

ಗ್ರಾಮೀಣ ರಂಗಭೂಮಿ ಉಳಿಸುತ್ತಾ ಬೆಳೆಸುತ್ತಿರುವ ಮಲೆನಾಡಿನ ಸಿದ್ದಾಪುರದ ಒಡ್ಡೋಲಗಕ್ಕೆ ಈಗ ೨೫ ವರ್ಷಗಳ ಸಂಭ್ರಮ. ಸಾಂಸ್ಕೃತಿಕ ಚಟುವಟಿಕೆಗಳ ಅವಸಾನದ ಪ್ರಾರಂಭದ ದಿನಗಳಲ್ಲಿ ಶುರುವಾದ ಬಿದ್ರಕಾನ ಕವಲಕೊಪ್ಪ ಮೂಲದ ಹಿತ್ತಲಕೈ ಗಣಪತಿ ತನ್ನ ನೀನಾಸಂ ಶ್ರೀಮಂತ ಅನುಭವದೊಂದಿಗೆ ಒಡ್ಡೋಲಗ ಪ್ರಾರಂಭಿಸಿ ಪ್ರಾಮಾಣಿಕವಾಗಿ ರಂಗ ಚಟುವಟಿಕೆಯಲ್ಲಿ ಸಕ್ರೀಯರಾದವರು. ಹೊಸ ಅಲೆಯ ನಾಟಕಗಳ ಮೂಲಕ ಆಧುನಿಕ ರಂಗಭೂಮಿಯ ಎಲ್ಲಾ ಸಾಧ್ಯತೆಗಳನ್ನು ದುಡಿಸಿಕೊಂಡ ಗಣಪತಿ ತನ್ನ ಪ್ರತಿಭೆ, ಶ್ರಮ,ತೊಡಗಿಸಿಕೊಳ್ಳುವಿಕೆಯಿಂದ ತಂಪು ಮಲೆನಾಡಿನ ರಂಗಾಸಕ್ತಿಯನ್ನು ಬೆಚ್ಚಗಿಟ್ಟವರು.
ಕಳೆದ ೨೫ ವರ್ಷಗಳಿಗೂ ಹಿಂದೆ ವಿದ್ಯಾರ್ಥಿಯಾಗಿ ರಂಗಭೂಮಿ ಪ್ರವೇಶಿಸಿದ ಗಣಪತಿ ಹೆಗಡೆ ಹಿತ್ತಲಕೈ ನೇತೃತ್ವದಲ್ಲಿ ಪತ್ನಿ, ಮಗಳು ಗ್ರಾಮಸ್ಥರು ಸೇರಿದ ನೂರಾರು ಜನ ರಂಗಾಸಕ್ತರಿಗೆ ನೆರಳು ನೀಡಲು ಪ್ರಾರಂಭವಾದ ಒಡ್ಡೋಲಗ ಕಲಾವಿದರ ಪೋಷಣೆ ಜೊತೆಗೆ ರಂಗಾಸಕ್ತರಿಗೆ ಸ್ಥಳೀಯ, ಹೊರಗಿನ ಪ್ರತಿಭೆಗಳ ಪರಿಚಯ ಮಾಡಿಸಿ ರಂಗಾಸಕ್ತಿ ಬೆಳೆಸಿದ್ದು ವಿಶೇಶ.
ಒಡ್ಡೋಲಗದ ತಿರುಗಾಟದ ಜೊತೆಗೆ ಬಹುತೇಕ ಚಟುವಟಿಕೆಗಳು ಸ್ಥಳೀಯ ಸ್ಥಳೀಯ ಪ್ರತಿಭೆಗಳಿಗೆ ನಾಟಕ ಪ್ರೀಯರಿಗೆ ಅವಕಾಶ ಒದಗಿಸಿವೆ. ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವ ಒಡ್ಡೋಲಗ ನಡೆಸುತ್ತಿರುವ ಅನೇಕ ಚಟುವಟಿಕೆಗಳಲ್ಲಿ ಶ್ರಾವಣ ಸಂಜೆ ಸಂಸ್ಕೃತಿ ಉತ್ಸವವೂ ಒಂದು.
ಆಗಸ್ಟ್ ೨೯ ರಿಂದ ಮೂವತ್ತೊಂದರ ವರೆಗೆ ಮೂರು ದಿವಸ ನಡೆಯಲಿರುವ ಈ ವರ್ಷದ ವಾರ್ಷಿಕ ಶ್ರಾವಣ ಸಂಜೆ ಸಂಸ್ಕೃತಿ ಉತ್ಸವ೨೦೨೪ ಒಡ್ಡೋಲಗದ ಬೆಳ್ಳಿಹಬ್ಬ ಆಚರಣೆಯ ವರ್ಷದ ಮೊದಲ ಕಾರ್ಯಕ್ರಮ ಕೂಡಾ.
ಒಡ್ಡೋಲಗದ ಶ್ರಾವಣ ಸಂಭ್ರಮ ಸಂಸ್ಕೃತಿ ಉತ್ಸವಕ್ಕೂ ೨ ದಶಕಗಳ ಚರಿತ್ರೆ. ಕವಲಕೊಪ್ಪದಿಂದ ಪ್ರಾರಂಭವಾದ ಒಡ್ಡೋಲಗದ ಪಯಣಕ್ಕೆ ಸಾಥಿಯಾದವರು ಅನೇಕರು ಈ ವರ್ಷ ಕೂಡಾ ಮೂರೂ ದಿವಸ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಮೊದಲ ದಿನ ರಾಮಾಂಜನೇಯ ಪ್ರಸಂಗ ತಾಳಮದ್ದಲೆ ಆ.೩೦ ರ ಎರಡನೇ ದಿನ ಜನಶತ್ರು ನಾಟಕ,ಮೂರನೇ ದಿನ ಶನಿವಾರ ಋತುಪರ್ಣ ಯಕ್ಷಗಾನ ನಡೆಯಲಿದೆ. ಇವುಗಳೊಂದಿಗೆ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮಗಳು ನಡೆಯಲಿವೆ.
