ಶಿರಸಿ: ಇಸಳೂರು ಹಾಗೂ ದೊಡ್ನಳ್ಳಿ ಪಂಚಾಯ್ತಿಯ ವ್ಯಾಪ್ತಿಯ ಆರೇಳು ಗ್ರಾಮಗಳಲ್ಲಿ ಮೇಘ ಸ್ಪೋಟದಿಂದ ಅತಿಯಾಗಿ ಸುರಿದ ಮಳೆಯ ಕಾರಣದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಗಳವಾರದ ಪೂರ್ವ ನಿಗದಿತ ಕಾರ್ಯಕ್ರಮ ರದ್ದುಗೊಳಿಸಿ ಹಾನಿಗೊಳಗಾದ ಗಣಗೇರಿ, ನುರಕಲಕೊಪ್ಪ, ಬ್ಯಾಗದ್ದೆ, ಹುಸುರಿ, ಲಂಡಕನಳ್ಳಿ, ದೊಡ್ನಳ್ಳಿ
ಇಸಳೂರು ಊರಿನ ಪ್ರದೇಶಕ್ಕೆ ಭೇಟಿ ನೀಡಿ ಹಾನಿ ವೀಕ್ಷಿಸಿ ರೈತರಿಗೆ, ಕೃಷಿ ಕಾರ್ಮಿಕರ ಜೊತೆ ಮಾತನಾಡಿ ಸ್ಪಂದನೆಯ ಭರವಸೆ ನೀಡಿದರು.
ಸೋಮವಾರ ಸಂಜೆ ಒಂದುವರೆ ಗಂಟೆಗಳಿಗೂ ಅಧಿಕ ಕಾಲ ಸುರಿದ ಮುಸಲ ಧಾರೆಗೆ ಕೆರೆ ಕೋಡಿಗಳು ಒಡೆದು ಅಡಿಕೆ, ಭತ್ತ ಸೇರಿದಂತೆ ಅನೇಕ ಹಾನಿಯಾಗಿದೆ. ತೋಟಕ್ಕೆ ಹಾಕಿದ ಗೊಬ್ಬರ, ಮಣ್ಣು ಎಲ್ಲವೂ ಕೊಚ್ಚಿ ಹೋಗಿವೆ. ಕೋಯ್ಲಿಗೆ ಬಂದಿದ್ದ ಭತ್ತದ ಗದ್ದೆ ಕೂಡ ಮಣ್ಣಡಿಯಾಗಿವೆ. ಕೆಲವು ಮನೆಗಳಿಗೆ ಹೋಗಲೂ ದಾರಿ ಕಟ್ ಆಗಿದ್ದನ್ನೂ ವೀಕ್ಷಿಸಿ ಬೆಳೆ ಹಾಗೂ ಸಾರ್ವಜನಿಕ ರಸ್ತೆ, ಕೆರೆ ಒಡ್ಡು, ಸೇತುವೆಗಳ ಹಾನಿಯನ್ನೂ ಪರಿಶೀಲಿಸುವಂತೆ ಶಾಸಕರು ಸೂಚಿಸಿದರು.
ಸ್ಥಳದಲ್ಲಿದ್ದ ತಹಸೀಲ್ದಾರ ಶ್ರೀಧರ ಮುಂದಲಮನಿ ಅವರಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳ ಮೂಲಕ ಜಂಟಿ ಸರ್ವೆ ನಡೆಸಬೇಕು. ಪರಿಹಾರದ ಮಾರ್ಗಗಳನ್ನೂ ವರದಿಯಲ್ಲಿ ಪ್ರಸ್ತಾಪಿಸಿ ಕೊಡಬೇಕು ಎಂದು ಶಾಸಕರು ಸೂಚಿಸಿದರು.
ಈ ವೇಳೆ ನಗರಾಭಿವೃದ್ದಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ರಘು ನಾಯ್ಕ, ಎಸ್.ಎನ್.ಹೆಗಡೆ, ಸತೀಶ ಕಾನಡೆ ಇತರರು ಇದ್ದರು.