ಅಕ್ರಮ ಮರಳು ಸಾಗಾಣಿಕೆಯಿಂದ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಭರ್ಜರಿ ಕಮಾಯಿ ಮಾಡುತಿದ್ದಾರೆ ಎನ್ನುವ ಮಾತು ಚರ್ಚೆಯಲ್ಲಿದೆ. ಗೇರಸೊಪ್ಪಾ ಅಥವಾ ಮಲೆನಾಡು, ಕರಾವಳಿಯ ಮರಳು ಸಾಗಾಟಕ್ಕೆ ಈ ವರೆಗೆ ಜಿಲ್ಲೆಯಾದ್ಯಂತ ನಿರ್ಬಂಧಗಳಿರಲಿಲ್ಲ. ಜಿಲ್ಲೆಯೊಳಗೆ ಪರವಾನಗಿ ಪಡೆದ ಮರಳು ಸಾಗಾಟದ ವಾಹನಗಳು ಸುತ್ತುತಿದ್ದವು. ಆದರೆ ಗಣಿ ಇಲಾಖೆಯ ಆಂಶಿಕ ಪರವಾನಗಿ ಜೊತೆ ಪೊಲೀಸರಿಗೆ ತಿಂಗಳ ಮಾಮೂಲಿ ನೀಡಿ ಅನೇಕ ವಾಹನಗಳು ಅನಾಯಾಸವಾಗಿ ತಿರುಗುತಿದ್ದವು.
ಹಸಿರುಪೀಠದ ಆದೇಶ- ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮರಳುಗಾರಿಕೆಗೆ ನಿರ್ಬಂಧ ಹೇರಿ ಕೇಂದ್ರದ ಹಸಿರುಪೀಠ ಕಳೆದ ವಾರ ಆದೇಶ ಹೊರಡಿಸಿದೆ. ಈ ಆದೇಶದ ನಂತರ ಪೊಲೀಸರ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ. ಹಸಿರುಪೀಠ ಮರಳುಗಾರಿಕೆ ನಿಷೇಧಿಸುವ ಮೊದಲು ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮರಳು ಮಾರಾಟ ಮತ್ತು ಸಾಗಾಟಕ್ಕೆ ಅನುಮತಿ ನೀಡುತಿತ್ತು. ಈಗಿನ ಹೊಸ ಆದೇಶದಿಂದಾಗಿ ಉತ್ತರ ಕನ್ನಡ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪರವಾನಗಿ ನೀಡುತ್ತಿಲ್ಲ ಆದರೆ ಅಕ್ರಮ ಮರಳು ಸಾಗಾಟ ಮಾಡುವವರಿಗೆ ಇದು ವರದಾನವಾಗಿದೆ. ಅಧೀಕೃತ ಪರವಾನಗಿ ಈಗ ಅನಿವಾರ್ಯವಲ್ಲದಿರುವುದರಿಂದ ಗಣಿ ಇಲಾಖೆಗೆ ಅನುಮತಿ ಕೇಳದೆ ಮರಳುಗಾಡಿಗಳು ಮರಳು ಸಾಗಾಟ ಮಾಡುತಿದ್ದಾರೆ.
