ಸಿದ್ದಾಪುರ: ತಾಲೂಕಿನ ಮೂಗದೂರಿನ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದಲ್ಲಿ ಪರಸ್ಪರ ಪ್ರೀತಿಸುತ್ತಿದ್ದವರಿಗೆ ಗುರುವಾರ ಮಂತ್ರ ಮಾಂಗಲ್ಯದ ಮದುವೆ ಮಾಡಲಾಯಿತು.
ಮನೆಯವರಿಂದ ತಿರಸ್ಕರಿಸಲ್ಪಟ್ಟು ಮಾನಸಿಕವಾಗಿ ಅಸ್ವಸ್ಥರಾಗಿದ್ದ ಹೊನ್ನಾವರದ ದಿವ್ಯಾ ಹಾಗೂ ಸಿಗ್ಗಾಂವನ ಈರಣ್ಣ ಆಶ್ರಮದಲ್ಲಿ ಆಶ್ರಯ ಪಡೆದು ಚೇತರಿಸಿಕೊಂಡಿದ್ದು ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಆಶ್ರಮದ ಮುಖ್ಯಸ್ಥ ನಾಗರಾಜ ನಾಯ್ಕ ಎರಡು ಮನೆಯವರಿಗೆ ವಿಷಯ ತಿಳಿಸಿ ತಾಲೂಕಿನ ಗಣ್ಯರು ಹಾಗೂ ಮುತೈದೆಯರ ಸಮ್ಮುಖದಲ್ಲಿ ಕುವೆಂಪು ಆಶಯದ ಮಂತ್ರ ಮಾಂಗಲ್ಯ ಮಾಡಿದರು. ನವಜೋಡಿಗೆ ಹೊಸಬಟ್ಟೆ, ಹೂವಿನ ಹಾರ, ಉಂಗುರ ಹಾಗೂ ತಾಳಿಯೊಂದಿಗೆ ಸರಳವಾಗಿ ವಿವಾಹ ನಡೆಸಲಾಯಿತು. ಪತ್ರಕರ್ತ ಕನ್ನೇಶ್ ನಾಯ್ಕ ಮಂತ್ರ ಮಾಂಗಲ್ಯ ನಡೆಸಿಕೊಟ್ಟರು.
‘ ಗಣ್ಯರು ಸಾಕ್ಷಿ ‘
ರಾಷ್ಟ್ರಕವಿ ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯದ ಮದುವೆಗೆ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್, ಸಿದ್ದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಜಿ.ನಾಯ್ಕ, ರೈತ ಮುಖಂಡ ವೀರಭದ್ರ ನಾಯ್ಕ, ತಾಪಂ ಮಾಜಿ ಸದಸ್ಯ ನಾಸಿರ್ ಖಾನ್, ರಾಘವೇಂದ್ರ ಕಾವಂಚೂರ, ಕೆ.ಟಿ.ಹೊನ್ನೆಗುಂಡಿ, ಎಂ.ಡಿ.ನಾಯ್ಕ, ಟಿ.ಕೆ.ಎಂ.ಆಜಾದ್, ಅಸ್ಲಾಂ ಸಿದ್ದಾಪುರ, ಚಿತ್ರಕಲಾ ಶಿಕ್ಷಕ ರಾಘವೇಂದ್ರ ನಾಯ್ಕ ಹಾಗೂ ಮಹಿಳೆಯರು ಮದುವೆಯಲ್ಲಿ ಹಾಜರಿದ್ದು ವಧು-ವರನನ್ನು ಹಾರೈಸಿದರು.
‘ ಆಶ್ರಮ ವಾರ್ಷಿಕೋತ್ಸವ ‘
ಇದೇ ವೇಳೆ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದ ವಾರ್ಷಿಕೋತ್ಸವ ಆಚರಿಸಲಾಯಿತು. ಜತೆಗೆ ಆಶ್ರಮದ ಮುಖ್ಯಸ್ಥೆ ಮಮತಾ ನಾಯ್ಕ ಅವರ ಜನ್ಮದಿನದ ಆಚರಿಸಲಾಯಿತು. ತಾಲೂಕಾ ಪಂಚಾಯ್ತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಖಾನ್ ಕೂಡ ತಮ್ಮ ಹುಟ್ಟು ಹಬ್ಬದ ನಿಮಿತ್ತ ಆಶ್ರಮವಾಸಿಗಳಿಗೆ ಸಿಹಿ ನೀಡಿ ಜನ್ಮದಿನ ಆಚರಿಸಿಕೊಂಡರು.