ಹೈದರಾಬಾದಿನ ರಂಗರಾವ್ ಜಿಲ್ಲೆಯ ರಾಮೋಜಿ ಫಿಲ್ಮ್ ಸಿಟಿಯ ಎತ್ತರದ ಪ್ರದೇಶದಲ್ಲಿ ರಾಮೋಜಿರಾವ್ ಮನೆ ಇತ್ತು. ಈ ಭದ್ರ ಕಟ್ಟಡದ ಮೇಲೆ ಅವರ ಹೆಲಿಕಾಪ್ಟರ್ ನಿಲ್ಲುತಿತ್ತು. ಈ ಮನೆಯ ಯಜಮಾನ ಕಟ್ಟಿದ ಈ ನಾಡಿನ ರಾಮೋಜಿ ಫೀಲ್ಮ್ ಸಿಟಿ ಸಾವಿರಾರು ಎಕರೆ ವ್ಯಾಪ್ತಿಯ ಪ್ರದೇಶದಲ್ಲಿದೆ. ಅಲ್ಲಿ ಸೊಳ್ಳೆಗಳನ್ನೊಂದು ಬಿಟ್ಟು ಇಲಿ, ಜಿರಲೆಗಳೂ ನುಸುಳಲು ಸಾಧ್ಯವಿಲ್ಲ ಅಂಥ ಅಭೇಧ್ಯ ಕೋಟೆ ಕಟ್ಟಿದ ಹುಡುಗ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಸೈಕಲ್ ಏರಿ ಉಪ್ಪಿನ ಕಾಯಿ ಹಂಚುತಿದ್ದನಂತೆ!
ಈ ಕನಸುಗಾರ ಹುಡುಗನಿಗೆ ಉತ್ಕೃಷ್ಟ ಉಪ್ಪಿನ ಕಾಯಿ, ಹಪ್ಪಳ ತಯಾರಿಸಿಕೊಡುವ ಅಮ್ಮನಿದ್ದಳು!
ಮಗ ಉಪ್ಪಿನ ಕಾಯಿ ತಯಾರಿಸುವ ಚಿಕ್ಕ ಉದ್ಯಮ ಪ್ರಾರಂಭಿಸಿ ಗೆದ್ದ. ನಂತರ ಪತ್ರಿಕೆ ಪ್ರಾರಂಭಿಸಬೇಕೆಂಬ ಆಸೆ ಬಂತು ಹಠದಿಂದ ಅದನ್ನೂ ಪ್ರಾರಂಭಿಸಿಯೇ ಬಿಟ್ಟ ನಂತರ ಎರಡು ಡಜನ್ ಸಂಸ್ಥೆಗಳ ಮಾಲಕನಾಗುವತ್ತ ಹೆಜ್ಜೆ ಹಾಕಿದ ತಿರುಗಿ ನೋಡಿದ್ದೇ ಇಲ್ಲ ಏರಿದ ಎತ್ತರ ನಾಲ್ಕೈದಂತಸ್ತಿನ ಮನೆ, ಅದರ ಮೇಲೆ ಹೆಲಿಪ್ಯಾಡ್!
ಇಷ್ಟು ಎತ್ತರದ ವ್ಯಕ್ತಿ ಮೂರು ತಿಂಗಳಿಗೊಮ್ಮ ಪ್ರತಿ ನೌಕರನ ಅಭಿಪ್ರಾಯ ಕೇಳುತಿದ್ದರು.
ಆಗಬೇಕಾದ ಕೆಲಸಗಳು ಕೂತಲ್ಲೇ ಆಗುತಿದ್ದವು ಅಳೆದು ತೂಗುವ ಮಾತೇ ಇಲ್ಲ. ರಾಮೋಜಿ ಅಂದರೆ ಹಾಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ವರ್ಷದೊಳಗೆ ಪ್ರಮೋಷನ್ನು ಡಿಮೋಷನ್ನು ಏರುತ್ತಿರಬೇಕಷ್ಟೆ ಏರಲಾಗದವನಿಗೆ ಬೇರೆ ಜಾಗ.
