

ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಶನಿವಾರ ತಾಲೂಕಿನ ಬೇಡ್ಕಣಿಯ ಕೋಟೆ ಆಂಜನೇಯ ದೇವಾಲಯದ ಸಭಾಭವನದಲ್ಲಿ ನಡೆದ ಸಿದ್ದಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್, ರೋವರ್ಸ್ ಸ್ಕೌಟ್ಸ್ & ರೇಂಜರ್ಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಗೂ ಸಾಂಸ್ಕೃತಿಕ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಈ ವೇಳೆ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಶಿಕ್ಷಣ ವೈಯಕ್ತಿಕ ಸ್ವಾರ್ಥಕ್ಕೆ ಮಾತ್ರ ಬಳಕೆಯಾಗದೇ ನಿಸ್ವಾರ್ಥ ಸೇವೆಗೆ ಬಳಕೆಯಾಗಬೇಕು. ದೇಶದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳ ಮುಂದೆ ಸಾಕಷ್ಟು ಸವಾಲುಗಳಿದ್ದು, ಎಲ್ಲವನ್ನು ಸಮರ್ಥವಾಗಿ ಎದುರಿಸಿ ಯಶಸ್ಸಿನ ಮೆಟ್ಟಿಲೇರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಸತೀಶ ನಾಯ್ಕ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಸುಸಜ್ಜಿತ ಆಡಿಟೋರಿಯಂ ವ್ಯವಸ್ಥೆ ಮಾಡಬೇಕು. ಪದವಿ ಎಂಬ ಜವಾಬ್ದಾರಿಯ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಪಾಲಕರ ಕನಸನ್ನು ಇಡೇರಿಸಬೇಕು ಎಂದರು.
ಈ ಸಂದರ್ಭದಲ್ಲಿ ಬೇಡ್ಕಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಲ್ಲಾಸ ಗೌಡರ್, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ನಾಯ್ಕ, ಕೋಟೆ ಆಂಜನೇಯ ದೇವಾಲಯದ ಅಧ್ಯಕ್ಷ ವಿ.ಎನ್.ನಾಯ್ಕ,
ಕಾಲೇಜಿನ ಪ್ರಾಚಾರ್ಯ ಡಾ. ಸತೀಶ ನಾಯ್ಕ, ಗ್ರಂಥಪಾಲಕ ಜೆ.ಎಸ್.ಶಾಸ್ತ್ರಿ ಉಪಸ್ಥಿತರಿದ್ದರು.
