

( ಸಾಗರ ಎಂದೊಡನೆ ಕಾಗೋಡು, ಹೆಗ್ಗೋಡು ಎಂಬಿತ್ಯಾದಿ ಪೂರ್ವಾಗ್ರಹಗಳ ನಡುವೆ ನಮಗೆ ಅಲ್ಲಿನ ಜನಪರ ಸ್ನೇಹಿತರೆಲ್ಲಾ ಕಣ್ಮುಂದೆ ಬರುತ್ತಾರೆ. ಅವರಲ್ಲಿ ಹಿರಿಯ ಮಿತ್ರ ಶ್ರೀನಿವಾಸರೂ ಒಬ್ಬರು. ಇಂದಿನ ಕ್ರಶ್ ಎಂದರೆ… ಮಿತಭಾಶಿ ಮಿತ್ರ ತಮ್ಮಣ್ಣ ಬೀಗಾರ್ ಕಳಿಸಿದ್ದ ಈ ಭಾಷಣ ಓದುತಿದ್ದಂತೆ ಸರ್ಜಾಶಂಕರ ಹರಳೀಮಠರ ಇದೇ ಭಾಷಣದ ಪ್ರತಿ ಬಂದು ಮುಟ್ಟಿತು. ಸಾಗರದ ಸಾಹಿತ್ಯ ಸಮ್ಮೇಳನದ ಬಗ್ಗೆ ಸಿರವಂತೆಯಲ್ಲಿ ಚಂದ್ರಶೇ ಖರ್ ರೊಂದಿಗೆ ವಾರದ ಹಿಂದೆ ಚರ್ಚಿಸಿದ್ದೆ. ಅಂದೇ ಅಶೋಕಮೂರ್ತಿ ನಾವೆಲ್ಲಾ ನಿಮ್ಮ ಬಗ್ಗೆ ಮಾತನಾಡಿದ್ದೆವು ಎಂದಿದ್ದರು. ಹೀಗೆ ಇವೆಲ್ಲಾ ಕಾಕತಾಳೀಯ ಯಾಕೆಂದರೆ… ನಮ್ಮ ಸ್ನೇಹಿತರ ಬಳಗ ಈ ಶ್ರೀನಿವಾಸರಂತೆಯೇ ಯೋಚಿಸುವುದು, ಚರ್ಚಿಸುವುದು, ಬರೆಯುವುದು, ಹೋರಾಡುವುದು, ಗೋಳಾಡುವುದು! ನಿಮಗೂ ಈ ರೋಗ ತಾಗಲಿ ಎಂದು ಆಶಿಸುತ್ತಾ ಈ ಅರ್ಥಪೂರ್ಣ ಭಾಷಣ ನಿಮ್ಮ ಓದಿಗಾಗಿ…. ಸಂ.( ಕನ್ನೇಶ್ ಕೆ.) )
ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಅಧ್ಯಕ್ಷೀಯ ಭಾಷಣ : ಅ.ರಾ.ಶ್ರೀನಿವಾಸ
ನಮಸ್ಕಾರ, ಫಿಲ್ಟರ್ ಕಾಫಿ ಕುಡಿಯುವುದಕ್ಕೆ ರುಚಿ, ಆದರೆ ಫಿಲ್ಟರ್ ಮಾತು ಹಾಗೆ ರುಚಿಯಾಗುವುದಿಲ್ಲ. ಈಗ ಎಂತಹ ಸಮಯ ಬಂದಿದೆ ಎಂದರೆ ಹೊರಗೆ ಮಾತನಾಡುವುದಕ್ಕೆ ಭಯಪಡುವ ಸಮಯ ಇದಾಗಿದೆ. ಔಪಚಾರಿಕ ಮಿತಿಯೊಳಗೆ ನಮ್ಮ ಮನಸ್ಸಿಗೆ ಬಂದಂತೆ ಮಾತಾಡುವುದು ಈಗ ತುಂಬಾ ಕಷ್ಟವಾಗಿದೆ. ಮುಕ್ತವಾಗಿ ಮಾತಾಡುವಂತಹ ಅನುಕೂಲಕರ ವಾತಾವರಣ ಈಗ ಇಲ್ಲವಾಗಿದೆ. ಅಧಿಕಾರಸ್ಥರ ವಿರುದ್ಧ ಮಾತಾಡಿದರೆ ಸಾಕು ಕೂಡಲೇ ಅವರನ್ನು ನಗರ ನಕ್ಸಲರೆಂದೋ, ದೇಶದ್ರೋಹಿ ಎಂದೋ, ಅಭಿವೃದ್ಧಿ ವಿರೋಧಿ ಎಂದೋ ಮುದ್ರೆ ಒತ್ತಿ ದೇಶದ ಯಾವುದಾದರೂ ನ್ಯಾಯಾಲಯದಲ್ಲಿ ಕೇಸು ದಾಖಲಾಗುವ ಸಂಕಟ ಎದುರಿಗಿದೆ. ಈಗ ಏನಾಗಿದೆ ಅಂತಂದರೆ ಇಂತಹ ಭಯದ ಕಾರಣದಿಂದ ಸಾಹಿತ್ಯ ಕೂಡ ತನ್ನ ಪ್ರತಿಭಟನೆಯ ಧ್ವನಿಯನ್ನು, ಬಂಡಾಯದ ಧ್ವನಿಯನ್ನು ಕಳೆದುಕೊಂಡುಬಿಟ್ಟಿದೆ. ಸಮೂಹ ಮಾಧ್ಯಮಗಳಂತೂ ಕೇಳುವುದೇ ಬೇಡ; ಬಗ್ಗಿ ಎಂದರೆ ಮಲಗಿಯೇ ಬಿಟ್ಟಿವೆ. ಯಾವ ಪಕ್ಷ ಅಂತಲ್ಲ, ಎಲ್ಲ ಅಧಿಕಾರಸ್ಥರಿಗೂ ನಮ್ಮಂತಹ ಸಾಹಿತ್ಯಕಾರರ, ಚಿಂತಕರ ಮಾತುಗಳನ್ನು ಕೇಳುವುದು ಇಷ್ಟವಾಗುವುದಿಲ್ಲ. ಅಷ್ಟೇಕೆ, ಸಾಗರದಂತಹ ಒಂದು ಸಣ್ಣ ಪ್ರದೇಶದ ಸಾಹಿತ್ಯ ಪರಿಷತ್ತಿನ ಸಂಘಟನೆಯಲ್ಲಿರುವವರಲ್ಲಿ ಕೆಲವರಿಗೆ ನಾನು ಏನಾದರೂ ಮಾತಾಡಿಬಿಡಬಹುದು ಎಂಬ ಭಯ, ಹಾಗಾಗಿ ನನ್ನ ಭಾಷಣದ ಪೂರ್ವ ಪರೀಶೀಲನೆ ಮಾಡುವುದೊಳ್ಳೆಯದು ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದರು ಎಂಬುದು ನನಗೆ ಗೊತ್ತಾಗಿದೆ. ನಾನು ಇದನ್ನು ನನಗೆ ಮಾಡಿದ ಅವಮಾನ ಎಂದು ತಿಳಿಯುವುದಿಲ್ಲ, ಬದಲಿಗೆ ಆ ಸ್ನೇಹಿತರಿಗಿರುವ ಆತಂಕ ಎಂದಷ್ಟೇ ತಿಳಿಯುತ್ತೇನೆ.
ಪಾಪ ಅವರ ಬಗೆಗೆ ನಾನು ಕೇವಲ ಕನಿಕರ ತೋರಿಸಬಹುದು ಅಷ್ಟೆ. ನನಗೆ ಕಂಡಂತೆ ದೇಶದಲ್ಲಿ ಈಗ ಎಲ್ಲಕ್ಕಿಂತಲೂ ಅಪಾಯಕಾರಿಯಾಗಿರುವ ಸಂಗತಿ ಏನಾದರೂ ಇದ್ದರೆ ಅದು ಬೌದ್ಧಿಕ ದಾಸ್ಯ ಮತ್ತು ಗುಲಾಮಿ ಮಾನಸಿಕತೆ. ಹೋಗಲಿ ಬಿಡಿ, ಈ ಪರಿಸ್ಥಿತಿ ಮುಂದೆ ಎಂದಾದರೂ ಸುಧಾರಿಸಿ ಈ ಮೊದಲಿನಂತೆ ಅಭಿವ್ಯಕ್ತಿಯ ಮುಕ್ತವಾತಾವರಣ ನಿರ್ಮಾಣವಾಗಬಹುದು ಎಂದು ಆಸೆ ಇರಿಸಿಕೊಳ್ಳುತ್ತೇನೆ. ಸ್ನೇಹಿತರೇ, ಭಯಪಡುವುದು ಬೇಡ, ನಾನು ನಿಮ್ಮ ಆತಂಕವನ್ನು ಧಿಕ್ಕರಿಸುವುದಿಲ್ಲ, ಗೌರವಿಸುತ್ತೇನೆ. ನಿಮ ಮನಸ್ಸಿಗೂ ತಟ್ಟಬಹುದಾದ ಮಾತುಗಳನ್ನೇ ಆಡುತ್ತೇನೆ, ನಿರಾಳವಾಗಿರಿ.
ಈಗ ನಾನು ನನ್ನ ಭಾಷಣವನ್ನು ಓದುತ್ತೇನೆ.
ವೇದಿಕೆಯ ಮೇಲಿರುವ ಆಹ್ವಾನಿತ ಗಣ್ಯ ಮಾನ್ಯರೇ, ಸಭಾಂಗಣದಲ್ಲಿರುವ ಸ್ನೇಹಿತರೇ, ಎಲ್ಲರಿಗೂ ನನ್ನ ನಮಸ್ಕಾರಗಳು. ಕನ್ನಡ ಸಾಹಿತ್ಯ ಪರಿಷತ್ತಿನ ಸಾಗರ ತಾಲ್ಲೂಕು ಶಾಖೆಯು ನೀಡಿದ ಸ್ನೇಹದ ಆಹ್ವಾನವನ್ನು ನಮ್ರನಾಗಿ ಸ್ವೀಕರಿಸಿ, ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತ, ಇದೀಗ ಇಲ್ಲಿ ನಿಂತಿದ್ದೇನೆ. ನಾನು ಇಲ್ಲಿ ಹೀಗೆ ನಿಂತಿದ್ದೇನೆ ಎಂದ ಕೂಡಲೇ ನನಗೆ ಯಾವುದೇ ತಲೆಯ ಮೇಲೆ ಕೊಂಬುಗಳಿಲ್ಲ. ಅಥವಾ ಯಾವುದೋ ಪ್ರತ್ಯೇಕವಾದಂತಹದ್ದು ಇನ್ನೇನೋ ಇಲ್ಲ. ನಾನು ಕೂಡ ಎಲ್ಲರ ಹಾಗೆ ಸಾಮಾನ್ಯನೇ. ಎಲ್ಲರ ಹಾಗೆ ನನಗೂ ಸಂಕಟ, ಸಂಭ್ರಮ ಎಲ್ಲವೂ ಆಗುತ್ತದೆ. ಆದರೆ ಒಂದೇ ಸರಳವಾದ ವ್ಯತ್ಯಾಸವೇನೆಂದರೆ ಎಲ್ಲ ಸಾಮಾನ್ಯರಿಗಿಂತ ನಾನು ಹೆಚ್ಚು ವೈಯಕ್ತಿಕವಲ್ಲದ ಸಂಗತಿಗಳಿಗೆ ಸ್ಪಂದಿಸುತ್ತೇನೆ, ಮತ್ತು ಇಂತಹದ್ದೆಲ್ಲ ಇಲ್ಲಿ ಆಗುತ್ತಿದೆಯಲ್ಲ ಎಂದು ದಾಖಲಿಸುತ್ತ ಉಳಿದೆಲ್ಲರೊಂದಿಗೆ ಹಂಚಿಕೊಂಡು ಸಂವಾದ ನಡೆಸುವ ಪ್ರಯತ್ನ ಮಾಡುತ್ತೇನೆ. ಸಾಹಿತ್ಯ ಅನ್ನುವುದು ವ್ಯಕ್ತಿಗತ ಚಿಂತನ ಮಂಥನದ ಫಲಿತವಾದರೂ ಅದರ ಗಮ್ಯ ವೈಯಕ್ತಿಕವಲ್ಲ. ಒಟ್ಟು ನಾವೆಲ್ಲ ಬದುಕುತ್ತಿರುವ ಸಮುದಾಯದ ಪ್ರಜ್ಞಾವಿಕಾಸಕ್ಕೆ ಅದು ಸಂದರೆ ಮಾತ್ರ ಅಂತಹ ಸಾಹಿತ್ಯವು ಪರಿಣಾಮಕಾರಿಯಾಗುತ್ತದೆ.
ಹೀಗೆ ಹೇಳಿದರೂ ನಾನು ಎಲ್ಲಿದ್ದೇನೆ ಮತ್ತು ನನ್ನ ಸಾಹಿತ್ಯ ನನ್ನ ಆದರ್ಶದ ಆ ಪ್ರಜ್ಞಾವಲಯವನ್ನು ಸಮುದಾಯದ ನಡುವೆ ಎಷ್ಟು ವಿಕಾಸಗೊಳಿಸಿದೆ ಎಂಬುದರ ಮೌಲ್ಯಮಾಪನ ನಾನು ಮಾಡುವಂತಹದ್ದಲ್ಲ; ಅದೇನಿದ್ದರೂ ಎದುರುಗಡೆ ಇರುವ ಸಾಮಾನ್ಯರಾದವರು ಮಾಡುವಂತಹದ್ದು. ಹಾಗಿರುತ್ತ ಸಾಮಾನ್ಯರು ಎಂದು ನಿಮನ್ನೆಲ್ಲ ಹೇಗೆ ಕರೆಯಲಾಗುತ್ತದೆ? ಅಲ್ಲದೇ ಸರ್ಕಾರವನ್ನೇ ಆಯ್ಕೆ ಮಾಡುವಾತ ಸಾಮಾನ್ಯ ಹೇಗಾಗುತ್ತಾನೆ?
ನಾನು ಉಪದೇಶವನ್ನಾಗಲೀ, ಆದೇಶವನ್ನಾಗಲೀ ಕೊಡುವ ಸ್ಥಾನದಲ್ಲಿದ್ದವನಲ್ಲ. ಹಾಗಾಗಿ ನಾನು ನನ್ನ ಭಾಷಣದ ಮೂಲಕ ನನ್ನ ಅನಿಸಿಕೆಗಳನ್ನು ನಿಮೆಲ್ಲರ ಮುಂದೆ ವಿನಮ್ರನಾಗಿ ಇಡುತ್ತಿದ್ದೇನೆ ಅಷ್ಟೆ. ನಿಮ್ಮ ಹೆಚ್ಚು ಸಮಯ ತೆಗೆದುಕೊಳ್ಳದೇ, ಊರುದ್ದಕ್ಕೂ ಅಲೆಯದೇ ನೇರವಾಗಿ ಒಂದೆರಡು ಕೇಂದ್ರ ಅಂಶದ ಮೇಲೆ ನಾನು ಎರಡು ಭಾಗಗಳಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದೇನೆ. ಈ ಮುಂದೆ ನಾನು ಆಡಲಿರುವ ಮಾತುಗಳು ನನ್ನ ಸ್ವತಂತ್ರ ಚಿಂತನೆಯ ಫಲ ಮಾತ್ರ ಎಂದು ಮೊದಲಿಗೆ ತಿಳಿಸಲು ಬಯಸುತ್ತೇನೆ. ಮತ್ತು ನಾನು ಆಡಲಿರುವ ಮಾತುಗಳನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು ಎಂಬ ಹಠವಾಗಲಿ ಹಂಬಲವಾಗಲಿ ನನಗೆ ಇಲ್ಲ. ಅಭಿಪ್ರಾಯಗಳು ಇರಬೇಕಾದದ್ದೇ ಹಾಗೆ. ಭಿನ್ನತೆಯು ಸಮುದಾಯದ ಆರೋಗ್ಯದ ಲಕ್ಷಣ ಕೂಡ. ಆದರೆ ಆ ಕಾರಣದಿಂದ ಪರಸ್ಪರ ಮನಸ್ತಾಪಗಳು ಬರದಂತೆ ನಾವೆಲ್ಲರೂ ವಿಷಯ ಮಾತ್ರಕ್ಕೆ ನಮ ಭಿನ್ನತೆಯನ್ನು ಸೀಮಿತಗೊಳಿಸಿಕೊಳ್ಳಬೇಕು ಅಷ್ಟೆ. ಪರಸ್ಪರ ಎದುರುಬದುರು ಅಭಿಪ್ರಾಯ ವಿನಮಿಯ ಮಾಡಿಕೊಳ್ಳಬೇಕು, ಬಿಟ್ಟರೆ, ಬೇರೆ ಯಾವ ದಾರಿಯಾದರೂ ಅದು ಅಪೇಕ್ಷಣೀಯವಲ್ಲ, ಸೌಜನ್ಯವೂ ಅಲ್ಲ.
