

ಯುವಕ ಪಾಲನಕರ್ ಆತ್ಮಹತ್ಯೆಯ ಶಂಕಿತ ಆರೋಪಿಗಳು ಮತ್ತು ಶಿರಸಿ ಕೆ.ಡಿ.ಸಿ.ಸಿ. ಬ್ಯಾಂಕ್ ವಂಚನೆಯ ಆರೋಪಿಗಳಾಗಿರುವ ಪತ್ರಕರ್ತರ ಸೋಗಿನ ರವೀಶ್ ಹೆಗಡೆ ಸೊಂಡ್ಲಬೈಲ್ ಮತ್ತು ಗ್ಯಾಂಗಿನ ಮತ್ತೊಂದು ವಂಚನೆಯ ಪ್ರಕರಣ ಈಗ ಬಯಲಾಗಿದೆ.
ಸಿದ್ದಾಪುರ ತಾಲೂಕಿನ ಕಾನಸೂರಿನ ಕೆ.ಡಿ.ಸಿ.ಸಿ. ಬ್ಯಾಂಕ್ ಶಾಖೆಯಲ್ಲಿ ಕ್ರೇಟಾ ಕಾರು ಖರೀದಿ ನೆಪದಲ್ಲಿ ಕೋಟಾ ದಾಖಲೆ ಸೃಷ್ಟಿಸಿರುವ ಮೂವರು ಆರೋಪಿಗಳು ನಕಲಿ ದಾಖಲೆ ಪತ್ರ ಒದಗಿಸಿ ಕಾನಸೂರು ಶಾಖೆಯಲ್ಲಿ ಲಕ್ಷಾಂತರ ಹಣ ಪಡೆದು ವಂಚಿಸಿರುವ ಬಗ್ಗೆ ಕಾನಸೂರಿನ ಕೆ.ಡಿ.ಸಿ.ಸಿ. ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಸಿದ್ಧಾಪುರ ಠಾಣೆಗೆ ದೂರು ನೀಡಿದ್ದಾರೆ.
ಮಣಿಕಂಠ ಚಂದ್ರಶೇಖರ್ ನಾಯ್ಕ ಗೋಳಿ, ರವೀಶ್ ಹೆಗಡೆ ಸೊಂಡ್ಲಬೈಲ್, ಅಜ್ಜಿಬಳ ಮತ್ತು ನಾಗರಾಜ್ ಬಸವರಾಜ್ ಯಳವತ್ತಿ ಶಿರಸಿ ಸೇರಿದ ಮೂವರು ಆರೋಪಿಗಳು ಕಾನಸೂರು ಕೆ.ಡಿ.ಸಿ.ಸಿ. ಬ್ಯಾಂಕಿಗೆ ವಂಚಿಸಿದ್ದು ಈ ಆರೋಪಿಗಳ ಮೇಲೆ ಸೂಕ್ತ ಕ್ರಮಕ್ಕೆ ಶಾಖಾ ವ್ಯವಸ್ಥಾಪಕರು ಕೋರಿ ದೂರು ನೀಡಿದ್ದಾರೆ. ಕೆಲವು ವಂಚನೆ ಪ್ರಕರಣಗಳ ಆರೋಪಿಗಳಾಗಿರುವ ಈ ತಂಡ ಕಾನಸೂರು ಕೆ.ಡಿ.ಸಿ.ಸಿ. ಬ್ಯಾಂಕ್ ನಿಂದ ೧೦ ಲಕ್ಷ ೬೦ ಸಾವಿರ ರೂ ಪಡೆಯಲು ಮಾಡಿದ ಪ್ರಹಸನದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದು ಈ ಪ್ರಕರಣದಿಂದ ಈ ಆರೋಪಿಗಳು ಶಿರಸಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಬೇರೆಬೇರೆ ತಾಲೂಕುಗಳ ಹಲವು ಬ್ಯಾಂಕ್ ಗಳಿಗೆ ವಂಚಿಸಿ ಪರಾರಿಯಾಗಿರುವ ಬಗ್ಗೆ ಮಾಹಿತಿ ಇದೆ.