ಕಳೆದ ಸೋಮುವಾರ ಸಂಜೆ ಬಿ.ಜೆ.ಪಿ.ಯ ನಾಯಕರ ಎರಡು ಅಕ್ರಮ ಮರಳು ಸಾಗಾಟದ ಲಾರಿಗಳನ್ನು ಸಿದ್ದಾಪುರ ಪೊಲೀಸರು ವಶಕ್ಕೆ ಪಡೆದು ವ್ಯವಹಾರ ಮಾಡಿ ಬಿಟ್ಟುಕೊಟ್ಟಿದ್ದಾರೆ. ಇದರ ಜೊತೆಗೆ ಶಿರಸಿ ಶೆಟ್ಟಿ ಗ್ಯಾಂಗ್ ಕೂಡಾ ಸ್ಥಳೀಯ ಪೊಲೀಸರಿಗೆ ಕ್ಯಾರೆ ಎನ್ನದೆ ಅಕ್ರಮ ಮರಳು ಸಾಗಾಟ ಮಾಡುತಿದ್ದಾರೆ ಎನ್ನುವುದು ಸ್ಥಳೀಯರ ಆರೋಪ. ಈ ವ್ಯವಹಾರದ ನಡುವೆ ಚುನಾವಣೆವೇಳೆಗೆ ಬಂದಿದ್ದ ಸಿದ್ಧಾಪುರದ ಹಿರಿಯ ಅಧಿಕಾರಿಯೊಬ್ಬರು ಕೆಲವು ಪ್ರಮುಖ ಕಳ್ಳರಿಗೆ ರಿಯಾಯತಿ ನೀಡಿ ಸ್ಥಳೀಯ ಹೊಸ ಮರಳು ಸಾಗಾಟಗಾರರಿಗೆ ಎರಡು ತಿಂಗಳ ಮಾಮೂಲಿ ಮೊತ್ತ ಮೇ ತಿಂಗಳಲ್ಲೇ ಕೊಡಬೇಕೆಂದು ಫರ್ಮಾನು ಹೊರಡಿಸಿದ ವೇಳೆಗೆ ಸರಿಯಾಗಿ ಹಸಿರುಪೀಠ ಮರಳು ಸಾಗಾಟಕ್ಕೆ ನಿರ್ಬಂಧ ಹೇರಿದೆ.!
ಈ ಹೊಸ ಬೆಳವಣಿಗೆಯಿಂದ ಕಂಗಾಲಾದ ಪೊಲೀಸ್ ಅಧಿಕಾರಿ ಯುವ ಮರಳು ಸಾಗಾಟಗಾರರು ಮತ್ತು ಅವರ ಹಿತೈಶಿ ರಾಜಕಾರಣಿಯೊಬ್ಬರಿಗೆ ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. ಈ ಘಟನೆಗೆ ಪ್ರತಿಕ್ರೀಯಿಸಿದ ಯುವ ರಾಜಕಾರಣಿ ಕೆಂಡಾಮಂಡಲರಾಗಿ ವಿಚಾರ ಶಾಸಕರ ವರೆಗೂ ತಲುಪಿದೆ!
ಎರಡು ತಿಂಗಳಲ್ಲಿಎರಡು ಡಜನ್ ಲಕ್ಷಗಳನ್ನು ಜೇಬಿಗಿಳಿಸಿದ ಅಧಿಕಾರಿ ಕೊನೆಯ ತಿಂಗಳಲ್ಲಿ ಡಬಲ್ ಲಾಭ ಮಾಡಲು ಹೋಗಿ ಕಾಗೇರಿ ಬಣದ ಲಾಭದ ರಾಜಕಾಣಿಗಳಿಗೆ ನೆರವಾಗಿ ಆಡಳಿತ ಪಕ್ಷದ ಹೊಸ ಹುಡುಗರಿಗೆ ಧಮಕಿ ಹಾಕುವ ವರೆಗೆ ನಡೆದ ಬೆಳವಣಿಗೆ ಪೊಲೀಸರ ಬ್ರಷ್ಟತೆ, ದುಷ್ಟತೆಯನ್ನು ಬಹಿರಂಗ ಮಾಡಿದೆ.ಇದು ರಾಜಕೀಯ ಬೆಳವಣಿಗೆ, ತಾಲೂಕಿನ ಕೆಲವರ ಕೆಂಗಣ್ಣಿಗೂ ಗುರಿಯಾಗಿದೆ. ಉಂಡು ಹೋದ ಕೊಂಡೂ ಹೋದ ಎನ್ನುವಂತಾಗಿರುವ ಪೊಲೀಸ್ ಅಧಿಕಾರಿಯ ಲೋಭ ಸ್ಥಳೀಯ ರಾಜಕೀಯದ ಮೇಲೂ ಕರಿನೆರಳು ಬೀರಿದೆ ಎನ್ನುವಲ್ಲಿಗೆ ಸಿದ್ಧಾಪುರದ ವಸೂಲಿ ಮುಖವಾಡಗಳ ಅನಾವರಣವಾಗಿದೆ.