ಅಡಕೆ ಬೆಳೆಗಾರ ಬೆಲೆಕುಸಿತದಿಂದ ಕಂಗಾಲಾಗುತ್ತಿರುವ ದಿನದಲ್ಲಿ ಅಡಕೆಗೆ ಅಂಟುತ್ತಿರುವ ಎಲೆಚುಕ್ಕಿ ರೋಗ ರೈತರ ಜಂಗಾಬಲ ಕುಗ್ಗಿಸತೊಡಗಿದೆ. ಅಡಕೆ ಗಿಡ-ಮರಗಳಿಗೆ ಬರುವ ಎಲೆಚುಕ್ಕಿ ರೋಗ ಸಾಂಕ್ರಾಮಿಕವಾಗಿದ್ದು ಅಡಕೆ ರಕ್ಷಣೆಗೆ ರೈತರು ಮಾಡುತ್ತಿರುವ ವೈಯಕ್ತಿಕ ಪ್ರಯತ್ನ ಫಲ ಕೊಡುತ್ತಿಲ್ಲ. ಅಡಕೆ ಬೆಳೆಯುವ ಪ್ರದೇಶಗಳಲ್ಲಿ ನೂರಾರು-ಸಾವಿರಾರು ಎಕರೆ ಅಡಕೆ ವಿಸ್ತರಣೆಯಾಗಿರುತ್ತದೆ. ಈ ಪ್ರದೇಶ ಏಕ ಅಥವಾ ಕೆಲವೇ ವ್ಯಕ್ತಿಗಳದ್ದಾಗಿದ್ದರೆ ಔಷಧಿ ಸಿಂಪಡಣೆ ಮಾಡಬಹುದು ಆದರೆ ವಿಸ್ತಾರವಾದ ಅಡಕೆ ಬೆಳೆ ಪ್ರದೇಶದಲ್ಲಿ ಹಲವು ರೈತರ ಜಮೀನಿರುವುದರಿಂದ ಕೆಲವರು ಔಷಧಿ ಸಿಂಪಡಿಸಿ ಕೆಲವರು ಬಿಟ್ಟರೆ ರೋಗ ಎಲ್ಲಾ ಕಡೆ ಸಾಂಕ್ರಾಮಿಕವಾಗಿ ಪಸರಿಸುತ್ತದೆ. ಹಾಗಾಗಿ ಸಾಮೂಹಿಕ ಪ್ರಯತ್ನದಿಂದ ಮಾತ್ರ ಎಲೆಚುಕ್ಕಿ ರೋಗ ನಿಯಂತ್ರಣ ಸಾಧ್ಯ ಎನ್ನುತ್ತಾರೆ ತಜ್ಞರು.
ಎಲೆಚುಕ್ಕಿ ರೋಗ ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ವಿಪರೀತ. ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಲೆಚುಕ್ಕಿ ರೋಗಬಾಧೆ ತೀವ್ರವಾಗಿರುವುದರಿಂದ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಪರ್ಯಾಯ ಬೆಳೆ- ವೃತ್ತಿ ಬಗ್ಗೆ ಯೋಚಿಸುತ್ತಿರುವುದು ಕಳವಳಕಾರಿ ಅಂಶವಾಗಿದೆ.