

ತಾಳ್ಮೆ- ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ೯೦ ರ ದಶಕದ ಆದಿ, ಎಸ್. ಬಂಗಾರಪ್ಪ ಮಂತ್ರಿ, ಮುಖ್ಯಮಂತ್ರಿ, ಸಂಸದ ಯಾವ ಹುದ್ದೆಯಲ್ಲಿದ್ದರೂ ಅವರ ಶೆಟ್ಲ ಬೆಡಮಿಂಟನ್ ಆಟ ಬಿಟ್ಟವರಲ್ಲ ಮುಂಜಾನೆ ೨ ತಾಸು, ಸಮಯ ಸಿಕ್ಕರೆ ಸಾಯಂಕಾಲ ಕೂಡಾ ಒಂದು ತಾಸು ಆಡುವುದನ್ನು ಕಡ್ಡಾಯ ನಿಯಮವೆಂಬಂತೆ ಅನುಸರಿಸುತಿದ್ದರು.
ಒಂದು ಮುಸ್ಸಂಜೆ ಸಮಯ ಬಂಗಾರಪ್ಪ ರಾಜಕೀಯ ಜಂಜಡ, ಒತ್ತಡ ಮೀರಲು ಪಣತೊಟ್ಟಂತೆ ಬೆಡಮಿಂಟನ್ ಆಡುತಿದ್ದ ವೇಳೆ ಅವರ ಆಪ್ತರೊಬ್ಬರು ಕೋರ್ಟ್ ಬಳಿ ಬಂದರು. ಹೀಗೆ ಆಟದ ವೇಳೆ ಯಾರೂ ಬರುತ್ತಿರಲಿಲ್ಲ ಸಾಮಾನ್ಯವಾಗಿ, ಆತ್ಮೀಯರು ಹೀಗೆ ಆಟದ ನಡುವೆ ಬಂದರೆಂದರೆ… ಏನೋ ವಿಶೇಶ ಎಂದರ್ಥ, ಬಂದ ಆತ್ಮೀಯ ಜೀವ ಕಿವಿಯಲ್ಲೇನೋ ಉಸುರಿ ಸರಿದು ನಿಂತಿತು! ಬಂಗಾರಪ್ಪ ಬೆವರು ಒರೆಸಿಕೊಂಡು ಮತ್ತಷ್ಟು ರಭಸವಾಗಿ ನಿಗದಿತ ಸಮಯಕ್ಕಿಂತ ಮುಕ್ಕಾಲು ಗಂಟೆ ಹೆಚ್ಚೇ ಆಡಿದರು. ಆಡಿ ಸುಸ್ತಾಗಿ ನಿತ್ರಾಣಗೊಂಡಂತಾಗಿದ್ದ ಬಂಗಾರಪ್ಪ ಸಾವರಿಸಿಕೊಂಡು ತಮ್ಮ ದಿನಚರಿ ಮುಂದುವರಿಸಿದರು.
ಆಟದ ಮಧ್ಯೆ ಬಂದಿದ್ದ ಆತ್ಮೀಯ ಕಿವಿಯಲ್ಲಿ ಉಸುರಿದ್ದು ” ಸರ್ ನಿಮ್ಮನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆಯಲು ರಾವ್ ನಿರ್ಧರಿಸಿದ್ದಾರಂತೆʼ ಇಂಥ ಆಘಾತಕಾರಿ ಸುದ್ದಿ ಕೇಳಿಯೂ ಸ್ವಯಂ ತನ್ನನ್ನು ತನ್ನ ಜನರನ್ನು ನಿಯಂತ್ರಿಸುವ ಶಕ್ತಿ ಬಂಗಾರಪ್ಪನವರಲ್ಲಿ ಕರತಲಾಮಲಕವಾಗಿತ್ತು.
ಈ ಮೇಲಿನ ಘಟನೆಗಿಂತ ಸ್ವಲ್ಫ ದಿನಗಳ ಮೊದಲು ಬಂಗಾರಪ್ಪ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದರು. ಕೆಲವು ಮಾಧ್ಯಮಗಳ ಪ್ರತಿನಿಧಿಗಳಿಗೆ ಕಡಕ್ ಸಂದರ್ಶನ ನೀಡಿದ್ದ ಬಂಗಾರಪ್ಪ ಮುಖ್ಯಮಂತ್ರಿಯಾಗಿ ಅಂದಿನ ಪ್ರಧಾನಿ ನರಸಿಂಹರಾವ್ ರನ್ನು ರಾವ್ ಒಬ್ಬ ಚೇಳಿದ್ದಂತೆ ಅವರು ಯಾರನ್ನೂ ಎಲ್ಲಿ ಬೇಕಾದರೂ ಕಚ್ಚಬಹುದು, ಅದು ನನ್ನನ್ನೂ ಕಚ್ಚಿದರೂ ಆಶ್ಚ ರ್ಯವಿಲ್ಲ ಎಂದು ಪಿ.ಟಿ. ಆಯ್. ಸಂಸ್ಥೆಗೆ ಸಂದರ್ಶನ ನೀಡಿ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿದ್ದರು. ರಾವ್ ಗೆ ಬಂಗಾರಪ್ಪ ಯಾಕೆ ಸೆಡ್ಡು ಹೊಡೆದರು. ರಾವ್ ದೇಶದ ಕುಲೀನ ಜಾತಿಯವರಲ್ಲದ ಎಷ್ಟು ಜನರನ್ನು ಮುಖ್ಯಮಂತ್ರಿ ಸೇರಿದಂತೆ ಪ್ರಮುಖ ಹುದ್ದೆಗಳಿಂದ ಪದಚ್ಚುತ ಗೊಳಿಸಿದರು ಎನ್ನುವುದೇ ಒಂದು ಚರಿತ್ರೆ.
