

ಅಂಕೋಲಾ ಬಳಿ ಗುಡ್ಡ ಕುಸಿತ: ಮಣ್ಣಿನಡಿ ಸಿಲುಕಿ 10 ಮಂದಿ ದುರ್ಮರಣ, ಮುಂದುವರೆದ ಕಾರ್ಯಾಚರಣೆ
ಸಂಪೂರ್ಣ ಗುಡ್ಡ ಅಂಗಡಿಯ ಮೇಲೆ ಕುಸಿದು ಬಿದ್ದಿದ್ದು, ಪರಿಣಾಮ ಸ್ಥಳದಲ್ಲಿದ್ದ 15ಕ್ಕೂ ಹೆಚ್ಚು ಮಂದಿ ಹಾಗೂ ಹಲವು ವಾಹನಗಳು ಕೂಡ ಮಣ್ಣಿನಡಿ ಸಿಲುಕಿಕೊಂಡಿದೆ. ಗುಡ್ಡ ಕುಸಿತದ ಪರಿಣಾಮ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಗುಡ್ಡ ಕುಸಿದು ಬಿದ್ದಿರುವುದು.
ಶಿರೂರು (ಉತ್ತರ ಕನ್ನಡ): ಕಾರವಾರ-ಕುಮಟಾ ರಸ್ತೆಯ ಅಂಕೋಲಾ ಸಮೀಪದ ಶಿರೂರು ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ.
10 ಮಂದಿಯ ಪೈಕಿ ಐವರು ಒಂದೇ ಕುಟುಂಬದ ಸದಸ್ಯರಿದ್ದಾರೆಂದು ಹೇಳಲಾಗಿದ್ದು, ಇವರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಟೆಲ್ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಮಂಗಳವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಸಂಪೂರ್ಣ ಗುಡ್ಡ ಅಂಗಡಿಯ ಮೇಲೆ ಕುಸಿದು ಬಿದ್ದಿದ್ದು, ಪರಿಣಾಮ ಸ್ಥಳದಲ್ಲಿದ್ದ 15ಕ್ಕೂ ಹೆಚ್ಚು ಮಂದಿ ಹಾಗೂ ಹಲವು ವಾಹನಗಳು ಕೂಡ ಮಣ್ಣಿನಡಿ ಸಿಲುಕಿಕೊಂಡಿದೆ. ಗುಡ್ಡ ಕುಸಿತದ ಪರಿಣಾಮ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಈ ನಡುವೆ ಐಆರ್‌ಬಿ ರಸ್ತೆ ನಿರ್ಮಾಣ ಸಂಸ್ಥೆಯ ಅವೈಜ್ಞಾನಿಕ ಕಾಮಗಾರಿಯೇ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನೋಡ ನೋಡುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ಗುಡ್ಡಿ ಕುಸಿದು ಬಿದ್ದಿತು. ಇಡೀ ನಾಲ್ಕು ಪಥದ ರಸ್ತೆಯೂ ಮಣ್ಣಿನಿಂದ ಮುಚ್ಚಿ ಹೋಗಿದೆ. ಗುಡ್ಡ ಕುಸಿತದ ವೇಳೆ ಕಾರೊಂದು ಹಾದುಹೋಗುತ್ತಿದ್ದು, ಈ ಕಾರಿನಲ್ಲಿ 5 ಮಂದಿ ಇದ್ದರು. ಎಲ್ಲರೂ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ನಡುವೆ ಗಂಗವಳ್ಳಿ ನದಿಯಲ್ಲಿ ಬೃಹತ್ ಟ್ಯಾಂಕರ್ ತೇಲುತ್ತಿರುವುದು ಕಂಡು ಬಂದಿದೆ. ಕ್ಯಾಂಟೀನ್ ಪಕ್ಕದಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ವೊಂದು ಗುಡ್ಡ ಕುಸಿತದ ರಭಸಕ್ಕೆ ಗಂಗವಳ್ಳಿ ನದಿಗೆ ಕೊಚ್ಚಿಹೋಗಿದೆ. ಇದರಿಂದ ಟ್ಯಾಂಕರ್ ನಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಕೂಡ ಸಾವನ್ನಪ್ಪಿರುವ ಶಂಕೆಗಳು ವ್ಯಕ್ತವಾಗಿವೆ.
ಘಟನೆ ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ನೌಕಾಪಡೆ ಮತ್ತು ಇತರ ರಕ್ಷಣಾ ಪಡೆಗಳು ಈಗಾಗಲೇ ಸ್ಥಳದಲ್ಲಿ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ನಡುವೆ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಭೀಕರ ಮಳೆಯಿಂದ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಮಣ್ಣಿನಡಿಯಲ್ಲಿ ಒಂದೇ ಕುಟುಂಬದ ಐವರು ಸೇರಿದಂತೆ 15 ಕ್ಕೂ ಹೆಚ್ಚು ಮಂದಿ ಸಿಲುಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ರಕ್ಷಣಾ ತಂಡ ಶಾಂತಿ ನಾಯ್ಕ(37) ಎನ್ನುವವರ ಮೃತದೇಹವನ್ನು ಮಣ್ಣಿನಿಂದ ಹೊರಕ್ಕೆ ತೆಗೆದಿದ್ದಾರೆ, ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಿದರು.
ಮಣ್ಣಿನ ಅಡಿಯಲ್ಲಿ ಎಷ್ಟು ಜನರು ಸಿಲುಕಿಕೊಂಡಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ. ರಸ್ತೆಯ ಮೇಲೆ ಬಿದ್ದಿರುವ ಮಣ್ಣನ್ನು ತೆರವು ಮಾಡಲು 24 ಗಂಟೆಗೂ ಅಧಿಕ ಕಾಲ ಬೇಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗುತ್ತಿದೆ ಎನ್ನಲಾಗುತ್ತಿದೆ. ಇನ್ನೂ ಕೂಡ ಗುಡ್ಡ ಕುಸಿತ ಆಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. (kp.c)
