two diffarant opinion on shimoga blast- ಮನೆಯ ಮುಂದೊಂದು ಮಹಾಸ್ಪೋಟ!

ನಿನ್ನೆ ರಾತ್ರಿ ಸುಮಾರು ಹತ್ತೂಕಾಲು. ಪ್ರತಿದಿನ ಆ ಹೊತ್ತಿನಲ್ಲಿ ರಾತ್ರಿಯ ಊಟ ಮುಗಿಸಿ ಮನೆಯ ಮುಂದಿನ ಬೀದಿಗಳಲ್ಲಿ ಒಂದಿಷ್ಟುಹೊತ್ತು, ಸರ್ವಜ್ಞ ಹೇಳಿದಂತೆ, ‘ಉಂಡು ನೂರಡಿ ನೆಡೆದು…’ ಮಲಗುವುದು ನನ್ನ ವಾಡಿಕೆ. ನಿನ್ನೆ ಹಾಕಬೇಕಾದ ನಾಲ್ಕಾರು ಸುತ್ತುಗಳಲ್ಲಿ ಎರಡನ್ನು ಕಡಿಮೆ ಮಾಡಿ ಕಾಲುಗಂಟೆ ಮೊದಲೆ ಮನೆಯೊಳಗೆ ಬಂದು ಮಲಗಿ ದಿಂಬಿಗೆ ತಲೆಯೂರುತ್ತಿದ್ದಂತೆ ದೊಡ್ಡ ಮಟ್ಟದ ಶಬ್ದವೊಂದು ಉಂಟಾಗಿ ಮೇಲೆದ್ದು ಕುಳಿತೆನಾದರೂ ನನಗೆ ಅದು ಹೆಚ್ಚು ದಿಗಿಲನ್ನು ಉಂಟುಮಾಡಲಿಲ್ಲ. ಏಕೆಂದರೆ ಅಷ್ಟಲ್ಲದಿದ್ದರೂ ಅದಕ್ಕಿಂತ ಸ್ವಲ್ಪ ಕಡಿಮೆಯಾದ ಶಬ್ದಗಳನ್ನು ಪ್ರತಿದಿನ ಕೇಳುವುದು ನಮಗೆ ಈಗ ಮಾಮೂಲಿಯಾಗಿಬಿಟ್ಟಿದೆ.

ನಮ್ಮ ಮನೆಯ ಹತ್ತಿರವೇ ಇರುವ ಹುಣಸೋಡು, ಕಲ್ಲಗಂಗೂರು ಕಲ್ಲು ಕ್ವಾರೆಗಳಲ್ಲಿ ಕಲ್ಲು ಬಂಡೆಗಳನ್ನು ಡೈನಮೇಟ್ ಇಟ್ಟು ಸಿಡಿಸುವ ಕಾರ್ಯಗಳು ನಡೆಯುತ್ತಿವೆ. ಇದು ಎಂದಿಗಿಂತ ತುಸು ಹೆಚ್ಚು ಶಕ್ತಿಯುಳ್ಳ ಡೈನಮೇಟ್ ಇರಬಹುದು ಎಂದುಕೊಂಡು ಮತ್ತೆ ಹಾಸಿಗೆಗೆ ಒರಗಿದೆ.ಒರಗುತ್ತಿದ್ದಂತೆ ಇಡೀ ಮನೆಯೇ ಕುಸಿದುಬಿತ್ತೇನೋ ಎಂಬಂತೆ ಮೊದಲಿನ ಸ್ಪೋಟ ಏನೂ ಅಲ್ಲ ಅನ್ನುವಂಥ ಮಹಾಸ್ಪೋಟದ ಕಿವಿಗಡಚಿಕ್ಕುವ ಶಬ್ದವೊಂದು ಉಂಟಾಗತೊಡಗಿದಾಗ ಹೆಂಡತಿ ಮಕ್ಕಳೆಲ್ಲರೂ ಹೆದರಿ ಹೊರಗೆ ಓಡಿಬಂದು ನೋಡುತ್ತೇವೆ! ಮನೆಯ ಮುಂದೆಯೇ ಮಹಾಬೆಂಕಿಯೊಂದು ಭುವಿಯಿಂದ ಬಾನಿಗೆ ಏರುತ್ತಲೇ ಇದೆ. ಯಾರ ಬಾಯಿಂದಲೂ ಏನೂ ಮಾತುಗಳೇ ಹೊರಡದಂಥ ದಿಜ್ಮೂಡತೆ! ಕೆಲವು ನಿಮಿಷಗಳಾಗುತ್ತಿದ್ದಂತೆಯೇ ನಮ್ಮನಗರದ ಎಲ್ಲ ಮನೆಗಳ ಜನರೂ ಏಕಕಾಲದಲ್ಲಿ ರಸ್ತೆಗಿಳಿದು ಗುಂಪುಗೂಡಿದರು. ರಾತ್ರಿ ಊಟದ ನಂತರ ಲೈಟ್ ಬೆಳಕಲ್ಲಿ ಸೈಕಲ್ ಆಡುವ ಮಕ್ಕಳು ಗುಂಡು ಹಾರಿದ ಸದ್ದಿಗೆ ಹಾರಿಹೋಗುವ ಹಕ್ಕಿಗಳಂತೆ ಚಿಟ್ಟನೇ ಚೀರಿಕೊಂಡು ಚೆಲ್ಲಾಪಿಲ್ಲಿಯಾದವು. ಆಗಲೇ ನಿದ್ದೆಗೆ ಜಾರಿದ್ದ ತಮ್ಮ ತಮ್ಮ ಮಕ್ಕಳನ್ನು ಬಡಿದು ಎಬ್ಬಿಸಿಕೊಂಡು ಮಹಿಳೆಯರೆಲ್ಲ ಮನೆಯ ಹೊರಗೆ ಬಂದು ನಡುಗುತ್ತಾ ನಿಂತರು.