


ಈ ಕೃಷ್ಣ ಆಕೃಷ್ಣ ನಂತೆ ಕಪ್ಪು ಸುಂದರನಲ್ಲ….ಗೋದಿ ಬಣ್ಣ ಸಾಧಾರಣ ಮೈಕಟ್ಟು ಶಿಸ್ತು, ಸಂಯಮ,ಮೌನ ಗಳೆಲ್ಲಾ ಘನತೆವೆತ್ತಂಥ ವ್ಯಕ್ತಿತ್ವ. ನಾವೆಲ್ಲ ಆಗಲೇ ಬೆಂಗಳೂರಿಗೆ ಕಾಲಿಟ್ಟಿದ್ದು ಈಗಿನ ಶಿವಮೊಗ್ಗದಷ್ಟು ಜನದಟ್ಟಣೆ, ವಾಹನ ಸಂಚಾರವಿದ್ದಿದ್ದ ಬೆಂಗಳೂರು ಯಾವಾಗಲೂ ಮಲಗುವುದೇ ಇಲ್ಲ ಎನ್ನುವ ವೈಭವೀಕರಣ ಓದಿ-ಕೇಳಿ ಬೆಂಗಳೂರಿಗೆ ತೆರಳಿದ್ದ ನಮಗೆ ಶಿವಾಜಿನಗರ, ಕಾಟನ್ ಪೇಟೆ, ಬಳೆ ಪೇಟೆ, ಕೆ.ಆರ್. ಮಾರ್ಕೆಟ್ ಅಲ್ಲೆಲ್ಲಾ ಒಬ್ಬೊಬ್ಬರೇ ಸುತ್ತಾಡಬಾರದು! ಎನ್ನುವ ಎಚ್ಚರಿಕೆಯ ಕಾಲ. ಆಗಲೇ ಮದ್ದೂರಿನ ಮದ್ದುಕೃಷ್ಣ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.
ಅದಕ್ಕಿಂತ ತುಸು ಹಿಂದೆ ಜನತಾದಳದ ಸರ್ಕಾರದ ಆಡಳಿತ ವಿದ್ದ ಅವಧಿಯದು. ಶಿಕ್ಷಕರಿಗೆ ಸಂಬಳಕೊಡಲು ವರಮಾನವಿಲ್ಲ ಎಂದು ಜನ ಮಾತನಾಡಿಕೊಳ್ಳುತಿದ್ದ ಕಾಲ ಆಗ ನಾವೆಲ್ಲ ಯೌವನಕ್ಕೆ ಕಾಲಿಟ್ಟಿದ್ದ ಹರೆಯದ ಹುಡುಗರು.
ಟೆಕ್ಸಾಸ್ ಕೃಷ್ಣ ಆಯ್.ಟಿ. ಬಿ.ಟಿ. ಎಂದು ರಾಜ್ಯವನ್ನೇ ದಿವಾಳಿ ಎಬ್ಬಿಸಿಬಿಟ್ಟರು ಎಂದು ಗಾಳಿಸುದ್ದಿ ಹರಡಿಸುತಿದ್ದ ಕಾಲ. ಕೃಷ್ಣ ಪತ್ರಿಕೆಗಳ ಟೀಕೆಗಳಿಗೆ ಮುಗುಳ್ನಗುತಿದ್ದರು. ಮಾಧ್ಯಮಗಳ ಮಂದಿ ಕೇಳುವ ನಾಲ್ಕು ಪ್ರಶ್ನೆಗೆ ಚುಟುಕಾಗಿ ಉತ್ತರಿಸಿ ನಕ್ಕು ಕಳಿಸಿಬಿಡುತಿದ್ದರು.
