲೇ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಶಿರಸಿ ಕ್ಷೇತ್ರದಿಂದ ಪರಾಭವಗೊಂಡಿದ್ದ ವಿಶ್ವೇಶ್ವರ ಹೆಗಡೆ ಈ ಬಾರಿ ಮೊದಲಿನ ಆತ್ಮವಿಶ್ವಾಸದಿಂದಲೇ ಕಣಕ್ಕಿಳಿದಿದ್ದಾರೆ.
ತಮ್ಮ ೪೦ ವರ್ಷಗಳ ರಾಜಕೀಯ ಜೀವನದಲ್ಲಿ ೩೦ ವರ್ಷಗಳಷ್ಟು ಕಾಲ ಶಾಸಕರಾಗಿ ಕಳೆದ ವಿಶ್ವೇಶ್ವರ ಹೆಗಡೆ ಈಗ ಒಂದು ವರ್ಷದಿಂದ ಖಾಲಿ ಕೂತಂತಾಗಿದೆ.ಈ ಲೋಕಸಭೆ ಚುನಾವಣೆ ನಂತರ ಕೂಡಾ ಖಾಲಿ ಕೂರಲು ಸಿದ್ಧರಿಲ್ಲದ ಕಾಗೇರಿ ಡಾ. ಅಂಜಲಿ ನಿಂಬಾಳ್ಕರ್ ಎದುರು ಸೆಣಸಿ ಲೋಕಸಭೆ ಪ್ರವೇಶಿಸುತ್ತಾರಾ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ನಿರಂತರ ಐದು ಬಾರಿ ಒಟ್ಟೂ ಆರು ಸಾರಿ ಉತ್ತರ ಕನ್ನಡ ಸಂಸತ್ ಕ್ಷೇತ್ರ ಗೆದ್ದಿದ್ದ ಬಿ.ಜೆ.ಪಿ. ಈ ಬಾರಿ ಈ ಕ್ಷೇತ್ರವನ್ನು ಉಳಿಸಿಕೊಂಡರೆ ದಾಖಲೆ ಮಾಡಿದಂತೆ ಕಾಂಗ್ರೆಸ್ ಜಯ ಗಳಿಸಿದರೆ ಬಿ.ಜೆ.ಪಿ.ಯ ದಾಖಲೆ ಮುರಿದು ೨೫ ವರ್ಷಗಳ ನಂತರ ಕಾಂಗ್ರೆಸ್ ಮರಳಿದಂತೆ. ಸಿದ್ಧರಾಮಯ್ಯನವರ ಅಹಿಂದ ಪ್ರಯೋಗದ ಎದುರು ಬಿ.ಜೆ.ಪಿ. ಹಿಂದುತ್ವ ಈ ಚುನಾವಣೆಯಲ್ಲಿ ಪರೀಕ್ಷೆಗೆ ಒಳಗಾದಂತಾಗಿದೆ.
