ಸಿದ್ದಾಪುರ. ತಾಲೂಕಿನ ಭುವನಗಿರಿ ಸಮೀಪದ ಹೊಸಳ್ಳಿಯ ಶ್ರೀರಾಮ ಮತ್ತು ಪರಿವಾರ ದೇವತೆಗಳ ದೇವಾಲಯದಲ್ಲಿ ನವರಾತ್ರಿ ಉತ್ಸವ ಪೂಜೆ ಭಜನೆಗಳೊಂದಿಗೆ ನಡೆಯಿತು.ಊರಿನ ಭಜನಾ ತಂಡದ ಸದಸ್ಯರು ಹಾಗೂ ನಾಗರಿಕರು ನವರಾತ್ರಿಯ ಮೊದಲ ದಿನದಿಂದ ಪ್ರಾರಂಭಿಸಿ ದಶಮಿಯವರೆಗೆ ಪ್ರತಿದಿನ ಸಂಜೆ ಭಜನೆ ಹಾಡುವುದು ಇಲ್ಲಿ ರೂಢಿಯಲ್ಲಿದೆ.
ಈ ಸಂದರ್ಭದಲ್ಲಿ ಬುಧವಾರ ಊರಿನ ಮಕ್ಕಳು ಮತ್ತು ಹಿರಿಯರಿಗಾಗಿ ಚಿತ್ತಾರದ ಬಟ್ಟಲು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಆರು ಪ್ರೌಢ ಮತ್ತು ಕಾಲೇಜು ವಿಭಾಗದ 12 ಹಾಗೂ ಹಿರಿಯರ ವಿಭಾಗದ 18 ಸ್ಪರ್ಧಿಗಳು ಭಾಗವಹಿಸಿದ್ದರು. ನಾನಾ ವಿನ್ಯಾಸದ ವರ್ಣಮಯ ಚಿತ್ತಾರ ಗಳನ್ನು ತಟ್ಟೆಯಲ್ಲಿ ಚಿತ್ರಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. ಗ್ರಾಮೀಣ ಪ್ರತಿಭೆಗಳನ್ನು ಅನಾವರಣಗೊಳಿಸಿದ ಈ ಚಿತ್ತಾರಗಳು ನೋಡುಗರ ಗಮನ ಸೆಳೆದವು.