

ಕರಾವಳಿ ಪೊಲೀಸರು ಮೃತದೇಹವನ್ನು ದಡಕ್ಕೆ ತಂದು, ಡಿಎನ್ಎ ಪರೀಕ್ಷೆಗೆ ಕಳುಹಿಸಿದ್ದು, ಡಿಎನ್ಎ ಪರೀಕ್ಷೆಗಾಗಿ ಅರ್ಜುನ್ ಸಹೋದರ ಅಭಿಜಿತ್ನ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಶಿರೂರು ಗುಡ್ಡ ಕುಸಿತ
ಉತ್ತರ ಕನ್ನಡ: ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಈ ನಡುವಲ್ಲೇ ಗುಡ್ಡ ಕುಸಿತಗೊಂಡ ಸ್ಥಳದಿಂದ 25 ಕಿಮೀ ದೂರದಲ್ಲಿನ ಹೊನ್ನಾವರ ಸಮುದ್ರದಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ.
ಈ ಶವ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋದ ಲಾರಿ ಚಾಲಕ ಅರ್ಜುನ್ (30) ಅವರದ್ದು ಎಂದು ಶಂಕಿಸಲಾಗಿದೆ. ಮೃತದೇಹ ಯಾರದ್ದು ಎಂಬುದು ಇನ್ನೂ ದೃಢವಾಗಿಲ್ಲ.
ಸದ್ಯ ಕರಾವಳಿ ಪೊಲೀಸರು ಮೃತದೇಹವನ್ನು ದಡಕ್ಕೆ ತಂದು, ಡಿಎನ್ಎ ಪರೀಕ್ಷೆಗೆ ಕಳುಹಿಸಿದ್ದಾರೆ. ಡಿಎನ್ಎ ಪರೀಕ್ಷೆಗಾಗಿ ಅರ್ಜುನ್ ಸಹೋದರ ಅಭಿಜಿತ್ನ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಜುಲೈ 16 ರಂದು ಸಂಭಿವಿಸಿದ್ದ ಗುಡ್ಡ ಭೂಕುಸಿತದಲ್ಲಿ ಕೇರಳದ ಕೋಝಿಕ್ಕೋಡ್ ಮೂಲದ ಲಾರಿ ಚಾಲಕ ಅರ್ಜುನ್ ನಾಪತ್ತೆಯಾಗಿದ್ದಾರೆ. ಅರ್ಜುನ್ ಲಾರಿ ಸಮೇತ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಮೇರೆಗೆ ಹುಡುಕಾಟ ನಡೆಸಲಾಗಿತ್ತು. ಸತತ 13 ದಿನಗಳ ಕಾಲ ಹುಡುಕಾಟ ನಡೆಸಿದರೂ ಅರ್ಜುನ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪ್ರತಿಕೂಲ ಹವಾಮಾನದಿಂದಾಗಿ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.
ಭೂಕುಸಿತದಿಂದ ನದಿಯಲ್ಲಿ ಶೇಖರಣೆಯಾದ ಮಣ್ಣಿನಡಿ ಹೂತು ಹೋಗಿದ್ದ ಲಾರಿಯೊಳಗೆ ಅರ್ಜುನ್ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಏತನ್ಮಧ್ಯೆ, ವಿವಿಧ ಸಾಧನಗಳನ್ನು ಬಳಸಿ ಶೋಧ ನಡೆಸಿದಾಗ ನದಿಪಾತ್ರದಲ್ಲಿ ಯಾವುದೇ ದೇಹ ಪತ್ತೆಯಾಗಿಲ್ಲ. ಗಂಗಾವಳಿ ನದಿಯಲ್ಲಿ ಹೆಚ್ಚಿನ ನೀರಿನ ಪ್ರವಾಹ ಮತ್ತು ನದಿಯ ಆಳವು ರಕ್ಷಣಾ ತಂಡಗಳಿಗೆ ಪ್ರಮುಖ ಸವಾಲಾಗಿದೆ.
ಶಿರೂರಿನ ಹೊನ್ನಾವರ ಬೀಚ್ ಬಳಿ ಸಮುದ್ರದಲ್ಲಿ ಶವ ತೇಲುತ್ತಿರುವುದು ಪತ್ತೆಯಾಗಿತ್ತು. ಇದನ್ನು ಗಮನಿಸಿದ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದಾಗ್ಯೂ, ಕೆಲವು ದಿನಗಳ ಹಿಂದೆ ಸಮುದ್ರದಲ್ಲಿ ನಾಪತ್ತೆಯಾಗಿದ್ದ ವಲಸೆ ಕಾರ್ಮಿಕರ ಶವವೂ ಆಗಿರಬಹುದು ಎಂದು ಕರಾವಳಿ ಪೊಲೀಸರು ತಿಳಿಸಿದ್ದಾರೆ.