ಭಾಗ-1
ವಲಸೆ-ವೈಷಮ್ಯ
ಖ್ಯಾತ ಕವಿ ಗೋಪಾಲ ಕೃಷ್ಣ ಅಡಿಗರ ಕವಿತೆಯ ಸಾಲುಗಳನ್ನು ಇಲ್ಲಿ ನೆನಪಿಸಿಕೊಂಡು ಅಭಿಪ್ರಾಯ ಮಂಡನೆಗೆ ತೊಡಗುತ್ತಿದ್ದೇನೆ. ಅವರು ಹೀಗೆ ಬರೆಯುತ್ತಾರೆ:
ಸಾಮಾನ್ಯನೆಂದೆಯ? ತಪ್ಪು, ತಿಳಿದಿರು ಜೋಕೆ:
ಬೇಡಿಗೆ ಕೈಯೊಡ್ಡದವ, ಕತ್ತಿಗೆ ಇಕ್ಕಿದುರುಳನ್ನೆ
ಕಚ್ಚುತ್ತ ಕಡಿಯುತ್ತ ಸಿಗಿಯುತ್ತ ಅಗೆಯುತ್ತ
ಬಗೆಯುತ್ತಲೇ ಕಣ್ಣ ಮುಚ್ಚುವವ, `ತಾಳಕ್ಕೆ ಸರಿ ಹೆಜ್ಜೆ'
ಹೂಂಕರಿಸುತ್ತಲಿದ್ದರೂ ನಿನ್ನ ಪಿಸ್ತೂಲು
ಮನಸ್ಸಿನಲ್ಲೇ ಬೇರೆ ತಾಳ ಲಯ ನಿಭಾಯಿಸುವ
ಹುಟ್ಟಾ ಸ್ವತಂತ್ರ ಪರಮಾಣುದೇಹಿ.
ಮುಖ ಕೆತ್ತಿಸಿಕೊಂಡ ಸಾಮಾನ್ಯದ ಪೂಜಾರಿಯೇ
ನೀ ತೊಟ್ಟ ಮುಖವಾಡ ಹಿರಣ್ಯಾಕ್ಷನದು. ಚಾಪೆ ಸುತ್ತಿ ನೆಲ
ಕಂಕುಳಲ್ಲಿಟ್ಟು ಕುರ್ಚಿಯ ಕಚ್ಚಿ ಅಂಟಿಕೊಳ್ಳುವ ಹುನಾರು
ನಿನಗೆ-ಮುಖವುಳ್ಳವರ ಮೂತಿ ಕೆತ್ತಿ ಅಥವಾ ದೊಡ್ಡಿಯಲ್ಲಿಟ್ಟು.
ಅಗಗೋ, ದಾಡಿ ಮಸೆವ ವರಾಹ ಕಣ್ಣ ಮಿಟುಕದೆ ದಿಟ್ಟಿ
ಸುತ್ತ ಇದೆ ಗಡಿಯಾರ ಮುಖವ. ಕಂಭದೊಳಕ್ಕೆ
ಸಿಕ್ಕಿಬಿದ್ದಣು ನಾನು ನರಸಿಂಹ. ಕಾಯುತ್ತೇನೆ-
ನಾನು ಕೂಡ.
(ಸಾಮಾನ್ಯನಂತೆ ಈ ನಾನು)
ಯಾವಾಗೆಲ್ಲ ನಾವು ಕರೆಯುವ ಈ ಸಾಮಾನ್ಯ ದುರುಪಯೋಗದ ವಸ್ತುವಾಗುತ್ತಾನೋ, ಯಾವಾಗೆಲ್ಲ ಆತ ಅನ್ಯಾಯದ ವಿರುದ್ಧ ಮೌನ ತಾಳುತ್ತಾನೋ ಆವಾಗೆಲ್ಲ ಇತಿಹಾಸ ಚಕ್ರ ತಾನು ತಿರುಗುವುದನ್ನು ನಿಲ್ಲಿಸಿಬಿಡುತ್ತದೆ. ಕಂಭದೊಳಗಿದ್ದ ಈ ಸಾಮಾನ್ಯ ನರ' ಸಂದರ್ಭ ಬಂದಾಗ
ಸಿಂಹ’ ನಾಗುವುದು ಕಾಲ ಕಾಲದ ಅಗತ್ಯವೆಂದು ಮತ್ತೆ ಹೇಳಬೇಕಾಗಿಲ್ಲ. ಆದರೆ ಇತ್ತೀಚಿನ ಇತಿಹಾಸವೆಲ್ಲ ಈ ಸಾಮಾನ್ಯರು ಸ್ವಾರ್ಥಿಗಳ ದಾಳವಾಗುತ್ತ ಸಿಂಹವಾಗುವುದನ್ನು ಮರೆತ ನರರ ಕತೆಯೇ ಆಗುತ್ತಿದೆ. ಅನ್ಯಾಯ, ಅತ್ಯಾಚಾರ, ದೌರ್ಜನ್ಯಗಳು ಘಟಿಸುತ್ತಲೇ ಇದ್ದರೂ ಈ `ಪರಮಾಣುದೇಹಿ’ ಸಿಡಿಯುವುದನ್ನು ಮರೆತೇ ಬಿಟ್ಟಿದ್ದಾನೇನೋ ಅನಿಸುತ್ತದೆ. ಎಂದರೆ ಆತನಿಗೆ ಅದು ಯಾವುದೂ ಜಾಗೃತವಾಗದಂತೆ ಸಾಧ್ಯವಿರುವ ಎಲ್ಲ ಮಾರ್ಗಗಳನ್ನೂ ಬಲವಂತವಾಗಿ, ಬುದ್ಧಿವಂತಿಕೆಯಿಂದ ಮುಚ್ಚಿಸಿ, ಮುಚ್ಚಿಸಿದವರು ಸುರಕ್ಷಿತವಾಗಿದ್ದಾರೆ.
ಹೀಗೆ ಈ ಅಭಿಪ್ರಾಯದ ಆಧಾರದ ಮೇಲೆ ನಾನು ನನ್ನ ಮಾತಿನ ಪ್ರಬಂಧ ಕಟ್ಟುತ್ತೇನೆ. ನಾನು ನನ್ನ ಮಾತುಗಳನ್ನು ಮುಂದುವರಿಸುವ ಮೊದಲು ಅದಕ್ಕೊಂದು ಅಡಿಪಾಯ ಹಾಕಬೇಕಾಗುತ್ತದೆ. ಈಗ ನಿಮ ಮುಂದೆ ಉಲ್ಲೇಖಿಸಿದ ನಂತರದಲ್ಲಿನ ಸಂಗತಿಗಾಗಿ ಈ ಅಡಿಪಾಯದ ಅಗತ್ಯವಿದೆ. ಮತ್ತೆ ಒಟ್ಟು ಮೂರು ಉಧೃತಿಗಳನ್ನು ದಾಖಲಿಸುತ್ತೇನೆ. ಮೊದಲನೆಯದು ಇದು:
1. `ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಮ್।
ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್॥
ವಿವರವಾದ ಅರ್ಥ ವ್ಯಾಖ್ಯಾನಕ್ಕೆ ಹೋಗುವುದು ಈಗ ಅಗತ್ಯವಿಲ್ಲ. ಸಂದರ್ಭದ ಅಗತ್ಯಕ್ಕೆಷ್ಟು ಅಗತ್ಯವೋ ಅಷ್ಟನ್ನು ಹೇಳುತ್ತೇನೆ. `ಇವನು ತನ್ನವನು, ಅವನು ಅನ್ಯನು ಎಂಬ ಎಣಿಕೆ ಸಣ್ಣ ಮನಸ್ಸಿನವರದು; ಆದರೆ ಉದಾರ ಚರಿತರಿಗೆ, ಎಂದರೆ ವಿಶಾಲ ಮನಸ್ಸಿನವರಿಗೆ, ಭೂಮಿಯೇ ಕುಟುಂಬ’. ಇದನ್ನೇ ಬೇರೆ ರೀತಿಯಲ್ಲಿ ಹೇಳುವುದಾದರೆ, ಇವನು ನಮ್ಮ ಧರ್ಮದವನು, ಇವನು ಅನ್ಯ; ಇವನು ನಮ್ಮ ಜಾತಿ, ಇವನು ಅನ್ಯ; ಇವನು ಬೇರೆ ಊರಿನವನು, ದೇಶದವನು ಅಂತೆಲ್ಲ ತಿಳಿಯವವರು ಸಣ್ಣ ಮನಸ್ಸಿನವರು. ಆದರೆ ಜಗತ್ತೇ ಒಂದು ಕುಟುಂಬದಂತೆ ಎಂದಾದ ಮೇಲೆ ಎಲ್ಲರೂ ನಮ್ಮವ ರೇ ಎಂದು ಉದಾತ್ತ ಗುಣವುಳ್ಳವರು ತಿಳಿಯುತ್ತಾರೆ. ಈ ಶ್ಲೋಕವು ಮಹಾ ಉಪನಿಷತ್‌ನಿಂದ ತೆಗೆದುಕೊಂಡಿದ್ದು. ಸ್ವಾರಸ್ಯವೆಂದರೆ ಈ ಶ್ಲೋಕವನ್ನು ಲಾಗಾಯ್ತಿನಿಂದಲೂ ತಿರುತಿರುಗಿ ಉಚ್ಚರಿಸಿ ಹಳೆ ಕಾಲದ ಗ್ರಾಮಫೋನ್ ಪ್ಲೇಟ್ ಸವೆದು ಹೋಗುವಂತೆ ಸವೆದು ಹೋಗಿಬಿಟ್ಟಿದೆ, ಕ್ಲೀಷೆಯಾಗಿಬಿಟ್ಟಿದೆ. ಆದರೆ ವಾಸ್ತವದಲ್ಲಿ ಆ ಶ್ಲೋಕದ ಆದರ್ಶ ನಮ್ಮ ನಡವಳಿಕೆಯಲ್ಲಿದೆಯೇ? ಇವನು ನಮ್ಮವ ನಲ್ಲ, ಇವನು ಹೊರಗಿನವನು, ಬೇರೆ ಧರ್ಮದವನು, ಇವನು ಈ ದೇಶದವನಲ್ಲ, ಹೊರಗಿನಿಂದ ಬಂದವನು ಅಂತೆಲ್ಲ ಶ್ಲೋಕದ ಭಾವನೆಗೆ ವಿರುದ್ಧವಾದ ನಡವಳಿಕೆಯಿದೆ, ಮತ್ತು ಹಾಗಿರುವುದಕ್ಕಾಗಿಯೇ ತೀವ್ರ ಸಂಘರ್ಷಗಳು ಘಟಿಸುತ್ತಲೇ ಇರುತ್ತವೆ.
ಮತ್ತೆ ಎರಡು ಪದ್ಯದ ಸಾಲನ್ನು ಉದ್ಧರಿಸುತ್ತೇನೆ:
ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು।
ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು।
ಬಂದುದೀ ವೈಷಮ್ಯ-ಮಂಕುತಿಮ
ಮನುಜ ಕುಲವೊಂದೊಬ್ಬನಿನ್ನೊಬ್ಬನಂತಿಲ್ಲ।
ತನುವಂಗಗಳೊಳೊಂದು, ರೂಪ ಗುಣ ಬೇರೆ॥
ಮನದೊಳೊಬ್ಬೊಬ್ಬನೊಂದೊಂದು ಪ್ರಪಂಚವೀ।
ತನುವೇಕದೊಳ್ ಬಹುಳ-ಮಂಕುತಿಮ -ಮಂಕುತಿಮನ ಕಗ್ಗ
ಈ ಎರಡೂ ಪದ್ಯಗಳ ಮತಿತಾರ್ಥ ತುಂಬ ಸರಳವಾಗಿದೆ. ಈ ಆಕಾಶ, ಈ ನೀರು, ಈ ಗಾಳಿ ಹೀಗೆ ಏನೆಲ್ಲ ಪಂಚಭೂತಗಳು ಇವೆಯೋ ಅದೆಲ್ಲವನ್ನೂ ಎಲ್ಲರೂ ತಮತಮಗೆ ಬೇಕಾದ ಹದದಲ್ಲಿ ಬೇಕು ಬೇಕಾದಾಗ ಒಂದೇ ಸಮನಾಗಿ ಅನುಭವಿಸುತ್ತಾರೆ. ಆದರೆ ಹೀಗಿದ್ದರೂ ಅವರ ನಡುವೆ ಈ ವೈಷಮ್ಯ ಹೇಗೆ ಹುಟ್ಟಿಕೊಳ್ಳುತ್ತದೆ ಎಂಬ ಅಚ್ಚರಿ, ಪರೋಕ್ಷ ವ್ಯಾಕುಲತೆ ಮೊದಲ ಸಾಲುಗಳಲ್ಲಿ ವ್ಯಕ್ತವಾಗಿದೆ. ಎರಡನೆಯದರಲ್ಲಿ ಅದು ಇನ್ನಷ್ಟು ಸಾಂದ್ರವಾಗಿದೆ. ಮನುಷ್ಯರು ಒಬ್ಬರಂತೆ ಮತ್ತೊಬ್ಬರು ಇರುವುದಿಲ್ಲ, ಎಲ್ಲರ ಶರೀರದ ಅಂಗಗಳು ಒಂದೇ ಇದ್ದರೂ ರೂಪು ಗುಣ ಎಲ್ಲ ಬೇರೆ ಬೇರೆ ಇರುತ್ತದೆ; ಆದರೆ ಒಂದೇ ಶರೀರದಲ್ಲಿ ಬೇರೆ ಬೇರೆ ಅಂಗಗಳಿದ್ದರೂ ಅವೆಲ್ಲ ಕೂಡಿಕೊಂಡು ಒಂದೇ ತನುವಾಗುತ್ತದೆ. ತನುವೇಕದೊಳ್ ಬಹುಳ'. ಕೇಳಿದ್ದೇವೆ:
ಅನೇಕತೆಯಲ್ಲಿ ಏಕತೆ’, `ನಾವೆಲ್ಲರು ಒಂದೆ ಜಾತಿ ಒಂದೆ ಮತ ನಾವು ಮನುಜರು’ (ಅಡಿಗ).
