

ಉತ್ತರ ಕನ್ನಡ: ಬನವಾಸಿಯಲ್ಲಿ ಶಂಕಿತ ಉಗ್ರ ಎನ್ಐಎ ವಶಕ್ಕೆ
ಮಂಗಳೂರು ಕುಕ್ಕರ್ ಸ್ಫೋಟ, ಬೆಂಗಳೂರು ರಾಮೇಶ್ವರ ಕೆಫೆ ಸ್ಫೋಟ ಮತ್ತು ಶಿವಮೊಗ್ಗ ಮಸೀದಿ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶಂಕಿತ ಆರೋಪಿಗಳಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬನವಾಸಿ ತಾಲೂಕಿನ ದಾಸನ ಕೊಪ್ಪ ಗ್ರಾಮದಲ್ಲಿ ಶಂಕಿತ ಉಗ್ರನೊಬ್ಬನನ್ನು ರಾಷ್ಟ್ರೀಯ ತನಿಖಾ ದಳ ಮಂಗಳವಾರ ಬಂಧನಕ್ಕೊಳಪಡಿಸಿದೆ.

ಅಬ್ದುಲ್ ಶಕೂರ್
ಬನವಾಸಿ (ಉತ್ತರ ಕನ್ನಡ): ಮಂಗಳೂರು ಕುಕ್ಕರ್ ಸ್ಫೋಟ, ಬೆಂಗಳೂರು ರಾಮೇಶ್ವರ ಕೆಫೆ ಸ್ಫೋಟ ಮತ್ತು ಶಿವಮೊಗ್ಗ ಮಸೀದಿ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶಂಕಿತ ಆರೋಪಿಗಳಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಿರಸಿ ತಾಲೂಕಿನ ಬನವಾಸಿ ದಾಸನ ಕೊಪ್ಪ ಗ್ರಾಮದಲ್ಲಿ ಶಂಕಿತ ಉಗ್ರನೊಬ್ಬನನ್ನು ರಾಷ್ಟ್ರೀಯ ತನಿಖಾ ದಳ ಮಂಗಳವಾರ ಬಂಧನಕ್ಕೊಳಪಡಿಸಿದೆ.
ಶಿರಸಿ ಮತ್ತು ಬನವಾಸಿಯ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು, ಅಬ್ದುಲ್ ಶಕೂರ್ (34) ಎಂಬಾತನನ್ನು ಬಂಧಿಸಿದ್ದಾರೆ.
ದಾಸನ ಕೊಪ್ಪ ಗ್ರಾಮದವರನಾದ ಶಕೂರ್ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯನಾಗಿದ್ದ ಎಂದು ತಿಳಿದುಬಂದಿದೆ.

ಬಕ್ರೀದ್ ಆಚರಣೆಗಾಗಿ ಈತ ಗ್ರಾಮಕ್ಕೆ ಬಂದಿದ್ದ ಎನ್ನಲಾಗಿದ್ದು, ಈ ಬಗ್ಗೆ ಮಾಹಿತಿ ತಿಳಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ಆತನನ್ನು ಬಂಧನಕ್ಕೊಳಪಡಿಸಿದೆ.
ಶಕೂರ್ ಅನೇಕ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದು, ಆನ್‌ಲೈನ್‌ನಲ್ಲಿ ಅವರೊಂದಿಗೆ ಸಂಪರ್ಕದಲ್ಲಿರುತ್ತಾನೆ ಎಂದು ಮೂಲಗಳು ತಿಳಿಸಿವೆ.
ಸುಳ್ಳು ದಾಖಲೆಗಳನ್ನು ಒದಗಿಸಿ ಈತ ಪಾಸ್‌ಪೋರ್ಟ್ ಪಡೆದುಕೊಂಡಿದ್ದ ಎನ್ನಲಾಗಿದೆ. ಈ ಸಂಬಂಧ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮೌಲ್ವಿಯಾಗಿದ್ದ ಶಕೂರ್ 2018-19ರಲ್ಲಿ ತೀರ್ಥಳ್ಳಿಗೆ ಭೇಟಿ ನೀಡಿದ್ದು, ಆಗ ಮಂಗಳೂರು ಕುಕ್ಕರ್, ರಾಮೇಶ್ವರಂ ಕೆಫೆ ಮತ್ತು ಶಿವಮೊಗ್ಗ ಮಸೀದಿ ಸ್ಫೋಟದ ಪ್ರಮುಖ ಆರೋಪಿಯನ್ನು ಭೇಟಿಯಾಗಿದ್ದ. ಶಾಲೆಯ ಹಂತದಲ್ಲಿ ವಿದ್ಯಾಬ್ಯಾಸ ಮಾಡಿರುವ ಈತ ದುಬೈನಲ್ಲಿ ಅಡಿಗೆ ವಸ್ತುಗಳು, ಹವಾನಿಯಂತ್ರಣಗಳು ಮತ್ತು ಲೋಹಗಳ ವ್ಯವಹಾರ ನಡೆಸುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈತನನ್ನು ಬಂಧನಕ್ಕೊಳಪಡಿಸಿರುವ ಎನ್ಐಎ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. (kp.c)
