

ಸಿದ್ದಾಪುರ,ಫೆ,೨೬- ಮೂಢ ನಂಬಿಕೆಗಳಿಂದ ಮುಕ್ತರಾಗಿ ಶಿಕ್ಷಣ,ಸಾಂಸ್ಕೃತಿಕ, ರಾಜಕೀಯವಾಗಿ ಬೆಳೆಯದಿದ್ದರೆ ನಮಗೆ ಭವಿಷ್ಯವಿಲ್ಲ ಎಂದು ಇಂದು ತರಳಿಯಲ್ಲಿ ನಡೆದ ಧರ್ಮಸಭೆ ಪ್ರತಿಪಾದಿಸಿದೆ.
ತರಳಿ ಸಂಸ್ಥಾನ ಮಠದಲ್ಲಿ ನಡೆದ ಶಿವಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ನಡೆದ ಧರ್ಮಸಭೆಯನ್ನು ದೀವರ ಸಮಾಜದ ಹಿರಿಯ ಧುರೀಣ ಮಾಜಿ ಸಚಿವ ಕಾಗೋಡುತಿಮ್ಮಪ್ಪ ಉದ್ಘಾಟಿಸಿದರು. ಮಠದಿಂದ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಸಮಾಜ ಮುನ್ನಡೆಯಬೇಕಾದರೆ ದೀವರು ಸೇರಿದಂತೆ ಹಿಂದುಳಿದ ವರ್ಗಗಳು ಶಿಕ್ಷಣ-ಸಂಸ್ಕಾರಕ್ಕೆ ಮಹತ್ವ ನೀಡಬೇಕು ಎಂದರು.
ಶಾಸಕರಾದ ಬೇಳೂರು ಗೋಪಾಲಕೃಷ್ಣ ಮತ್ತು ಭೀಮಣ್ಣ ನಾಯ್ಕ ಮಾತನಾಡಿ ಮಠ-ಸಮಾಜದ ಅಭಿವೃದ್ಧಿಗೆ ಅವಶ್ಯ ಸಹಕಾರ ನೀಡುವ ಭರವಸೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಾರಂಗನ ಜೆಡ್ಡು ಕಾರ್ತಿಕೇಯ ಮಠದ ಸ್ವಾಮೀಜಿ ಅವಧೂತ ಯೋಗೇಂದ್ರ ಸ್ವಾಮೀಜಿ ಮಾತನಾಡಿ ಪ್ರಭಾವಿಗಳು, ಪಟ್ಟಭದ್ರರು ವೈಯಕ್ತಿಕವಾಗಿ, ಸಾರ್ವಜನಿಕವಾಗಿ ಸಮಾಜ, ಮಠ, ವ್ಯಕ್ತಿ ನೋಡದೆ ಅಡ್ಡಾಗುತ್ತಾರೆ.ಇದನ್ನು ಎದುರಿಸುವ ಛಾತಿ ಇಲ್ಲದಿದ್ದರೆ ಬದುಕುಳಿಯುವುದೇ ಕಷ್ಟ. ಆಗ ಸಾಧಕರು, ಅವರ ಜೀವನ ನಮಗೆ ಮಾರ್ಗದರ್ಶಿಯಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