ನಾನು ಈ ಮೂರು ಅಭಿಪ್ರಾಯಗಳನ್ನು ಉದ್ಧರಿಸಿದ್ದು ನಾನು ಮುಂದೆ ಹೇಳಲಿರುವ ಮಾತುಗಳಿಗೆ ಒತ್ತಾಸೆಯಾಗಿರಲಿ ಎಂಬುದಕ್ಕಾಗಿ. ಇವೆಲ್ಲವೂ ಆದರ್ಶಕ್ಕೆ ಸರಿ, ಆದರೆ ವಾಸ್ತವದ ಆಚರಣೆಯಲ್ಲಿ ಅಷ್ಟಾಗಿ ಇರುವುದಿಲ್ಲ. ಮತ್ತೆ ಎಷ್ಟೇ ಆದರ್ಶ ದೊಡ್ಡದಾಗಿದ್ದರೂ ಅದು ಆಚರಣೆಯಲ್ಲಿಲ್ಲವೆಂತಾದರೆ ಅವೆಲ್ಲ ಕಸ ಮಾತ್ರವಾಗುತ್ತದೆ. ಆ ಮಾತುಗಳು ಸದಾ ನಮನ್ನು ಅಣಕಿಸುತ್ತಿರುತ್ತವೆ. ಈ ವೈರುಧ್ಯವನ್ನು ನಿಜವಾಗಿ ಅರ್ಥ ಮಾಡಿಕೊಳ್ಳಬೇಕಾದದ್ದು ಸಾಮಾನ್ಯರು ಎಂದು ಕರೆಯುವ `ನರ ಸಿಂಹ’ರು.
ಕ್ಷಮಿಸಿರಿ, ನಾನು ನನ್ನ ಮಾತುಗಳನ್ನು ಸಾಹಿತ್ಯ ಸಮೇಳನದಲ್ಲಿನ ಸಂಪ್ರದಾಯದಂತೆ ಆರಂಭ ಮಾಡಿಲ್ಲ. ಈ ವಿಷಯದಲ್ಲಿ ನಾನು ಕೊಂಚ ಭಿನ್ನ. ಹಾಗೆಯೇ ಕೊಂಚ ಮೊಂಡ, ಹೇಳಬೇಕೆನಿಸಿದ್ದನ್ನು ಹೇಳಿಬಿಡುತ್ತೇನೆ.
ನಿಮಗೆ ಹೆಚ್ಚಿನವರಿಗೆ ಗೊತ್ತಿರುವಂತೆ ನಾನು ಮುಳುಗಡೆ ಪ್ರದೇಶದಿಂದ ಬಂದವನು. ತಾಲ್ಲೂಕು ಕೇಂದ್ರ ಸಾಗರದಿಂದ ಸುಮಾರು 40-50 ಕಿ.ಮೀ. ದೂರದ ಗ್ರಾಮೀಣ ಪ್ರದೇಶದವನು. ಈಗ್ಗೆ 60-65 ವರ್ಷಗಳ ಕೆಳಗೆ ಅಲ್ಲಿಂದ ಈ ಸಾಗರಕ್ಕೆ ಬರುವುದೆಂದರೆ ಸರಳವೂ ಸುಗಮವೂ ಆಗಿರಲಿಲ್ಲ. ಮೂತಿಯುಳ್ಳ, ಪೆಟ್ಟಿಗೆಯಂತಹ ಹಿಂಭಾಗವಿರುವ ಬಸ್ಸು ಹಿರೇಭಾಸ್ಕರ ಡ್ಯಾಮ್‌ನ ಮೂಲಕವಾಗಿ ತನಗೆ ಅನುಕೂಲವೆನಿಸಿದ ವೇಗ ಮತ್ತು ಸಮಯದಲ್ಲಿ ಬರುತ್ತಿತ್ತು. ಹಾಗಿದ್ದರೂ ಹುಡುಗನಾದ ನನಗೆ ಬಸ್ಸು ಒಂದು ಬೆರಗೇ. ಅನೇಕರನ್ನು ಮುಳುಗಿಸಿದ, ಆಗ ನನಗೆ ಅವೆಲ್ಲ ಗೊತ್ತಾಗುತ್ತಿರಲಿಲ್ಲ, ಹಿರೇಭಾಸ್ಕರ ಡ್ಯಾಮ್ ಒಂದು ಸಂಭ್ರಮವೆಂದರೂ ಸರಿ. ಆಗೆಲ್ಲ ಸಾಗರ ಈಗ ಅವೆುರಿಕಾಕ್ಕೆ ಹೋಗುವಂತಹ ಅನುಭವ. ಅದು ದೂರದಲ್ಲಿರುವ ಒಂದು ನಗರ. ಆದರೆ ದಿನ ಬೆಳಗಾದರೆ ನಮ ಎಲ್ಲರ ವಹಿವಾಟು ಅಲ್ಲಿಯೇ ಆಗಬೇಕು. ನಾವು ಬೆಳೆಯುತ್ತಿದ್ದ ಅಡಕೆ, ಭತ್ತ ಹೀಗೆ ಕೊಂಡೊಯ್ಯುವುದು ಮತ್ತು ಮನೆಗೆ ಬೇಕಾದ ಸಾಮಗ್ರಿಗಳನ್ನು ತಂದುಕೊಳ್ಳುವುದು ಈ ಆದಾನ ಪ್ರದಾನದ ಮುಖ್ಯ ಸಾಧನವೆಂದರೆ ಎತ್ತಿನ ಗಾಡಿ. ಒಂದು ವಿಷಯ ಹೇಳುವೆ, ಅಯ್ಯೋ ಅದೆಲ್ಲ ತುಂಬ ಕಷ್ಟ ಎಂದು ಆಗ ನಮಗೆ ಅನಿಸುತ್ತಿರಲಿಲ್ಲ. ಯಾಕೆಂದರೆ ಬೇರೆ ಆಯ್ಕೆಗಳು ಇರಲಿಲ್ಲ ಮತ್ತು ಅಂತಹದೊಂದು ಬೇರೆ ಸುಖಮಾಧ್ಯಮ ಇದೆ ಎಂದು ಕೂಡ ಗೊತ್ತಿಲ್ಲ. ಹಾಗೆ ಗೊತ್ತಿತ್ತೂ ಅಂತಾದರೆ ನಮಗೆ ಕೊರತೆಯ ದುಃಖ ಬಂದುಬಿಡುತ್ತಿತ್ತು. ಬಸ್ಸು, ಗಾಡಿ ಮತ್ತು ಕೆಲಕಾಲದ ನಂತರದಲ್ಲಿ ಬರುತ್ತಿದ್ದ ವಿಚಿತ್ರ ಆಕಾರದ ವ್ಯಾನ್ ಬಿಟ್ಟರೆ ಮತ್ತೆ ಯಾವ ಸೌಲಭ್ಯಗಳ ಪರಿಚಯವೂ ಇದ್ದಿರಲಿಲ್ಲ. ವಿದ್ಯುತ್ ಅಂತೂ ಹೇಗೂ ಇರಲಿಲ್ಲ. ಹೀಗಾಗಿ ನಮಗೆ ಅದೇ ಸುಖ ಸಾಧನಗಳಾಗಿದ್ದವು ಮತ್ತು ಅದು ಇದ್ದ ಹಾಗೆಯೇ ನಾವು ನೆಮದಿಯಿಂದ ಇರುತ್ತಿದ್ದೆವು. ಆ ದಿನಗಳು ತುಂಬಾ ಕಷ್ಟದ ದಿನಗಳಾಗಿದ್ದವು ಎಂಬುದು ಈಗ ಒಂದು ಬುದ್ಧಿಪೂರ್ವಕ ಆಲೋಚನೆಯ ಭಾಗ ಮಾತ್ರ. ನನಗಂತೂ ಎತ್ತಿನ ಗಾಡಿಯಲ್ಲಿ ಪ್ರಯಾಣಿಸುವುದೆಂದರೆ ಇನ್ನಿಲ್ಲದ ಹಿಗ್ಗು. ಬೇಡ ಎಂದರೂ ಬಿಡದೆ ಹಠ ತೊಟ್ಟು ನಮ ಮನೆಯಿಂದ ಯಾರದೋ ಮದುವೆ ಮನೆಗೆ ಹೋಗುತ್ತಿದ್ದ ನಮ ಮನೆಯ ಗಾಡಿ, ಉಟ್ಟಬಟ್ಟೆಯಲ್ಲೇ ಏರಿ ಮತ್ತೆ ಮನೆಗೆ ಬಂದ ಮೇಲೆ ಅಪ್ಪನಿಂದ ಬಾರಿಕೋಲಿನ ಪ್ರಸಾದ ತಿಂದದ್ದು ಮರೆಯುವುದಾದರೂ ಹೇಗೆ? ಆದರೆ ಅದೆಲ್ಲವೂ ಕಷ್ಟದ ಅನುಭವಗಳಲ್ಲ, ಯಾಕೆಂದರೆ ಆಗ ಇದ್ದದ್ದೇ ಹಾಗೆ.
ಈ ಮಾತುಗಳನ್ನು ನಾನು ನಿಮ ಮನರಂಜನೆಗಾಗಿಯಾಗಲಿ, ನನ್ನ ಹೆಗ್ಗಳಿಕೆಗಾಗಿಯಾಗಲಿ ಹೇಳುತ್ತಿಲ್ಲ. ತಾಳೆ ಇರಲಿ. ದೂರದ ಸಾಗರವೆಂದರೆ ಈಗಿನ ಅಮೆರಿಕಾ ಎಂದೆನಿಸಿದರೂ ಆಗಾಗ ಇಲ್ಲಿಗೆ ಬರುತ್ತಲೇ ಇರುವುದು ಸಹಜವೇ ತಾನೆ? ಊರಿನಲ್ಲಿ ದುಂಡನೆಯ ನಾಗರ ಮೊಟ್ಟೆ ಪೆಪ್ಪರ್‌ಮೆಂಟ್; ಬೆಳ್ಳಗೆ, ತೆಳ್ಳಗೆ, ದುಂಡಗೆ ಇದ್ದ ಸುಂಠಿ ಪೇಪ್ಪರ್‌ಮೆಂಟ್; ಬಿಟ್ಟರೆ, ಕಿತ್ತಳೆ ಸೊಳೆ ಪೆಪ್ಪರ್‌ಮಿಂಟ್ -ಇಷ್ಟೇ ಸಿಹಿ ಪ್ರಪಂಚದಲ್ಲಿದ್ದವನಿಗೆ ಸಾಗರದಲ್ಲಿ ನ್ಯೂಟ್ರಿನ್, ಪ್ಯಾರಿ ಚಾಕೊಲೇಟ್ ದೊರಕಿದರೆ, ಗೋಲಿ ತುಂಬಿಸಿಕೊಂಡ ಸೋಡ ಬಾಟಲಿಯಿಂದ ಸೋಡ ಕುಡಿದು ಮೂಗುಬಾಯಿಗಳಿಂದೆಲ್ಲ ಭುಸುಭುಸು ಗಾಳಿ ರಭಸವಾಗಿ ಹೊರ ಬಂದಿದ್ದರೆ, ಜುಮುಜುಮುವೆನಿಸುವ ಐಸ್ ಕ್ಯಾಂಡಿ ಚೀಪಿದರೆ ಆಗಲೇ ವಾಸ್ತವವಾಗಿ ಮೊದಲಬಾರಿಗೆ ಆಧುನಿಕತೆಯ ಸ್ಪರ್ಶ. ಸಾಗರ ಎಷ್ಟು ದೊಡ್ಡದು ಎಂಬ ವಿಸ್ತಾರದ ಪರಿಚಯವಾಗಲಿ ಅಗತ್ಯವಾಗಲಿ ನನಗಂತೂ ಇರಲಿಲ್ಲ. ಆದರೆ ಅಲ್ಲೊಂದು ಧಾವಂತ (ಈ ಪದ ಈಗ ಕಂಡುಕೊಂಡದ್ದು) ವೇಗವಿದ್ದಿದ್ದು ಅನುಭವಕ್ಕೆ ಬರುತ್ತಿತ್ತು. ಸಾಗರದಲ್ಲಿನ ಗಣಪತಿ ತೇರು, ಮಾರಿ ಜಾತ್ರೆ ಇದೆಲ್ಲವೂ ನಾವು ಅದೆ ಅದೇ ಹೊತ್ತಿಗೆ ಬಂದಾಗ ದೊರಕುತ್ತಿದ್ದ ಅಪರೂಪದ ಅನುಭವಗಳು. ಆದರೆ ನನ್ನನ್ನು ಪ್ರಭಾವಿಸಿದ ಮುಖ್ಯ ಸಂಗತಿ ಏನೆಂದರೆ, ಆಗ ಆ ಹೆಸರೆಲ್ಲ ಗೊತ್ತಿರಲಿಲ್ಲ, ಈಗ ಗೊತ್ತು, ಗುಬ್ಬಿ ವೀರಣ್ಣನವರ ಕಂಪನಿಯ ದಶಾವತಾರ',
ಲವ ಕುಶ’, ಕರ್ನಾಟಕ ಥಿಯೇಟರ್‌ರಸನ ಶನಿಪ್ರಭಾವ', ಬೇರೊಂದು ಕಂಪನಿಯ
ಸಂಪೂರ್ಣ ರಾಮಾಯಣ’, ನಾಟಕವೊಂದರಲ್ಲಿ ಹಂಸ ಸರವೊಂದನ್ನು ನುಂಗುವ ಅದ್ಭುತ ವಿಸಯ, ಬೇಕೆಂದಾಗ ಏಳುವ ಬೇಡವಾದಾಗ ಬೀಳುವ ಬಣ್ಣಬಣ್ಣದ ಪರದೆಗಳು, ನಟರ ವಿಶಿಷ್ಟ ಅಭಿನಯ ಮತ್ತು ಬೇರೆ ಬೇರೆ ನಾಟಕ ಕಂಪೆನಿಗಳ, ಮುಖ್ಯವಾಗಿ ಹಿರಣ್ಣಯ್ಯನವರ ಸಾಮಾಜಿಕವೆಂಬಂತಹ ನಾಟಕಗಳು, ನಾಟಕ ಆರಂಭವಾಗುವ ಮೊದಲು ಲೌಡ್ ಸ್ಪೀಕರ್‌ನಿಂದ (ಅದೂ ಕೂಡ ಹೊಸ ಅನುಭವ) ಬರುತ್ತಿದ್ದ ನಾನು ಕೇಳಿರದ ಯಾವ ಯಾವುದೋ ಹಾಡುಗಳು, ಇವೆಲ್ಲವೂ ನನಗೊಂದು ವಿಸಯ ಪ್ರಪಂಚ. ಮೂಲತಃ ಯಕ್ಷಗಾನದ ಕುಟುಂಬದವನಾದ, ಪ್ರದೇಶದವನಾದ ನನಗೆ ಇಂಥದೊಂದು ಪೌರಾಣಿಕ ನಾಟಕ ಪ್ರಪಂಚವು ಹೊಸದೇ ಆದ ಅದ್ಭುತವನ್ನು ತೆರೆದುಕೊಟ್ಟಿತ್ತು. ಮತ್ತು ನನ್ನ ಒಟ್ಟೂ ಸಾಹಿತ್ಯದ ಬೆಳವಣಿಗೆಯಲ್ಲಿ ಇದೆಲ್ಲದರ ಪ್ರಭಾವವಂತೂ ಇದ್ದೇ ಇದೆ.
