ಗೋವಾದಲ್ಲಿ ಬಿಜೆಪಿ ಕೋಮುಗಲಭೆ ಎಬ್ಬಿಸುತ್ತಿದೆ: ರಾಹುಲ್ ಗಾಂಧಿ
ನೈಸರ್ಗಿಕ ಸೌಂದರ್ಯ, ವೈವಿಧ್ಯತೆ, ಸಾಮರಸ್ಯದಿಂದ ಕೂಡಿದ ಜನರ ಪ್ರೀತಿ ಮತ್ತು ಆತಿಥ್ಯವೇ ಗೋವಾ ರಾಜ್ಯದ ಆಕರ್ಷಣೆಯಾಗಿದೆ. ದುರಾದೃಷ್ಟವಶಾತ್, ಬಿಜೆಪಿ ಆಡಳಿತದಲ್ಲಿ ಈ ಸಾಮರಸ್ಯಕ್ಕೆ ಧಕ್ಕೆಯಾಗಿದೆ.
ರಾಹುಲ್ ಗಾಂಧಿ
ನವದೆಹಲಿ: ಗೋವಾದಲ್ಲಿ ಬಿಜೆಪಿ ಉದ್ದೇಶಪೂರ್ವಕವಾಗಿ ಕೋಮು ಗಲಭೆ ಎಬ್ಬಿಸುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದ್ದಾರೆ. ರಾಜ್ಯ ಮತ್ತು ಇಡೀ ಭಾರತದ ಜನರು ಈ ವಿಭಜನೆಯನ್ನು ನೋಡುವುದರಿಂದ ಆಡಳಿತ ಪಕ್ಷದ ಪ್ರಯತ್ನಗಳಿಗೆ ತಡೆಯೊಡ್ಡಲಾಗುವುದು ಎಂದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ರಾಹುಲ್ ಗಾಂಧಿ, ನೈಸರ್ಗಿಕ ಸೌಂದರ್ಯ, ವೈವಿಧ್ಯತೆ, ಸಾಮರಸ್ಯದಿಂದ ಕೂಡಿದ ಜನರ ಪ್ರೀತಿ ಮತ್ತು ಆತಿಥ್ಯವೇ ಗೋವಾ ರಾಜ್ಯದ ಆಕರ್ಷಣೆಯಾಗಿದೆ. ದುರಾದೃಷ್ಟವಶಾತ್, ಬಿಜೆಪಿ ಆಡಳಿತದಲ್ಲಿ ಈ ಸಾಮರಸ್ಯಕ್ಕೆ ಧಕ್ಕೆಯಾಗಿದೆ.
ಬಿಜೆಪಿ ಉದ್ದೇಶಪೂರ್ವಕವಾಗಿ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತಿದೆ, ಮಾಜಿ ಆರ್‌ಎಸ್‌ಎಸ್ ನಾಯಕರೊಬ್ಬರು ಕ್ರಿಶ್ಚಿಯನ್ನರನ್ನು ಪ್ರಚೋದಿಸುತ್ತಿದ್ದಾರೆ ಮತ್ತು ಸಂಘಟನೆಗಳು ಮುಸ್ಲಿಮರ ಮೇಲೆ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡುತ್ತಿವೆ ಎಂದು ಅವರು ಬರೆದುಕೊಂಡಿದ್ದಾರೆ.
ಸಂಘ ಪರಿವಾರ ಇಂತಹುದೇ ಕೃತ್ಯಗಳನ್ನು ನಿರ್ಭೀತಿಯಿಂದ ಮತ್ತು ಉನ್ನತ ಮಟ್ಟದ ಬೆಂಬಲದೊಂದಿಗೆ ದೇಶಾದ್ಯಂತ ನಡೆಸುತ್ತಿದೆ. ಗೋವಾದಲ್ಲಿ ಬಿಜೆಪಿ ಯೋಜನೆ ಸ್ಪಷ್ಟವಾಗಿದೆ. ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಅಕ್ರಮವಾಗಿ ಗ್ರೀನ್ ಲ್ಯಾಂಡ್ ಗಳಾಗಿ ಮಾರ್ಪಡು ಮಾಡುವ ಮೂಲಕ ಮತ್ತು ಪರಿಸರ ನಿಯಮಗಳನ್ನು ಕಡೆಗಣಿಸುವ ಮೂಲಕ ಜನರನ್ನು ವಿಭಜಿಸಲಾಗುತ್ತಿದೆ. ಇದು ಗೋವಾದ ನೈಸರ್ಗಿಕ ಮತ್ತು ಸಾಮಾಜಿಕ ಪರಂಪರೆಯ ಮೇಲಿನ ದಾಳಿಯಾಗಿದೆ.ಬಿಜೆಪಿ ಪ್ರಯತ್ನಗಳಿಗೆ ತಡೆಯೊಡ್ಡಲಾಗುವುದು, ಇಂತಹ ವಿಭಜಕ ಕಾರ್ಯಸೂಚಿಯನ್ನು ಗಮನಿಸುತ್ತಿರುವ ಗೋವಾ ಜನರು ಮತ್ತು ಇಡೀ ಭಾರತ ಒಂದಾಗಿ ನಿಂತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. (kp.c)