ಮುರುಡೇಶ್ವರದಲ್ಲಿ ನಡೆದ ವಿಶ್ವ ಮೀನುಗಾರಿಕೆ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ವರ್ಷ ಮೀನುಗಾರರಿಗಾಗಿ 10 ಸಾವಿರ ಮನೆಗಳನ್ನು ನೀಡಲು ತೀರ್ಮಾನ ಮಾಡಿದ್ದೇವೆ. ಮಂಗಳೂರಿನಲ್ಲಿ ₹49 ಕೋಟಿ ವೆಚ್ಚದಲ್ಲಿ ಮೀನುಗಾರಿಕೆ ಬಂದರು ಕಾಮಗಾರಿ ಪೂರ್ಣಗೊಂಡಿದೆ.
ಮೀನುಗಾರರ ದಿನ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್
ಮುರುಡೇಶ್ವರ: ಈ ಹಿಂದೆ ಮೀನುಗಾರರಿಗೆ ಸಮುದ್ರದಲ್ಲಿ ಮೀನುಗಾರಿಕೆ ವೇಳೆ ಹಾನಿಯಾದರೆ ಪರಿಹಾರವಾಗಿ ₹6 ಲಕ್ಷ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ಅದನ್ನು ₹8 ಲಕ್ಷಕ್ಕೆ ಏರಿಸಿದೆ. ಮುಂದಿನ ದಿನಗಳಲ್ಲಿ ಅದನ್ನು ₹10 ಲಕ್ಷಕ್ಕೆ ಏರಿಸುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಘೋಷಣೆ ಮಾಡಿದರು.
ಮುರುಡೇಶ್ವರದಲ್ಲಿ ನಡೆದ ವಿಶ್ವ ಮೀನುಗಾರಿಕೆ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ವರ್ಷ ಮೀನುಗಾರರಿಗಾಗಿ 10 ಸಾವಿರ ಮನೆಗಳನ್ನು ನೀಡಲು ತೀರ್ಮಾನ ಮಾಡಿದ್ದೇವೆ. ಮಂಗಳೂರಿನಲ್ಲಿ ₹49 ಕೋಟಿ ವೆಚ್ಚದಲ್ಲಿ ಮೀನುಗಾರಿಕೆ ಬಂದರು ಕಾಮಗಾರಿ ಪೂರ್ಣಗೊಂಡಿದೆ. ಸಮೀಕ್ಷೆ ಪ್ರಕಾರ 99% ಮೀನುಗಾರರು ಆರ್ಥಿಕವಾಗಿ ಹಿಂದುಳಿದಿದ್ದು, ಈ ಮೀನುಗಾರರ ರಕ್ಷಣೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಮೀನು ಮಾರಾಟ ಮಾಡಲು ತ್ರಿಚಕ್ರ ಎಲೆಕ್ಟ್ರಿಕ್ ವಾಹನ ಹಂಚಲಾಗಿದೆ” ಎಂದು ತಿಳಿಸಿದರು.
ಈ ಕರಾವಳಿ ಭಾಗದಲ್ಲಿ ನೂತನ ಪ್ರವಾಸೋದ್ಯಮ ನೀತಿ ರೂಪಿಸಬೇಕು ಎಂದು ಸಚಿವರಾದ ಹೆಚ್.ಕೆ ಪಾಟೀಲ್ ಅವರಿಗೆ ಸಚಿವ ಸಂಪುಟ ಸಭೆಯಲ್ಲಿ ತಿಳಿಸಿದ್ದೇವೆ. ನೂತನ ಪ್ರವಾಸೋದ್ಯಮ ನೀತಿಯಲ್ಲಿ ಮಂಗಳೂರಿನಿಂದ ಕಾರವಾರದವರೆಗೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಲಹೆಗಳನ್ನು ಪಡೆದಿದ್ದೇವೆ. ಈ ಭಾಗದಲ್ಲಿ ಪಂಚತಾರಾ ಹೋಟೆಲ್ ಗಳಿಲ್ಲ. ಈ ಬಗ್ಗೆಯೂ ಗಮನ ಹರಿಸಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನಮ್ಮ ಕಾರ್ಯಕ್ರಮ ಜಾರಿ ಮಾಡುತ್ತೇವೆ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಕಾರ್ಯಕ್ರಮ ರೂಪಿಸಲಾಗುವುದು. ಇಲ್ಲಿನ ಬಂದರುಗಳ ಅಭಿವೃದ್ಧಿ ಮಾಡಲಾಗುವುದು. ಕರಾವಳಿ ಭಾಗ ನಮ್ಮ ರಾಜ್ಯದ ಶಕ್ತಿ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ.