ರಾಮಕೃಷ್ಣ ಹೆಗಡೆಯವರ ನಂತರ ಕೃಷ್ಣ ಇಗ್ಲೀಷ್ ಪತ್ರಿಕೆಗಳ ಕೂಟ ಕಟ್ಟಿಕೊಂಡರು ಎನ್ನುವ ಟೀಕೆ ಎದುರಿಸಿದರು. ಬರಗಾಲ, ರಾಜ್ ಕುಮಾರ ಅಪಹರಣ ಸವಾಲುಗಳ ಮೇಲೆ ಸವಾಲು, ಸಾಲು ಸಾಲು ಸಂಕಷ್ಟ ಕೃಷ್ಣ ಹೆದರಲಿಲ್ಲ ಮಂಡ್ಯ ಮದ್ದೂರಿನಿಂದ ದೆಹಲಿ ವರೆಗೆ ಮೇಲ್ಮನೆ, ಕೆಳಮನೆ, ಗುಡಿಸಲು, ಅರಮನೆ ಎಲ್ಲಾ ಕಡೆ ಸುತ್ತಾಡಿ ಗೆದ್ದು ಬಂದಿದ್ದ ಕೃಷ್ಣ ಯಾವುದಕ್ಕೂ ತಲೆ ಕಡೆಸಿಕೊಳ್ಳದೆ ಆಡಳಿತ ನಡೆಸಿದರು. ಮತ್ತೆ ಮುಖ್ಯಮಂತ್ರಿಯಾಗುವ ಹಂಬಲದಿಂದ ರಾಜ್ಯದ ಜನರ ಮುಂದೆ ಹೋದರು. ತಾನೊಂದು ಬಗೆದರೆ…….
ಕೃಷ್ಣರ ಮಹತ್ವ ಅರ್ಥವಾಗತೊಡಗಿದ್ದು ಆಮೇಲಾಮೇಲೆ ಸಾವಿರಾರು ಕೋಟಿ ಬಜೆಟ್ ಮಿತಿ ದಾಟಿ ಲಕ್ಷಕೋಟಿಗಳ ಹತ್ತಿರಕ್ಕೆ ರಾಜ್ಯದ ಬಜೆಟ್ ಹಿಗ್ಗಲು ಕಾರಣವಾಗಿದ್ದ ಕೃಷ್ಣರ ದೂರದೃಷ್ಟಿಯ ಫಲವಾಗಿ ೨೦೦೦ ದೀಚೆಗೆ ರಾಜ್ಯದ ತೆರಿಗೆ, ಸಂಪತ್ತು,ವರಮಾನ ಹೆಚ್ಚಲು ಕಾರಣವಾಗಿದ್ದು ಕೃಷ್ಣರ ಕಲ್ಪನೆಯ ಸಿಂಗಾಪುರದ ಆಯ್.ಟಿ. ಬಿ.ಟಿ. ಉದ್ಯಮಗಳಿಂದ. ಬೆಂಗಳೂರು ಬೆಳೆಯಿತು. ಸಿಲಿಕಾನ್ ಸಿಟಿಯಾಯಿತು ಅಂತರಾಷ್ಟ್ರೀಯ ಖ್ಯಾತಿಗೇರಿತು.
ಕೃಷ್ಣ ಮೈಸೂರು ರಾಜರ ಸಾಂರಾಜ್ಯದ ಹಿರಿಯ ಅಧಿಕಾರಿಗಳಾಗಿದ್ದ ಕುಟುಂಬದ ಹಿನ್ನೆಲೆಯವರು. ವೈರುಧ್ಯವೆಂದರೆ… ಆರಿಸಿಕೊಂಡು ಸಾರ್ವಜನಿಕ ಸೇವೆಗೆ ಧುಮಿಕಿದ್ದು ಪ್ರಜಾ ಸಮಾಜವಾದಿ ಪಕ್ಷದ ಮೂಲಕ.
