ಕಾಂಗ್ರೆಸ್ ಬೆನ್ನಿಗೆ ಹಿಂದುತ್ವ ಪೋಸ್ಟರ್ ಬಾಯ್ ಸತ್ಯಜಿತ್ ಸುರತ್ಕಲ್: ದಕ್ಷಿಣ ಕನ್ನಡ-ಶಿವಮೊಗ್ಗದಲ್ಲಿ ಬಿಜೆಪಿಗೆ ಹಿನ್ನಡೆ ಸಾಧ್ಯತೆ!
ಬಿಜೆಪಿಯಲ್ಲಿ ಬ್ರಾಹ್ಮಣ, ಲಿಂಗಾಯಿತ, ಮತ್ತು ಬಂಟರಿಗೆ ಮಾತ್ರ ಮಣೆ ಹಾಕಲಾಗುತ್ತಿದೆ. ಬಿಲ್ಲವರು ಈಡಿಗರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷರಾಗಿರುವ ಹಿಂದುತ್ವವಾದಿ ಮುಖಂಡ ಸತ್ಯಜಿತ್ ಸುರತ್ಕಲ್ ಆರೋಪಿಸಿದರು.
ಸತ್ಯಜಿತ್ ಸುರತ್ಕಲ್
ಮಂಗಳೂರು: ಬಿಜೆಪಿಯಲ್ಲಿ ಬ್ರಾಹ್ಮಣ, ಲಿಂಗಾಯಿತ, ಮತ್ತು ಬಂಟರಿಗೆ ಮಾತ್ರ ಮಣೆ ಹಾಕಲಾಗುತ್ತಿದೆ. ಬಿಲ್ಲವರು ಈಡಿಗರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷರಾಗಿರುವ ಹಿಂದುತ್ವವಾದಿ ಮುಖಂಡ ಸತ್ಯಜಿತ್ ಸುರತ್ಕಲ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ನ ಆರ್ ಪದ್ಮರಾಜ್, ಉಡುಪಿ-ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಗೀತಾ ಶಿವರಾಜಕುಮಾರ್ ಅವರನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.
ರಾಜ್ಯದಲ್ಲಿ ಒಂದು ಕಾಲದಲ್ಲಿ ಸಮುದಾಯದ ನಾಲ್ಕೈದು ಸಂಸದರಿದ್ದರು, ಆದರೆ ಈಗ ಒಬ್ಬರು ಇಲ್ಲದಂತಾಗಿದ್ದಾರೆ ಎಂದು ಹೇಳಿದ ಅವರು, ಸಮುದಾಯದ ಮುಖಂಡರು ಮತ್ತೆ ಸಂಸದರಾಗುವುದನ್ನು ನೋಡಲು ಉತ್ತಮ ಅವಕಾಶವಿದೆ ಎಂದು ಹೇಳಿದರು.
ಸಮುದಾಯವು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸದೃಢವಾಗುತ್ತದೆ ಎಂದ ಅವರು, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ನೇತೃತ್ವದಲ್ಲಿ ಮೂವರು ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಾಗುವುದು ಎಂದರು. ಬಿಲ್ಲವ/ಈಡಿಗ ಮತದಾರರನ್ನು ಹೊಂದಿರುವ ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಕ್ಷೇತ್ರಗಳಲ್ಲಿ ಈ ಬೆಳವಣಿಗೆ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಲಿದೆ.
ಹಿಂದೊಮ್ಮೆ ಹಿಂದುತ್ವದ ಪೋಸ್ಟರ್ ಬಾಯ್ ಎಂದು ಕಣಕ್ಕಿಳಿದಿದ್ದ ಸುರತ್ಕಲ್ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಲಾಗಿತ್ತಾದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಈಗ ಬಿಜೆಪಿ ಇಲ್ಲ. ಬಿಎಲ್‌ಪಿ, ಬಿಎಲ್ ಸಂತೋಷ್ ಪಕ್ಷ ಮತ್ತು ಬಿಎಸ್‌ಪಿ, ಬಿಎಸ್ ಯಡಿಯೂರಪ್ಪ ಪಕ್ಷವಾಗಿ ಮಾರ್ಪಟ್ಟಿದೆ ಎಂದರು. ನಾನು ಬ್ರಾಹ್ಮಣ, ಬಂಟ, ಒಕ್ಕಲಿಗ ಆಗಿದ್ದಿದ್ರೆ ನಿಸ್ಸಂದೇಹವಾಗಿ ಟಿಕೆಟ್ ಸಿಗುತ್ತಿತ್ತು. ಆದರೆ ನಾನು ಶೂದ್ರನಾಗಿ ಹುಟ್ಟಿದ್ದೇನೆ ಅದಕ್ಕೆ ಟಿಕೆಟ್ ನೀಡಿಲ್ಲ ಎಂದರು. (kpc)