


ಸಿದ್ದಾಪುರ: ಕಳೆದ ಒಂದು ವಾರದೊಳಗೆ ತಾಲೂಕಿನ ವಿವಿಧೆ ಡೆ ಬೆಂಕಿ ಅವಘಡಗಳು ಸಂಭವಿಸಿದ್ದು, ಬೇಸಿಗೆಯಲ್ಲಿ ಸಾರ್ವಜನಿಕರು ಬೆಂಕಿಯ ಕುರಿತು ತುಂಬಾ ಜಾಗೃತರಾಗಿರಬೇಕು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಎಚ್ದಚರಿಸಿದರು.
ಇಲ್ಲಿಯ ತಾಲೂಕಾ ಆಡಳಿತ ಸೌಧದಲ್ಲಿ ಅಗ್ನಿಶಾಮಕ ಇಲಾಖೆಯಿಂದ ಆಯೋಜಿಸಿದ್ದ ಫೈರ್ ಸೇಪ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ತಾಲೂಕಿನ ಚಂದ್ರಘಟಗಿಯಲ್ಲಿ ಕೊಟ್ಟಿಗೆಗೆ ಬೆಂಕಿ ತಗುಲಿ ಏಳು ಹಸುಗಳು ಧಾರುಣ ಸಾವು ಕಂಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ರೈತರು ಜಾನುವಾರುಗಳ ಒಣಹುಲ್ಲನ್ನು ಕೊಟ್ಟಿಗೆಯಿಂದ ದೂರದಲ್ಲಿ ಸಂಗ್ರಹಿಸಿಟ್ಟುಕೊಂಡರೆ ದನಕರುಗಳ ಜೀವ ಉಳಿಸಿಕೊಳ್ಳಬಹುದು.
ಬೆಂಕಿ ಬೀಳದಂತೆ ಸಾರ್ವಜನಿಕರು ತುಂಬಾ ಮುಂಜಾಗೃತೆ ವಹಿಸಬೇಕು. ಈ ವಿಚಾರದಲ್ಲಿ ಎಲ್ಲರ ಜವಾಬ್ದಾರಿ ತುಂಬಾ ಮುಖ್ಯವಾಗಿದೆ ಎಂದರು.
ಅಗ್ನಿಶಾಮಕ ದಳದ ಸುಬ್ರಮಣ್ಯ ಬೆಂಕಿ ಬಿದ್ದಾಗ ಬೆಂಕಿ ನಂದಿಸುವ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ, ತಾಲೂಕಾ ದಂಡಾಧಿಕಾರಿ ಎಂ.ಆರ್.ಕುಲಕರ್ಣಿ, ಸಿಪಿಐ ಜೆ.ಬಿ.ಸೀತಾರಾಮ ಮತ್ತಿತರರು ಉಪಸ್ಥಿತರಿದ್ದರು.