ಹೌದಲ್ಲವಾ, ಇದೆಲ್ಲ ಈಗ ಇದೆಯ? ಸಾಗರಕ್ಕೆ ಮೊದಲಿದ್ದ ಮುಗ್ಧತೆ ಈಗ ಇದೆಯ? ಆಗ ಇದ್ದ ಸಂತೋಷ ಸಂಭ್ರಮ ಈಗ ಇದೆಯ? ದೂರದ ಸಾಗರ ಪೇಟೆಯಿಂದ ಬಂದು ಒಂದೆಡೆ ಬೀಡು ಬಿಟ್ಟು ಮತ್ತೆ ಅದನ್ನೆಲ್ಲ ತಲೆಯ ಮೇಲೆ ಹೊತ್ತು ತಂದು ನಮಗೆಲ್ಲ ಖರ್ಜೂರ, ಕಿತ್ತಳೆ, ಮಂಡಕ್ಕಿ ಇತ್ಯಾದಿ ತಿನ್ನಿಸುತ್ತಿದ್ದ ಯಾರುಯಾರೋ ವ್ಯಕ್ತಿಗಳ ಪ್ರೀತಿ ಮುಗ್ಧತೆ ಈಗ ಇದೆಯ? ಹೀಗೆ ಪೇಟೆಯಿಂದ ಹೊತ್ತು ತರುತ್ತಿದ್ದ ಕೆಲವು ಸಾಹೇಬರು ನಾನು ಸಾಗರದಲ್ಲಿ ವಾಸಿಸಲು ತೊಡಗಿದ ಮೇಲೆ, ಎಷ್ಟೋ ವರ್ಷವಾದರೂ ಮರೆಯದೇ, ಕಂಡಾಗಲೆಲ್ಲ ನನ್ನ ಕುಟುಂಬದ ಎಲ್ಲರನ್ನೂ ಮನಸಾರೆ ನೆನೆದುಕೊಂಡು ಪ್ರೀತಿ ಹಂಚುತ್ತಿದ್ದ ವಾತಾವರಣ ಈಗ ಇದೆಯ? ಸಾಗರಕ್ಕೆ ಆಗ ಇದ್ದ ಮೌನಕ್ಕೂ ಬೆಲೆ ಇದ್ದಿತ್ತು. ಈಗ ಎಷ್ಟು ಮಾತಿದ್ದರೂ ಮೌಲ್ಯವೇ ಇಲ್ಲದಂತಾಗಿಬಿಟ್ಟಿದೆ. ಈಗ ಸದ್ದು ಸಂಗೀತವಾಗದೇ ಗದ್ದಲವಾಗಿಬಿಟ್ಟಿದೆ. ಆಗ ಸದ್ದಿಲ್ಲದೇ ಇದ್ದ ಸಾಗರದಲ್ಲಿ ಕೆಲವೇ ವರ್ಷಗಳ ಹಿಂದೆ ಹಗಲು ಹೊತ್ತೇ ದೊಂದಿ ಹೊತ್ತ ಕೊಳ್ಳಿ ದೆವ್ವಗಳು ಓಡಾಡಿ ಗುರಿ ಮಾಡಿ ಬೆಂಕಿ ಹಚ್ಚಿದಾಗ, ಈ ಸಂಬಂಧಗಳು, ಈ ಪ್ರೀತಿ, ಈ ಸೌಹಾರ್ದ, ಇವರೆಲ್ಲ ನಮವರು, ಇವರು ಯಾರೂ ಬೇರೆ ಅಲ್ಲ ಎಂದು ಬುದ್ಧಿಪೂರ್ವಕವಾಗಿ ಯೋಚಿಸದೇನೇ ಪರಸ್ಪರ ನಂಬಿಕೆ ವಿಶ್ವಾಸ ಪ್ರೀತಿಯಿಂದ ಇರುತ್ತಿದ್ದ ಸಂದರ್ಭದಲ್ಲಿಯೇ ಅದೆಲ್ಲ ಹೇಗೆ ಯಾರು ಯಾರದೋ ಸ್ವಾರ್ಥಕ್ಕೆ ಸುಟ್ಟುಹೋದವು ಎಂಬುದನ್ನು ನೆನೆದರೆ ದುಃಖವಾಗುತ್ತದೆ. ಈ ಹಿಂದೆ ಆರಂಭದಲ್ಲಿ ಪ್ರಸ್ತಾಪಿಸಿದ ಸಾಮಾನ್ಯ'ರೇ ಹಾಗೆ ಅಸಾಮಾನ್ಯವಾಗಿ ವರ್ತಿಸಿದ್ದು ಎಂಬುದನ್ನು ನೆನದರೆ ಯಾವುದೇ ಸಾಮಾನ್ಯ ಖಂಡಿತವಾಗೂ ಸಾಮಾನ್ಯನಲ್ಲವೆಂಬುದು ಅರ್ಥವಾಗುತ್ತದೆ. ಕಾಣದ ಕೈಗಳ ಆಯುಧಗಳಾದ ಈ ಸ್ಫೋಟಿಸುವ ಅದ್ಭುತ ಶಕ್ತಿ ಇರುವ
ಪರಮಾಣು ದೇಹಿ’ ಈ ಸಾಮಾನ್ಯರು ಅನ್ಯಾಯದ ವಿರುದ್ಧ `ನರಸಿಂಹ’ಗಳಾಗಬೇಕಾಗಿದ್ದವರೇ ಹತಾರಗಳಾದದ್ದು ಈ ಪ್ರೀತಿಯ ಸಾಗರದ ವ್ಯಗ್ರ ರೂಪ. ಈಗಲೂ ಅಂತಹ ನರಸಿಂಹರಿರುತ್ತಾರೆ. ಆದರೆ ಜಾಗೃತ ಅವಸ್ಥೆಯಲ್ಲಿಲ್ಲ; ಅವರು ಕಂಭದೊಳಗೇ ಇದ್ದುಬಿಟ್ಟಿದ್ದಾರೆ. ಯಾರಾದರೂ ಆ ಕಂಭವನ್ನು ಸೀಳಬೇಕಾಗುತ್ತದೆ.
ನೆಮದಿಯ ಬದುಕಿಗೆ ಪ್ರಕೃತಿಯಲ್ಲಿ ಪಾಠವಿಲ್ಲವೇ? ಇದೆ, ಆದರೆ ಅದನ್ನು ಗಮನಿಸಬೇಕು ಅಷ್ಟೆ. ಸಾಗರ ತಾಲ್ಲೂಕಿನಲ್ಲಿ ಎರಡು ನದಿಗಳು ಹರಿಯುತ್ತವೆ. ಒಂದು ಶರಾವತಿ ಮತ್ತೊಂದು ವರದೆ. ಶರಾವತಿ ಪಶ್ಚಿಮ ಮುಖಿಯಾದರೆ ವರದೆ ಪೂರ್ವ ಮುಖಿ. ಒಂದು ಅರಬ್ಬೀ ಸಮುದ್ರ ಸೇರಿದರೆ ಮತ್ತೊಂದು ಬೇರೊಂದು ನದಿಯೊಂದಿಗೆ ಸಂಗಮವಾಗಿ ಬಂಗಾಳಕೊಲ್ಲಿ ಸೇರುತ್ತದೆ. ಶರಾವತಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹುಟ್ಟಿ, ಹೊಸನಗರ ತಾಲ್ಲೂಕನ್ನು ತಬ್ಬಿ ಸಾಗರಕ್ಕೆ ಬರುತ್ತದೆ. ಮತ್ತೆ ಅದು ಜೋಗ ಜಲಪಾತವಾಗಿ ನೋಡುವವರ ಸಂತೋಷಕ್ಕೆ ಕಾರಣವಾಗಿ ಮುಂದೆ ಹೊನ್ನಾವರ ತಾಲ್ಲೂಕಿನಲ್ಲಿ ಸಮುದ್ರ ಸೇರುತ್ತದೆ. ಶರಾವತಿಯ ನೀರು ಯಾವುದು, ಸಮುದ್ರದ ಈ ಮೊದಲ ನೀರು ಯಾವುದು ಎಂದು ಬೇರ್ಪಡಿಸಲು ಸಾಧ್ಯವಾಗದೇ ಸೇರಿಕೊಂಡು ವಿಲೀನವಾಗಿಬಿಡುತ್ತದೆ. ಹಾಗೆಯೇ ವರದೇ ಸಾಗರ ತಾಲ್ಲೂಕಿನಲ್ಲಿ ಹುಟ್ಟಿ ಸೊರಬ ತಾಲ್ಲೂಕು ತಬ್ಬಿಕೊಂಡು, ಬೇರೆ ಬೇರೆ ತಾಲ್ಲೂಕು ಜಿಲ್ಲೆಯನ್ನು ತಟಾದು ಮುಂದೆ ಸಮುದ್ರದಲ್ಲಿ ಯಾವ ನೀರೆಂದು ಗುರುತು ಸಿಗದಂತೆ ಬಂಗಾಳಕೊಲ್ಲಿಯಲ್ಲಿ ಲೀನವಾಗಿಬಿಡುತ್ತದೆ. ಈ ಮೊದಲಿದ್ದ ಸಮುದ್ರದ ನೀರಿನೊಂದಿಗೆ ಸೇರಿದ ನೀರು ಜಗಳ ಆಡುವುದಿಲ್ಲ, ನೀನು ನಮವನಲ್ಲ ಹೊರಗೆ ಹೋಗು ಎಂದು ಮೊದಲೇ ಇದ್ದ ನೀರು ಕೂಡ ಹೇಳುವುದಿಲ್ಲ. ಈ ನದಿಗಳು ಕೂಡ ತಾವು ಹೋಗುವ ಹಾದಿಯಲ್ಲೆಲ್ಲಾ ಬಂದು ಬಂದು ಸೇರುವ ಸಣ್ಣ ಸಣ್ಣ ಹಳ್ಳಕೊಳ್ಳಗಳ ನೀರನ್ನು ತಕರಾರು ಮಾಡದೇ ತಮದಾಗಿಸಿಕೊಳ್ಳುತ್ತವೆ ಕೂಡ.
ಇದರಲ್ಲೇನಿದೆ ಪಾಠ ಎಂದು ಕೇಳಬಹುದು. ಈ ಎರಡೂ ನದಿಗಳೂ ಒಂದು ರೀತಿಯಲ್ಲಿ ವಲಸಿಗರು. ಎಂದರೆ ಹುಟ್ಟಿದ ಜಾಗ ಬಿಟ್ಟು ಬೇರೆ ಬೇರೆ ಜಾಗಗಳಲ್ಲಿ ಬಂದು ಸೇರುವ ನೀರನ್ನೆಲ್ಲ ಸೇರಿಸಿಕೊಂಡು ಜೀವಂತಗೊಳ್ಳುತ್ತ ಮುಂದೆ ವಿಶಾಲ ಸಾಗರದಲ್ಲಿ ಲೀನವಾಗುತ್ತವೆ. ಹುಟ್ಟಿದ ಜಾಗದಲ್ಲಿ ಸದಾ ನೀರು ಇದ್ದರೂ ಅದು ಹೊಸ ನೀರೇ ಆಗಿರುತ್ತದೆಯಷ್ಟೆ. ಮನುಷ್ಯರು ಪ್ರೀತಿ ಹಂಚುವಂತೆ ಈ ನದಿಗಳು ಬದುಕನ್ನೇ ಹಂಚುತ್ತವೆ. ಈ ನೀರು ನಮಗೆ ಬೇಡ, ಇದು ನಮದಲ್ಲ ಎಂದು ಬೇರೆ ಪ್ರದೇಶದವರು ಯಾರಾದರೂ ಹೇಳುತ್ತಾರೆಯೇ? ಆದೇ ಈ ನೀರು ವಿವಿಧ ಅಗತ್ಯಗಳಿಗೆ ಬೇಕು.
ಮತ್ತೆ ನಾನು ನನ್ನ ಸ್ವಂತಕ್ಕೆ ಬರುತ್ತೇನೆ. ಈ ಮೊದಲೇ ಹೇಳಿದಂತೆ ನಾನು ಶರಾವತಿ ನದಿ ಪಾತ್ರದವನು. ಬದುಕಿನ ಅನಿವಾರ್ಯತೆಯಿಂದಾಗಿ ಈಗ ನಾನು ವರದೆಯ ಪಾತ್ರದಲ್ಲಿದ್ದೇನೆ. ಕಾಕತಾಳೀಯವೆಂಬಂತೆ ಆಗ ಶರಾವತಿ ನಾನಿದ್ದಲ್ಲಿಂದ ಮುಕ್ಕಾಲು ಅಥವಾ ಹೆಚ್ಚೆಂದರೆ ಒಂದು ಕಿ.ಮೀ. ದೂರದಲ್ಲಿತ್ತು. ಹಾಗೆಯೇ ಈಗ ನಾನು ಇರುವುದು ವರದೆಗೆ ಒಂದು ಕೀ.ಮೀ.ಗಿಂತ ಕಡಿಮೆ ದೂರದಲ್ಲಿ, ಅಷ್ಟು ಸಮೀಪದಲ್ಲಿ. ಈಗಿನ ಪರಿಭಾಷೆಯಲ್ಲಿ ಹೇಳುವುದಾದರೆ ನಾನು ಈಗ ವಾಸಮಾಡುತ್ತಿರುವ ಪ್ರದೇಶಕ್ಕೆ ವಲಸಿಗ. ಮತ್ತಷ್ಟು ಸ್ವಾರಸ್ಯವನ್ನು ವಿವರಿಸಬೇಕು. ನಾನು ಹುಟ್ಟಿದ ಊರು ಕರೂರು ಸೀಮೆಯ ಅರಬಳ್ಳಿ. ಅದರ ಮೂಲ ಅದರ ಇತಿಹಾಸ, ಸಮಾಜವಿಜ್ಞಾನ ನನಗೆ ಗೊತ್ತಿಲ್ಲ, ಆ ಮಾತು ಬೇರೆ. ಆದರೆ ಇರುವ ಕೆಲವೇ ಕುಟುಂಬಗಳಲ್ಲಿ ಹೆಚ್ಚಿನವರು ಹೊರಗಡೆಯಿಂದಲೇ ಬಂದವರು. ಹಾಗೆ ಬಂದವರನ್ನು ಅವರು ಯಾವ ಊರಿಂದ ಬಂದಿದ್ದರೋ ಅದೇ ಹೆಸರಿನಲ್ಲಿ ಕರೆಯುವುದು ರೂಢಿ. ಗೋಳಗೋಡಿನಿಂದ ಬಂದವರು ಗೋಳಗೋಡರ ಮನೆ; ಹುಂಚದಿಂದ ಬಂದವರು ಹುಂಚದವರ ಮನೆ'; ಹಲಸಿನಗದ್ದೆಯಿಂದ ಬಂದವರು
ಹಲಸಿನಗದ್ದೆಯವರ ಮನೆ’. ಆದರೆ ಅವರು ಯಾರೂ ನಿಜವಾಗಿ ಹೊರಗಿನವರಾಗಿರಲಿಲ್ಲ. ಹಾಗೆ ಅವರ ಮೂಲ ಊರಿನ ಹೆಸರಿನಲ್ಲಿ ಗುರುತಿಗಾಗಿ ಕರೆದರೂ ಅವರೆಲ್ಲರೂ ನಮವರೇ, ಅರಬಳ್ಳಿಯವರು. ಇನ್ನೂ ವಿಸ್ತರಿಸಿ ಹೇಳುವುದಾದರೆ, ನಮ ಕುಟುಂಬವೂ ಅರಬಳ್ಳಿ ಮೂಲದ್ದಲ್ಲ. ನಾವು ಕೂಡ ಹೊರಗಿನಿಂದ ಬಂದವರು. ನಾವು ಹೊಸನಗರ ತಾಲ್ಲೂಕಿನ ನಿಟ್ಟೂರು ಸಮೀಪದ ಗಂಟಿಗೆಮನೆಯವರು. ನಮಪ್ಪ ಆತನ ಐದನೇ ವಯಸ್ಸಿನವನಿದ್ದಾಗ ನನ್ನ ಅಜ್ಜ ಕಾರಣಾಂತರದಿಂದ ಅರಬಳ್ಳಿಗೆ ವಲಸೆ ಬಂದ, ಮತ್ತು ಅಲ್ಲಿಯೇ ನೆಲೆಯೂರಿದ. ಅಪ್ಪ ಅ.ಗಂ.' ಎಂದೇ ಸಹಿ ಹಾಕುತ್ತಿದ್ದ. ಎಂದರೆ
ಅರಬಳ್ಳಿ ಗಂಟಿಗೆಮನೆ’ ಎಂದು. ಹಾಗಾಗಿ ನಮ ಕುಟುಂಬಕ್ಕೆ ಗಂಟಿಗೆಮನೆ ಕುಟುಂಬ ಎಂದೇ ಬೇರೆಯವರು ಗುರುತು ಮಾಡುತ್ತಾರೆ. ಅಷ್ಟೇಕೆ, ನಿಮಗೆ ಹೆಚ್ಚಿನವರಿಗೆ ಗೊತ್ತಿರುವಂತೆ ನನ್ನ ಕುಟುಂಬದ ಜಾತಿಯವರು ಅಹಿಚ್ಛತ್ರ ಎಂದರೆ ಈಗಿನ ಅಸ್ಸಾಮಿನಿಂದ ಬಂದವರು ಎಂದು ಹೇಳುತ್ತಾರೆ. ನಿಖರವಾಗಿ ಎಲ್ಲಿಂದ ಎಂದು ಗೊತ್ತಿಲ್ಲವಾದರೂ ಹೊರಗಿನಿಂದ ಬಂದವರು ಎಂಬುದು ಮಾತ್ರ ನಿಜ. ಹಾಗಿದ್ದ ವೆುೕಲೆ ನಾವಿರುವ ಸ್ಥಳವು ನಿಜವಾಗಿ ನಮದಾ? ಇಲ್ಲಿಯವರಲ್ಲ ಎಂದಾದರೆ ಹೊರಗಿನವರಾ? ಯೋಚನೆ ಮಾಡಿದರೆ, ನಮ ಸಮಸ್ಯೆಯು ಭೌಗೋಳಿಕದ್ದಲ್ಲ; ರಾಜಕೀಯದ್ದು ಎಂಬುದು ತಿಳಿಯುತ್ತದೆ. ರಾಜಕೀಯದ ಕಾರಣದಿಂದ ಜನ ತಾಳುವ ದೇಶಪ್ರದೇಶಗಳ ಗಡಿಗೆರೆಗಳು ಕಾಲ್ಪನಿಕವಾದದ್ದು. ಹೀಗಾಗಿಯೇ ಇರುವುದೊಂದೇ ಭೂಮಿ, ಆದರೆ ಇರುವವರೆಲ್ಲರೂ ಒಂದೇ ಯಾಕಿಲ್ಲ ಎಂಬ ಗೊಂದಲ ಹುಟ್ಟಿಕೊಳ್ಳುತ್ತದೆ.