ಸ್ವಲ್ಪ ಹೊತ್ತಿನ ನಂತರ ಬೆಂಕಿ ಕಣ್ಮರೆಯಾಯಿತಾದರೂ ಸುಮಾರು ಹದಿನೈದು ಇಪ್ಪತ್ತು ನಿಮಿಷಗಳ ಕಾಲ ಅಗಾಧ ಪ್ರಮಾಣದ ಕಲ್ಲುಪುಡಿ, ದೂಳು, ಇವುಗಳ ಜೊತೆ ಕಾರ್ಮೋಡದಂತೆ ಎದ್ದ ಹೊಗೆ ಆಕಾಶಕ್ಕೆ ಏರಿ ನಮ್ಮ ಮನೆಗಳ ಬಾಗಿಲಿಗೆ ಬಂದು ದಟ್ಟೈಸತೊಡಗಿತು. ಈಗಲೂ ನಮಗೆ ಅನ್ನಿಸಿದ್ದು ದಿನನಿತ್ಯ ಇಡುವ ಪ್ರಮಾಣಕ್ಕಿಂತ ಅಧಿಕ ಪ್ರಮಾಣದ ಶಕ್ತಿಶಾಲಿ ಸ್ಪೋಟಕಗಳನ್ನು ಬಳಸಿ ಬಂಡೆ ಸಿಡಿಸಿದ್ದಾರೆಂದು. ಅಥವಾ ಕಲ್ಲುಗಣಿಯಲ್ಲಿ ಏನೋ ದುರಂತ ಸಂಭವಿಸಿ ಸ್ಪೋಟ ಉಂಟಾಗಿದೆ ಎಂದು! ಈ ಸದ್ದು ಕೇವಲ ಗಣಿಗಳಿಗೆ ಹತ್ತಿರವಿರುವ ನಮ್ಮ ಮತ್ತು ನಮ್ಮ ಸುತ್ತ ಮುತ್ತಲ ನಗರಗಳ ಮನೆಗಳಿಗೆ ಮಾತ್ರ ಕೇಳಿರಬಹುದೆಂದು ನಮ್ಮ ಅಂದಾಜು. ಮತ್ತು ಈ ಗಣಿಗಾರಿಕೆಯ ದುರಂತಗಳು ಮತ್ತು ಅವನ್ನು ನಿಲ್ಲಿಸಬಹುದಾದ ವಿಫಲ ಕಾರ್ಯತಂತ್ರಗಳ ಬಗ್ಗೆ ಮಾತುಕತೆಗಳು ಆಗುತ್ತಿರಬೇಕಾದರೆ ಎಲ್ಲೆಲ್ಲಿಂದಲೋ ಅಂದರೆ ಬೇರೆ ಬೇರೆ ತಾಲ್ಲೂಕು ಅಷ್ಟೇ ಏಕೆ ಅಕ್ಕಪಕ್ಕದ ಜಿಲ್ಲೆಗಳಿಂದ ಕೂಡ ಈ ಸದ್ದು ಕೇಳಿದ ಬಗ್ಗೆ ಸಂದೇಶಗಳು ಬರತೊಡಗಿದವು.ಇದೊಂದು ‘ಭೂಕಂಪ’ ಎಂದು ಕೆಲವು ಸುದ್ಧಿವಾಹಿನಿಗಳು ಸುದ್ಧಿಪ್ರಸಾರ ಮಾಡತೊಡಗಿದವು. ಮತ್ತು ಅವುಗಳ ಸ್ಕ್ರೀನ್ ಶಾರ್ಟ್ ಗಳನ್ನು ಹೊಡೆದುಹೊಡೆದು ಜನ ವಾಟ್ಸಪ್ ಗಳಲ್ಲಿ ಹರಿಬಿಡತೊಡಗಿದರು. ಅಕ್ಕಪಕ್ಕದ ಜಿಲ್ಲೆಗಳಿಗೂ ಶಬ್ದ ವಿಸ್ತರಿಸದ ಮೇಲೆ ನಮ್ಮಷ್ಟಕ್ಕೆ ನಮಗೆ ಅನುಮಾನ ಕಾಡತೊಡಗಿತು. ಗಣಿಯಲ್ಲಿನ ಬಂಡೆ ಸಿಡಿಸುವಿಕೆ ಇದಾಗಿರದೇ ಬೇರೆ ಏನಾದರೂ ಆಗಿರಬಹುದೇ ಎಂಬ ಕಡೆ ಗಮನ ಹರಿಯತೊಡಗಿತು. ಹೋಗಿ ನೋಡೋಣವೆಂದರೆ ಆ ಭಯಂಕರ ಕತ್ತಲಲ್ಲಿ ಅದೂ ಸಾಧ್ಯವಿರಲಿಲ್ಲ. ಪೋಲೀಸರಿಗೆ ಸುದ್ಧಿಮುಟ್ಟಿಸಿ ಅವರಿಗೆ ದಿಕ್ಕುದೆಸೆಗಳನ್ನು ತಿಳಿಸಿ ಕಾಯತೊಡಗಿದೆವು.

