


ನಮ್ಮ ಸಂವಿಧಾನ ಜೀವಂತ ದಾಖಲೆಯಾಗಿದೆ: ದೇಶ ಉದ್ದೇಶಿಸಿ ರಾಷ್ಟ್ರಪತಿ ಮುರ್ಮು ಭಾಷಣ
ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ದ್ರೌಪದಿ ಮುರ್ಮು ಅವರು, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಯಾವಾಗಲೂ ನಮ್ಮ ನಾಗರಿಕತೆಯ ಪರಂಪರೆಯ ಭಾಗವಾಗಿವೆ ಎಂದು ಹೇಳಿದರು.

ದ್ರೌಪದಿ ಮುರ್ಮು

ನವದೆಹಲಿ: “ನಮ್ಮ ಸಂವಿಧಾನವು ಜೀವಂತ ದಾಖಲೆಯಾಗಿದೆ. ಏಕೆಂದರೆ ನಾಗರಿಕ ಸದ್ಗುಣಗಳು ಸಹಸ್ರಾರು ವರ್ಷಗಳಿಂದ ನಮ್ಮ ನೈತಿಕ ದಿಕ್ಸೂಚಿಯ ಭಾಗವಾಗಿವೆ” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಹೇಳಿದ್ದಾರೆ.
76ನೇ ಗಣರಾಜ್ಯೋತ್ಸವದ ಅಂಗವಾಗಿ ಇಂದು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ದ್ರೌಪದಿ ಮುರ್ಮು ಅವರು, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಯಾವಾಗಲೂ ನಮ್ಮ ನಾಗರಿಕತೆಯ ಪರಂಪರೆಯ ಭಾಗವಾಗಿವೆ ಎಂದು ಹೇಳಿದರು.

“ಭಾರತೀಯರಾಗಿ ನಮ್ಮ ಸಾಮೂಹಿಕ ಗುರುತಿನ ಅಂತಿಮ ಅಡಿಪಾಯವನ್ನು ಸಂವಿಧಾನ ಒದಗಿಸುತ್ತದೆ. ಇದು ನಮ್ಮನ್ನು ಕುಟುಂಬವಾಗಿ ಒಟ್ಟಿಗೆ ಬಂಧಿಸುತ್ತದೆ” ಎಂದು ರಾಷ್ಟ್ರಪತಿಗಳು ಹೇಳಿದರು.


ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾಗಿರುವ ಭಾರತವು ಒಂದು ಕಾಲದಲ್ಲಿ ಜ್ಞಾನ ಮತ್ತು ಬುದ್ಧಿವಂತಿಕೆಯ ಮೂಲವೆಂದು ಕರೆಯಲ್ಪಡುತ್ತಿತ್ತು ಎಂದು ಮುರ್ಮು ತಿಳಿಸಿದರು.

ನಾವು ಪ್ರತಿಕೂಲ ಪರಿಸ್ಥಿತಿಯ ಹೊರತಾಗಿಯೂ ಎಷ್ಟು ದೂರ ಸಾಗಿ ಬಂದಿದ್ದೇವೆ ಎಂಬುದನ್ನು ವಿವರಿಸಿದ ರಾಷ್ಟ್ರಪತಿ ಮುರ್ಮು, ಹಲವಾರು ವರ್ಷಗಳಿಂದ ದೇಶವು ಆರ್ಥಿಕತೆ, ವಿಜ್ಞಾನ, ಅಂತಾರಾಷ್ಟ್ರೀಯ ಬಾಂಧವ್ಯ ಹಾಗೂ ಇನ್ನಿತರ ವಿಷಯಗಳ ಮಾಡಿರುವ ಸಾಧನೆಯನ್ನು ಒತ್ತಿ ಹೇಳಿದರು.
“ಒಂದು ರಾಷ್ಟ್ರ ಒಂದು ಚುನಾವಣೆ” ಉಪಕ್ರಮವು, ಆಡಳಿತದಲ್ಲಿ ಸ್ಥಿರತೆಯನ್ನು ಉತ್ತೇಜಿಸುವ, ಯೋಜನೆಗಳು ದಾರಿ ತಪ್ಪದಂತೆ ತಡೆಯಲಿದೆ ಮತ್ತು ರಾಜ್ಯದ ಮೇಲಿನ ಆರ್ಥಿಕ ಹೊರೆಗಳನ್ನು ಕಡಿಮೆ ಮಾಡುವ ಮೂಲಕ ದೇಶದಲ್ಲಿ “ಉತ್ತಮ ಆಡಳಿತ” ವನ್ನು ಮರು ವ್ಯಾಖ್ಯಾನಿಸುವ ಸಾಮರ್ಥ್ಯ ಹೊಂದಿದೆ ಎಂದು ರಾಷ್ಟ್ರಪತಿಗಳು ಪ್ರತಿಪಾದಿಸಿದರು.
ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಗುರಿಯನ್ನು ಹೊಂದಿರುವ ಪ್ರಸ್ತಾವಿತ ಮಸೂದೆಯ ಮಹತ್ವವನ್ನು ಎತ್ತಿ ತೋರಿಸಿದ ಮುರ್ಮು, “ಒಂದು ರಾಷ್ಟ್ರ ಒಂದು ಚುನಾವಣೆ” ಯೋಜನೆಯು ವರ್ಧಿತ ಆಡಳಿತ ಮತ್ತು ಕಡಿಮೆ ಆರ್ಥಿಕ ಒತ್ತಡ ಸೇರಿದಂತೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ” ಎಂದು ಹೇಳಿದರು.

