ಕರಾವಳಿಯಲ್ಲಿ ಮರಳು ಮಾರಾಟ, ಸಾಗಾಟಕ್ಕೆ ನಿರ್ಬಂಧ ಹೇರಿ ಆದೇಶ ಮಾಡಿರುವ ಹಸಿರು ಪೀಠದ ಹೊಸ ಆದೇಶ ಅಕ್ರಮ ಮರಳುಗಾರಿಕೆಗೆ ದಾರಿ ಮಾಡಲಿದೆಯೆ? ಎನ್ನುವ ಪ್ರಶ್ನೆ ಈಗ ಉದ್ಭವಿಸಿದೆ.
ಕರಾವಳಿಯ ಮರಳುಗಾರಿಕೆಗೆ ನಿರ್ಬಂಧ ಹೇರಬೇಕು ಎಂದು ವಕೀಲರೊಬ್ಬರು ಪ್ರಯತ್ನಿಸಿದ ಪರಿಣಾಮ ರಾಷ್ಟ್ರೀಯ ಹಸಿರು ಪೀಠ ಈ ಆದೇಶ ಮಾಡಿದ್ದು ಈ ಆದೇಶದಿಂದಾಗಿ ಅಧೀಕೃತ ರಾಜಧನ ನೀಡಿ ಮರಳುಗಾರಿಕೆ ಮಾಡುವ ವ್ಯವಸ್ಥೆ ನಿಂತು ಈ ಆದೇಶ ಧಿಕ್ಕರಿಸಿ, ಅಧಿಕಾರಿಗಳ ಶಾಮೀಲಾತಿಯಿಂದ ಅಕ್ರಮ ಮರಳು ದಂಧೆ ವಿಸ್ತರಿಸಬಹುದೆನ್ನುವ ಆತಂಕ ಈಗ ಎದುರಾಗಿದೆ.
ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಕರಾವಳಿಯಲ್ಲಿ ಮರಳು ಮಾರಾಟ ವ್ಯವಹಾರ ದೊಡ್ಡ ವ್ಯಾಪಾರ. ಈ ಮರಳು ದಂಧೆಯಿಂದಾಗಿ ಜಿಲ್ಲಾ ಮಟ್ಟದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಜಿಲ್ಲೆಗೆ ತರುವ, ವರ್ಗಾವಣೆ ಮಾಡುವ ರಾಜಕೀಯ ನಡೆಯುತ್ತದೆ. ಈ ಅಧಿಕಾರಿಗಳು ಯಾರಿರಬೇಕು? ಎಲ್ಲಿರಬೇಕು ಎಂದು ನಿರ್ಧರಿಸುವ ಮರಳು ಮಾಫಿಯಾ ಜೀವಂತವಿದೆ.
ಈ ಮಾಫಿಯಾದಲ್ಲಿ ಪ್ರಭಾವಿಗಳು, ಅಶಕ್ತರು, ಅವಕಾಶ ವಂಚಿತರ ಗುಂಪುಗಳಿಗೆ. ಗೇರಸೊಪ್ಪಾ ಕೇಂದ್ರಿತ ಉತ್ತರ ಕನ್ನಡ ಜಿಲ್ಲೆಯ ಮರಳು ವ್ಯವಹಾರ ಕೆಲವು ಗುತ್ತಿಗೆದಾರರ ಮೂಗಿನಡಿ ನಡೆಯುತ್ತಿದೆ. ಇಲಾಖೆಯ ಅಧೀಕೃತ ಆದೇಶದ ನಡುವೆ ಸರ್ಕಾರಕ್ಕೆ ವಂಚಿಸುವ ಕೆಲವು ಪ್ರಭಾವಿಗಳು ಮರಳು ಮಾಫಿಯಾದಿಂದಾಗಿ ಕೋಟ್ಯಾಧೀಶರಾದ ಉದಾಹರಣೆಗಳಿವೆ.
ಈಗ ಪರವಾನಗಿ ಪಡೆದು ದೊಡ್ಡ ವ್ಯವಹಾರ ಮಾಡುವವರಿಗೆ ಹಸಿರು ಪೀಠದ ಆದೇಶ ಮಾರಕವಾಗಿರುವುದರಿಂದ ಕರಾವಳಿ ಭಾಗದಲ್ಲಿ ಅಕ್ರಮ ಮರಳು ಸಾಗಾಟ ವಿಸ್ತರಿಸುವ ಅಪಾಯದ ಸಾಧ್ಯತೆ ಎದ್ದು ಕಾಣುತ್ತಿದೆ.