ಅಷ್ಟರೊಳಗೆ ಅಲ್ಲಿಗೆ ಯಾವ ಪ್ರತಿನಿಧಿಗಳು ಬಂದು ನೋಡದಿದ್ದರೂ ನೋಡಲು ಸಾಧ್ಯವಿಲ್ಲದಿದ್ದರೂ ಊಹಾಪೋಹದ ಸುದ್ಧಿಗಳು ಶುರುವಾದವು. ಜನರು ತಮಗೆ ತಿಳಿತಿಳಿದಂತೆ ಸುದ್ಧಿ ಹಂಚತೊಡಗಿದರು. ಅದುವರೆಗೂ ‘ಭೂಕಂಪ’ ಎನ್ನುತ್ತಿದ್ದವರು, ಬೆಂಕಿ ಕಂಡಿತು ಎಂದಾಗ ಮತ್ತು ಆ ರಾತ್ರಿಯಲ್ಲಿಯೇ ಅಲ್ಲಿಗೆ ಹೋಗಿ ಚೆಲ್ಲಾಪಿಲ್ಲಿಯಾಗಿದ್ದ ನಾಲ್ಕೈದು ಹೆಣಗಳ ಫೋಟೋಗಳನ್ನು ಕೆಲವರು ಹಾಕಿದಾಗ “ಉಲ್ಕಾಪಾತ’ ಆಕಾಶದಿಂದ ಯಾವುದೋ ನಕ್ಷತ್ರವೋ ಏನೋ ಭೂಮಿಗೆ ಬಿದ್ದಿದೆ ಎಂದು ಸಂದೇಶ ಕಳಿಸತೊಡಗಿದರು. ಇನ್ನು ಕೆಲವು ಭೂಮಿಯಿಂದ ಮೇಲೆ ಬೆಂಕಿ ಬಂದಿದೆ ಎಂದರೆ ಅದು ‘ಜ್ವಾಲಾಮುಖಿ’ ಇರಬೇಕು ಎಂದು ಶಂಕಿಸಿ ಸಂದೇಶ ಹರಿಬಿಟ್ಟರು.ಇದು ಹೀಗೇ ಮುಂದುವರೆಯುತ್ತಿರಬೇಕಾದರೆ ಇದು ಮುನ್ಸೂಚನೆ ರಾತ್ರಿ11.30ಕ್ಕೆ ಇನ್ನೊಮ್ಮೆ ಆಗುತ್ತದೆ ಎಂಬ ಹೆದರಿಕೆಯ ಸಂದೇಶ ಹರಿದಾಡಿತು! ಜನ ಮಲಗುವಂತೆಯೇ ಇಲ್ಲ! ಅಲ್ಲಿಗೇ ಇದು ನಿಲ್ಲಲಿಲ್ಲ ಇದು ಆಗಿ ಅರ್ಧಗಂಟೆ ಒಳಗೆ ನನ್ನ ಮೊಬೈಲಿಗೆ ಸಂದೇಶ ಬಂತು ಅದು ಹೀಗಿತ್ತು, “ಇದು ಭೂಕಂಪ ಅಲ್ಲ. ಇದಕ್ಕೆ Air Blast ಎಂದು ಕರೆಯುತ್ತೇವೆ, ಇದು ಒಂದು ಭೂಮಿಯ ಪ್ರಕ್ರಿಯೆ air explosion ಆಗುವ ಭಾರಿ ಪ್ರಮಾಣದ ಅಲೆ ಯೊಂದು ಉತ್ಪತಿ ಆಗುತ್ತದೆ, ಆದ ಕಾರಣ ಭಾರಿ energy release ಆಗಿ ಇದರ ಫಲಿತಾಂಶ ಭಾರಿ ಸದ್ದು ಮತ್ತು ಭೂಕಂಪನ ದ ಒಂದು ಸಣ್ಣ ಅನುಭವವೂ ಸ ಆಗುತ್ತದೆ… ಇದರ energy ಒಂದು ಬೆಳಕಿನ Speed ಗಿಂತಲೂ ಹೆಚ್ಚಾಗಿದ್ದು ಮುಂದಕ್ಕೆ ಇದರ ತೀಕ್ಷ್ಣತೆ ಕಡಿಮೆ ಯಾಗುತಾ ಬರುತ್ತದೆ” ಇದು ಸಾಮಾನ್ಯವಾಗಿ ಆ ಕ್ಷೇತ್ರದಲ್ಲಿ ಪರಿಣಿತರಾದ ಭೂವಿಜ್ಞಾನಿಗಳಾರಾದರೂ ಹೇಳಬೇಕಾದ ಮಾತು. ಆದರೆ ಅದರಲ್ಲಿ ಯಾರ ಹೆಸರೂ ಇರಲಿಲ್ಲ. ಕಳಿಸಿದವರು ಯಾರೆಂದರೆ ಯಾರೋ ಆ ಬಗ್ಗೆ ವಿಶೇಷ ಜ್ಞಾನವಿಲ್ಲದ ಸಾಮಾನ್ಯ ವ್ಯಕ್ತಿ. ಇಂತಹ ಅಸಮಾನ್ಯ ಸಂದೇಶಗಳನ್ನು ಕಳಿಸುವಾಗ ಒಂದು ನಮಗೆ ಪರಿಣಿತಿ ಇರಬೇಕು. ಇಲ್ಲವೇ ಪರಿಣಿತಿ ಇಲ್ಲದಿದ್ದರೂ ಯಾರೋ ಹೀಗೆ ಕಳಿಸಿದ್ದಾರೆ ನೋಡಿ ಎಂಬ ಬರೆಹದೊಂದಿಗೆ ಸಂಶಯದಿಂದ ಓದುಗರು ನೋಡುವಂತೆಯಾದರೂ ಕಳಿಸಬೇಕು. ಹೀಗೆ ಮಾಡದೆ ಅವರೇ ವಿಜ್ಞಾನಿಗಳಂತೆ ಕಳಿಸತೊಡಗಿದರು!ಈ ಎಲ್ಲ ಊಹಾಪೋಹಗಳಿಗೆ ತೆರೆಯೆಳೆಯುವಂತೆ ನೈಜ ಅಂಶಗಳು ಘಟನೆ ನಡೆದ ಸುಮಾರು ಒಂದು ಗಂಟೆಯ ನಂತರ ಹೊರಬರತೊಡಗಿದವು.

