


ಕಾಂಗ್ರೆಸ್ ಒಳಗಿನ ಗೊಂದಲಗಳು ನಿಧಾನವಾಗಿ ಹೊರಬರತೊಡಗಿದ್ದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಈಗ ಗೊಂದಲಪುರ ಆಗುತ್ತಿದೆಯೆ? ಎನ್ನುವ ಅನುಮಾನ ಕಾಡುವಂತಾಗಿದೆ.
ಸಿದ್ಧಾಪುರ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ರಾಜೀನಾಮೆ ನಂತರ ಅವರ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆ ಏಳುತಿದ್ದಂತೆ ಇದಕ್ಕೆ ಸಂಬಂಧಿಸಿದ ಕೆಲವು ಬೆಳವಣಿಗೆಗಳು ಕಾಂಗ್ರೆಸ್ ಗೊಂದಲ ಹೆಚ್ಚಿಸಿವೆ ಎನ್ನುವಂತಾಗಿದೆ.
ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆ.ಪಿ.ಸಿ.ಸಿ. ಹಿಂದುಳಿದ ವರ್ಗಗಳ ವಿಭಾಗದ ಹಿರಿಯ ಉಪಾಧ್ಯಕ್ಷ ಬಿ.ಆರ್. ನಾಯ್ಕ ಹೆಗ್ಗಾರಕೈ ನಾವು ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ಕೆಲಸಮಾಡಿದ್ದೇವೆ. ಕೆ.ಪಿ.ಸಿ.ಸಿ. ಓ.ಬಿ.ಸಿ. ವಿಭಾಗದ ಹಿರಿಯ ಉಪಾಧ್ಯಕ್ಷನಾದ ನನ್ನನ್ನೇ ಇವರು ಪಕ್ಷಕ್ಕೇ ಸೇರ್ಪಡೆಯಾಗಿಲ್ಲ ಎನ್ನುವ ಡಿ.ಸಿ.ಸಿ. ಪದಾಧಿಕಾರಿಯೊಬ್ಬರ ಹೇಳಿಕೆ ಪಕ್ಷದ ಶಿಸ್ತು,ವ್ಯವಸ್ಥೆಗಳ ವಿರುದ್ಧ ಆಗುವುದಿಲ್ಲವೆ? ಎಂದು ಪ್ರಶ್ನಿಸಿದರು. ಈ ಬಗ್ಗೆ ಜಿಲ್ಲಾಧ್ಯಕ್ಷರು ಕ್ರಮ ಕೈಗೊಳ್ಳದಿದ್ದರೆ ಪಕ್ಷದ ಶಿಥಿಲತೆಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.
ಮಾಧ್ಯಮಗೋಷ್ಠಿ ನಡೆಸಿದ ಪ್ರಮುಖರಲ್ಲಿ ಒಬ್ಬರಾದ ಸುರೇಶ್ ನಾಯ್ಕ ಕಡಕೇರಿ ಮಾತನಾಡಿ ತಾಲೂಕಾ ಬ್ಲಾಕ್ ಅಧ್ಯಕ್ಷರ ಜೊತೆಗಿರುವವರಲ್ಲೇ ಅಧ್ಯಕ್ಷತೆಯ ಗಾದಿಗಾಗಿ ಪೈಪೋಟಿ ನಡೆದಿದೆ. ಕೆಲವರು ಮೂಗುತೂರಿಸುತ್ತಾರೆ ಎಂದು ಆರೋಪಿಸುವ ಡಿ.ಸಿ.ಸಿ. ಪದಾಧಿಕಾರಿಯೊಬ್ಬರಿಗೆ ಅವರ ಹುದ್ದೆಯ ಘನತೆ ಗೊತ್ತಿರಬೇಕು. ಅಂಥವರನ್ನು ಡಿ.ಸಿ.ಸಿ. ಪದಾಧಿಕಾರಿ ಮಾಡಿದ ಅಧ್ಯಕ್ಷರು ಅಪ್ರಬುದ್ಧರೊಬ್ಬರನ್ನು ಡಿ.ಸಿ.ಸಿ. ಪದಾಧಿಕಾರಿ ಮಾಡಿದ್ದಕ್ಕೆ ವಿಶಾಧಿಸಬೇಕು ಎಂದರು.
