


ನಾಳೆ ಬಾ ಎನ್ನಬಹುದು ಅತಿಥಿಗಳಿಗೆ…. ಆದರೆ ಸಾವಿಗೆ ನಾಳೆ ಬಾ ಎನ್ನುವಂತಿಲ್ಲ…
ಒಬ್ಬ ಸಹೋದರನಂತಿದ್ದ ಸ್ನೇಹಿತ, ಸ್ನೇಹಿತನಂತಿದ್ದ ಸಹೋದರ ಎನ್ನಬಹುದು ಹೆಸರು ಶಿವಶಂಕರ್. ನಮ್ಮ ನಡುವೆ ಓಡಾಡಿಕೊಂಡಿದ್ದ ಸ್ನೇಹಿತ. ಸ್ಕೂಟರ್, ಕಾರ್ ಮೇಲೆಲ್ಲಾ ಸ್ವಪ್ನದಂತೆ ಸಾಗಿ ಹೋಗುತಿದ್ದ ಈತ ನಮ್ಮೆಲ್ಲರ ಗೆಳೆಯ.

ನಮ್ಮ ಗೆಳೆಯ ಅಂದಮೇಲೆ ಬಡವನಾಗಿರಬೇಕು, ಕ್ರೀಯಾಶೀಲನಾಗಿರಬೇಕು, ಪರಿಶ್ರಮಿಯಾಗಿರಬೇಕು, ಕನಸುಗಾರನಾಗಿರಬೇಕು ಹೀಗೆ ಏನೇನೆಲ್ಲಾ… ಈತನಿಗೆ ಕೆಲವು ರಿಯಾಯತಿಗಳಿದ್ದವು.
ವಿನಾಯಿತಿಗಳನ್ನು ಪಡೆಯಲೆಂಬಂತೆಯೇ ಹಾಗಿದ್ದನೋ ಕಾಣೆ. ತುಸು ಆಳಸಿ, ಸ್ವಲ್ಫ ಸೋಮಾರಿ, ಎಲ್ಲರೊಳಗೊಂದಾಗುವ ಗುಡ್ ಫಾರ್ ನಂಥಿಂಗ್ ನಡವಳಿಕೆ ಜೊತೆಗೆ ಅಂತರ್ಗತವಾಗಿದ್ದ ಮಮತೆ!
ಈತ ನಮ್ಮನ್ನೆಲ್ಲಾ ಬಿಟ್ಟು ಹೋಗಿ ಒಂದುವಾರ ಕಳೆದು ಎರಡೂ ಕಳೆಯತೊಡಗಿದ್ದರೂ ಈತ ಇಲ್ಲೇ ಎಲ್ಲೋ ಇರುವಂತಿದೆ. ಯಾಕೆಂದರೆ ಆತ ಇದ್ದುದೇ ಹಾಗೇ.

ಆತ ಅಮಾಯಕನಾಗಿರದಿದ್ದರೆ ಕಾಲ ಅವನ ಮೇಲೆ ಮಾಡಿದ ದಾಳಿಗೆ ಆತ ಇಷ್ಟು ವರ್ಷವೂ ಇರುತಿದ್ದನೋ ಇಲ್ಲವೋ? ದೇವರನ್ನು ಅತಿಯಾಗಿ ನಂಬುತಿದ್ದ ಈತ ಹಬ್ಬಗಳಿಗಾಗಿ ಕನವರಿಸುತಿದ್ದ ಶಿಕ್ಷಕನಾಗಲು ಓದಿದ್ದ ಆತ ಅದಾಗದೇ ಮತ್ತೇನೇನೋ ಆಗಿದ್ದ. ಬ್ಯಾಂಕ್ ನೌಕರಿ, ಮಾಧ್ಯಮಕ್ಷೇತ್ರ ಅವನ ಹವ್ಯಾಸಗಳಂತಿದ್ದವು ಆದರೆ ಕಲಿಯಲು ಹಿಂಜರಿಯುವ ವ್ಯಕ್ತಿ ಯಾಗಿ ಎಲ್ಲವರಿಗೂ ಬೇಕಾದವನಾಗಿ ದೂರ ಸಾಗಿ ಬಿಟ್ಟ.
ಬಂಡಾಯವೇಳಲು ಹಿಂಜರಿಯುತಿದ್ದ ಆತನ ಮನಸ್ಸು ಸಾವನ್ನೇ ಒಪ್ಪಿಕೊಳ್ಳುವಂತಾಗಿದ್ದು ಆತನ ಮೇಲೆ ಆದ ದಾಳಿಗಳ ಪರಿಣಾಮ. ಸಕಾಲದಲ್ಲಿ ಸಿಗದ ಕೆಲಸ, ವೇತನ, ತೃಪ್ತಿ, ಆತನ ದೇಹವನ್ನೂ ಪೊಳ್ಳಾಗಿಸಿತ್ತೇ ಎನ್ನುವುದು ಈಗ ಸಿಗುವ ಸಕಾರಣ. ಸಾವಿನ ಹಿಂದೆ ಕುಟುಂಬ, ಆಹಾರ, ಬಡಿದಾಡದ ಸೋಲೊಪ್ಪುವ ಗುಣ ಮತ್ತೂ ಎನೇನೋ ಇರಬಹುದು ಆದರೆ ಅನಾಮಿಕನಂತಿದ್ದ ಅಮಾಯಕ ಅಕಾಲಿಕವಾಗಿ ಸತ್ತದ್ದು ದೌರ್ಭಾಗ್ಯ.

