


ಕಬೀರ್ ನಿಲ್ಕುಂದ ಎಂಬ ಫೇಸ್ ಬುಕ್ ಖಾತೆಯಿಂದ ಸಿದ್ಧಾಪುರ ಕಾಂಗ್ರೆಸ್ ವಿಚಾರವಾಗಿ ಪ್ರಕಟವಾದ ಸಂದೇಶಗಳು ಹಲವು ಚರ್ಚೆಗೆ ಗ್ರಾಸ ಒದಗಿಸಿವೆ.
ಕಬೀರ್ ಎನ್ನುವ ಪಕ್ಕಾ ಕಾಂಗ್ರೆಸ್ ಅಭಿಮಾನಿ ಸಿದ್ಧಾಪುರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವಸಂತ ನಾಯ್ಕ ಬಿ.ಜೆ.ಪಿ. ಸೇರುತ್ತಾರೆ ಎನ್ನುವ ಗಾಳಿ ಸುದ್ದಿಗೆ ಪ್ರತಿಕ್ರೀಯಿಸಿದ್ದೇ ಇಷ್ಟೆಲ್ಲಾ ಗಲಿಬಿಲಿಗೆ ಕಾರಣ.
ಅಸಲಿಗೆ ಆದದ್ದೇನೆಂದರೆ…… ಸಿದ್ಧಾಪುರದ ತಂಟೆಕೋರ! ವಸಂತ ನಾಯ್ಕ ಹಿಂದಿನ ವಾರದ ಕೊನೆಗೆ ದಿಢೀರನೇ ರಾಜೀನಾಮೆ ಪ್ರಕಟಿಸಿದರು. ಈ ರಾಜೀನಾಮೆ ಪ್ರಹಸನ ಆಕಸ್ಮಿಕ, ದೀಢೀರ್ ಅಲ್ಲ ಎನ್ನುವುದು ಕಾಂಗ್ರೆಸ್ ವಲಯದವರಿಗೆ ತಿಳಿದದ್ದೇ ಆದರೆ ವಸಂತ್ ನಾಯ್ಕ ರಾಜೀನಾಮೆ ಸುದ್ದಿ ನಂತರ ಅವರ ಆಪ್ತರು, ಹಿತೈಶಿಗಳು ವಸಂತ ನಾಯ್ಕರ ರಾಜೀನಾಮೆಗೆ ಅವರದೇ ರೀತಿಯಲ್ಲಿ ಪ್ರತಿಕ್ರೀಯಿಸಿದರು.
ಕೆಲವರು ಭಾವನಾತ್ಮಕವಾಗಿ, ಕೆಲವರು ವ್ಯವಹಾರಿಕವಾಗಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪ್ರತಿಕ್ರೀಯಿಸಿರುವ ಹಿಂದೆ ವಸಂತ ನಾಯ್ಕರ ಹೆಚ್ಚುಗಾರಿಕೆ ಇದೆ.
ಆದರೆ ಇಂಥ ವ್ಯವಹಾರಿಕ ಸಂಗತಿಗಳಿಗೆ ಸಲ್ಲದ ಕಬೀರ್ ಎನ್ನುವ ಯುವಕ ಕಾಂಗ್ರೆಸ್ ಪಕ್ಷ ನಿಷ್ಠೆಯಿಂದ ವಸಂತ ವಿರುದ್ಧ ಒಂದು ಪೋಸ್ಟ್ ತೇಲಿಸಿಬಿಟ್ಟರು. ಅದಕ್ಕೆ ವಸಂತ ನಾಯ್ಕರ ಹಿಂಬಾಲಕರು ಉಗ್ರವಾಗಿ ಪ್ರತಿಕ್ರೀಯಿಸಿದರು. ಈ ವಿಚಾರದಲ್ಲಿ ವಸಂತ ನಾಯ್ಕ ಕೂಡಾ ತೀಕ್ಷ್ಣ ವಾಗಿ ಪ್ರತಿಕ್ರೀಯಿಸಿ ರೋಶದ ಬೆಂಕಿಗೆ ತುಪ್ಪ ಸುರಿದು ಬಿಟ್ಟರು. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಧೂಳ್ ಏಳುವ ಬದಲು ರಾಡಿ ಎದ್ದು ಬಿಟ್ಟಿತು!.