ಅದು ಗಣಿಯಲ್ಲಿನ ಕಲ್ಲು ಸಿಡಿಸುವಿಕೆಯೂ ಆಗಿರಲಿಲ್ಲ. ಭೂಕಂಪವೂ ಆಗಿರಲಿಲ್ಲ. ಉಲ್ಕಾಪಾತವೂ ಆಗಿರಲಿಲ್ಲ. ಜ್ವಾಲಾಮುಖಿಯೂ ಆಗಿರಲಿಲ್ಲ. ಅಷ್ಟೇ ಏಕೆ ಒಂದೆರಡು ಸಲ ಪ್ರಸ್ತಾವಪಾದಂತೆ ಯಾರೋ ಇಟ್ಟ ಬಾಂಬ್ ಸ್ಪೋಟವೂ ಆಗಿರಲಿಲ್ಲ! ಕಲ್ಲುಗಣಿಗಾರಿಕೆಯಲ್ಲಿ ಬಳಸುವ ಸ್ಪೋಟಕಗಳನ್ನು ತುಂಬಿರುವ ವಾಹನವೊಂದು ಸ್ಪೋಟಗೊಂಡು ಈ ಭಯಾನಕ ದೃಶ್ಯ ನಿರ್ಮಾಣವಾಗಿತ್ತು! ಈ ಸ್ಪೋಟದಲ್ಲಿ ಸತ್ತವರ ಸಂಖ್ಯೆಯನ್ನು ಇಷ್ಟೇ ಎಂದು ಹೇಳುವುದು ಹೇಗೆ? ಅವರ ದೇಹದ ಒಂದೊಂದು ಭಾಗಗಳು ಒಂದೊಂದು ಕಡೆ ಛಿದ್ರವಾಗಿ ಹೋಗಿ ಬಿದ್ದಿವೆ. ಘಟನೆ ಏನು ಎಂಬುದು ಈ ಹಂತದಲ್ಲಿ ಸ್ಪಷ್ಟವಾಯಿತು ಆದರೆ ಘಟನೆಗೆ ಕಾರಣಗಳೇನು ಎಂಬುದು ಇನ್ನೂ ತಿಳಿಯಬೇಕು. ಈ ಸ್ಪೋಟ ಆಗುತ್ತಿದ್ದಂತೆ ನಮ್ಮ ನಗರದ ಕರೆಂಟ್ ಹೋಗಿ ಕತ್ತಲೆ ನಿರ್ಮಾಣವಾಯಿತು. ಈ ಚರ್ಚೆ ತೀವ್ರವಾಗುತ್ತಿದ್ದಂತೆಯೇ ನಾವು ಇನ್ನೇನೂ ಮಾಡಲಾಗದೇ ಮಲಗುವ ಧೈರ್ಯ ಮಾಡಿದೆವು.ಪೋಲೀಸರು ಸ್ಥಳಕ್ಕೆ ಹೋಗುವ ಮಾರ್ಗಗಳನ್ನು ಮುಚ್ಚಿ ಸೀಲ್ ಮಾಡಿದ್ದರು. ಸಂಬಂಧಪಟ್ಟವರನ್ನು ಬಿಟ್ಟರೆ ಉಳಿದಂತೆ ಸಾರ್ವಜನಿಕರನ್ನು ಅಲ್ಲಿಗೆ ಬಿಡುತ್ತಿರಲಿಲ್ಲ. ಅಲ್ಲಿ ಸ್ಪೋಟಕಗಳನ್ನು ತುಂಬಿರುವ ಆ ವಾಹನ ವಿದ್ಯುತ್ ಕಂಬಕ್ಕೆ ಹೊಡೆದು ಶಾರ್ಟ್ ಸರ್ಕಿಟ್ ಆಗಿ ಸ್ಪೋಟ ಸಂಭವಿಸಿತೇ ಅಥವಾ ಸಾಮಾನ್ಯವಾಗಿ ಮದ್ಯಪಾನಿಗಳಾಗಿರುವ ವಾಹನ ಚಾಲಕರ ಬೀಡಿ, ಸಿಗರೇಟು ಇತ್ಯಾದಿಗಳಿಂದ ಈ ದುರಂತ ಸಂಭವಿಸಿತೇ ಅಥವಾ ಇವಲ್ಲದ ಇನ್ನಾವುದೋ ಕಾರಣಕ್ಕೆ ಸಂಭವಿಸಿತೇ ಎಂಬ ನಿಖರ ಮಾಹಿತಿ ತನಿಖೆಯ ನಂತರವಷ್ಟೇ ಸ್ಪಷ್ಟವಾಗಿ ತಿಳಿಯಬಹುದಾದಂಥದ್ದು!ಈಗಾಗಲೇ ಇದು ರಾಜ್ಯ ಮಾತ್ರವಲ್ಲ ರಾಷ್ಟ್ರಮಟ್ಟದ ಸುದ್ಧಿಯಾಗಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

ಪ್ರಧಾನ ಮಂತ್ರಿಗಳು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಮಾತು ಆಡಿದ್ದಾರೆ. ಇವೆಲ್ಲವೂ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಆಡಬೇಕಾದ ಮಾತುಗಳೇ ಮತ್ತು ಮಾಡಬೇಕಾದ ಕೆಲಸಗಳೇ ಎಂಬುದು ಸರಿ. ಆದರೆ ಇಂತಹ ದುರಂತಗಳು ನಡೆದಾಗ ನಮ್ಮ ವ್ಯವಸ್ಥೆ ಸತ್ತವರಿಗೆ ಗಾಯಾಳುಗಳಿಗೆ ಒಂದಿಷ್ಟು ಪರಿಹಾರಕೊಟ್ಟು ತಪ್ಪಿತಸ್ಥರ ವಿರುದ್ಧ ಒಂದಿಷ್ಟು ಕೇಸುಗಳನ್ನು ಹಾಕಿ ಬಿಟ್ಟರೆ ಸಾಕೇ? ಅವು ಮಾಡಬೇಕಾದ ಕೆಲಸಗಳೇ. ಆದರೆ ಅವು ಮರುಕಳಿಸದಂತೆ ಏನಾದರೂ ಮಾಡಬಹುದೇ ಎಂಬುದರ ಕಡೆ ಗಮನಹರಿಸಿ ಕ್ರಮಕೈಗೊಳ್ಳುವುದು ಅತ್ಯಂತ ಮಹತ್ವದ್ದು. ಆದರೆ ಇಂತಹ ಕಾರ್ಯಗಳು ಆಗುವವೇ ಎಂಬುದು ಇಲ್ಲಿ ಪ್ರಶ್ನೆ.