ಹೊಸ ತಲೆಮಾರಿನ ನಾಯಕರನ್ನು ರೂಪಿಸಲು ಮುಂದು: ಆಗಸ್ಟ್ 16 ರಿಂದ ಸೆಪ್ಟೆಂಬರ್ 16ರವರೆಗೆ ದೇಶಾದ್ಯಂತ ಯುವ ಕಾಂಗ್ರೆಸ್ ಚುನಾವಣೆ
ಯಾರು ಹೆಚ್ಚು ಮತಗಳನ್ನು ಪಡೆಯುತ್ತಾರೋ ಅವರು ಅಧ್ಯಕ್ಷರಾಗುತ್ತಾರೆ. ಎರಡನೇ ರನ್ನರ್ ಅಪ್ ಉಪಾಧ್ಯಕ್ಷರಾಗುತ್ತಾರೆ. ಏಳು ಜನ ಉಪಾಧ್ಯಕ್ಷರು ಇರುತ್ತಾರೆ. ನೇಮಕಾತಿ ಮೂಲಕ ಆಯ್ಕೆ ನಡೆದರೆ ಗುಂಪುಗಾರಿಕೆಗೆ ಅವಕಾಶವಿದೆ ಎಂದರು.
ಡಿ.ಕೆ ಶಿವಕುಮಾರ್
ಬೆಂಗಳೂರು: ಹೊಸ ನಾಯಕರನ್ನು ಸೃಷ್ಟಿ ಮಾಡುವ ಉದ್ದೇಶದಿಂದ ಯುವ ಕಾಂಗ್ರೆಸ್ ನಲ್ಲಿ ಆಗಸ್ಟ್ 16ರಿಂದ ಸೆಪ್ಟೆಂಬರ್ 16ರವರೆಗೆ ಸದಸ್ಯತ್ವ ನೋಂದಣಿ ಹಾಗೂ ಪಕ್ಷದ ಆಂತರಿಕ ಚುನಾವಣೆ ನಡೆಸಲಾಗುವುದು” ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಶಿವಕುಮಾರ್ ಅವರು, ಜುಲೈ 24ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದ ಕಾರಣ ಈ ವಿಚಾರದ ಬಗ್ಗೆ ಮಾಧ್ಯಮಗೋಷ್ಠಿ ಮಾಡಿರಲಿಲ್ಲ. ಆಗಸ್ಟ್ 2ರವರೆಗೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ, ಆಗಸ್ಟ್ 3ರಿಂದ 8ರವರೆಗೆ ನಾಮಪತ್ರ ಪರಿಶೀಲನೆ ಮಾಡಲಾಗುವುದು. ಆಗಸ್ಟ್ 9ರಂದು ನಾಮಪತ್ರ ಅಂತಿಮ ಮಾಡಲಾಗುವುದು. ಅತಿ ಹೆಚ್ಚು ಮತ ಪಡೆಯುವವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಮತಗಳ ಆಧಾರದ ಮೇಲೆ ನಂತರದ ಸ್ಥಾನ ಪಡೆಯುವರಿಗೆ ಇತರೆ ಸ್ಥಾನ ನೀಡಲಾಗುವುದು. ಈ ವೇಳೆ ಪಕ್ಷವು ಅಗ್ರ ಮೂರು ಸ್ಥಾನ ಪಡೆದವರ ಸಂದರ್ಶನವನ್ನು ಮಾಡಲಿದೆ” ಎಂದು ಮಾಹಿತಿ ನೀಡಿದರು.
ಆಂತರಿಕ ಸಮೀಕ್ಷೆಗಳು ಗುಂಪುಗಾರಿಕೆಗೆ ಕಾರಣವಾಗುವುದಿಲ್ಲ ಎಂದು ಶಿವಕುಮಾರ್ ಹೇಳಿದರು, ಸ್ಪರ್ಧಿಸುವವರಿಗೆ ಮತಗಳ ಆಧಾರದ ಮೇಲೆ ಹುದ್ದೆಗಳು ಸಿಗುತ್ತವೆ. “ಯಾರು ಹೆಚ್ಚು ಮತಗಳನ್ನು ಪಡೆಯುತ್ತಾರೋ ಅವರು ಅಧ್ಯಕ್ಷರಾಗುತ್ತಾರೆ. ಎರಡನೇ ರನ್ನರ್ ಅಪ್ ಉಪಾಧ್ಯಕ್ಷರಾಗುತ್ತಾರೆ. ಏಳು ಜನ ಉಪಾಧ್ಯಕ್ಷರು ಇರುತ್ತಾರೆ. ನೇಮಕಾತಿ ಮೂಲಕ ಆಯ್ಕೆ ನಡೆದರೆ ಗುಂಪುಗಾರಿಕೆಗೆ ಅವಕಾಶವಿದೆ ಎಂದರು. ಈ ಬಾರಿ ಪ್ರತ್ಯೇಕವಾಗಿ ಮತ ಎಣಿಕೆ ಇರುವುದಿಲ್ಲ. ಸದಸ್ಯರು ಮತ ಚಲಾಯಿಸಿದ ತಕ್ಷಣ ಅದು ಅಭ್ಯರ್ಥಿಗೆ ಸಲ್ಲುತ್ತದೆ. ಈ ಬಾರಿಯ ಚುನಾವಣೆಯನ್ನು ಮತ್ತಷ್ಟು ಮಾರ್ಪಾಡು ಮಾಡಿದ್ದೇವೆ ಎಂದರು.
ಸದಸ್ಯತ್ವ ನೋಂದಣಿಯನ್ನು ಆಗಸ್ಟ್ 16ರಿಂದ ಸೆಪ್ಟೆಂಬರ್ 16ರ ವರೆಗೂ ಮಾಡಲಾಗುವುದು. ಯುವ ಕಾಂಗ್ರೆಸ್ ಸದಸ್ಯರಾಗಲು ಬಯಸುವವರು ಆನ್ ಲೈನ್ ಮೂಲಕ ಸದಸ್ಯತ್ವ ನೋಂದಣಿ ಮಾಡಿಕೊಳ್ಳಬೇಕು. ಆನ್ ಲೈನ್ ಸದಸ್ಯತ್ವ ಪಡೆದವರಿಗೆ ಸದಸ್ಯತ್ವ ಪಡೆದ ದಿನದಿಂದಲೇ ಬ್ಲಾಕ್, ಜಿಲ್ಲಾ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆ ಮಾಡಲು ಮತದಾನ ಮಾಡುವ ಅಧಿಕಾರ ಸಿಗಲಿದೆ. ಓರ್ವ ಸದಸ್ಯ ಆರು ಮಂದಿ ಪದಾಧಿಕಾರಿಗಳಿಗೆ ಮತ ಹಾಕುವ ಅಧಿಕಾರವಿರುತ್ತದೆ. ರಾಜ್ಯಾಧ್ಯಕ್ಷ, ರಾಜ್ಯ ಮಟ್ಟದ ಪದಾಧಿಕಾರಿ, ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಆಯ್ಕೆಗೆ ಮತ ಹಾಕಬಹುದು. ಹೆಚ್ಚಿನ ಮಾಹಿತಿಗಾಗಿ ಐವೈಸಿ ಆಪ್ ನಲ್ಲಿ ವೀಕ್ಷಿಸಬಹುದು” ಎಂದು ತಿಳಿಸಿದರು.
ಯುವ ಕಾಂಗ್ರೆಸ್ ಸದಸ್ಯತ್ವ ಪಡೆಯುವವರು 35 ವರ್ಷದೊಳಗಿನವರಾಗಿರಬೇಕು. ಸದಸ್ಯತ್ವ ನೋಂದಣಿ ಶುಲ್ಕ ರೂ 50 ರೂಪಾಯಿ ಕಟ್ಟಬೇಕು. ಅವರಿಗೆ ಗುರುತಿನ ಚೀಟಿ ನೀಡಲಾಗುವುದು. ಮತದಾನ ಮಾಡುವಾಗ ಮತದಾರರ ಗುರುತಿನ ಚೀಟಿ ಕಡ್ಡಾಯವಾಗಿರುತ್ತದೆ. ಚುನಾವಣೆಯನ್ನು ಬಹಳ ಪಾರದರ್ಶಕವಾಗಿ ನಡೆಸಲಾಗುವುದು. ಸದಸ್ಯತ್ವ ನೋಂದಣಿ ಸಮಯದಲ್ಲಿ ಸದಸ್ಯತ್ವ ಪಡೆಯುವವರ ಮುಖಚರ್ಯೆಯನ್ನು ಸ್ಕ್ಯಾನ್ ಮಾಡಲಾಗುವುದು. ಇಡೀ ದೇಶದಲ್ಲಿ ಹೊಸ ನಾಯಕರ ಸೃಷ್ಟಿ ಮಾಡಲು ಪ್ರಕ್ರಿಯೆ ಆರಂಭವಾಗಿದ್ದು, ಯುವ ನಾಯಕರನ್ನು ಬೆಳೆಸಲು ರಾಹುಲ್ ಗಾಂಧಿ ಅವರು ತೀರ್ಮಾನಿಸಿದ್ದಾರೆ ಎಂದು ಹೇಳಿದರು.
ಇಡೀ ದೇಶದಲ್ಲಿ ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರು ಇರಬೇಕು. ಅವರಿಗೆ ಜವಾಬ್ದಾರಿ ಇರಬೇಕು ಎಂದು ರಾಜೀವ್ ಗಾಂಧಿ ಅವರು ಒಂದು ಹೊಸ ಚಳುವಳಿ ಆರಂಭಿಸಿದರು. ನಾನು ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷನಾಗಿದ್ದಾಗ ಅವರು “ನಾಯಕರನ್ನು ಹುಟ್ಟುಹಾಕುವವನೇ ನಿಜವಾದ ನಾಯಕ” ಎಂದು ಹೇಳಿದ್ದರು. ರಾಹುಲ್ ಗಾಂಧಿ ಅವರು ಈಗ ಯುವ ಕಾಂಗ್ರೆಸ್ ನಲ್ಲಿ ಯುವ ನಾಯಕರನ್ನು ಸೃಷ್ಟಿ ಮಾಡಲು ಈ ಹೆಜ್ಜೆ ಇಟ್ಟಿದ್ದಾರೆ” ಎಂದು ತಿಳಿಸಿದರು. (kp.c)