


ಶರಣ ಮಡಿವಾಳ ಮಾಚಿದೇವರ ಜಯಂತಿ ಫೆಬ್ರುವರಿ ಒಂದರಂದು ನಡೆಯುತ್ತಿದೆ. ಸರ್ಕಾರದ ಆದೇಶದನ್ವಯ ರಾಜ್ಯದಾದ್ಯಂತ ಮಡಿವಾಳ ಮಾಚಿದೇವ ಜಯಂತಿ ಆಚರಣೆ ನಡೆಯುತ್ತಿದೆ. ಮಡಿವಾಳ ಸಮಾಜದ ಸಂಘಗಳು ಅಲ್ಲಿಲ್ಲಿ ಅದ್ಧೂರಿಯಾಗಿ ವೈಶಿಷ್ಟ್ಯಪೂರ್ಣವಾಗಿ ಮಡಿವಾಳ ಮಾಚಿದೇವ ಜಯಂತಿ ಆಚರಿಸುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಜಯಂತಿ ಆಚರಣೆ ನಡೆಯುತ್ತಿದೆ.
೧೨ ನೇ ಶತಮಾನದ ಮಹಾಬಂಡಾಯ ಮಾನವಕುಲಕ್ಕೆ ವೈದಿಕತೆಯ ವಿರುದ್ಧದ ಮಹಾಸಮರ ಈ ಸಮರದ ಸೇನಾನಿಗಳೇ ಇಂದು ವಿವಿಧ ಜಾತಿ-ಪಂಥಗಳ ಗುರುಗಳಾಗಿರುವುದು ಅವರ ಸಿದ್ದಾಂತದ ಮಹತ್ವದಿಂದ. ಇಲ್ಲಿ ಮಡಿವಾಳ ಮಾಚಿದೇವರ ಸಂಕ್ಷಿಪ್ತ ಪರಿಚಯವಿದೆ.

೧೨ ನೆಯ ಶತಮಾನದಲ್ಲಿ ದುರ್ಬಲರ ಶೋಷಣೆ , ಜಾತೀಯತೆ, ಮೇಲು -ಕೀಳು ತಾರತಮ್ಯ , ಅಸ್ಪ್ರುಶ್ಯತೆ , ಮೂಢ ನಂಬಿಕೆಗಳ ಸೃಷ್ಟಿ , ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇವುಗಳೆಲ್ಲವುಗಳಿಂದ ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು , ಬಡವರು, ದೀನ ದಲಿತರು ನಿರಾಶೆ-ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು. ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ಬಸವ-ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರ ಗಣ್ಯ ಬಳಗದಲ್ಲಿ ‘ ಮಡಿವಾಳ ಮಾಚಿದೇವ’ ಅತ್ಯಂತ ಪ್ರಕಾಶಮಾನವಾಗಿ ಕಾಣುತ್ತಾರೆ …

ದಕ್ಷನನ್ನು ಸಂಹಾರ ಮಾಡಿ ಅತಿ ಉತ್ಸಾಹದಿಂದ ಶಿವನನ್ನು ಕಾಣಲು ವೀರಭದ್ರ ಶಿವನ ಸಭೆಯೊಳಗೆ ನಡೆದು ಬರುತ್ತಾನೆ. ಸಭೆಯಲ್ಲಿರುವ ಶಿವ ಭಕ್ತನಿಗೆ ಈತನ ಉತ್ತರೀಯ ಸೆರಗು ತಾಕುತ್ತದೆ. ವಿಜಯದ ಉದ್ವೇಗದಲ್ಲಿ ಆದ ಆ ತಪ್ಪಿಗೆ, ಭೂಲೋಕದಲ್ಲಿ ಮಡಿವಾಳನಾಗಿ ಜನಿಸಿ ಶರಣರ ವಸ್ತ್ರಗಳನ್ನು ಮಡಿ ಮಾಡುವ ಕಾಯಕ ಪೂರೈಸಿ ದೋಷ ಮುಕ್ತನಾಗಿ ಬರುವಂತೆ ಶಿವನ ಆದೇಶವಾಗುತ್ತದೆ. ಮಾಚಿದೇವರನ್ನು ವೀರ ಭದ್ರನ ‘ದೇವಾಂಶ ಸಂಭೂತ ಅವತಾರ ಪುರುಷನೆಂದು’ ನಿರೂಪಿಸುವುದು ಸಾಮಾನ್ಯ ರೂಢಿಯಾಗಿದೆ..
ಉದಯಿಸಿದ ಶರಣ ಕಿರಣ

ಬಿಜಾಪುರ ಜಿಲೆಯ ಸಿಂಧಗಿ ತಾಲೂಕಿನ ‘ದೇವರ ಹಿಪ್ಪರಗಿಯಲ್ಲಿ’ ಪರುವತಯ್ಯ -ಸುಜ್ನಾನವ್ವ ದಂಪತಿಗಳ ಪುತ್ರ ರತ್ನ -ಶರಣ ಕಿರಣ ಮಡಿವಾಳ ಮಾಚಿದೆವರು ಜನಿಸಿದ್ದು ಕ್ರಿ .ಶ ೧೧೨೦-೧೧೩೦ ರ ನಡುವೆ.
ಕ್ರಾಂತಿಕಾರಿ ಗುರುವಿನ ಬೋಧನೆ