ಈತನ ಸಾವಿನ ಸೂತಕ ಕಳೆಯುವ ಮುನ್ನ ಸುಂದರ ಸಂಸಾರದ ನೆರೆಮನೆಯ ಹುಡುಗನಂತಿದ್ದ ಶ್ಯಾಮಸನ್ ಸೆಬಾಸ್ಟಿನ್ ಮೀನು ಹಿಡಿಯಲು ತೆರಳಿ ಮಳಗಿಯಿಂದ ಹೆಣವಾಗಿ ಮರಳಿದ್ದಾನೆ. ಶ್ಯಾಮಸನ್ ಶಿರಸಿಯ ಪ್ರಸಿದ್ಧ ಹೋಳಿ ಬೇಡರವೇಷ ನೋಡಲು ಹೋದವನು ಸಂಬಂಧಿಗಳೊಂದಿಗೆ ಮಳಗಿ ಧರ್ಮಾ ಜಲಾಶಯಕ್ಕೆ ಮೀನು ಹಿಡಿಯಲು ತೆರಳಿ ಕಾಲು ಜಾರಿ ಬಿದ್ದು ಆಕಸ್ಮಿಕ ಸಾವನ್ನಪ್ಪಿ ದ್ದಾನೆ. ಒಂದು ವಾರದ ಹಿಂದೆ ಮೃತನಾದ ಶಿವಶಂಕರ್ ಮತ್ತು ಶ್ಯಾಮಸನ್ ಸೆಬಾಸ್ಟಿನ್ ಸಂಪೂರ್ಣ ವೈರುಧ್ಯಮಯ ವ್ಯಕ್ತಿತ್ವದವರು. ಶಿವಶಂಕರ್ ನಂತೆ ಶ್ಯಾಮಸನ್ ಅಮಾಯಕ, ನತದೃಷ್ಟನಾಗಿರಲಿಲ್ಲ. ಆದರೆ ಸಾವಿಗೆ ರಿಯಾಯತಿ ಇಲ್ಲ. ನತದೃಷ್ಟರೂ ಉಳಿಯುವುದಿಲ್ಲ, ದೇವದೂತರೂ ಶಾಶ್ವತರಲ್ಲ… ನಿಜಕ್ಕೂ ನಿಮ್ಮ ದೇವರು ಕ್ರೂರಿ. ಈ ಕುಟುಂಬಗಳನ್ನು ದೇವರಂಥ ಮನುಷ್ಯರು ಸಂತೈಸಬೇಕಷ್ಟೇ… ಮತ್ತೆ ಹುಟ್ಟಿ ಬನ್ನಿ ಅದೃಷ್ಟವಂತರಾಗಿ ಸಕಾಲದಲ್ಲಿ ಎಂದು ನಾವು ಸಂತೈಸಿಕೊಳ್ಳಬಹುದಷ್ಟೆ… ಸಾವುಗಳಿಗೂ ಧಿಕ್ಕಾರವಿರಲಿ ದುಖಿ:ತರಿಗೆ ನೆಮ್ಮದಿ ಸಿಗಲಿ.
– ಇಂತಿ ನಿಮ್ಮ ಕನ್ನೇಶ್.