ನೊಬೆಲ್ ಪ್ರಶಸ್ತಿ ವಿಜೇತ ಮೊಹಮದ್ ಯೂನಿಸ್ ಅವರು ಒಂದು ಮಾತು ಹೇಳಿದ್ದಾರೆ. ಒಬ್ಬ ವ್ಯಕ್ತಿಗೆ ಮೀನು ಕೊಟ್ಟರೆ ಅದು ಆತನಿಗೆ ಒಂದು ಹೊತ್ತಿನ ಊಟಕ್ಕೆ ಸಮ. ಆದರೆ ಅದೇ ವ್ಯಕ್ತಿಗೆ ಮೀನುಗಾರಿಕೆ ಹೇಳಿಕೊಟ್ಟರೆ ಅದು ಅವನ ಬದುಕಿಗೆ ಊಟ ಕಲ್ಪಿಸಿಕೊಡುವುದಕ್ಕೆ ಸಮ ಎಂದು. ಅದೇ ರೀತಿ ನಮ್ಮ ಸರ್ಕಾರ ಮೀನುಗಾರರ ಬದುಕು ಬದಲಾಯಿಸಿ, ಅವರ ಕಾಲ ಮೇಲೆ ಅವರು ಸ್ವಾವಲಂಬನೆ ಬದುಕುವಂತೆ ಮಾಡಲು ಕಾರ್ಯಕ್ರಮ ರೂಪಿಸುತ್ತಿದೆ. ಮೀನುಗಾರರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ.
ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದ ಬಡ, ಮಧ್ಯಮ ವರ್ಗದ ಜನರ ಸಂಕಷ್ಟಕ್ಕೆ ಸ್ಪಂದಿಸಲು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಬಿಜೆಪಿ ಸ್ನೇಹಿತರು ಈ ಯೋಜನೆ ಬಗ್ಗೆ ಟೀಕೆ, ಅಪಪ್ರಚಾರ ಮಾಡುತ್ತಿದ್ದಾರೆ. ಆದರೂ ಮಧ್ಯಪ್ರದೇಶ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ನಮ್ಮ ಮಾದರಿಯಲ್ಲಿ ಬಿಜೆಪಿ ಸರ್ಕಾರಗಳು ಯೋಜನೆ ರೂಪಿಸುತ್ತಿವೆ. ಆಮೂಲಕ ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ ಎಂದು ಬಿಜೆಪಿಯವರಿಗೂ ಅರ್ಥವಾಗಿದೆ. ನಮ್ಮ ಸರ್ಕಾರ 2 ಸಾವಿರ, ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, 10 ಕೆ.ಜಿ ಅಕ್ಕಿ, ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುತ್ತಿದೆ. ಎಲ್ಲಾ ಪಕ್ಷದವರಿಗೂ ಈ ಯೋಜನೆ ಜಾರಿ ಮಾಡಿದ್ದೇವೆ. ಇದಕ್ಕಾಗಿ ₹56 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ. ಇದರಿಂದ ಬಡ ಕುಟುಂಬಕ್ಕೆ ವಾರ್ಷಿಕವಾಗಿ ಸರಾಸರಿ 50 ಸಾವಿರದಷ್ಟು ಉಳಿತಾಯ ಮಾಡಲು ಮುಂದಾಗಿದೆ. ಆಮೂಲಕ ದೇಶಕ್ಕೆ ಕರ್ನಾಟಕ ಮಾದರಿ ಪರಿಚಯಿಸಿದ್ದೇವೆ.
ಕರಾವಳಿ ಭಾಗದಲ್ಲಿ ಉತ್ತಮ ಪರಿಸರ, ಸಮುದ್ರ, ಕೌಶಲ್ಯಯುತ ಮಾನವ ಸಂಪನ್ಮೂಲವಿದ್ದು, ಈ ಭಾಗದ ಜನ ಉದ್ಯೋಗ ಅರಸಿ ಬೇರೆ ಕಡೆ ವಲಸೆ ಹೋಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಮೀನುಗಾರರು ಸೇರಿದಂತೆ ಕರಾವಳಿ ಭಾಗದ ಎಲ್ಲಾ ವರ್ಗದವರು ಉದ್ಯೋಗ ಹುಡುಕಿಕೊಂಡು ಬೇರೆ ರಾಜ್ಯ ಹಾಗೂ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇಲ್ಲಿ ಉತ್ತಮ ಆಸ್ತಿ ಹೊಂದಿದ್ದರೂ ಅದನ್ನು ಮಾರಿಕೊಂಡು ಹೋಗುತ್ತಿದ್ದಾರೆ. ಈ ಭಾಗದಲ್ಲಿ ಅತ್ಯುತ್ತಮವಾದ ಸಂಪನ್ಮೂಲಗಳಿವೆ. ವಲಸೆ ತಪ್ಪಿಸಿ ಈ ಭಾಗದಲ್ಲೇ ಈ ಜನ ಬದುಕು ಕಟ್ಟಿಕೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತಿದ್ದೇವೆ (ಕ.ಪ್ರ.ಡಾ)