ಇದು ನಾವು ನೋಡಿದ ರಾಮೋಜಿ. ಈ ನಾಡು ಸಂಸ್ಥೆ, ರಾಮೋಜಿ ಫಿಲ್ಮ್ ಸಿಟಿ, ಇದರೊಂದಿಗೆ ಅದೆಷ್ಟೋ ವ್ಯಾಪಾರ, ವ್ಯವಹಾರ ಎಲ್ಲಾ ಕಡೆ ಕರಾರುವಕ್ಕು. ಮೊದಲ ೨೦ ವರ್ಷ ಶ್ರಮ, ನಂತರ ೨೦ ವರ್ಷ ಅನುಭವ, ನಂತರ ಸ್ಥಾಪನಾ ಪರ್ವ, ನಡುವೆ ರಾಜಕಾರಣ ಸಾಧಿಸುವ ಮನಸ್ಸಿದ್ದರೆ ಸಾಧನೆ ಅವನ ಸ್ವತ್ತು ಈ ವಾಖ್ಯಕ್ಕೆ ಮೆರುಗು ನೀಡಿದ ಮೇರು ಪರ್ವತ ರಾಮೋಜಿ (೮೮).
೧೯೬೯ ರಲ್ಲಿ ಅನ್ನದಾತ ಪಾಕ್ಷಿಕ ಪ್ರಾರಂಭಿಸಿದ್ದ ರಾಮೋಜಿ ರಾವ್ ಕೃಷಿ ಬಗ್ಗೆ ಒಲವಿದ್ದ ಪತ್ರಕರ್ತರಾಗಿದ್ದರು.ಈ ಟಿ.ವಿ. ವಾಹಿನಿಗಳಲ್ಲಿ ಕೃಷಿ ಕಾರ್ಯಕ್ರಮಗಳಿಂದ ಅನ್ನದಾತರಿಗೆ ನೆರವಾದ ರಾಮೋಜಿ ರಾವ್ ಕೃಷಿ ನನ್ನ ಉಸಿರು ಎನ್ನುತಿದ್ದರು. ಉದ್ಯಮಿಯಾಗಿ ಲಕ್ಷಾಂತರ ಜನರಿಗೆ ಉದ್ಯೋಗದಾತನಾಗಿ ಅನೇಕ ಸಂಸ್ಥೆಗಳ ಒಡೆಯನಾಗಿ ರಾಮೋಜಿ ರಾವ್ ಏರಿದ ಎತ್ತರ ಅವರಿಗೆ ಅಭಿಸಿದ ಪದ್ಮಭೂಷಣಕ್ಕಿಂತ ನೂರಾರು ಪಟ್ಟು. ಕನ್ನಡದ ಈ ಟಿವಿ, ಸಿನೆಮಾ ನಿರ್ಮಾಣ, ಚಿತ್ರವಿತರಣೆ ಮಾಡಿದ ಮಾದರಿಯಲ್ಲೇ ಇಪ್ಪತ್ತು ಭಾಷೆಗಳಲ್ಲಿ ೨೫ ರಾಜ್ಯಗಳಲ್ಲಿ ಅವರು ಮೂಡಿಸಿದ ಗುರುತು ಮರೆಯಾಗದ ಅಕ್ಷರ. ಹಲವು ಭಾಷೆ ಬಲ್ಲವರಾಗಿದ್ದ ರಾಮೋಜಿ ಭಾಷೆ ಬರದಿದ್ದರೆ ಅಂಗವಿಕಲನಾದಂತೆ ಎಂದಿದ್ದ ಅವರ ಮಾತು ಈಗಲೂ ಕಿವಿ,ಎದೆಯಲ್ಲಿ ರಿಂಗಣಿಸುವ ಧ್ಯೇಯವಾಖ್ಯ.