



…….. ಸಿದ್ದಾಪುರ: ಇಲ್ಲಿನ ಆಧಾರ್ ಸಂಸ್ಥೆ ಆಶ್ರಯದಲ್ಲಿ, ಮಂಗಳೂರು ಆಸ್ಪತ್ರೆ ಹಾಗೂ ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ದಿ. ಡಿ.ಎನ್. ಶೇಟ್ ಸ್ಮರಣಾರ್ಥ ಪಟ್ಟಣದ ಎಂ ಹೆಚ್ ಪಿ ಎಸ್ ಬಾಲಿಕೊಪ್ಪದಲ್ಲಿ ಫೆ.16 ಭಾನುವಾರ ನಡೆಯಲಿರುವ ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರದ ಕರಪತ್ರ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆಯಿತು.

ಈ ವೇಳೆ ಕರಪತ್ರ ಬಿಡುಗಡೆಗೊಳಿಸಿದ ತಾಲೂಕ ತಹಶೀಲ್ದಾರ್ ಎಂ.ಆರ್. ಕುಲಕರ್ಣಿ ಮಾತನಾಡಿ, ಮನುಷ್ಯನ ಆಹಾರ ಪದ್ಧತಿ, ಜೀವನ ಶೈಲಿ ಸೇರಿದಂತೆ ಇನ್ನಿತರ ಕಾರಣಗಳಿಂದ ಇಂದು ಯುವಕರಲ್ಲಿಯೂ ಹೆಚ್ಚು ಹೃದಯಘಾತ ಸಂಭವಿಸುತ್ತಿರುವುದು ಆಘಾತಕಾರಿ ವಿಷಯವಾಗಿದೆ. ಹೃದಯ ತಪಾಸಣಾ ಶಿಬಿರವು ಉಚಿತವಾಗಿದ್ದು, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಶಿಬಿರಕ್ಕೆ ಬಂದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ತಾಲೂಕ ವೈದ್ಯಾಧಿಕಾರಿ ಡಾ. ಲಕ್ಷ್ಮಿಕಾಂತ್ ನಾಯ್ಕ ಮಾತನಾಡಿ, ಹೃದಯ ತಪಾಸಣಾ ಶಿಬಿರವನ್ನು ಇವೊಂದು ಸಂದರ್ಭದಲ್ಲಿ ನಡೆಸುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಈ ಹಿಂದೆ 50 ವರ್ಷ ಮೀರಿದವರಿಗೆ ಹೃದಯಘಾತ ಸಂಭವ ಹೆಚ್ಚಿತ್ತು ಇಂದು ಆ ವಯಸ್ಸಿನ ಮಿತಿ 30ಕ್ಕೆ ಬಂದು ನಿಂತಿದೆ. ಈ ಕಾರಣಕ್ಕಾಗಿ 30 ವರ್ಷ ಮೇಲ್ಪಟ್ಟ ಎಲ್ಲರೂ ಹೃದಯ ತಪಾಸಣೆ ಮಾಡಿದರೆ ಉತ್ತಮ. ಶಿಬಿರದಲ್ಲಿ ಇಸಿಜಿ ಸೌಲಭ್ಯ ಸಾಮಾನ್ಯ ವೈದ್ಯಕೀಯ ತಪಾಸಣೆ, ಮಧುಮೇಹ ರಕ್ತ ಪರೀಕ್ಷೆ ಇರಲಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಧಾರ್ ಸಂಸ್ಥೆಯ ಅಧ್ಯಕ್ಷ ನಾಗರಾಜ್ ನಾಯ್ಕ ಮಾಳ್ಕೋಡ್ ಪ್ರಸ್ತಾವಿಕವಾಗಿ ಮಾತನಾಡಿದರು.
ಮಂಗಳೂರು ಒಮೇಗಾ ಆಸ್ಪತ್ರೆ ಎಚ್ ಆರ್ ನಾಗರಾಜ್ ಟಿ. ಹಾಗೂ ಮಂಗಳೂರು ಹಾರ್ಟ್ ಕ್ಯಾನ್ ಫೌಂಡೇಶನ್ ಪಿ ಆರ್ ಓ ಬಾಲಕೃಷ್ಣ ಮುಟ್ಟಂ ಮಾತನಾಡಿ, ಸಾಕಷ್ಟು ಕಡೆಗಳಲ್ಲಿ ಹೃದಯ ತಪಾಸಣಾ ಕ್ಯಾಂಪ್’ಗಳನ್ನು ಮಾಡುತ್ತಾ ಬಂದಿದ್ದು ಹಲವಾರು ಜನರು ಇದರ ಉಪಯೋಗವನ್ನು ಪಡೆದುಕೊಂಡಿದ್ದಾರೆ. ಮಂಗಳೂರು ಒಮೇಗಾ ಆಸ್ಪತ್ರೆಯಲ್ಲಿ ಹೃದಯಕ್ಕೆ ಸಂಬಂಧಿಸಿದ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿದ್ದು, ಚಿಕಿತ್ಸೆಗಾಗಿ ವಿಮಾ ಸೌಲಭ್ಯ ಸೇರಿದಂತೆ ಎಪಿಎಲ್ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಸೌಲಭ್ಯಗಳು ಸಿಗಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಡಿ.ಎನ್. ಶೇಟ್ ಕುಟುಂಬಸ್ಥರಾದ ಗಣೇಶ್ ಶೇಟ್, ವಾದಿರಾಜ್ ಶೇಟ್, ಶಿಬಿರದ ಸಂಯೋಜಕ ಧರ್ಮ ಅಂಬಿಗ, ಸಾಮಾಜಿಕ ಕಾರ್ಯಕರ್ತ ಸುರೇಶ್ ಕೆ. ಮೇಸ್ತ, ಉಪಸ್ಥಿತರಿದ್ದರು.
ಪ್ರಶಾಂತ್ ಶೇಟ್ ಸ್ವಾಗತಿಸಿದರು. ಆಧಾರ್ ಸಂಸ್ಥೆ ಸಂಯೋಜಕ ಸುರೇಶ್ ಮಡಿವಾಳ ಕಡಕೇರಿ ವಂದಿಸಿದರು.
