

ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚುತಿದ್ದು ಸಾರ್ವಜನಿಕರು ಆತಂಕಕ್ಕೀಡಾಗುವಂತೆ ವಿದ್ಯಮಾನ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಡಿ, ಚಿರತೆ,ಕಾಡುಕೋಣಗಳು ಬೆಳೆ, ಸಾಕುಪ್ರಾಣಿಗಳನ್ನು ಭಕ್ಷಿಸುತಿದ್ದು ಕಾಡಂಚಿನಲ್ಲಿ ಬದುಕುತ್ತಿರುವ ಜನರು ಈ ಕಾಡುಪ್ರಾಣಿಗಳ ಉಪಟಳದಿಂದ ಬೇಸತ್ತಿದ್ದಾರೆ.
ಸಿದ್ಧಾಪುರ-ಶಿರಸಿ, ಸೊರಬಾ ಭಾಗಗಳಲ್ಲಿ ಚಿರತೆಗಳು ಓಡಾಡುತಿದ್ದು ಅವು ನಾಡಿನ ಕೋಳಿ-ನಾಯಿಗಳ ಮೇಲೆ ಕಣ್ಣಿಟ್ಟಿರುವುದರಿಂದ ಇವುಗಳಿಂದ ಸಾರ್ವಜನಿಕರಿಗೂ ತೊಂದರೆಯಾಗುವ ಆತಂಕ ವ್ಯಕ್ತವಾಗಿದೆ. ಬುಧವಾರ ರಾತ್ರಿ ಕಪ್ಪುಚಿರತೆಯೊಂದು ಐಗೋಡು ಬಳಿಯ ಜಕ್ರಗುಂಡಿ ಬಳಿಯ ರೈತರೊಬ್ಬರ ಸಾಕುನಾಯಿಯನ್ನು ಹೊತ್ತೊಯ್ದು ತಿಂದಿದೆ. ಸಿದ್ಧಾಪುರ ತಾಲೂಕಿನಲ್ಲಿ ಓಡಾಡುತ್ತಿರುವ ಕಪ್ಪು-ಮತ್ತು ಚಿಟ್ಟೆ ಹುಲಿ ಅಥವಾ ಚಿರತೆಗಳು ಹಲವು ಭಾಗಗಳಲ್ಲಿ ಕಾಣಿಸಿಕೊಂಡಿದ್ದು ಇವುಗಳ ಬಗ್ಗೆ ಜನರಲ್ಲಿ ಭಯ-ಭೀತಿ ಉಂಟಾಗುವಂತಾಗಿದೆ.
ಕಾಡುಕೋಣ-ಕಾಡು ಹಂದಿಗಳ ಕಾಟ- ಸಿದ್ಧಾಪುರ-ಶಿರಸಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆ ಮತ್ತು ಶಿವಮೊಗ್ಗಗಳಲ್ಲಿ ಕಾಡುಕೋಣ, ಕಾಡುಹಂದಿಗಳ ಕಾಟ ಮಿತಿಮೀರಿದ್ದು ಇವು ರೈತರ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಇಂಥ ಕಾಡುಪ್ರಾಣಿ ದಾಳಿಗೆ ಹಾಳಾದ ಬೆಳೆಗಳಿಗೆ ಯೋಗ್ಯ ಪರಿಹಾರ ಸಿಗುತ್ತಿಲ್ಲ. ಜನರು-ರೈತರಿಗೆ ತೊಂದರೆಮಾಡುತ್ತಿರುವ ಕಾಡುಪ್ರಾಣಿಗಳನ್ನು ಹೊಡೆದರೆ ಕಠಿಣ ಶಿಕ್ಷೆ ವಿಧಿಸುವ ಸರ್ಕಾರಿ ವ್ಯವಸ್ಥೆ ಕಾಡುಪ್ರಾಣಿಗಳಿಂದಾಗುತ್ತಿರುವ ಹಾನಿ, ತೊಂದರೆಗಳ ಬಗ್ಗೆ ಸೂಕ್ತ ಕ್ರಮ, ವ್ಯವಸ್ಥೆ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.