ಇಲ್ಲಿ ಸೇರಿದಂತೆ ಇಂತಹ ಗಣಿಗಾರಿಕೆಗಳನ್ನು ನಡೆಸುವವವರು ಸಾಮಾನ್ಯವಾಗಿ ಯಾರಾಗಿರುತ್ತಾರೆ? ಯಾವ ರಾಜಕೀಯ ಸಂಪರ್ಕವೂ ಇಲ್ಲದ ಸಾಮಾನ್ಯಜನರಂತೂ ಆಗಿರುವುದಿಲ್ಲ. ರಾಜಕೀಯ ನಾಯಕರೇ ಗಣಿಗಳ ಮಾಲೀಕರಾಗಿರುತ್ತಾರೆ. ಹಾಗಲ್ಲದಿದ್ದರೆ ಅವರ ಬಂಧುಬಾಂಧವರೋ, ಆಪ್ತರೋ ಇವುಗಳ ಒಡೆತನ ಹೊಂದಿರುತ್ತಾರೆ. ಈಗ ದುರಂತ ನಡೆದ ಹುಣಸೋಡಿನಲ್ಲಿಯ ಕಲ್ಲುಕ್ವಾರೆಗಳ ಒಡೆತನವು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಬಹುತೇಕ ಪ್ರಮುಖ ರಾಜಕೀಯ ಪಕ್ಷಗಳೆಲ್ಲವುಗಳಿಗೆ ಸೇರಿದ ಪ್ರಭಾವಿ ವ್ಯಕ್ತಿಗಳಿಗೆ ಸೇರಿವೆ ಎನ್ನಲಾಗುತ್ತಿದೆ. ಯಾರು ಯಾರಿಗೆ ಹೇಳುತ್ತಾರೆ? ಏನು ಹೇಳುತ್ತಾರೆ? ಇಂತಹ ದುರಂತ ಸಂಭವಿಸಿದಾಗ ಜನ ಉದ್ರಿಕ್ತರಾಗುವ ಸಾಧ್ಯತೆ ಇರುವುದರಿಂದ ಎಲ್ಲ ರಾಜಕೀಯ ಪಕ್ಷಗಳ ನಾಯಕರು, “ತಪ್ಪಿತಸ್ಥರು ಯಾರೇ ಇರಲಿ ಅವರು ನಮ್ಮ ಪಕ್ಷದವರಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳುವುದು ಅನಿವಾರ್ಯ. ಹಾಗೆ ಹೇಳುವುದರಿಂದ ಜನ ಕ್ಷೋಭೆಗೊಳ್ಳುವುದು ನಿಲ್ಲುತ್ತದೆ. ಆದರೆ ಮುಂದೆ ಏನಾಗಬೇಕೋ ಆ ಕೆಲಸಗಳು ಆಗುವುದು ವಿರಳ. ನಾಲ್ಕುದಿನ ಜನರ ಮನಸ್ಸು ಆ ಕಡೆ ಇರುತ್ತದೆ. ಆ ಮೇಲೆ ಜನ ತಮ್ಮ ತಮ್ಮ ಕೆಲಸಗಳ ಕಡೆಗೆ ಗಮನಕೊಟ್ಟು ಆ ಕಡೆಗೆ ಲಕ್ಷ ಕಡಿಮೆ ಮಾಡಿ ಕ್ರಮೇಣ ಅದನ್ನು ಮರೆತುಬಿಡುತ್ತಾರೆ. ಕೊನೆಗೆ ಕೇಸುಗಳು, ವ್ಯಾಜ್ಯಗಳು ಯಾವುದೋ ಒಂದು ಒಡಂಬಡಿಕೆಗಳಿಗೆ ಒಳಗಾಗಿ ತಣ್ಣಗಾಗುವುದು ಸಾಮಾನ್ಯ!ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಗಣಿಯಲ್ಲಿ ಕೆಲಸಮಾಡುವವರು ಅದರಲ್ಲಿಯೂ ಅಪಾಯಕಾರಿ ಸ್ಥಳಗಳಲ್ಲಿ ಕೆಲಸ ಮಾಡುವ ಕೆಲಸಗಾರರು ಸಾಮಾನ್ಯವಾಗಿ ಇಲ್ಲಿನ ಸ್ಥಳೀಯರಲ್ಲ. ಸ್ಥಳೀಯರನ್ನು ಈ ಕೆಲಗಳಿಗೆ ಒಡೆಯರು ನೇಮಿಸಕೊಳ್ಳುವುದೂ ಕಡಿಮೆ. ಇದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಇಂತಹ ದುರಂತಗಳು ಸಂಭವಿಸಿದಾಗ ದುರಂತಕ್ಕೊಳಗಾದ ವ್ಯಕ್ತಿಗಳ ಕಡೆಯವರು