


ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಎಚ್ಚರಿಕೆ ನೀಡಿದರು.
ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಪಟ್ಟಣ ಪಂಚಾಯತ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಶನಿವಾರ ಪಟ್ಟಣದ ಶಂಕರಮಠದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಸಮನ್ವಯತೆ ಇರಬೇಕು. ಜನರಿಗೆ ತಮ್ಮ ಹಕ್ಕನ್ನು ಕೇಳಲು ಸರ್ಕಾರ ಜನಸ್ಪಂದನಾ ಕಾರ್ಯಕ್ರಮದ ಮೂಲಕ ಅವಕಾಶ ನೀಡಿದೆ. ಸಾರ್ವಜನಿಕರು ಜನಸ್ಪಂದನಾ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ಸರ್ಕಾರಿ ಕಚೇರಿಗೆ ಬಂದು ಸಮಸ್ಯೆ ಹೇಳಿಕೊಳ್ಳುವ ಜನರಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸಬೇಕು. ಅನಾವಶ್ಯಕವಾಗಿ ಜನರನ್ನು ಅಲೆದಾಡಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಇದೇ ವೇಳೆ ಪಟ್ಟಣ ಪಂಚಾಯತ ಕಾರ್ಯವೈಖರಿ ಕುರಿತು ಸಾರ್ವಜನಿಕರು ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದ್ದು, ಶಾಸಕ ಭೀಮಣ್ಣ ನಾಯ್ಕ ಪಟ್ಟಣ ಪಂಚಾಯತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ ಅಹವಾಲು ಸಲ್ಲಿಸಿದ ಸಾರ್ವಜನಿಕರು ‘
ಶಾಸಕ ಭೀಮಣ್ಣ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲೆಡೆಯಿಂದ ಬಂದ ಜನ ನಾನಾ ರೀತಿಯ ಬೇಡಿಕೆಗಳನ್ನು ಸಲ್ಲಿಸಿದ್ದು, ಸಮಾಧಾನದಿಂದ ಜನರ ಅಹವಾಲು ಆಲಿಸಿದ ಭೀಮಣ್ಣ ನಾಯ್ಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸೋಮವಾರದಿಂದಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲನೆ ನಡೆಸಿ ಅಧಿಕಾರಿಗಳ ಮಟ್ಟದಲ್ಲಿ ಆಗುವ ಕೆಲಸವಿದ್ದರೆ ತಕ್ಷಣ ಮಾಡುವಂತೆ ಸೂಚಿಸಿದರು.
ರಸ್ತೆ, ಚರಂಡಿ, ಮಳೆ ನೀರಿನಿಂದಾಗುವ ತೊಂದರೆ, ವಿದ್ಯುತ್ ವ್ಯತ್ಯಯ, ಕರೆಂಟ್ ಸಂಪರ್ಕ, ಶಾಲಾ ಕಟ್ಟಡ, ಮರ ತೆರವುಗೊಳಿಸುವುದು, ಸಮುದಾಯ ಭವನ ಸೇರಿದಂತೆ ಅನೇಕ ಬೇಡಿಕೆ ಹಾಗೂ ಸಮಸ್ಯೆಗಳನ್ನು ಶಾಸಕರ ಮುಂದಿಟ್ಟರು.
ತಾಲೂಕಾ ದಂಡಾಧಿಕಾರಿ ಎಂ.ಆರ್.ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ ನಾಯ್ಕ, ತಾಲೂಕಾ ಪಂಚಾಯತ ಆಡಳಿತಾಧಿಕಾರಿ ಪಿ. ಬಸವರಾಜ, ತಾಲೂಕಾ ಪಂಚಾಯ್ತಿ ಇಓ ದೇವರಾಜ ಹಿತ್ತಲಕೊಪ್ಪ, ಸಿಪಿಐ ಕುಮಾರ ಕೆ, ಎಸಿಎಫ್ ಪ್ರವೀಣ ಬಸರೂರ ಉಪಸ್ಥಿತರಿದ್ದರು. ಗ್ರೇಡ್ 2 ತಹಶೀಲ್ದಾರ ಜಿ.ಎಲ್.ಶ್ಯಾಮಸುಂದರ ನಿರೂಪಿಸಿದರು.