ಮಾಚಿದೇವರ ವ್ಯಾಸಂಗ- ಅಪಾರ ಜ್ಞಾನವನ್ನು ಅವಲೋಕಿಸಿದಾಗ ಉತ್ತಮ ಗುರುಗಳ ಬೋಧನೆ ಸಿಕ್ಕಿದ್ದು ಮನವರಿಕೆಯಾಗುತ್ತದೆ. ಶೂದ್ರರಿಗೆ ಶಿಕ್ಷಣ ನಿಷೇಧಿಸಲ್ಪಟ್ಟ ಕಾಲದಲ್ಲಿ ಅಕ್ಷರ ಜ್ಞಾನ -ಸಕಲ ಶಾಸ್ತ್ರಗಳನ್ನು ಹೇಳಿಕೊಟ್ಟ ಗುರು ‘ ಮಲ್ಲಿಕಾರ್ಜುನಯ್ಯ ಸ್ವಾಮಿಗಳು’ ನಿಜಕ್ಕೂ ಒಬ್ಬ ಕ್ರಾಂತಿಕಾರಿ ಗುರುಗಳೆಂಬುದು ಸ್ಪಷ್ಟವಾಗುತ್ತದೆ..
ಕಾಯಕ ಹಿಮಾಚಲ -ಮಾಚಯ್ಯ

ಮಾಚಯ್ಯ ಹುಟ್ಟಿನಿಂದಲೂ ಮಡಿವಾಳನಾಗಿದ್ದು, ಅಚಲ ಕಾಯಕ ನಿಷ್ಟನಾಗಿದ್ದ , ಹಿಮಾಲಯದಷ್ಟು ಧೃಢನಾಗಿದ್ದ , ತನ್ನ ಕಾಯಕವೇ ಭಕ್ತಿ, ಜೀವನದುಸಿರು ಎಂದು ನಂಬಿದ್ದ. ಜಂಗಮ ವೇಷದಲ್ಲಿ ಬಂದ ಶಿವನ ಬಟ್ಟೆಗಳನ್ನು ಆತನ ಷರತ್ತಿನ ಮೇರೆಗೆ ತನ್ನ ಹೆಂಡತಿ ‘ಮಲ್ಲಿಗೆಮ್ಮಳ’ ಎದೆ ಬಗೆದ ರಕ್ತದಲ್ಲಿ ಒಗೆದು ಒಣಗಿಸಿಕೊಂಡು ಬಂದ ಸಂದರ್ಭದ ದಂತ ಕಥೆ ಹಿಮಾಚಲಕ್ಕಿಂತಲೂ ಗಟ್ಟಿ ಕಾಯಕದ ಹಿರಿಯಾಳು ಮಾಚಿದೇವನಾಗಿದ್ದ ಎಂಬುದನ್ನು ತಿಳಿಸುತ್ತದೆ.
ಶಿವಶರಣರ ಹಾಗೂ ಕಾಯಕದಲ್ಲಿ ನಿಷ್ಠೆಯುಳ್ಳ ಮೈಲಿಗೆಯ ಬಟ್ಟೆಗಳನ್ನು ‘ಮಡಿ’ ಮಾಡಿ ಮುಟ್ಟಿಸುವ ಕಾಯಕ ಇವರಾದಾಗಿತ್ತು . ಮಡಿ ಬಟ್ಟೆ ಹೊತ್ತುಕೊಂಡು ‘ವೀರ ಘಂಟೆ’ ಬಾರಿಸುತ್ತ , ಭಕ್ತರಲ್ಲದವರು ತಮ್ಮನ್ನು ಮುಟ್ಟಬಾರದೆಂದು ನಿಯಮವನ್ನು ವಿಧಿಸಿಕೊಂಡಿದ್ದರು .

ಕುಚೋದ್ಯಕ್ಕೆ ಬಂದು ಮುಟ್ಟುವ ಭವಿಗಳನ್ನು ತುಂಡರಿಸಿ ಚೆಲ್ಲುತ್ತ ಮುನ್ನಡೆಯುವುದು ಮಾಚಿದೇವರ ನಡತೆಯಾಗಿತ್ತು. ಭವಿಯೋರ್ವ ಮಡಿ ಗಂಟು ಮುಟ್ಟಿ ಮೈಲಿಗೆಗೊಳಿಸಿದ್ದಕ್ಕೆ ಆತನ ಶಿರವನ್ನು ಆಕಾಶಕ್ಕೆ ತೂರಿದ ಘಟನೆಯಿಂದಾಗಿ, ಭಕ್ತಿ ಭಾವದಿಂದ ಮಡಿವಾಳಯ್ಯನನ್ನು ಜನರು ಗೌರವಿಸುತ್ತಿದ್ದರು. ಕಾಯಕ ಮಾಡದ -ಸೋಮಾರಿಗಳ-ಬಡವರನ್ನು ಶೋಷಿಸುವ -ಸೋಮಾರಿಗಳ- ದುರ್ಗುಣವುಳ್ಳವರ ಬಟ್ಟೆಗಳನ್ನೆಂದು ಆತ ಮುಟ್ಟುತ್ತಿರಲಿಲ್ಲ. ‘ಅರಸುತನ ಮೇಲಲ್ಲ-ಅಗಸತನ ಕೀಳಲ್ಲ ‘ ಎಂಬುದನ್ನು ಜನಕ್ಕೆ ಸಾರಿದರು.