ಈ ಬಗ್ಗೆ ಸಮಾಜಮುಖಿ ಡಾಟ್ ನೆಟ್ ಗೆ ಪ್ರತಿಕ್ರೀಯಿಸಿದ ಕಬೀರ್ʼ ಏನಿಲ್ಲ ಬ್ಲಾಕ್ ಅಧ್ಯಕ್ಷರಾದ ವಸಂತ ನಾಯ್ಕ ಕಾಂಗ್ರೆಸ್ ಬಿಡುತ್ತಾರೆ, ಬಿ.ಜೆ.ಪಿ. ಸೇರುತ್ತಾರೆ ಎನ್ನುವ ಗಾಳಿ ಸುದ್ದಿಗೆ ಪ್ರತಿಕ್ರೀಯಿಸಿ ಹೀಗಾಗಿದೆ. ನನಗೇನೂ ಯಾರ ಮೇಲೂ ದ್ವೇಶ ಇಲ್ಲ, ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ಹುದ್ದೆ ಪಡೆದು ವಸಂತ್ ಬಿ.ಜೆ.ಪಿ. ಹೋಗುತ್ತಾರೆ ಎನ್ನುವ ತಪ್ಪು ತಿಳುವಳಿಕೆಯಿಂದ ನಾನು ಹಾಗೆ ಪ್ರತಿಕ್ರೀಯಿಸಿದ್ದೆ ಅದು ಮುಗಿದ ಪ್ರಕರಣ ಎಂದರು.
ವಸಂತ ನಾಯ್ಕ ಕಾಂಗ್ರೆಸ್ ನ ಸಿದ್ಧಾಪುರ ಬ್ಲಾಕ್ ಅಧ್ಯಕ್ಷತೆಗೆ ರಾಜೀನಾಮೆ ಕೊಟ್ಟಿದ್ದು ಸತ್ಯ. ಅದಕ್ಕೆ ಕಾಂಗ್ರೆಸ್ ವಲಯದಲ್ಲಿ ಪರ- ವಿರೋಧಗಳು ವ್ಯಕ್ತವಾಗಿದ್ದೂ ಸತ್ಯ. ಆದರೆ ತುಸು ಭಾವನಾತ್ಮಕವಾಗಿ ಪ್ರತಿಕ್ರೀಯಿಸಿದ ಕಬೀರ್ ಮತ್ತು ವಸಂತ ನಾಯ್ಕರ ಪೋಸ್ಟ್ ಗಳು ಚರ್ಚೆಗೆ ಕಾರಣವಾಗಿವೆಯಷ್ಟೇ.
ಕಾಂಗ್ರೆಸ್ ನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಕಬೀರ್ ಹೆಗ್ಗರಣಿಯ ನಿಲ್ಕುಂದ ಮೂಲದವರು. ಕಬೀರ್ ರ ತಂದೆ ಮತ್ತವರ ಕುಟುಂಬ ಕಾಂಗ್ರೆಸ್ ಪಕ್ಷದೊಂದಿಗೆ ಅವಿನಾಭಾವ ಸಂಬಂಧ ಹೊಂದಿತ್ತು. ಕಬೀರ್ ಕುಟುಂಬದೊಂದಿಗಿನ ಎಸ್. ಬಂಗಾರಪ್ಪನವರ ಹಾಗೂ ಗೋಪಾಲ ಕಾನಡೆಯವರ ಸಂಬಂಧ ನಿಕಟವಾಗಿತ್ತು. ಈ ಹಿನ್ನೆಲೆಯ ಕಬೀರ್ ಕಾಂಗ್ರೆಸ್ ಅಭಿಮಾನ ಈ ಗಲಿಬಿಲಿಗೆ ಕಾರಣವಾಗಿತ್ತು.