ಬಂದು ಗಲಾಟೆ ಮಾಡುವ ಸಾಧ್ಯತೆಗಳು ಇದ್ದೇ ಇರುತ್ತವೆ. ಇಂತಹವುಗಳನ್ನು ತಪ್ಪಿಸಲೆಂದೇ ದೂರದ ಬಿಹಾರ ಉತ್ತರ ಪ್ರದೇಶ ಕಡೆಯಿಂದ ಹೊಟ್ಟೆಪಾಡಿಗಾಗಿ ಬಂದ ಬಡವರನ್ನು ಇಂತಹ ಕೆಲಸಕ್ಕೆ ಇಡಲಾಗುತ್ತದೆ. ಅವರು ದುರಂತಕ್ಕೆ ಸಿಕ್ಕು ಸತ್ತಾಗ, ಅಷ್ಟೇ ಏಕೆ ಅವರನ್ನು ಕೊಂದುಹಾಕದರೂ ಹೇಳುವವರೂ ಇರುವುದಿಲ್ಲ; ಕೇಳುವವರೂ ಇರುವುದಿಲ್ಲ. ಇಲ್ಲಿನ ಗಣಿಗಾರಿಕೆಗೆ ರಾಜಕಾರಣಿಗಳು ಹೀಗೆ ಹಿಂದೆ ಮುಂದೆ ಅಕ್ಕಪಕ್ಕ ಇರುವಾಗ ಅವುಗಳಲ್ಲಿ ಅಕ್ರಮ ಎಷ್ಟು ಸಕ್ರಮ ಎಷ್ಟು ಎಂದು ನಿಖರವಾಗಿ ಪತ್ತೆಹಚ್ಚುವುದು ಸುಲಭವಲ್ಲ. ಎನ್ನು ಎರಡನೆಯವರು ಸಂಬಂಧಪಟ್ಟ ಭೂ ವಿಜ್ಞಾನ ಇಲಾಖೆ, ಪೋಲೀಸು ಅರಣ್ಯ ಇಲಾಖೆಗಳ ಅಧಿಕಾರಿಗಳು. ಅವರಿಗೆ ಗೊತ್ತಿಲ್ಲದಂತೆಯೇ ಇವೆಲ್ಲ ನಡೆಯುತ್ತವೆ ಎಂದು ತಿಳಿಯುವುದು ದಡ್ಡತನವಾಗಬಹುದು.ಇವೆಲ್ಲವುಗಳಿಗಿಂತ ಮುಖ್ಯವಾದದ್ದು ನಮ್ಮ ಜನರ ದೃಷ್ಟಿಕೋನ. ಈ ಗಣಿಗಾರಿಕೆಯ ಅಪಾಯಗಳ ಬಗ್ಗೆ ಪರಿಸರವಾದಿಗಳು ನೈಜಕಾಳಜಿಯಿಂದ ಧರಣಿ, ಚಳವಳಿ ಮಾಡುವಾಗ ನಮ್ಮ ಜನರು ಅವರನ್ನು, ದುಡ್ಡಿಗಾಗಿ ಚಳವಳಿ ಮಾಡುವವರೆಂದೂ, ನೈಜ ಕಾಳಜಿ ಇಲ್ಲದವರೆಂದೂ ಹಿಯ್ಯಾಳಿಸುವುದೇ ಹೆಚ್ಚು. ಅನೇಕ ಸಂದರ್ಭಗಳಲ್ಲಿ ಅವರನ್ನು ವಿಲನ್ ಗಳಾಗಿ ಮಾಡಿಬಿಡುವುದೂ ಉಂಟು! ರಸ್ತೆಯೊಂದನ್ನು ಅಗಲಮಾಡಬೇಕಾದಾಗ ಮರಕಡಿಯಬೇಡಿ ಎಂದು ಪರಿಸರವಾದಿಗಳು ಹೇಳಿದಾಗ ಆಧುನಿಕತೆಗೆ ಒಗ್ಗಿಕೊಂಡ ನಮ್ಮ ಜನ ಅವರನ್ನು ಅಭಿವೃದ್ಧಿಯ ವಿರೋಧಿಗಳೆಂದು ಕರೆದು ಅವರನ್ನು `ಬಾಡಿಗೆ ಚಳವಳಿಗಾರರು’ ಎಂದು ಹಂಗಿಸುವುದು ಸಾಮಾನ್ಯ. “ರಸ್ತೆಬದಿ ಮರಕಡಿಯುವುದನ್ನು ವಿರೋಧಿಸುವ ಇವರು ಕಾಡಿನಲ್ಲಿ ಸಾವಿರಾರು ಮರಕಡಿಯುವಾಗ ಏನು ಮಾಡುತ್ತಿರುತ್ತಾರೆ?” ಎಂಬುದು ಇವರ ವಾದ. ಅಂದರೆ ಚಳವಳಿ ಮಾಡುವವರನ್ನು ಸಂಬಳ ಕೊಟ್ಟು ಚಳವಳಿ ಮಾಡಲಿಕ್ಕೆ ಇಡಲಾಗಿದೆ. ಇವರೇ ರಾತ್ರಿ ಕಾಡಿನಲ್ಲಿ ಮರಕಡಿಯುವುದನ್ನೂ ವಿರೋಧಿಸಬೇಕಿತ್ತು ಎಂಬುದು ಇವರ ಮಾತಿನ ಧಾಟಿ. ಪರಿಸರ ರಕ್ಷಣೆಯಲ್ಲಿ ಅವರು ಎರಡನ್ನೂ ಮಾಡಲಿಕ್ಕೆ ಆಗದಿದ್ದರೆ ಒಂದನ್ನಾದರೂ ಮಾಡಿದರು ಆದರೆ ವಿದ್ಯಾವಂತರಾದ ನಾವೇನು ಮಾಡಿದೆವು (ಟೀಕೆ ಮಾಡುವುದನ್ನು ಬಿಟ್ಟು) ಎಂಬ ಪ್ರಶ್ನೆ ಬಹುತೇಕ ನಮ್ಮ ವಿದ್ಯಾವಂತ ಅವಿವೇಕಿಗಳಿಗೆ ಎದುರಾಗುವುದಿಲ್ಲ.ಇಲ್ಲಿಯೂ ಏನೆಲ್ಲ ಆಗಬಹುದು?

