ನಿರಂತರ ಮಳೆಯಿಂದ ಕಂಗಾಲಾದ ಜನರು ನಿಟ್ಟುಸಿರು ಬಿಟ್ಟಂತಾಗಿದೆ. ಕಳೆದ ಎರಡು ತಿಂಗಳ ಮಳೆ ಮಾಡಿದ ಅನಾಹುತ ಅಷ್ಟಿಷ್ಟಲ್ಲ. ವಯನಾಡ್ ನಲ್ಲಿ ಆದ ಸಾವು ನೋವು, ಉತ್ತರ ಕನ್ನಡ ಜಿಲ್ಲೆಯ ಶಿರೂರಿನ ದುರಂತ ಮಳೆಯ ಅಪಾಯಗಳಿಗೆ ಕೈಗನ್ನಡಿ.
ಕಳೆದ ಎರಡು ವರ್ಷಗಳ ಮಳೆ ಕೊರತೆ ನೀರಿನ ಮಹತ್ವ ಪರಿಚಯಿಸಿದರೆ ಈ ವರ್ಷದ ಮಳೆ ಮಳೆ ಮತ್ತು ಪ್ರವಾಹದ ತೊಂದರೆ ತಿಳಿಸಿವೆ.
ಈ ವರ್ಷದ ಮಳೆಯಲ್ಲಿ ದೇಶದ ನೂತನ ಸಂಸತ್ ಭವನ ಸೋರಿದ್ದು, ನೂತನ ರಾಮ ಮಂದಿರ ಸೋರಿದ್ದು ಪ್ರಾಮಾಣಿಕರೆನ್ನುವ ಮತಾಂಧರ ಮುಖವಾಡ ಕಳಚಲು ಸಹಾಯ ಮಾಡಿದೆ.
ಈಗ ದೇಶದಲ್ಲಿ ದೇವಮಾನವರ ವೈಭವೀಕರಣ ಕಡಿಮೆಯಾಗಲು ಕಾರಣ ಈ ವರ್ಷದ ಚುನಾವಣೆಯ ಫಲಿತಾಂಶ. ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸೋತಿರುವ ಬಿ.ಜೆ.ಪಿ., ಸೋತು ಗೆದ್ದಿರುವ ಕಾಂಗ್ರೆಸ್ ಈ ದೇಶಕ್ಕೆ ಉತ್ತಮ ಆಯ್ಕೆಗಳಿಲ್ಲ ಎಂಬುದನ್ನು ಸಾಬೀತು ಮಾಡಿವೆ.
ಶಿರೂರು ದುರಂತದಲ್ಲಿ ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡಿದೆ. ಸ್ಥಳೀಯ ಶಾಸಕ ಸತೀಶ್ ಶೈಲ್ ಕೇರಳದ ಸಚಿವರು, ಶಾಸಕರು ಮಳೆಯಲ್ಲಿ ನಡುಗುತ್ತಾ ಸಂತ್ರಸ್ತರ ಪರವಾಗಿ ನಿಂತಿದ್ದಾಗ ಉತ್ತರ ಕನ್ನಡ ಕ್ಷೇತ್ರದ ಸಂಸದರು ಸಂಸತ್ ನಲ್ಲಿ ರಾಜ್ಯದ ಮುಡಾ ಹಗರಣದ ಬಗ್ಗೆ ಚರ್ಚಿಸುತಿದ್ದರು!. ಹಿಂದೆ ಇವರ ಜಾಗದಲ್ಲಿದ್ದ ಹಿಂದುತ್ವವಾದಿ ತನ್ನ ಕ್ಷೇತ್ರದ ಅರಣ್ಯ ಅತಿಕ್ರಮಣ ವಿಚಾರ ಚರ್ಚೆಯಾಗುತಿದ್ದಾಗ ಎಲ್ಲೋ ಮಲಗಿದ್ದರಂತೆ!
ದೇವರು ಧರ್ಮ ಬಳಸಿ ಅಧಿಕಾರಕ್ಕೆ ಬಂದವರು ರಾಜ್ಯದಲ್ಲಿ ದೇಶದಲ್ಲಿ ಏನು ಮಾಡುತಿದ್ದಾರೆಂದು ನೋಡುತಿದ್ದೇವೆ. ಹಿಂದೆ ಮಳೆಯ ತೊಂದರೆಯಾದಾಗ ಇದ್ದ ಬಿ.ಜೆ.ಪಿ. ಸರ್ಕಾರ ಸಂಪೂರ್ಣ ಕುಸಿದ ಮನೆಗಳಿಗೆ ೫ ಲಕ್ಷ ಪರಿಹಾರ ಘೋಶಿಸಿತ್ತಂತೆ ಆದರೆ ಯಾರಿಗೂ ಹಣ ಮಂಜೂರಿ ಆಗಿರಲಿಲ್ಲ!. ಈ ವರ್ಷದ ಭೀಕರ ಮಳೆಗೆ ಹಾನಿಗೆ ಒಳಗಾದ ಮನೆಗಳ ಸಂತ್ರಸ್ತರಿಗೆ ಆಯಾ ಶಾಸಕರ ವೈಯಕ್ತಿಕ ನೆರವು, ಸರ್ಕಾರದ ನೆರವು ದೊರೆತಿದೆ.
ಸ್ಥಳೀಯವಾಗಿ ದೇವರು, ಧರ್ಮ ಬಳಸಿ ರಾಜಕಾರಣ ಮಾಡುವವರು ಪ್ರತಿಭಟನೆ, ಮನವಿ ನೀಡುತಿದ್ದಾರೆ. ಆದರೆ ಅವರಿಗೆ ವಾಸ್ತವದ ಅರಿವೇ ಇಲ್ಲ. ಈ ಶತಮಾನದಲ್ಲಿಈ ವರ್ಷ ತೊಂದರೆಯಾದಷ್ಟು ಮಳೆಯ ಅನಾಹುತ ಈತ್ತೀಚಿನ ವರ್ಷಗಳಲ್ಲಿ ಆಗಿದ್ದಿಲ್ಲ. ಕಳೆದ ದಶಕದಲ್ಲಿ ದೇಶ ಆಳಿದ ದೇಶ ಭಕ್ತಿಯ ಸೋಗಿನ ಧಾರ್ಮಿಕ ರಾಜಕಾರಣಿಗಳು ಶ್ರೀಮಂತ ಉದ್ಯಮಿಗಳನ್ನು ಕೊಬ್ಬಿಸಿದ್ದು ಬಿಟ್ಟರೆ ಜನಸಾಮಾನ್ಯರ ಪರವಾಗಿ ಮಾಡಿದ್ದೇನಿಲ್ಲ. ೨೦- ೩೦ ವರ್ಷಗಳ ಜನಪ್ರತಿನಿಧಿಗಳ ನಿರಂತರ ಆಡಳಿತದಲ್ಲಿ ಪ್ರಾಥಮಿಕ ಶಾಲೆಗಳ ಸ್ಥಿತಿ ಹದಗೆಟ್ಟಿತ್ತು. ರಸ್ತೆ,ಕಟ್ಟಡ ನಿರ್ಮಾಣಗಳಾದರೂ ಅವುಗಳ ಗುಣಮಟ್ಟ ಕೇಳುವಂತಿಲ್ಲ. ಶಿರೂರು ದುರಂತಕ್ಕೆ ಕಾರಣವಾದ ಆಯ್.ಆರ್.ಬಿ. ಕೇಂದ್ರ ಸರ್ಕಾರದ ಪ್ರಭಾವಿ ಸಚಿವರ ಒಡೆತನದ ಸಂಸ್ಥೆ ಅದರ ಬಗ್ಗೆ ಮಾತನಾಡುವ ಧೈರ್ಯ, ಪ್ರಾಮಾಣಿಕತೆ ಮಾನ್ಯ ನರೇಂದ್ರ ಮೋದಿಯವರಿಗೇ ಇಲ್ಲ. ಇನ್ನು ಅವರ ಹೆಸರಿನಲ್ಲಿ ಮತ ಕೇಳಿ ಡಮ್ಮಿ ಅಭ್ಯರ್ಥಿಯಾಗಿರುವ ಸಂಸದರಿಗೆ ಆ ಧೈರ್ಯ, ಸಾಮರ್ಥ್ಯ ಬರುವುದು ಹೇಗೆ?