ಹಾಗೆ ನೋಡಿದರೆ ವಿಶ್ವದ ಸಮಾಜ ವಿಜ್ಞಾನವು ವಲಸೆಯ ಅಧ್ಯಯನದಿಂದಲೇ ಆರಂಭ ವಾಗುತ್ತದೆ. ಭಾರತ ಉಪಖಂಡಕ್ಕೆ ಯಾವುದೋ ಹೊರ ಪ್ರದೇಶದಿಂದ ಆರ್ಯರು ಬಂದು ನೆಲೆಗೊಂಡರಂತೆ. ನಮ ದೇಶದ ಸ್ವಾತಂತ್ರ್ಯದ ಸಂದರ್ಭದಲ್ಲಿ ದಾರುಣವಾದ ವಲಸೆ ನಡೆದುಹೋಯಿತು. ಹಾಗೆಯೇ ಅಮೆರಿಕಾ, ಆಸ್ಟ್ರೇಲಿಯಾದಲ್ಲೂ, ಮತ್ತು ಇತರ ಅನೇಕ ದೇಶಗಳಲ್ಲಿ ಕೂಡ ಇಂತಹದ್ದೇ ವಲಸೆ ಇದೆ ಮತ್ತು ಮೂಲನಿವಾಸಿಗಳನ್ನು ಹೊರದಬ್ಬಿ ಅವರದೇ ಆಧಿಪತ್ಯವಿದೆ ಈಗ. ಈಗಿನ ಹಾಗೆ ಭೂಮಿಗೆ ಸ್ವಾಮಿತ್ವದ ಕರಾರುವಾಕ್ ಖಾತೆ ಇಲ್ಲದ ಕಾಲ ಅದು. ಸ್ವಾಮಿತ್ವದ ಖಾತೆ ಬಂದ ವೆುೕಲೆ ವಲಸೆ ಕಲಹಕ್ಕೆ ಕಾರಣವಾಗುತ್ತಿದೆ. ಮತ್ತು ವಲಸೆಗೆ ಈಗ ಹೊಸ ಹೊಸ ಹೆಸರು ಬಂದು ಸೇರಿಕೊಂಡಿದೆ. ಮುಖ್ಯವಾಗಿ ನುಸುಳುಕೋರರು, ಘುಸ್‌ಬೈಟಿಗಳು ಅಂತಾಗಿದೆ.
ಈ ವಲಸೆಗೆ ಅನೇಕ ಕಾರಣಗಳಿವೆ. ಶರಾವತಿಗೆ ಹಿರೇಭಾಸ್ಕರದಲ್ಲಿ ಅಣೆಕಟ್ಟೆ ಕಟ್ಟಿದಾಗ ಅದರಿಂದ ಆದ ಮುಳುಗಡೆ ಸಂತ್ರಸ್ತರು ಸಾವಿರಾರು ಜನರು ನಾನಾ ಕಡೆಗೆ ವಲಸೆ ಹೋದರು. ಹಾಗೆಯೇ ಲಿಂಗನಮಕ್ಕಿಯಲ್ಲಿ ಅಣೆಕಟ್ಟೆ ಕಟ್ಟಿದಾಗಲೂ ಸಾವಿರಾರು ಕುಟುಂಬಗಳು ಕಂಡಕಂಡೆಡೆಗೆ ವಲಸೆ ಹೋದವು. ಅವರಿಗೆ ಇಷ್ಟು ವರ್ಷಗಳ ನಂತರವೂ ಬದುಕಿನ ಭದ್ರತೆಯ ಖಾತ್ರಿಯೇ ದೊರಕಲಿಲ್ಲ. ಹೀಗಾಗಿ ಮುಳುಗಡೆ ಎಂಬುದು ಹೆಚ್ಚಿನವರನ್ನು ಅಸಹಾಯರು ಅನಾಥರೂ ಆಗುವಂತೆ ಮಾಡಿಬಿಡುತ್ತದೆ. ಹೇಳಿದೆನಲ್ಲ ಈ ಮುಳುಗಡೆ ಸಂತ್ರಸ್ತರಾದ ನಮ ಕುಟುಂಬ ಕೂಡ ಹೋಳುಗಳಾಗಿ ವಲಸಿಗರಂತೆ ಬೇರೆ ಬೇರೆ ಕಡೆಗಳಲ್ಲಿದ್ದೇವೆ. ಮುಳುಗಡೆ ಯಾಗದೇ ಇದ್ದಿದ್ದರೆ ಹೀಗಿರುತ್ತಿದ್ದೆವೇ ಎಂದು ಎಷ್ಟೋ ಬಾರಿ ಯೋಚಿಸಿದ್ದಿದೆ. ಅಷ್ಟೇ ಅಲ್ಲ, ಮುಳುಗಡೆಯಾಗದೇ ಅಲ್ಲೇ ಉಳಿದವರು ಕೂಡ ಸುಖವಾಗಿಲ್ಲ. ಮುಳುಗಡೆಯ ಈ ಭಾಗದ ಪ್ರದೇಶದ ನೂರಾರು ಶಾಲೆಗಳಲ್ಲಿ ಅಧಿಕೃತವಾಗಿ ನೇಮಕಗೊಂಡ ಶಿಕ್ಷಕರೇ ಇಲ್ಲವೆಂಬುದು ಗಾಬರಿಹುಟ್ಟಿಸುತ್ತದೆಯಲ್ಲವೇ? ಮುಳುಗಡೆ ಒಂದಾದರೆ, ಇದ್ದಲ್ಲಿ ಮಾಡುವುದಕ್ಕೆ ಉದ್ಯೋ ವಿಲ್ಲದೇ ಬೇರೆ ಕಡೆ ಕೆಲಸ ಅರಸಿ ವಲಸೆ ಹೋಗುವ ಪರಿಸ್ಥಿತಿ ಮತ್ತೊಂದು ಬಗೆಯ ವಲಸೆ. ಹೀಗೆ ವಲಸೆ ಹೋದವರು, ಅದು ಬೇರೆ ದೇಶವೇ ಆಗಿರಬಹುದು, ಅಲ್ಲಿಯ ನೆಲಸಿಗರೇ ಆಗಿದ್ದು ಇದೆ. ನೆರೆ, ಪ್ರವಾಹ, ಬಿರುಗಾಳಿ, ಭೂಕಂಪ ಇಂತಹ ನಾನಾ ರೀತಿಯ ಪ್ರಾಕೃತಿಕ ವೈಪರೀತ್ಯಗಳ ಕಾರಣದಿಂದಲೂ ವಲಸಿಗರಾಗುತ್ತಾರೆ. ಹಿಂದಿನ ಕಾಲದಲ್ಲಿ ಎರಡು ದೇಶಗಳು ಮಾಡುವ ಯುದ್ಧದಿಂದಾಗಿಯೂ ಅನೇಕರು ವಲಸಿಗರಾಗುತ್ತಿದ್ದರು. ಮೊಗಲರು ಈ ದೇಶಕ್ಕೆ ಆಕ್ರಮಣಕಾರರಾಗಿ ಬರುವಾಗ ಅವರೊಂದಿಗೆ ಅವರ ಪರಿಜನರೂ, ಹಾಗೆಯೇ ಇನ್ನು ಸಾಮಾನ್ಯರು ಕೂಡ ಇಲ್ಲಿಗೆ ವಲಸಿಗರಾಗಿ ಬಂದಿರುತ್ತಾರೆ. ಬ್ರಿಟಿಷರು ಬಂದಾಗಲೂ ಹೀಗೇ ಆಗಿರುತ್ತದೆ. ಪೋರ್ಚುಗೀಸರು ಬಂದಾಗಲೂ ಆಗಿರುತ್ತದೆ. ಬಂದವರೆಲ್ಲರೂ ಮರಳಿ ಹೋಗುವುದಿಲ್ಲ. ಹೊರಗಿನಿಂದ ಬಂದವರು ಇದನ್ನೇ ತಮ ಊರು ಎಂದು ಮಾಡಿಕೊಂಡರು. ತಮ ಲಾಭಕ್ಕಾಗಿ ಬೆಣ್ಣೆ ಹಚ್ಚುವವರು ತಾವಿರುವ ಧರ್ಮದಿಂದಲೇ ಅಧಿಕಾರಿ ಪಕ್ಷದ ಧರ್ಮಕ್ಕೆ ವಲಸೆ ಹೋದದ್ದಿದೆ. ಹಾಗೆ ಹೋದವರು ಅಲ್ಲೇ ಇದ್ದಾರೆ. ಜಗತ್ತು ವಿಸ್ತಾರವೂ ಆಗಿದೆ ಎಂಬುದು ಗೊತ್ತಾದಂತೆ ಸೌಲಭ್ಯಗಳ ಕಾರಣಕ್ಕಾಗಿ ಈ ವಲಸೆ ನಾನಾ ರೂಪ ಪಡೆದು ಕೊಂಡುಬಿಟ್ಟಿದೆ. ಹಾಗಾಗಿ ಇದೊಂದು ಮಾನವೀಯ ಘಟನೆ.
`ನೀನು ವಲಸಿಗ, ಹೀಗಾಗಿ ನೀನು ಹೊರಗೆ ಹೋಗು, ಇಲ್ಲವಾದರೆ ಹೊರಗೆ ಹಾಕುವೆ’ ಎಂಬುದು ಸ್ವಂತದ್ದು ಎಂಬ ಕಾಲ್ಪನಿಕ ಸಂಗತಿಯಿಂದ ಬಂದದ್ದು. ಇದೆಲ್ಲ ಹೇಗೆ ವೈರುಧ್ಯದಿಂದ ಕೂಡಿರುತ್ತದೆಯೆಂದರೆ ಮೊದಲು ವಲಸೆ ಬಂದವನು ನಂತರ ವಲಸೆ ಬಂದವನ ವೆುೕಲೆ ಸವಾರಿ ಮಾಡುತ್ತಾನೆ. ಯಾರು ಮೊದಲು ಬಂದು ಈ ನೆಲವನ್ನು ತನ್ನದಾಗಿ ಮಾಡಿಕೊಂಡಿರುವರೋ ಅವರು ನಂತರ ಬಂದವರನ್ನು ಹೊರಗೆ ಹೋಗಿ ಎಂಬುದು ನಿಸರ್ಗ ನಿಯಮಕ್ಕೆ ವಿರುದ್ಧ ವಾದುದಲ್ಲವೇ? ಇದೆಲ್ಲವೂ ನಮ್ಮ ದಲ್ಲದ ಸ್ವತ್ತನ್ನು ನಮ್ಮ ಸ್ವತ್ತು ಎಂದು ಭಾವಿಸಿಕೊಂಡಿದ್ದಾಗ ಆಗುವಂತಹ ವಿದ್ಯಮಾನಗಳು. ದೇಶದ ಗಡಿಗೆರೆಗಳು ರಾಜಕೀಯದಿಂದ ಹುಟ್ಟಿದ ಕಾಲ್ಪನಿಕ ಗೆರೆಗಳು. ಇದರಿಂದಾಗಿ ಅನೇಕ ಅಮಾನವೀಯ ಘಟನೆಗಳು ನಡೆದುಬಿಡುತ್ತವೆ.
ಒಂದಲ್ಲ ಒಂದು ಕಾರಣಕ್ಕಾಗಿ ನಾವು, ಅಥವಾ ನಮ್ಮ ಪೂರ್ವಜರು, ವಲಸಿಗರಾಗಿದ್ದು ಈಗ ಹೊಸ ವಲಸಿಗರ ಮೇಲೆ ದರ್ಪ ತೋರಿಸುವುದು ನಮೆದುರೇ ನಡೆಯುತ್ತದೆ. ವಲಸಿಗರನ್ನು ಹೊರಹಾಕುವುದಕ್ಕಾಗಿ ಕಾನೂನುಗಳನ್ನು ಮಾಡುತ್ತೇವೆ, ಮಾವೀಯತೆ ಇತ್ಯಾದಿ ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಬಲವಂತವಾಗಿ ಹೊರಗೆ ದಬ್ಬುತ್ತೇವೆ. ನಾವು ದಬ್ಬುತ್ತೇವೆ, ಅದೇ ಹೊತ್ತಿಗೆ ನಮ್ಮ ವರನ್ನು ಮತ್ತೊಬ್ಬರು ದಬ್ಬಿದರೆ ಇದು ಅನ್ಯಾಯ ಎಂದು ಪರತಪಿಸುತ್ತೇವೆ. ಆ ಧರ್ಮ ಈ ಧರ್ಮ ಎಂಬುದರಿಂದ ಅನೇಕ ಅನಾಹುತಗಳನ್ನು ಕಂಡಿದ್ದೇವೆ. ಧರ್ಮದ ಮೂಲವು ದಯೆಯಾದರೂ ಧರ್ಮ ಕಾರಣದ ನಿರ್ದಯ ಹಿಂಸೆ ನಡೆಯುತ್ತಲೇ ಇರುತ್ತದೆ.
