



https://samajamukhi.net/2025/02/11/%e
ಸಿದ್ದಾಪುರ: ಇತ್ತೀಚೆಗೆ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಪ್ಯಾರಾಚೂಟ್ ಓಪನ್ ಆಗದೆ ದುರ್ಮರಣ ಹೊಂದಿದ್ದ ವಾರಂಟ್ ಆಫೀಸರ್ ಜಿ.ಎಸ್.ಮಂಜುನಾಥ ಅವರಿಗೆ ಸಿದ್ದಾಪುರ ತಾಲ್ಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕುಮಾರ ಗೌಡರ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಏರ್ಪಡಿಸಿದ್ದ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾವನಮನ ಸಲ್ಲಿಸಲಾಯಿತು.

ಸಿದ್ದಾಪುರ ತಹಶೀಲ್ದಾರ ಎಮ.ಆರ್. ಕುಲಕರ್ಣಿ, ಉಪತಹಶೀಲ್ದಾರ ಜಿ.ಎಲ್. ಶಾಮಸುಂದರ್, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ಪಿಡಿ ನಾಯ್ಕ, ಕ್ಯಾಪ್ಟನ್ ರಾಜೇಶ್ ನಾಯ್ಕ, ಸಂಘದ ಪದಾಧಿಕಾರಿಗಳು, ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲ ನಾಯ್ಕ, ಗೌರವ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ, ಕೋಶಾಧ್ಯಕ್ಷ ಪಿ.ಬಿ. ಹೊಸೂರು, ಪದಾಧಿಕಾರಿ ಮಂಜುನಾಥ ಭಟ್ಟ , ಪ.ಪಂ ಸದಸ್ಯ ಗುರುರಾಜ ಶಾನಬಾಗ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ. ನಾಯ್ಕ, ಡಾ||ರಾಜು ಭಟ್ಟ, ಉಮೇಶ ಟಪಾಲ್ ಮುಂತಾದವರು ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು.

ಈ ಸಮಯದಲ್ಲಿ ತಾಲ್ಲೂಕಿನ ನಿವೃತ್ತ ಹಾಗೂ ಹಾಲಿ ಸೈನಿಕರು, ವಿವಿಧ ಸಂಘಟನೆಯ ಪದಾಧಿಕಾರಿಗಳು ವೀರಯೋಧನ ಸ್ಮರಣೆಗಾಗಿ ಮೇಣದ ಬತ್ತಿ ಹಿಡಿದು ಪಟ್ಟಣದ ಹಳೆ ಬಸ್ ನಿಲ್ದಾಣ, ತಹಶಿಲ್ದಾರ ಕಛೇರಿ, ಅಂಬೇಡ್ಕರ್ ವೃತ್ತ, ತಿಮ್ಮಪ್ಪ ನಾಯ್ಕ ವೃತ್ತದ ಮೂಲಕ ಹೊಸ ಬಸ್ ನಿಲ್ದಾಣದ ಎದುರಿನ ದಿ.ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಸೇರಿ ಎಲ್ಲರಿಂದಲೂ ಭಾವಚಿತ್ರಕ್ಕೆ ದೀಪಾಂಜಲಿ ಬೆಳಗಿ ಪುಷ್ಪಾಂಜಲಿ ಅರ್ಪಿಸಿ ಶೃದ್ದಾಂಜಲಿ ಸಲ್ಲಿಸಲಾಯಿತು.
ದಾರಿಯುದ್ದಕ್ಕೂ ‘ಭಾರತ್ ಮಾತಾಕಿ ಜೈ, ‘ಮಂಜುನಾಥ ಅಮರ್ ಹೈ’ ಘೋಷಣೆ ನೋಡುಗರಲ್ಲಿ ಮೈ ನವಿರೇಳಿಸುವಂತಿತ್ತು.
