

ಸಿದ್ದಾಪುರ,
ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಅಗದ ಹೊರತು ರೈತರ ಮುಖದಲ್ಲಿ ಮಂದಹಾಸ ಕಾಣಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಮುಂದಾಗಿದ್ದೇವೆ. ಮುಖ್ಯವಾಗಿ ರೈತರ ಜಮೀನಿಗೆ ನೀರಿನ ಅವಶ್ಯಕತೆ ಇರುವುದರಿಂದ ಆ ಕುರಿತು ಯೋಜನೆ ತರಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾದಲ್ಲಿ ಅಘನಾಶಿನಿ ಸಾಂಬಾರು ಬೆಳೆಗಳ ಉತ್ಪಾದಕರ ಕಂಪನಿಗೆ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯ ಶೇ.40ರ ಸಹಾಯಧನದಲ್ಲಿ ನಿರ್ಮಾಣವಾದ ಗೋದಾಮು ಕಟ್ಟಡ ಹಾಗೂ ಕೃಷಿ ಇಲಾಖೆಯ ನೆರವಿನಿಂದ ನಿರ್ಮಾಣವಾಗಿರುವ ಕೃಷಿಯಂತ್ರೋಪಕರಣಗಳ ಸೇವಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆಯ ಒಂದೊಂದು ಭಾಗದಲ್ಲಿ ಒಂದೊಂದು ಸಮಸ್ಯೆ ಇದೆ. ಅವುಳೆಲ್ಲವನ್ನು ಕಲೆಹಾಕಿ ಸಮಗ್ರ ಅಭಿವೃದ್ಧಿಗೆ ಎಲ್ಲ ಶಾಸಕರ ಸಹಕಾರ ಪಡೆದು ಮಾಡಲಾಗುತ್ತಿದೆ. ರೈತರು ಆರ್ಥಿಕವಾಗಿ ಸುಧಾರಿಕೊಳ್ಳಬೇಕಾದರೆ ಅವರ ಜಮೀನಿಗೆ ನೀರಿನ ಅವಶ್ಯಕತೆ ಇದೆ. ಆ ಕುರಿತು ಯೋಜನೆ ಮಾಡಲಾಗುತ್ತಿದೆ.
ಹಲವು ವರ್ಷಗಳಿಂದ ಅತಿಕ್ರಮಣ ಸಮಸ್ಯೆ ಎದುರಿಸುತ್ತಿದ್ದು ಅದಕ್ಕೆ ಸೂಕ್ತ ಪರಿಹಾರಕಂಡುಕೊಳ್ಳುವುದಕ್ಕೆ ಹಾಗೂ ಅದರ ನಿಯಮಾವಳಿಯನ್ನು ಸರಳೀಕರಣಗೊಳಿಸುವುದಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾ ವನೆ ಸಲ್ಲಿಸಲಾಗಿದೆ. ಪಪಂ ವ್ಯಾಪ್ತಿಯಲ್ಲಿ ಫಾರಂ ನಂ.3 ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ ಇ ಸ್ವತ್ತಿನ ಸಮಸ್ಯೆಯಿಂದ ಜನತೆ ಸಂಕಷ್ಟ ಅನುಭವಿಸುತ್ತಿರುವ ಕುರಿತು ಸರ್ಕಾರದ ಗಮನಕ್ಕೆ ಬಂದಿದ್ದು ಅದಕ್ಕೆ ಶೀಘ್ರದಲ್ಲಿಯೇ ಪರಿಹಾರ ಕಂಡುಕೊಳ್ಳಲಾಗುವುದು.