ದೇಶದ ಕಾಲ್ಪನಿಕ ಗಡಿಗೆರೆಗಳ ನಡುವೆಯೂ ಮಾನವೀಯ ನೆಲೆಯಲ್ಲಿ ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಬೇಕಲ್ಲವೇ? ನಾವು ಮೊದಲಿದ್ದವರು, ಹಾಗಾಗಿ ಇದು ನಮ್ದುಮ; ನೀನು ನಂತರ ಬಂದವನು ಮತ್ತು ನಮ್ಮ ಸಮುದಾಯಕ್ಕೂ ಸೇರದವನು, ನೀನು ನಡೆ ಹೊರಗೆ ಎಂಬುದು ನಿಸರ್ಗ ನಿಯಮಕ್ಕೆ ವಿರುದ್ಧವಾದದ್ದು. ನಾವು ಆಧುನಿಕರಾಗುತ್ತ, ಹೊರಗಿಡುವವರ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಸುತ್ತ ಇರುವವರೆಲ್ಲರೂ ನಮ್ಮ ಶತ್ರುಗಳಂತೆಯೂ ಅವರು ನಮ್ಮ ಸುಖ ಸಂತೋಷ ಸ್ವತ್ತುಗಳನ್ನು ಕಿತ್ತುಕೊಳ್ಳುವ ದರೋಡೆ ಕೋರರಂತೆಯೂ ಕಾಣಸಿಕೊಳ್ಳುವ ವಿಪರೀತ ಮನಃಸ್ಥಿತಿ ನಮದಾಗುತ್ತಿದೆ.
ಈ ಸಂದರ್ಭದಲ್ಲಿ ಈ ಮೊದಲು ಉದ್ಧರಿಸಿದ ವಸುಧೈವ ಕುಟುಂಬಕಂ ಎಂದರೆ ಭೂಮಿಯೇ ಕುಟುಂಬ ಎಂಬುದರ ಅರ್ಥವಿಸ್ತಾರವನ್ನು ಮಾಡಿಕೊಳ್ಳಬಹುದು ಅಂತ ಅಂದು ಕೊಳ್ಳುತ್ತೇನೆ. ಹಾಗೆಯೇ ಮಂಕುತಿಮನ ಕಗ್ಗದ ತನುವೇಕದೊಳ್ ಬಹುಳ, ಪಂಚಭೂತಗಳನ್ನು ಒಂದೇ ಸಮನಾಗಿ ಬಳಸಿಯೂ ಏಕೆ ಬೇರೆ ಬೇರೆ ಎಂಬುದನ್ನೂ ಕೂಡ ಅರ್ಥಮಾಡಿ ಕೊಳ್ಳುವುದು ಸಾಧ್ಯ ಅಂತಂದುಕೊಳ್ಳುತ್ತೇನೆ. ಆ ಎರಡು ಪದ್ಯಗಳು ಏನು ನಿಜವಾಗಿ ಯಾವ ಸಂದೇಶವನ್ನು ಕೊಡುತ್ತದೆ ಎಂಬುದನ್ನು ಕೂಡ ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ ಅಂತ ಅಂದುಕೊಂಡಿದ್ದೇನೆ. ಹೀಗಾಗಿ ಅವುಗಳನ್ನು ದಯವಿಟ್ಟು ಮತ್ತೆ ಓದಿಕೊಳ್ಳಿ.
ಕನ್ನಡದ ಪ್ರಾಚೀನ ಲಕ್ಷಣ ಗ್ರಂಥವಾದ `ಕವಿರಾಜ ಮಾರ್ಗ’ದ ಒಂದು ಪದ್ಯವನ್ನು ಈ ಸಂದರ್ಭದಲ್ಲಿ ನೆನಪಿಗೆ ತಂದುಕೊಡುತ್ತೇನೆ. ಅದು ಹೀಗಿದೆ:
ಕಸವರವೆಂಬುದು ನೆರೆ ಸೈರಿಸಲಾರ್ಪೊಡೆ ಪರವಿಚಾರಮಂ ಧರ್ಮಮುಮಂ॥
ಕಸವೇನ್ ಕಸವರಮೇನುಬ್ಬುಸಮಂ ಬಸಮಲ್ಲದಿರ್ದು ಮಾಡುವುವೆಲ್ಲಂ॥
ಯಾರೇ ಆಗಿರಲಿ, ಅವರ ನಡೆ ನುಡಿ ಆಚಾರ ವಿಚಾರ ಧರ್ಮ ಹೀಗೆ ಯಾವುದೇ ಇರಲಿ, ಆದರೆ ಅದನ್ನು ಸಹಿಸಿಕೊಳ್ಳುವುದೇ ಕಸವರ, ಎಂದರೆ ಅದೇ ಚಿನ್ನ ಮತ್ತು ಚೆನ್ನ. ಏನಾದರೂ ಸರಿ, ತಲೆಯಲ್ಲಿ ಹುಳ ಬಿಟ್ಟುಕೊಂಡವರರಿಗೆ, ಕಸ ಮತ್ತು ಕಸವರದ ವ್ಯತ್ಯಾಸ ಅರ್ಥವಾಗುವುದಿಲ್ಲ ; ಬರೇ ಉಬ್ಬಸಪಡುತ್ತಾರೆ. ಹೀಗೆ ಅದರ ಅರ್ಥ ವಿಸ್ತಾರ ಮಾಡಬಹುದು. ಒಟ್ಟು ಹೇಳುವುದೆಂದರೆ ಭಿನ್ನತೆ ಸಹಜ ಆದರೆ ಅದನ್ನು ಸಹಿಸಿಕೊಳ್ಳುವುದು ಕೂಡ ಸಹಜವಾಗಬೇಕು.
ಇಂತಹ ಎಷ್ಟೊಂದು ಮಾತುಗಳಿವೆ. ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?' ಅಂತ ಕನಕದಾಸರು ಅರ್ಥ ಮಾಡಿಸಲು ಪ್ರಯತ್ನಿಸಿದರು.
ಸತ್ಯ ಹರಿಶ್ಚಂದ್ರ’ ಚಲನಚಿತ್ರದಲ್ಲಿ ಘಂಟಸಾಲ ಹಾಡಿದ ಹಾಡು, ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲ್ಯಾವುದೋ। ಹುಟ್ಟಿ ಸಾಯುವ ಮನ್ಷಾಮನ್ಷಾನ್ ಮಧ್ಯ, ಕೀಳ್ಯಾವ್ದು ಮೇಲ್ಯಾವ್ದು' ಎಂಬುದು ಎಷ್ಟು ಉನ್ನತ ಆದರ್ಶದ್ದು. ಹೀಗೆ ಬೇರೆ ಬೇರೆ ಎಂದು ಬಡಿದಾಡುವವರು ಸತ್ತ ವೆುೕಲೆ ಯಾವ ಪ್ರತ್ಯೇಕತೆಗಾಗಿ ಹೊಡೆದಾಡಿದ್ದರೋ ಆ ಪ್ರತ್ಯೇಕತೆಯೇ ಸುಟ್ಟು ನೀರ್ನಾಮವಾಗುತ್ತದೆ ಎಂಬ ಮಾತುಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು. ಆದಿ ಕವಿ ಪಂಪನ ಕಾವ್ಯದ
ಮನುಜಕುಲಂ ತಾನೊಂದೆ ವಲಂ’ ಎಂಬ ಆ ಮಾತು, ಹೀಗೆ ಇಂತಹ ಅನೇಕ ಮಾತುಗಳಿವೆಯಾದರೂ ಪರಸ್ಪರ ವೈಯಕ್ತಿಕವಲ್ಲದ ಸಾಮಾಜಿಕ, ರಾಜಕೀಯ, ಧಾರ್ಮಿಕ ವೈಷಮ್ಯ ಹೆಚ್ಚುತ್ತಲೇ ಇದೆ ಎಂಬುದು ಅದೆಂತಹ ವಿಪರ್ಯಾಸ! ಆದರೆ, ಆದರ್ಶ ಕೇವಲ ಮಾತುಗಳಾಗಬಾರದು, ಕೃತಿಯಾಗಬೇಕು.
ಆದರೆ, ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಏನೆಂದರೆ ಈ ಆದರ್ಶಗಳೆಲ್ಲ ಈಗ ಇದೆಯಾ? ಇವನಾರವ ಇವನಾರವ ಎನ್ನಿಸದಿರಯ್ಯಾ, ಇವ ನಮ್ಮವ ಇವ ನಮ್ವಮನೆಂದೆನಿಸಯ್ಯಾ' ಅಂತ ಹೇಳಿದ ಬಸವಣ್ಣನಂಥವರ ಆದರ್ಶ ಈಗ ಇದೆಯ? ಆದರೆ ಒಂದು ಮಾತು ನಿಜ, 10ನೇ ಶತಮಾನದ ಈ ಕವಿರಾಜಮಾರ್ಗಕಾರ ಹೇಳುತ್ತಿದ್ದಾನೆಂದರೆ, 12ನೇ ಶತಮಾನದ ಬಸವಣ್ಣ ಹೇಳುತ್ತಿದ್ದಾನೆಂದರೆ ಆ ಕಾಲಕ್ಕೂ ಇವರು ನಮ್ಮ ವರು ಇವರು ನಮ್ವಮರಲ್ಲ ಎಂಬಂಥದೊಂದು ಸಂಘರ್ಷವಿದ್ದಿತ್ತು ಅಥವಾ ಎಲ್ಲ ಕಾಲದಲ್ಲೂ ಈ ಕಿಚ್ಚು ಇತ್ತು, ಅದಕ್ಕಾಗೇ ಅದು ಹಾಗಲ್ಲ ಎಂದು ತಿಳಿ ಹೇಳುತ್ತಲೇ ಬಂದಿದ್ದಾರೆ ಎಂದು ಭಾವಿಸಿಕೊಳ್ಳಬೇಕು. ಹಾಗಾದರೆ ಕಾಲ ಬದಲಾಗಿದೆಯಾ? ಈ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ಉತ್ತರಕ್ಕೆ ನಾನು ಮತ್ತೆ ಗೋಪಾಲ ಕೃಷ್ಣ ಅಡಿಗರ
ಶ್ರೀರಾಮನವಮಿ ದಿನವಸ’ ಎಂಬ ಕವಿತೆಯ ಸಾಲುಗಳನ್ನು ನೆನೆದುಕೊಳ್ಳುತ್ತೇನೆ:
ವಿಜೃಂಭಿಸಿತು ರಾಮಬಾಣ; ನಿಜ. ಕತ್ತಲಿಗೆ
ಹತ್ತೆ ತಲೆ? ನೂರಾರೆ? ಅದು ಅಸಂಖ್ಯ:
ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ
ಅನಾದಿ; ಕೋದಂಡ ದಂಡವೂ ಹೀಗೆ ದಂಡ .
ಭಾಗ-2
ಅಭಿವೃದ್ಧಿಯ ಯಾತನೆ
ಸ್ನೇಹಿತರೇ ಕ್ಷಮಿಸಿ, ಮತ್ತೆ ನಾನು ಅದೇ ಶರಾವತಿ ನದಿಯಿಂದಲೇ ಎರಡನೇ ಭಾಗವನ್ನು ಆರಂಭಿಸುತ್ತಿದ್ದೇನೆ.
ಒಬ್ಬಳು ಹೆಣ್ಣು ಮಗಳ ಮೇಲೆ ಅತ್ಯಾಚಾರ, ದೌರ್ಜನ್ಯ, ಶೋಷಣೆ ಆಯಿತೆಂದರೆ ಕೂಡಲೇ ನಮ ಮನಸ್ಸಿಗೆ ನೋವಾಗುತ್ತದೆ ಮತ್ತು ಸಾಧ್ಯವಿರುವ ಎಲ್ಲ ರೀತಿಯ ಅವಕಾಶವನ್ನೂ ಬಳಸಿಕೊಂಡು ಅದನ್ನು ಪ್ರತಿಭಟಿಸುತ್ತೇವೆ ಮತ್ತು ಆತ್ಯಾಚಾರಿಗಳಿಗೆ ಶಿಕ್ಷೆ ಕೊಡಿಸುವವರೆಗೂ ವಿಧವಿಧದ ಹೋರಾಟ ಮುಂದುವರಿಸುತ್ತೇವೆ. ನಿಜ, ಇದು ಪ್ರತಿಭಟಿಸಲೇಬೇಕಾದ ಸಂಗತಿ. ಆದರೆ ಪ್ರಕೃತಿಯ ಮೇಲೆ ಅತ್ಯಾಚಾರವಾಗುತ್ತಿದ್ದರೆ ಅದು ಪ್ರತಿಭಟಿಸಲೇಬೇಕಾದ ಒಂದು ಮುಖ್ಯ ವಿಷಯವಾಗುವುದಿಲ್ಲ; ಇಂತಹ ವಿದ್ಯಮಾನಗಳ ಕುರಿತೇ ಚಿಂತಿಸುವವರು, ಕಾಳಜಿ ವಹಿಸುವವರು ಯಾರೋ ಕೆಲವರು ಅದಕ್ಕೆ ಪ್ರತಿಕ್ರಿಯೆ ಕೊಡುತ್ತಾರೆ. ಆದರೆ ಅಂತಹದೊಂದು ಪ್ರತಿಭಟನೆ ಗಟ್ಟಿಯಾಗಬೇಕೆಂದರೆ ಸಾಮಾನ್ಯರು ಅದರಲ್ಲಿ ಪಾಲ್ಗೊಳ್ಳಬೇಕು. ಈ ಹಿಂದೆ ಸ್ವಾತಂತ್ರ್ಯ ಚಳವಳಿಯಲ್ಲಿ ನಾಯಕರು ನೇತೃತ್ವ ಕೊಟ್ಟಾಕ್ಷಣಕ್ಕೆ ಸ್ವಾತಂತ್ರ್ಯ ದೊರಕುವುದು ಸಾಧ್ಯವಾಗುತ್ತಿರಲಿಲ್ಲ. ಪರಮಾಣುದೇಹಿ'ಯಾದ ಸಾಮಾನ್ಯರು ಸ್ಫೋಟಿಸತೊಡಗಿದಾಗ ಅದರ ವ್ಯಾಪಕತೆ, ಗಾತ್ರ, ಇವೆಲ್ಲವೂ ಎದ್ದು ಕಂಡಂತಾಗಿ ಮತ್ತು ಸಾಮಾನ್ಯರನ್ನು ಎದುರು ಹಾಕಿಕೊಂಡು ಸರ್ಕಾರ ನಡೆಸುವುದು ಕಷ್ಟ ಎಂಬುದಕ್ಕಾಗಿ ನಮಗೆ ಸ್ವಾತಂತ್ರ್ಯ ಸಾಧ್ಯವಾಯಿತು. ಹಾಗಾಗಿಯೇ ನಾನು ಹೇಳಿದ್ದು ಸಾಮಾನ್ಯರೆಂಬುವವರು ಸಾಮಾನ್ಯರಲ್ಲ, ಅವರು
ನರ ಸಿಂಹ’ರು. ಆದರೆ ಈಗಲಾದರೋ ಈ ಸಾಮಾನ್ಯರೆಂಬುವವರು ನಿಸರ್ಗದ ವೆುೕಲೆ ನಡೆಯುತ್ತಿರುವ ಈ ಅತ್ಯಾಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.
