ನಿರಂತರ ಪರಿಶ್ರಮ ಬೇಡುವ ಯಕ್ಷಗಾನ ಕಲೆಗೆ ಇನ್ನಷ್ಟು ಪ್ರೋತ್ಸಾಹ, ಉತ್ತೇಜನ ಸಿಕ್ಕರೆ ಯಕ್ಷಗಾನ ನಮ್ಮತನವನ್ನು ಉಳಿಸಲು ನೆರವಾಗುತ್ತದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ ಅಧ್ಯಕ್ಷ ಎ. ರವೀಂದ್ರ ನುಡಿದರು. ಅವರು ಸೋಮವಾರ ಬೇಡ್ಕಣಿಯಲ್ಲಿ ನಡೆದ ಬೇಡ್ಕಣಿ ಶ್ರೀ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿಯ ವಾರ್ಷಿಕ ತಿರುಗಾಟದ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಘಟಕರ ಪರವಾಗಿ ಸನ್ಮಾನ ಸ್ವೀಕರಿಸಿದ ರವೀಂದ್ರ ಮತ್ತು ಯಕ್ಷಗಾನ ಕಲಾವಿದ ಜಯಕುಮಾರ ನಾಯ್ಕ ಮಾತನಾಡಿ ಕಲಾವಿದರು, ಹೋರಾಟಗಾರರನ್ನು ಗೌರವಿಸುವುದರಿಂದ ತಮಗೆ ಮತ್ತಷ್ಟು ಪ್ರೇರಣೆ ದೊರೆಯುತ್ತದೆ ಎಂದರು.
(ಚಿತ್ರಕೃಪೆ- ನಂದನ್ ನಾಯ್ಕ ಹಾರ್ಸಿಕಟ್ಟಾ)
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪ್ರಾಂಶುಪಾಲ ಎಂ.ಕೆ.ನಾಯ್ಕ ಹೊಸಳ್ಳಿ ಮಾತನಾಡಿ ನಾಡಿನ ಅನನ್ಯ ಕಲೆ ಯಕ್ಷಗಾನ ಉಳಿದರೆ ಪ್ರತಿಭೆಗಳು ಬೆಳಗುತ್ತವೆ. ಹೋರಾಟಗಾರ ರವೀಂದ್ರ ನಾಯ್ಕ ಮತ್ತು ಕಲಾವಿದ ಜಯಕುಮಾರ ಈ ಮಣ್ಣಿನ ಸೊಗಡಿನ ಪ್ರತಿಭೆಗಳು ಎಂದು ಪ್ರಶಂಸಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನೇಶ್ ಕೋಲಶಿರ್ಸಿ ಮಾತನಾಡಿ ಯಕ್ಷಗಾನ ಕಲಾವಿದರು, ಜಾನಪದ ಮತ್ತು ಜನಾಂಗೀಯ ಜಾನಪದ ಕಲಾವಿದರನ್ನು ಗುರುತಿಸುವ ಸರ್ಕಾರದ ಕ್ರಮ ಶ್ಲಾಘಿಸಿ ಖಾಸಗಿ ಸಂಘ ಸಂಸ್ಥೆಗಳು ಕೂಡಾ ಕಲಾವಿದರನ್ನು ಗುರುತಿಸಿ, ಉತ್ತೇಜಿಸಿದರೆ ಅದರಿಂದ ಉತ್ತಮ ಸಮಾಜ ನಿರ್ಮಾಣದ ಕನಸು ನನಸಾಗುತ್ತದೆ ಎಂದರು.
ಮಹಾಬಲೇಶ್ವರ ನಾಯ್ಕ ಉಪಸ್ಥಿತರಿದ್ದರು. ಹಿರಿಯ ಕಲಾವಿದ ಕೃಷ್ಣಾಜಿ ಮಾತನಾಡಿ ಶಾಲೆಗಳಲ್ಲಿ ಯಕ್ಷಗಾನ ಕಲಿಸುವಿಕೆಯಿಂದ ಹೊಸ ಕಲಾವಿದರ ಸೃಷ್ಟಿ ಸಾಧ್ಯವಾಗುತ್ತದೆ ಎಂದರು. ಮೇಳದ ಯಜಮಾನ ಲಕ್ಷ್ಮಣ ನಾಯ್ಕ ಸಹಕರಿಸಿದರು. ಚಂದ್ರಶೇಖರ್ ನಾಯ್ಕ ಕುಂಬ್ರಿಗದ್ದೆ ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ನಡೆದ ಸೀತಾರಾಮಕಲ್ಯಾಣ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರ ಮನ ಗೆದ್ದಿತು.