ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಆಮಂತ್ರಣ ಪತ್ರಿಕೆಯನ್ನು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಬಿಡುಗಡೆ ಮಾಡಿದರು.
ಸೋಮವಾರ ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪಂದ್ಯಾವಳಿಯ ಸಂಘಟನಾ ಪೂರ್ವ ಸಭೆಯಲ್ಲಿ ಆಮಂತ್ರಣ ಬಿಡುಗಡೆಗೊಳಿಸಿ ಮಾತನಾಡಿ, ನನ್ನ ಕ್ಷೇತ್ರದ ವ್ಯಾಪ್ತಿಯ ಸಿದ್ದಾಪುರದಲ್ಲಿ ಬೆಳಗಾವಿ ವಿಭಾಗಮಟ್ಟದ ವಾಲಿಬಾಲ್ ಪಂದ್ಯಾವಳಿ ನಡೆಯುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಕ್ರೀಡಾಕೂಟದ ಯಶಸ್ಸಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳು, ತಾಲೂಕಿನ ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ದಾನಿಗಳು ಸಹಕಾರ ನೀಡಬೇಕು ಎಂದರು.
ಈ ವೇಳೆ ಸಿದ್ದಾಪುರ ಪಟ್ಟಣ ಪಂಚಾಯತ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ ನಾಯ್ಕ, ಸದಸ್ಯ ರವಿಕುಮಾರ ನಾಯ್ಕ, ಡಿಡಿಪಿಐ ಪಿ. ಬಸವರಾಜ, ಭೂ ನ್ಯಾಯ ಮಂಡಳಿ ಸದಸ್ಯ ಎಚ್.ಕೆ.ಶಿವಾನಂದ, ಪ್ರಮುಖರಾದ ವಿ.ಎನ್.ನಾಯ್ಕ, ಬಾಬು ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ನಾಯ್ಕ ನಿರೂಪಿಸಿದರು.