


ಕಾರವಾರ: ಸರ್ಕಾರದ ಉನ್ನತ ಹುದ್ದೆಯಲ್ಲಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಶಾ ತುಚ್ಛವಾಗಿ ಮಾತನಾಡುತ್ತಾರೆ. ವಿಧಾನ ಪರಿಷತ್ ಸದಸ್ಯರಾಗಿ ಸದನದಲ್ಲೇ ಮಹಿಳಾ ಸಚಿವೆಯ ಬಗ್ಗೆ ಸಿ.ಟಿ.ರವಿ ನಾಲಿಗೆ ಹರಿಬಿಡುತ್ತಾರೆ. ಇದೇನಾ ಬಿಜೆಪಿ ಸಂಸ್ಕೃತಿ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಪ್ರಶ್ನಿಸಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಎಂದರೆ ಕಲಿಯುಗದ ದೇವರಿದ್ದಂತೆ. ದಲಿತ ಸಮುದಾಯದಲ್ಲಿ ಹುಟ್ಟಿ, ಅದೆಷ್ಟೋ ಸಾಮಾಜಿಕ ಸಮಸ್ಯೆಗಳನ್ನ ಅನುಭವಿಸಿದರೂ, ಜಗತ್ತೇ ಕೊಂಡಾಡುವಂಥ ಬೃಹತ್ ಸಂವಿಧಾನ ನೀಡಿದ ಅವರು ಬರೆದ ಸಂವಿಧಾನದ ಅಡಿಯಲ್ಲೇ ಅಮಿತ್ ಶಾ ಅಧಿಕಾರದಲ್ಲಿರುವುದು; ಅವರಿಗೆ ಸಂಸತ್‌ನಲ್ಲಿ ಮಾತನಾಡಲು ಅವಕಾಶ ಸಿಕ್ಕಿದ್ದು. ಅಂಬೇಡ್ಕರ್ ಬಗ್ಗೆ ಅಗೌರವ ತೋರುವುದೆಂದರೆ ದೇಶಕ್ಕೆ ಅಪಮಾನ ಮಾಡಿದಂತೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಯ ಸಭ್ಯತೆ, ಸಂಸ್ಕೃತಿಗೆ ಒಂದೇ ದಿನ ನಡೆದ ಇವೆರಡೇ ಘಟನೆ ಸಾಕ್ಷಿ. ಮಾಡೋದೆಲ್ಲ ಅನಾಚಾರ, ಮನೆ ಮುಂದೆ ವೃಂದಾವನ ಎಂಬಂತೆ, ಬಿಜೆಪಿಯವರು ಬಾಯಲ್ಲಿ ಹೇಳೋದೆಲ್ಲ ಸಂಸ್ಕ್ರತಿ, ಮಾಡೋದೆಲ್ಲ ಅನಾಚರವಾಗಿದೆ ಎಂದು ಅವರು ತೀಕ್ಷ್ಣವಾಗಿ ಬಿಜೆಪಿ ನಾಯಕರ ನಡವಳಿಕೆಯನ್ನು ಖಂಡಿಸಿದ್ದಾರೆ.