ನಿಸರ್ಗದ ಮೇಲೆ ಯಾಕೆ ಇಂತಹ ಅತ್ಯಾಚಾರವಾಗುತ್ತದೆ ಎಂದು ಕೇಳಿದರೆ ಅದಕ್ಕೆ ಉತ್ತರ ಅಭಿವೃದ್ಧಿ ಎಂದಾಗಿರುತ್ತದೆ. ಅಭಿವೃದ್ಧಿ ಎಂಬುದು ಮುಂದೆ ಬಂದಾಗ ಬಾಕಿಯೆಲ್ಲವೂ ಹಿಂದಾಗಿಬಿಡುತ್ತದೆ. ಅಭಿವೃದ್ಧಿ ಎಂಬುದು ಆಧುನಿಕತೆಯ ಪರಿಭಾಷೆಯೇ ಆಗಿಬಿಟ್ಟಿದೆ. ಆಧುನಿಕತೆಗೂ ನಾಗರಿಕತೆಗೂ ಸಂಬಂಧವಿದೆಯಷ್ಟೇ. ಸೌಕರ್ಯಗಳೇ ಆಧುನಿಕತೆಯ ಗುರುತು ಎಂದು ತಿಳಿಯುತ್ತಾರಷ್ಟೇ. ಮಹಾತ ಗಾಂಧಿಯವರು ನಾಗರಿಕತೆಯನ್ನು ಆಕ್ಷೇಪಿಸಿ ಪರೋಕ್ಷವಾಗಿ ಆಧುನಿಕತೆಯನ್ನು ಟೀಕಿಸಿದ್ದಾರೆ. ಅವರು ಹೀಗೆ ಹೇಳುತ್ತಾರೆ:
“ಮೊದಲು ಜನರು ಎತ್ತಿನ ಗಾಡಿಗಳಲ್ಲಿ ದಿನಕ್ಕೆ 2 ಗಾವುದ ಪ್ರಯಾಣ ಮಾಡುತ್ತಿದ್ದರು. ಈಗ ರೈಲಿನಲ್ಲಿ ನಾಲ್ಕೈದುನೂರು ಮೈಲಿ ಹಾರಿ ಬಿಡುತ್ತಾರೆ. ನಾಗರಿಕತೆಯ ಔನ್ನತ್ಯದ ಕುರುಹಂತೆ! ಇನ್ನೂ ಪ್ರಗತಿಯಾದರೆ ಜನರು ವಿಮಾನಗಳಲ್ಲಿ ಪ್ರಯಾಣ ಮಾಡಿ ನಾಲ್ಕು ಗಳಿಗೆಯಲ್ಲಿ ಯಾವ ದೇಶಕ್ಕಾದರೂ ಹೋಗಬಲ್ಲರಂತೆ. ಬರುಬರುತ್ತಾ ಜನರು ಕೈಕಾಲು ಬಳಸುವ ಅಗತ್ಯವೇ ಇಲ್ಲ. ಒಂದು ಗುಂಡಿ ಒತ್ತಿದರೆ ಅವರ ಉಡುಪೆಲ್ಲ ಸಿದ್ಧವಾಗಿ ಬಂದು ನಿಲ್ಲುತ್ತದೆ. ಇನ್ನೊಂದು ಗುಂಡಿ ಒತ್ತಿದರೆ ಪತ್ರಿಕೆ ಬರುತ್ತದೆ. ಮತ್ತೊಂದು ಗುಂಡಿ ಒತ್ತಿದರೆ ಮೋಟಾರು ಸಿದ್ಧ. ಸನ್ನೆ ಮಾಡಿದರಾಯಿತು, ಐವತ್ತಾರು ಬಗೆಯ ಷಡ್ರಸಾನ್ನ ಬಡಿಸಿ ಸಿದ್ಧವಾಗಿ ಕೈಗೆ ಬರುತ್ತದೆ ಎಲ್ಲವೂ ಯಂತ್ರಗಳಿಂದಲೇ..”
ಗಾಂಧಿಯವರ ಈ ಮಾತುಗಳನ್ನು ಹೀಗೆ ಕೂಡ ಸಂಗ್ರಹಿಸಬಹುದು: ಆಧುನಿಕ ನಾಗರಿಕತೆ ಎಂಬುದು ಹೆಚ್ಚು ಲೌಕಿಕವೂ ಭೌತಿಕವೂ ದುರಾಸೆಯದ್ದೂ ಮತ್ತು ಶೋಷಣಾತ್ಮ ಕವಾದದ್ದು ಆಗಿರುತ್ತದೆ. ಈ ನಾಗರಿಕತೆಯು ಆತವನ್ನು, ವೈಯಕ್ತಿಕ ಮಾನಸಿಕ ತಳಮಳ ಮತ್ತು ನೀತಿಯನ್ನು ನಿರ್ಲಕ್ಷಿಸುತ್ತದೆ. ಅಭಿವೃದ್ಧಿಯನ್ನು ಈ ಮಾತುಗಳಿಗೆ ಜೋಡಿಸಿ ನೋಡಬಹುದು.
ಈ ಮುಂದೆ ನಾನು ಆಡುವ ಮಾತುಗಳು ಈ ಅಭಿಪ್ರಾಯದ ವೆುೕಲೆಯೇ ನಿಂತಿದೆ.
ಯಾಕೆ ಈ ಮಾತುಗಳನ್ನು ಇಲ್ಲಿ ಎತ್ತಿಕೊಂಡಿದ್ದೇನೆಂದರೆ ಅಭಿವೃದ್ಧಿ ಎಂಬುದು ಕೇವಲ ಸೌಕರ್ಯಗಳ ವಿಸ್ತರಣೆಯಷ್ಟೇ ಹೊರತು ಮನುಷ್ಯತ್ವದ ವಿಕಾಸವೋ ವಿಸ್ತರಣೆಯೋ ಅಲ್ಲ. ಮನುಷ್ಯರು, ಮನುಷ್ಯತ್ವ ಇಂಥವೆಲ್ಲಕ್ಕೂ ಈ `ಅಭಿವೃದ್ಧಿಯೇ ಮಂತ್ರ’ ಎಂಬಲ್ಲಿ ಜಾಗವಿರುವುದಿಲ್ಲ. ಒಂದು ವಿಷವೃತ್ತ ಸೃಷ್ಟಿಯಾಗುತ್ತದೆ. ಈ ಅಭಿವೃದ್ಧಿ ಮಂತ್ರದಲ್ಲಿ ಒಂದು ಸ್ವಾರಸ್ಯವಿದೆ. ಹತ್ತು ಜನರಿಗೆ ಸಂಕಷ್ಟ ಕೊಟ್ಟು ಮತ್ತೆ ನೂರು ಜನರಿಗೆ ಸೌಕರ್ಯವೃದ್ಧಿಯಾದರೆ ಅದು ಅಭಿವೃದ್ಧಿಯಂತೆ! ಎಂದರೆ ಅಭಿವೃದ್ಧಿಯಲ್ಲಿ ಕಡಿಮೆ ನಷ್ಟ ಹೆಚ್ಚು ಪ್ರಯೋಜನ ಎಂಬ ಪ್ರಮಾಣದ ಲೆಕ್ಕವಿದೆಯೆಂದಾಯಿತು. ಈ ಕಾರಣಕ್ಕಾಗಿಯೇ ಯಾವ ಸರ್ಕಾರವಾದರೂ ಅದು ಕೆಲವು ಜನರಿಗೆ ಮುಲಾಜಿಲ್ಲದೇ ತೊಂದರೆ ಕೊಟ್ಟು ಮತ್ತೆ ಕೆಲವು ನೂರು ಜನರಿಗೆ ಅನುಕೂಲ ಮಾಡಿಕೊಟ್ಟು ದೇಶದ ಅಭಿವೃದ್ಧಿಯಾಯಿತು ಎಂದು ಶಂಖ ಊದುತ್ತಿರುತ್ತದೆ. ಇಂತಹ ದೊಂದು ಸಿದ್ಧಾಂತದ ಕಾರಣದಿಂದಲೇ ಶರಾವತಿ ಮತ್ತೆ ಮತ್ತೆ ದೌರ್ಜನ್ಯಕ್ಕೆ, ಅತ್ಯಾಚಾರಕ್ಕೆ ಒಳಗಾಗುತ್ತಿರುವುದು. ಒಂದು ಲೆಕ್ಕ ಕೊಡುತ್ತೇನೆ:
ಹಿರೇಭಾಸ್ಕರ ಅಣೆ ಕಟ್ಟಿನಿಂದಾಗಿ 31.94 ಚದರ ಮೈಲು ಪ್ರದೇಶ ಮುಳುಗಡೆಯಾಯಿತು. ಇದರಲ್ಲಿ 9233 ಎಕರೆ ಕೃಷಿ ಪ್ರದೇಶವೂ 10,240 ಎಕರೆ ಅರಣ್ಯ ಪ್ರದೇಶವೂ ಮುಳುಗಡೆ ಯಾಯಿತು. ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಒಟ್ಟು 16 ಚದರ ಮೈಲಿ ಪ್ರದೇಶದಲ್ಲಿ 15,165 ಎಕರೆ ಕೃಷಿ ಪ್ರದೇಶವೂ, 63,833 ಎಕರೆ ಅರಣ್ಯ ಪ್ರದೇಶವೂ ಮುಳುಗಡೆಯಾಯಿತು. ಲಿಂಗನಮಕ್ಕಿ ಅಣೆಕಟ್ಟೆಯ ಕಾರಣದಿಂದ 124 ಹಳ್ಳಿಗಳು ಮುಳುಗಡೆಯಾದವು. ಎಂದರೆ ಸಾವಿರಾರು ಸಂಖ್ಯೆಯ ಜನರು ನಿರ್ವಸಿತರಾದರು ಮತ್ತು ಇನ್ನೆಲ್ಲೋ ವಲಸಿಗರಾದರು. ಇದಲ್ಲದೇ ಆ ಅರಣ್ಯಗಳಲ್ಲಿದ್ದ ಪ್ರಾಣಿ, ಪಕ್ಷಿ, ಜಂತುಗಳ ವ್ಯಥೆಯ ಕಥೆ ಬೇರೆಯದ್ದೇ ಆಗಿರುತ್ತದೆ. ಯಾರೋ ತಾವು ಕಾಣದೇ ಇರುವ ಜನರ ಸೌಕರ್ಯಾಭಿವೃದ್ಧಿಗಾಗಿ ಇವರು ತ್ಯಾಗ ಮಾಡಬೇಕಾಯಿತು. ಇದನ್ನು ಬೇಕೆಂದೇ `ತ್ಯಾಗ’ ಎಂದು ಕರೆದೆ, ಅದನ್ನು ಹಾಗೆ ಕರೆದೇ ಜನರ ಮುಗ್ಧತೆಯನ್ನು ದುರುಪಯೋಗಪಡಿಸುಕೊಳ್ಳುವುದಕ್ಕೆ ಯಾವ ಸರ್ಕಾರವೂ ಸಂಕೋಚಪಡುವುದಿಲ್ಲ. ನಾನು ಆರು ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ಲಾರಿಗಳಲ್ಲಿ ಮರದ ದಿಮಿಗಳನ್ನು, ಕಟ್ಟಿಗೆ ಸುಟ್ಟ ಮೂಟೆಮೂಟೆ ಇದ್ದಿಲನ್ನು ನಿರಂತರವಾಗಿ ಸಾಗಿಸುತ್ತಿದ್ದುದನ್ನು ಕಣ್ಣಾರೆ ಕಂಡಿದ್ದೇನೆ. ದಿನವೂ ಲೆಕ್ಕ ಸಾಧ್ಯವಾಗದಷ್ಟು ಪ್ರಮಾಣದಲ್ಲಿ ಸಾಗಣೆಯಾಗುತ್ತಿದ್ದವು. ಆಗ ಅದರ ಸಂಕಟ ನನಗೆ ಅರ್ಥವಾಗುತ್ತಿರಲಿಲ್ಲ, ಆ ಮಾತು ಬೇರೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಅರಣ್ಯನಾಶವಾದದ್ದರಿಂದ ಘಾಸಿಗೊಂಡ ಪರಿಸರದ ಹಾನಿಯ ಲೆಕ್ಕ ಇದರಲ್ಲಿ ಸೇರಿಕೊಳ್ಳುವುದೇ ಇಲ್ಲ. ಅದೆಲ್ಲ ಅಮೂರ್ತ, ಹಾಗಾಗಿ ಅಗಣ್ಯವೆನಿಸಿಬಿಡುತ್ತದೆ. ಯಾಕೆಂದರೆ ಅಭಿವೃದ್ಧಿ ಎಂಬುದು ಮನುಷ್ಯಕೇಂದ್ರಿತ. ಮನುಷ್ಯನ ಅಭಿವೃದ್ಧಿಯ ಮುಂದೆ ನಿಸರ್ಗದ ಬಾಕಿ ಎಲ್ಲವೂ ಗೌಣ. ಹಾಗಾಗಿ, ಈ ಅತ್ಯಾಚಾರ ಅಲ್ಲಿಗೇ ಮುಗಿಯಲಿಲ್ಲ. ನೀರಿನ ಸಂಗ್ರಹಕ್ಕಾಗಿ ಚಕ್ರ ಸಾವೆಹಕ್ಲು ಅಣೆಕಟ್ಟು ಕಟ್ಟಲಾಯಿತು. ಮತ್ತೆ ಕೃಷಿಭೂಮಿ, ಅರಣ್ಯ ಭೂಮಿ, ಜನರ ಸಂಕಟ ಇವೆಲ್ಲ ಪುನರಾವರ್ತನೆಯಾಯಿತು. ಒಂದು ಕೊಲೆ ಕಷ್ಟವಂತೆ, ಆದರೆ ಒಂದಾದ ವೆುೕಲೆ ಮತ್ತೆ ಎಷ್ಟಾದರೂ ಕೊಲೆ ಮಾಡುವುದಕ್ಕೆ ಹಿಂಜರಿಕೆಯಿರುವುದಿಲ್ಲವಂತೆ. ಹೀಗಾಯಿತು ಇದರ ಕಥೆ. ಈ ಅಭಿವೃದ್ಧಿಯ ತಪ್ಪು ವ್ಯಾಖ್ಯಾನ, ಅಭಿವೃದ್ಧಿಯೆಂಬುದು ಸೌಕರ್ಯಗಳ ವೃದ್ಧಿ ಎಂಬುದರಿಂದ ಜನಸಾಮಾನ್ಯರು ಎಷ್ಟೊಂದು ಸಂಕಟ ಅನುಭವಿಸಿದರು ಎಂಬುದರ ಲೆಕ್ಕ ಯಾರಿಗಾದರೂ ದೊರಕುತ್ತದೆಯ. ಅವರೆಲ್ಲ ತಾವಿದ್ದ ಜಾಗದಿಂದ ಮತ್ತೆಲ್ಲೆಲ್ಲಿಗೋ ವಲಸೆ ಹೊಗಿ ಅಲ್ಲಿಯೂ ನೆಲೆಗೊಳ್ಳಲಾಗದೇ ಎಷ್ಟೊಂದು ಕುಟುಂಬಗಳು ನಾಶವಾಗಿಹೋದವೋ ಯಾರಾದರೂ ಲೆಕ್ಕ ಇಟ್ಟಿದ್ದಾರ? ಈ ಅಣೆಕಟ್ಟೆ ಯಿಂದಾಗಿಯೇ ಮುಳುಗಡೆ ಸಂತ್ರಸ್ಥರಾದ ಕುಟುಂಬ ನಮದು. ಸ್ವಿಚ್ ಒತ್ತಿದಾಗ ಟಕ್ ಅಂತ ಬೆಳಗುವ ವಿದ್ಯುದೀಪದ ಹಿಂದಿನ ಈ ಸಂಕಟದ ಕರಾಳ ಕಥೆ ಆ ಬೆಳಕಿನಲ್ಲಿ ಯಾರಿಗೂ ಗೊತ್ತಾಗುವುದೇ ಇಲ್ಲ. ನಾವು ಅದೆಂತಹ ಮಾನಸಿಕ ತಳಮಳಕ್ಕೆ ಒಳಗಾಗಿದ್ದೆವು ಅದರಿಂದೆಲ್ಲ ಹೊರಗೆ ಬರುವುದಕ್ಕೆ ಎಷ್ಟು ಕಷ್ಟವಾಯಿತು ಎಂಬುದು ವಿವರಣೆಗೆ ನಿಲುಕುವುದಿಲ್ಲ. ಈ ಸಂಕಟವನ್ನೆಲ್ಲ ನೇರವಾಗಿ ಕಂಡುಂಡ ನಮಗೆ ನಾವಿರುವ ವರೆಗೂ ಮರೆತುಹೋಗುವುದಿಲ್ಲ. ನಾಗರಿಕತೆಯು ಶೋಷಣಾತಕ ಮತ್ತು ವೈಯಕ್ತಿಕ ಮಾನಸಿಕ ತಳಮಳವನ್ನು ನಿರ್ಲಕ್ಷಿಸುತ್ತದೆ ಎಂದು ಗಾಂಧಿ ಹೇಳಿದ ಮಾತು ಎಷ್ಟು ನಿಜ!