ಸಧ್ಯಕ್ಕೆ ಗಾಯಮಾಯುವವರೆಗೆ ಗಣಿಗಳು ಮುಚ್ಚಲ್ಪಡಬಹುದು. ನಂತರ ನಮ್ಮ ಪ್ರಭಾವಿ ನಾಯಕರೇ ಗಣಿ ಕಾರ್ಮಿಕರಿಂದ ‘ನಮ್ಮ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಗಣಿ ಕೆಲಸ ಆರಂಭಿಸಿ’ ಎಂದು ಚಳವಳಿ ಮಾಡಿಸಬಹುದು. ಅಧಿಕಾರಿಗಳು “ಮನೆಕಟ್ಟಲು ಕಲ್ಲು ಬೇಡವೇನ್ರೀ ನೀವು ಮನೆ ಕಟ್ಟಿಕೊಂಡಂತೆ ಉಳಿದವರು ಮನೆಕಟ್ಟಿಕೊಳ್ಳುವುದು ಬೇಡವೇ?” ಎಂದು ಚಳವಳಿಗಾರರನ್ನೇ ದಬಾಯಿಸಬಹುದು. ಇನ್ನು ನಮ್ಮ ಜನ ಇವತ್ತು ರಾಜಕೀಯ ಪಕ್ಷಗಳಲ್ಲಿ ಗುಂಪೀಕರಿಸಲ್ಪಟ್ಟಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ‘ಈ ದುರಂತದ ನೆಪ ಮಾಡಿಕೊಂಡು ನಮ್ಮ ನಾಯಕರ ಪ್ರತಿಷ್ಠೆಗೆ ಧಕ್ಕೆ ತರಲು ನಮ್ಮ ವಿರೋಧಿಗಳು ಹವಣಿಸುತ್ತಿದ್ದಾರೆ’ ಎಂದು ಅವರು ತಮ್ಮ ತಮ್ಮ ನಾಯಕರ ಪರವಾಗಿ ತಮಟೆ ಬಡಿಯತೊಡಗಬಹುದು. ಅಲ್ಲಿಗೆ ಸಾಮಾನ್ಯರ ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಬಿಡುತ್ತದೆ. ಹಾಗಾಗಬಾರದು ಅನ್ನುವುದಾದರೆ ಎಲ್ಲರೂ ತಮ್ಮ ತಮ್ಮ ವ್ಯಕ್ತಿಗತ ಹಿತಾಸಕ್ತಿ ಪ್ರತಿಷ್ಠೆ, ರಾಜಕೀಯ ಬೂಟಾಟಿಕೆ, ಲಂಚ, ಇವುಗಳಾಚೆಗೆ ಬಂದು ಮಾನವೀಯ ನೆಲೆಯಲ್ಲಿ ಒಂದು ಕ್ಷಣ ವಿಚಾರಿಸಿ ಕಾರ್ಯಪ್ರವೃತ್ತರಾಗುವ ಅವಶ್ಯಕತೆ ಇದೆ.

-ಡಾ, ರಾಜೇಂದ್ರ ಬುರಡಿಕಟ್ಟಿ22-01-2021

ಟಿವಿಯ ಗಂಟಲಲ್ಲಿ ಸಿಕ್ಕಿತು ನನ್ನದೊಂದು ವನ್‌ ಬೈ ಟೂ ಬೈಟ್‌ !

ಶಿವಮೊಗ್ಗ ಬಳಿಯ ಡೈನಮೈಟ್‌ ಸ್ಫೋಟದ ಸುದ್ದಿ ಬೆಳಗಿನಿಂದ ಎಲ್ಲ ಚಾನೆಲ್ಲುಗಳಲ್ಲೂ ಬರುತ್ತಿತ್ತು. ನಾನೂ ಒಂದು ಬೈಟ್‌ ಕೊಡಬೇಕೆಂದು ಚಾನೆಲ್‌ಗಳಿಂದ ಕರೆ ಬರುತ್ತಿತ್ತು. ಎರಡು ಚಾನೆಲ್‌ ಗಳಿಗೆ ನಾನು ʼಆಗಲ್ಲ, ಪೂರ್ತಿ ಮಾಹಿತಿ ಗೊತ್ತಿಲ್ಲʼ ಅಂದೆ. ಒಂದು ಚಾನೆಲ್ಲಂತೂ ಮುನ್ಸೂಚನೆ ನೀಡದೇ ನೇರವಾಗಿ ಆಂಕರ್‌ ಲಲನೆಗೆ ಕನೆಕ್ಟ್‌ ಮಾಡಿಯೇ ಬಿಟ್ಟಿತು. ಆಕೆ ಅತ್ತ ಸ್ಟುಡಿಯೋದಿಂದ ಜೋರು ದ್ವನಿಯಿಂದ- “ಈ ಬಗ್ಗೆ ನಮ್ಮೊಂದಿಗೆ ಮಾತಾಡಲು ವಿಜ್ಞಾನ ಲೇಖಕ, ಪರಿಸರ ಚಿಂತಕ ನಾಗೇಶ ಹೆಗಡೆಯವರು ಲೈನಲ್ಲಿದ್ದಾರೆ…. ನಮಸ್ಕಾರ ಸರ್‌.. ಏನಂತೀರಾ? ಈ ಒಂದು ದುರ್ಘಟನೆಗೆ ಯಾರು ಕಾರಣ, ಇಷ್ಟೊಂದು ಮುಗ್ಧ ಜನರ ಬಲಿ ಆಯ್ತಲ್ಲ? ಯಾಕೆ ಹೀಗೆಲ್ಲ ಆಗ್ತದೆ? ಅಷ್ಟೊಂದು ಡೈನಮೈಟ್‌ ಇವರಿಗೆ ಎಲ್ಲಿಂದ ಸಿಗ್ತದೆ? ಇಂಥ ನಿರ್ಲಕ್ಷ್ಯಕ್ಕೆ ಯಾರನ್ನು ಹೊಣೆ ಮಾಡಬೇಕು ಅಂತೀರಾ?” ಎಂಬಿತ್ಯಾದಿ ಒಂದೇ ಉಸುರಿನಲ್ಲಿ ಹೇಳಿದಳು. ನಾನೆಂದೆ:”ಅಲ್ಲಾರೀ ಈ ಬಾರಿಯ ಸ್ಫೋಟದಲ್ಲಿ ಐದು ಮಂದಿ ದುರಂತಕ್ಕೀಡಾದ್ರು. ಐದು ಮಂದಿ ಮನುಷ್ಯರು ಸತ್ತಿದ್ದರಿಂದ ನೀವು ದೊಡ್ಡದಾಗಿ ಸುದ್ದಿ ಮಾಡ್ತಾ ಇದೀರಿ. ಅವರು ಪಾಪ, ಸಾಯಬಾರದಾಗಿತ್ತು, ದುರ್ದೈವಿಗಳು….. ಆದರೆ ನಾಡಿನ ನೂರಾರು ಗಣಿಗಳಲ್ಲಿ, ಕ್ವಾರಿಗಳಲ್ಲಿ ದಿನವೂ ಇಂಥ ಸ್ಫೋಟಗಳು ಆಗ್ತಾ ಇರ್ತವೆ. … ಎಲ್ಲ ಕಡೆ ಅಕ್ರಮ ಸ್ಫೋಟಕಗಳ ದಾಸ್ತಾನು… ಪ್ರತಿ ಬಾರಿ ಸ್ಫೋಟ ಆದಾಗಲೂ ಸುತ್ತಲಿನ ಒಂದೆರಡಲ್ಲ, ಹದಿನೈದು ಕಿಲೊಮೀಟರ್‌ ದೂರದವರೆಗೆ ಎಷ್ಟೊಂದು ವನ್ಯಜೀವಿಗಳು -ಪಕ್ಷಿಗಳು, ಸ್ತನಿಗಳು, ಸರೀಸೃಪಗಳು, ಸಾಯ್ತಾನೇ ಇರ್ತವೆ; ದೂರದ್ದು ಬಿಡಿ, ಬೆಂಗಳೂರಿನ ಪಕ್ಕದ ನನ್ನ ತೋಟದ ಅಂಚಿನಲ್ಲೇ ಸ್ಫೋಟ ಆಗ್ತಾ ಇರ್ತವೆ. ಎಲ್ಲ ಕಾನೂನು ಬಾಹಿರ ಕೆಲಸಗಳೇ ಆಗ್ತಾ ಇರ್ತವೆ …..

ಎಂದೂ ಯಾವ ಮಾಧ್ಯಮದವರೂ ಆ ವಿಷಯದ ಬಗ್ಗೆ ತನಿಖೆ ಮಾಡಿ ವರದಿ ಮಾಡಿದ್ದು ನನಗಂತೂ ಗೊತ್ತಿಲ್ಲ. ಈಗ ಐದು ಮಂದಿ ಮನುಷ್ಯರ ಪ್ರಾಣ ಹೋಗಿದ್ದಕ್ಕೆ ಸರಕಾರಿ ಇಲಾಖೆಗಳಷ್ಟೇ ಅಲ್ಲ, ನಾವು ಮಾಧ್ಯಮದವರೂ ಅಷ್ಟೇ ಹೊಣೆ ಹೊರಬೇಕಲ್ವಾ? ಈ ಜಗತ್ತು ಇಷ್ಟೊಂದು ಮನುಷ್ಯ ಕೇಂದ್ರಿತ ಆಗಿಬಿಟ್ಟರೆ ಹೇಗೆ…….”ಆ ಕಡೆಯಿಂದ ಖಟ್‌ ಅಂತ ಸದ್ದು ಬಂತು.. ಫೋನ್‌ ಮೌನವಾಯಿತು. ಸ್ಟುಡಿಯೋದ ಹಿನ್ನೆಲೆಯಲ್ಲಿ ಕೇಳಿಸುತ್ತಿದ್ದ ಜೋರು ದನಿ, ಹಿನ್ನೆಲೆ ಗಲಾಟೆ ಎಲ್ಲ ಬಂದ್‌ ಆಯಿತು. ಪ್ರಾಯಶಃ ನನ್ನ ನೇರ ಸಂವಾದವನ್ನು ಅಲ್ಲಿಗೇ ಕಟ್‌ ಮಾಡಿದರೆಂದು ಕಾಣುತ್ತದೆ. ನಾನು ಇಷ್ಟೊಂದು ಬ್ಲಂಟ್‌ ಆಗಿ ಪ್ರತಿಕ್ರಿಯೆ ಕೊಡಬಾರದಿತ್ತೇನೊ. ಎಲ್ಲರ ಹಾಗೆ ಸರಕಾರದ ಗಣಿ ಇಲಾಖೆ, ರೆವಿನ್ಯೂ ಇಲಾಖೆ, ಫಾರೆಸ್ಟ್‌ ಇಲಾಖೆ, ಲೇಬರ್‌ ಇಲಾಖೆ, ಪೊಲೀಸ್‌ ಇಲಾಖೆ, ಸಾರಿಗೆ ಇಲಾಖೆ, ಜಿಲ್ಲಾಧಿಕಾರಿ ಕಚೇರಿ ಇತ್ಯಾದಿಗಳ ಜೊತೆ ರಾಜಕಾರಣಿಗಳನ್ನು ಮಾತ್ರ ಟೀಕೆ ಮಾಡಬೇಕಿತ್ತೇನೊ. ಮಾಧ್ಯಮವನ್ನೂ ಆ ಎಲ್ಲ ತಪ್ಪಿತಸ್ಥರ ಸಾಲಿಗೆ ಸೇರಿಸಬಾರದಿತ್ತೇನೊ?ಅಂತೂ ನನ್ನ ಬೈಟು ಹೀಗೆ ಅರ್ಧಕ್ಕೇ ಕಟ್ಟಾಗಿ ವನ್‌ ಬೈಟೂ ಬೈಟಾಯಿತು!ಹೇಳಿ…. ನಾನು ಹೇಳಿದ್ದರಲ್ಲಿ ತಪ್ಪಿದೆಯೆ?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *