ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಕೋಡಿಭಾಗ್ ಬಳಿ ಕಾರವಾರ ಹಾಗೂ ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಿದ್ದ ಸೇತುವೆ ಕುಸಿದಿದೆ.
ಈ ವೇಳೆ ಸೇತುವೆ ಮೇಲೆ ಲಾರಿ ಚಾಲನೆ ಮಾಡ್ತಿದ್ದ ತಮಿಳುನಾಡು ಮೂಲದ ಲಾರಿ ಚಾಲಕ ಬಾಲ್ ಮುರುಗನ್(37) ಸಮೇತ ಖಾಲಿ ಟ್ರಕ್ ನದಿಗೆ ಬಿದ್ದಿದೆ. ಕಾಳಿ ನದಿಯಲ್ಲಿ ಬಿದ್ದ ಲಾರಿಯ ಮುಂಭಾಗದ ಗ್ಲಾಸ್ ಒಡೆದು ಕ್ಯಾಬಿನ್ ಮೇಲೆ ನಿಂತು ಚಾಲಕ ಬಾಲ ಮುರುಗನ್ ರಕ್ಷಣೆಗೆ ಕೂಗಿದ್ದರು. ಸದ್ಯ ಬೀಟ್ ಪೊಲೀಸರ ಮುಂಜಾಗೃತೆಯಿಂದ ಲಾರಿ ಚಾಲಕನ ಪ್ರಾಣ ಉಳಿದಿದೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಎಸ್ಪಪಿ ನಾರಾಯಣ ಹಾಗೂ ಪೊಲೀಸರ ತಂಡ ನದಿಗೆ ಇಳಿದು ಚಾಲಕನನ್ನು ರಕ್ಷಿಸಿದ್ದಾರೆ. ಸ್ಥಳೀಯ ಮೀನುಗಾರರು ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ಬೋಟ್ ಮೂಲಕ ಲಾರಿ ಚಾಲಕನನ್ನ ರಕ್ಷಿಸಿದ್ದಾರೆ. ಗೋವಾದಿಂದ ಹುಬ್ಬಳ್ಳಿ ಕಡೆ ಮಧ್ಯರಾತ್ರಿ ತೆರಳುತಿದ್ದ ತಮಿಳುನಾಡು ಮೂಲದ ಟ್ರಕ್ ಸೇತುವೆ ಮೇಲೆ ತೆರಳುತಿದ್ದಂತೆ ಮೊದಲ ಭಾಗ ಕುಸಿದಿದೆ ನಂತರ ಮೂರು ಕಡೆ ಕುಸಿದಿದೆ. ಸದ್ಯ ಟ್ರಕ್ ಚಾಲಕನ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನದಿಗೆ ನಿರ್ಮಿಸಿರುವ ಇನ್ನೊಂದು ಸೇತುವೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸೇತುವೆ ಕುಸಿತದಲ್ಲಿ ಇನ್ನಷ್ಟು ವಾಹನ ಬಿದ್ದಿರುವ ಶಂಕೆ ಹಿನ್ನೆಲೆ ನದಿಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ನಿರ್ಮಾಣದ ವೇಳೆ ಒಂದೇ ಒಂದು ಹೊಸ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇನ್ನೊಂದು ಮಾರ್ಗಕ್ಕೆ ಹಳೆ ಸೇತುವೆಯನ್ನೇ ಬಳಸಲಾಗುತ್ತಿತ್ತು. ಐಆರ್ಬಿ ಹೊಸ ಸೇತುವೆ ನಿರ್ಮಾಣ ಮಾಡಿರಲಿಲ್ಲ. 41 ವರ್ಷ ಹಳೆಯ ಸೇತುವೆಯನ್ನೇ ಬಳಸಲಾಗಿತ್ತು. ಆದರೆ ಮಧ್ಯ ರಾತ್ರಿ ಏಕಾಏಕಿ ಸೇತುವೆ ಕುಸಿದಿದೆ.