ಆರ್ಥಿಕ, ಶೈಕ್ಷಣಿಕ, ಜಾತಿ ಎಲ್ಲ ಅನುಕೂಲಗಳ ಕೃಷ್ಣ ಸಮಾಜವಾದಿಯಾಗಿ ರಾಜಕೀಯ ಪ್ರವೇಶಿಸಿದರು. ನಂತರ ಕಾಂಗ್ರೆಸ್ ಸೇರಿ ಶಕ್ತಿ ಕೇಂದ್ರಕ್ಕೆ ಹತ್ತಿರವಾದರು. ಸುಧೀರ್ಘ ರಾಜಕೀಯ ಅನುಭವದ ಅನೇಕ ತಿರುವುಗಳಂತೆ ಅಂತಿಮವಾಗಿ ಭಾರತೀಯ ಜನತಾ ಪಕ್ಷ ಸೇರಿಬಿಟ್ಟರು. ಇಂಥ ವೈರುಧ್ಯ, ಅನಿವಾರ್ಯತೆಗಳಲ್ಲಿ ಕಳೆದುಹೋಗಲು ಅಂತಿ ಮ ನಿಲ್ಧಾಣವೆಂದು ಆರಿಸಿಕೊಂಡದ್ದು ಬಿ.ಜೆ.ಪಿ. ಯನ್ನು, ಇದಕ್ಕೆ ಛಲದಂಕಮಲ್ಲ ಬಂಗಾರಪ್ಪ, ಲಾಭದ ರಾಜಕೀಯ ಮಾಡುವ ಕುಮಾರಸ್ವಾಮಿ ಕೂಡಾ ಹೊರತಲ್ಲ.
ಎಲ್ಲಾ ಸಾಧಕರ ನಡುವೆ ಬಿ.ಜೆ.ಪಿ.ಯನ್ನು ಕ್ಯಾನ್ಸರ್ ಎಂದು ಕರೆದಿದ್ದ ಮಾಮು ಜೆ.ಚ್. ಪಟೇಲ ಇವರೆಲ್ಲರಂತೆ ಬಿ.ಜೆ.ಪಿ. ಎಂಬ ಅಂತಿಮ ಯಾತ್ರೆ ಮಾಡಿದವರಲ್ಲ… ಅಲ್ಲಿಗೆ ಕೃಷ್ಣ ಮತೀಯವಾದಿ ಬಿ.ಜೆ.ಪಿ. ಸೇರಿ ಕಳೆದು ಹೋದದ್ದು ಬಿಟ್ಟರೆ ಕೃಷ್ಣ ಕನ್ನಡ ನಾಡು ಕಂಡ ಅಪ್ಪಟ ಚಿನ್ನ. ಹೋಗಿ ಬನ್ನಿ ಎಸ್. ಎಂ. ಕೃಷ್ಣಾಜಿ ನಿಮ್ಮ ನೆನಪು ಕರ್ನಾಟಕ, ಬೆಂಗಳೂರು ಇರುವ ವರೆಗೂ ಮಧುರ ನೆನಪಾಗೇ ಇರುತ್ತೆ. ನಮಗಂತೂ ನಾವು ಬೆಂಗಳೂರಿಗೆ ಕಾಲಿಟ್ಟಾಗ ಬೆಂಗಳೂರಿನ ದೊರೆಯಾಗಿದ್ದರು ಕೃಷ್ಣ ಎನ್ನುವ ಬೆರಗಿನೊಂದಿಗೆ ಸೇರಿ ಹೋಗಿದ್ದೀರಿ. ಒಬ್ಬ ನಾಯಕ ನಮ್ಮ ಕಾಲದ ಉತ್ತಮ ಆಡಳಿತಗಾರ ಎನ್ನುವ ನೆನಪು ವ್ಯಕ್ತಿಯೊಬ್ಬನ ಎದೆಯ ಶಿಲಾಶಾಸನದಂತೆ. ನಮನಗಳು ಸರ್. ಮತ್ತೆ ಹುಟ್ಟಿ ಬನ್ನಿ. ( ಕನ್ನೇಶ್)