ಹಾಗಂತ ಶರಾವತಿಯ ಮೇಲಿನ ಅತ್ಯಾಚಾರ ಇಲ್ಲಿಗೇ ನಿಲ್ಲಲಿಲ್ಲ. ಶರಾವತಿ ಟೈಲರೀಸ್ ಎಂದರು. ಅದನ್ನು ಪರಿಸರಾಸಕ್ತರು ವಿರೋಧಿಸಿದರು. ಹಾಗಿದ್ದರೂ ಅದು ನಿಲ್ಲಲಿಲ್ಲ. ಹೋಗಲಿ ಇಷ್ಟೆಲ್ಲಾ ಆಯಿತಲ್ಲ ಇನ್ನಾದರೂ ಶರಾವತಿಯನ್ನು ತಣ್ಣಗೆ ಹರಿದುಹೋಗಲು ಬಿಡುವುದಕ್ಕೆ ಸರ್ಕಾರಗಳಿಗೆ ಸಾಧ್ಯವಾಗುವುದಿಲ್ಲ. ಕೆಲವೇ ವರ್ಷಗಳ ಹಿಂದೆ ಮತ್ತೊಂದು ಯೋಜನೆ ಸಿದ್ಧವಾಯಿತು. ಬೆಂಗಳೂರಿನ ಜನಕ್ಕೆ ಕುಡಿಯುವ ನೀರು ಕೊಡುವುದಕ್ಕೆ ಶರಾವತಿಯಿಂದ ನೀರನ್ನು ಕೊಂಡೊಯ್ಯುವ ಬೃಹತ್ ಯೋಜನೆ ಅದು. ವಾಸ್ತವವಾಗಿ ಇದೂ ಕೂಡ ಒಂದು ವಿಕೃತ ಯೋಜನೆ. ಈ ಯೋಜನೆಯ ಒಟ್ಟು ಪರಿಣಾಮಗಳ ಚಿಂತೆಯನ್ನೇ ಸರ್ಕಾರಗಳು ಮಾಡುವುದಿಲ್ಲವೆಂಬುದು ಮತ್ತೆ ಸಾಬೀತಾಯಿತು. ಅದು ಜನರ ವಿರೋಧದ ನಡುವೆ ಸ್ತಬ್ಧವಾಯಿತು. ಸ್ತಬ್ಧವಾಯಿತೋ ಅಥವಾ ಸದ್ಯಕ್ಕೆ ಸ್ತಬ್ಧವಾಯಿತೋ ಗೊತ್ತಾಗುತ್ತಿಲ್ಲ. ಈಗ ಇನ್ನೊಂದು ಅತ್ಯಾಚಾರಕ್ಕೆ ಸರ್ಕಾರ ಹೊರಟಿದೆ. ಜೋಗದಿಂದ ಬಿದ್ದು ಹರಿದುಹೋಗುವ ನೀರನ್ನು ಮತ್ತೆ ಮೇಲೆತ್ತಿ ವಿದ್ಯುತ್ ಉತ್ಪಾದಿಸುವ ಯೋಜನೆ ಅದು. ಶರಾವತಿ ಪಂಪ್‌್ಡ ಸ್ಟೋರೇಜ್ ಯೋಜನೆ' ಅಂತ ಹೆಸರು. ಈಗ ಹಾಲಿ ಇದು ಚರ್ಚೆಯ ಮತ್ತು ಆತಂಕದ ಸಂಗತಿಯಾಗಿದೆ. ಖ್ಯಾತ ಪರಿಸರ ಚಿಂತಕ ನಾಗೇಶ್ ಹೆಗಡೆಯವರು ಈಚೆಗೆ ಇಲ್ಲೇ ಸಾಗರದಲ್ಲೇ ಹೇಳಿದ್ದಾರೆ:
ಶರಾವತಿ ಪಂಪ್‌್ಡ ಯೋಜನೆ ತೀರಾ ಅವೈಜ್ಞಾನಿಕವಾಗಿದೆ. ನೀರನ್ನು ಮೆಲಕ್ಕೆತ್ತಲು ಎಷ್ಟು ಪ್ರಮಾಣದ ವಿದ್ಯುತ್ ಅಗತ್ಯವಿದೆಯೋ ಅದಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗದಿದ್ದರೆ ಅಂತಹ ಯೋಜನೆಯಿಂದ ಯಾವ ಪ್ರಯೋಜನ ವಿದೆ’. ಅವರು ಮತ್ತೊಂದು ಮುಖ್ಯ ಮಾತು ಹೇಳಿದ್ದಾರೆ: `ಪರಿಸರವನ್ನು ಕಾಪಾಡಿಕೊಂಡೇ ಅಭಿವೃದ್ಧಿ ಸಾಧಿಸುವ ಹಲವು ಪರ್ಯಾಯ ಮಾರ್ಗಗಳು ನಮೆದುರು ಇವೆ. ಅಭಿವೃದ್ಧಿ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವುದರಿಂದ ಸಿಗುವ ಲಾಭಗಳ ಬಗ್ಗೆ ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹೆಚ್ಚು ಆಸಕ್ತಿ ಇದೆಯೇ ಹೊರತು ಪರಿಸರದ ಬಗ್ಗೆ ಅಲ್ಲ’. ಬ್ರಷ್ಟಾಚಾರ ಮತ್ತು ಉದ್ಯಮಿ ಹಿತಾಸಕ್ತಿಯ ಕರಾಳ ಸಂಬಂಧವನ್ನು ಈ ಮಾತು ತಿಳಿಸುತ್ತದೆಯಾದ ಕಾರಣ ಗಂಭೀರವಾಗಿ ಪರಿಗಣಿಸಬೇಕಾದ ಮಾತುಗಳು ಇವು.
ಅಭಿವೃದ್ಧಿಯ ಹುಚ್ಚು ಹತ್ತಿದ ಸರ್ಕಾರಗಳಿಗೆ ಜನಪರ ಜೀವಪರ ಪರಿಸರಪರ ಕಾಳಜಿ ಇರುವುದೇ ಇಲ್ಲವೆಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ. ಹೀಗಾಗಿ ಶರಾವತಿ ಲಾಗಾಯ್ತಿನಿಂದಲೂ ಅಭಿವೃದ್ಧಿಯ ವಿಕಾರದಿಂದ ಘಾಸಿಗೊಳ್ಳುತ್ತಲೇ ಬಂದಿದೆ, ಶೋಷಣೆ ಗೊಳಗಾಗುತ್ತಲೇ ಬಂದಿದೆ. ಮತ್ತೆ ಮತ್ತೆ ಅತ್ಯಾಚಾರ ನಡೆಯುತ್ತಲೇ ಬಂದಿದೆ. ಹೀಗೆ ನಿರಂತರ ಅತ್ಯಾಚಾರ ನಡೆಯುತ್ತಿದ್ದರೂ ಸಾಮಾನ್ಯರು ಮೌನವಾಗಿಯೇ ಇದ್ದಾರೆ. ರಾಮಾಯಣದಲ್ಲಿ ಹನುಮಂತನಿಗೆ ನೀನು ಸಮುದ್ರ ಹಾರು, ನಿನ್ನಲ್ಲಿ ಆ ಶಕ್ತಿ ಇದೆ ಎಂದು ಪುಸಲಾಯಿಸುವುದಕ್ಕೆ ಜಾಂಬವಂತ ಇದ್ದ. ಮತ್ತು ಅದರಿಂದಾಗಿ ಹುರುಪುಗೊಂಡ ಹನುಮಂತ ಸಮುದ್ರೋಲ್ಲಂಘನೆ ಮಾಡಿ ಸೀತೆಯ ಇರವನ್ನು ಖಚಿತಪಡಿಸಿಕೊಂಡು ಆಕೆಗೆ ಸಂದೇಶವನ್ನೂ ಕೊಟ್ಟು ಬಂದ ನಂತರದಲ್ಲಿ ದುಷ್ಟನೂ ದುರ್ಜನನೂ ಆದ ರಾವಣ ಹತನಾಗಿ ಸೀತೆಯ ವಿಮೋಚನೆ ಸಾಧ್ಯವಾಯಿತು. ಈಗ ಈ ಸಾಮಾನ್ಯರನ್ನು ಜಾಗೃತಗೊಳಿಸುವುದಕ್ಕಾಗಿ ಎಲ್ಲಿಂದ ಜಾಂಬವಂತ ನನ್ನು ಹುಡುಕಿ ತರಬೇಕು? ಕಂಭದೊಳಗೆ ಇರುವ ಈ `ನರ-ಸಿಂಹ’ನನ್ನು ಹೊರಗೆ ಬರುವಂತೆ ಮಾಡುವುದು ಹೇಗೆ?
ಒಂದೇ ಮಾತು, ಇಂತಹ ವಿಕಾರ ಯೋಜನೆಗಳನ್ನು ನಾವು ವಿರೋಧಿಸಲೇಬೇಕು. ಅಭಿವೃದ್ಧಿ ಎಂದರೆ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳುವುದು ಎಂದಾದರೆ ಅಂತಹ ಅಭಿವೃದ್ಧಿಯನ್ನು ಸಾಮಾನ್ಯರು ತಿರಸ್ಕರಿಸಬೇಕು. ಆದರೆ ಅದು ಸಾಧ್ಯವಾಗುವುದು ಸ್ವಿಚ್ ಹಾಕಿದಾಗ ಹೊತ್ತಿಕೊಳ್ಳುವ ಬೆಳಕಿನ ಹಿಂದೆ ಅದೆಂತಹ ಕರಾಳ ಕತೆಯೂ ನೋವಿನ ಪ್ರಪಂಚವೂ ಇದೆ ಎಂಬುದು ಗೊತ್ತಾದಾಗ ಮಾತ್ರ. ಆದರೆ ಸುಖ ಯಾರಿಗೆ ಬೇಡ? ಆದರೆ, ನಮ ಊರಿಗೆ ಬಂಗಾರದ ಗಣಿ ಬೇಡ, ಆದರೆ ನಮಗೆ ಬಂಗಾರ ಬೇಕು ಎಂಬ ಮನಃಸ್ಥಿತಿಯಿಂದ ಹೊರಗೆ ಬರಬೇಕು. ನಮಗೆ ಬಂಗಾರ ಬೇಕು ಅಂತಾದರೆ ಮತ್ತೆಲ್ಲೋ ಆ ಬಂಗಾರಕ್ಕಾಗಿ ಗಣಿಗಾರಿಕೆ ಮಾಡಲೇಬೇಕಾಗುತ್ತದೆ. ಆ ಕತ್ತಲ ಪ್ರಪಂಚದ ಅರಿವಿನಿಂದಾಗಿ ಗಣಿಗಾರಿಕೆ ಬೇಡ ಎಂತಾದಾರೆ ಬಂಗಾರವೇ ಬೇಡ ಎಂದಾಗಬೇಕು. ಎಂದರೆ ಅತಿಯಾದ ಸುಖಸೌಕರ್ಯಗಳು ಜೀವಜಾಲಕ್ಕೆ ಪರಿಸರಕ್ಕೆ ಮಾರಕವೆಂತಾದರೆ ಅದನ್ನು ನಿಲ್ಲಿಸಲು ಆಗದಿದ್ದರೂ ಕಡಿಮೆಯಾದರೂ ಮಾಡುವಂತೆ ಸಾಮಾನ್ಯರು ಪ್ರೋತ್ಸಾಹಿಸಬೇಕು. ಕೃಷಿಯಲ್ಲಿ ಸುಸ್ಥಿರ ಕೃಷಿ ಎಂಬುದೊಂದು ಪರಿಕಲ್ಪನೆ ಇದೆ. ಅದರ ಹಾಗೇ ಸುಸ್ಥಿರ ಸುಖ' ಎಂಬ ಪರಿಕಲ್ಪನೆ ಆರಂಭವಾದರೆ ಒಳ್ಳೆಯದು ಎನಿಸುತ್ತದೆ. ಸುಸ್ಥಿರ ಸುಖವೆಂದರೆ ಬೇರೆಯವರಿಗೆ ಸಂಕಟ ಕೊಟ್ಟು, ಎಲ್ಲ ನಮಗೇ ಇರಲಿ ಎಂದು ಸುಖ ಪಡೆಯದೇ, ಮುಂಬರುವವರಿಗೆ ಉಳಿಸುವುದು ಎಂದು ವ್ಯಾಖ್ಯಾನಿಸಬಹುದು. ಹಾಗೆಯೇ
ಸುಸ್ಥಿರ ಅಭಿವೃದ್ಧಿ’ ಎಂಬುದೊಂದು ಪರಿಕಲ್ಪನೆ ಜಾರಿಯಲ್ಲಿದೆ. ಈ ಕುರಿತು ಸಾಮಾನ್ಯೀಕರಿಸಿ ಹೇಳುವುದಾದರೆ ಭವಿಷ್ಯದ ಜನಾಂಗಕ್ಕೆ ಕೊರತೆಯಾಗದಂತೆ ಸಮತೋಲಿತ ಅಭಿವೃದ್ಧಿ ಮಾಡುವುದು. ಅಭಿವೃದ್ಧಿಯ ಹೆಸರಿನಲ್ಲಿ ಎಲ್ಲವನ್ನೂ ಒಂದೇ ಸಲಕ್ಕೆ ನಾಶ ಮಾಡದೇ ಮುಂದಿನವರಿಗೂ ಒಂದಿಷ್ಟು ಉಳಿಸುವುದು. ಹೌದು, ಇಂಥವೆಲ್ಲ ಇದೆ, ಆದರೆ ಅದು ಜಾರಿಗೊಳ್ಳುವುದು ಹೇಗೆ? ಅದು ಮಿಲಿಯನ್ ಡಾಲರ್ ಪ್ರಶ್ನೆ.
ಹೀಗಾಗಿ, ಕನಿಷ್ಟ ಸದ್ಯಕ್ಕಾದರೂ, ಈಗ ಈ ಯೋಜಿತವಾಗಿರುವ ಶರಾವತಿ ಪಂಪ್‌್ಡ ಯೋಜನೆಯನ್ನು ವಿರೋಧಿಸಬೇಕು. ಮತ್ತು ಅಂತಹದೊಂದು ನಿರ್ಣಯವನ್ನು ಈ ಸಭೆ ಮಾಡಬೇಕು ಎಂದು ವೈಯಕ್ತಿಕವಾಗಿ ಒತ್ತಾಯಿಸುತ್ತೇನೆ.
ಜೈ ಕರ್ನಾಟಕ, ಜೈ ಹಿಂದ್.