ಆದರೆ ಅಸಾಮಿ ಖಾತೆ ಸಾಲದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ತುಸು ಕಷ್ಟ ಎಂದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಗೋದಾಮು ಕಟ್ಟಡ ಹಾಗೂ ಕೃಷಿಯಂತ್ರೋಪಕರಣಗಳ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ ರೈತ ಸಂಘಟನೆಗಳು ಹೆಚ್ಚಾಗಬೇಕು ಹಾಗೂ ಬಲಗೊಳ್ಳಬೇಕಾಗಿದೆ. ಕೃಷಿಯಲ್ಲಿ ಹೊಸ ಹೊಸ ಯಂತ್ರಗಳನ್ನು ಬಳಕೆ ಮಾಡುವುದರ ಮೂಲಕ ಆರ್ಥಿಕವಾಗಿ ಸುಧಾರಿಸಿಕೊಳ್ಳಬೇಕು. ಅಘನಾಶಿನಿ ಸಾಂಬಾರು ಮಂಡಳಿ ತನ್ನದೇ ಆದ ಬ್ರ್ಯಾಂಡ್ ಹೊಂದಬೇಕು. ಆ ನಿಟ್ಟಿನಲ್ಲಿ ರೈತರಿಗೆ ಅನುಕೂಲವಾಗವ ಹಾಗೆ ಕೆಲಸಮಾಡಬೇಕು. ರೈತರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆಗಳನ್ನು ತರುತ್ತಿದ್ದು ಅದು ಸಮರ್ಪಕವಾಗಿ ಬಳಕೆ ಆಗಬೇಕು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ವಿದ್ಯಾ ಪಿ.ನಾಯ್ಕ, ತಾಪಂ ಅಧ್ಯಕ್ಷ ಸುಧೀರ್ ಗೌಡರ್, ಜಿಪಂ ಸದಸ್ಯ ಎಂ.ಜಿ.ಹೆಗಡೆ ಗೆಜ್ಜೆ, ಕೃಷಿ ಇಲಾಖೆಯ ನಟರಾಜ್ ಶಿರಸಿ, ತಾಪಂ ಸದಸ್ಯ ವಿವೇಕ ಭಟ್ಟ, ತಾಲೂಕು ಸಹಾಯಕ ತೋಟಗಾರಿಕಾ ನಿರ್ದೇಶಕ ಅರುಣ ಎಚ್.ಜಿ. ಪಪಂ ಸದಸ್ಯ ಮಾರುತಿ ನಾಯ್ಕ ಹೊಸೂರು ಇದ್ದರು.
ಇದೇ ಸಂದರ್ಭದಲ್ಲಿ ಹಾರ್ಸಿಕಟ್ಟಾ ಗ್ರಾಪಂವತಿಯಿಂದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರನ್ನು ಸನ್ಮಾನಿಸಲಾಯಿತು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಹೆಗಡೆ ಕುಂಬಾರಕುಳಿ, ಲೋಕೇಶ ಹೆಗಡೆ, ದರ್ಶನ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

ಶ್ರೀಮದ್ ಭಾಗವತ ಸಪ್ತಾಹ- ಸಿದ್ದಾಪುರ
ಸ್ಥಳೀಯ ಶಂಕರ ಮಠ ಹಾಗೂ ಭುವನಗಿರಿಯ ಸುಷಿರ ಸಂಗೀತ ಪರಿವಾರದ ಆಶ್ರಯದಲ್ಲಿ ಆಯೋಜಿಸಿರುವ ಶ್ರೀಮದ್ ಭಾಗವತ ಸಪ್ತಾಹಕ್ಕೆ ಶಿರಳಗಿಯ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಸೋಮವಾರ ಚಾಲನೆ ನೀಡಿದರು.
ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ಸುಷಿರ ಸಂಗೀತ ಪರಿವಾರದ ಸಂಚಾಲಕ ನಾರಾಯಣ ಹೆಗಡೆ ಕಲ್ಲಾರೆಮನೆ, ಟಿ.ಜಿ. ಹೆಗಡೆ. ಎ.ಎಸ್.ಹೆಗಡೆ, ವಿ.ಶೇಷಗಿರಿ ಭಟ್ಟ ಗುಂಜಗೋಡ ಇತರರಿದ್ದರು.
ಶ್ರೀಮದ್ ಭಾಗವತದ ಕುರಿತು ಉಪನ್ಯಾಸ ನೀಡಿದ ಶ್ರೀಗಳು ಭಾಗವತ ಕೇಳುವುದು ಸುಖದಾಯಕ. ವೇದಾಂತ ಕೇಳುವುದು ಕಷ್ಟ. ವೇದ ಯಾವಾಗಲು ಆಜ್ಞೆ ಮಾಡುತ್ತದೆ. ವಿನಂತಿಸಿಕೊಳ್ಳುವುದಿಲ್ಲ. ವೇದವ್ಯಾಸರು ವೇದಗಳನ್ನು ಸಂಪಾದಿಸಿದ್ದರು. ರಚಿಸಿದ್ದಲ್ಲ. ಪುರಾಣ ಓದಿದರೆ ಸಾಕು. ಎಲ್ಲ ವಿಷಯವೂ ತಿಳಿಯುತ್ತದೆ. ಕೃಷ್ಣ ಎಂದರೆ ಆನಂದ. ಎಲ್ಲಿ ಕೃಷ್ಣ ಇದ್ದಾನೊ ಅಲ್ಲಿ ಆನಂದ ನೆಲೆಸಿರುತ್ತದೆ. ಶ್ರೀಮದ್ ಭಾಗವತವು ಪರೀಕ್ಷಿತ ಮಹಾರಾಜನು ಸುಖದೇವ ಸ್ವಾಮಿಗಳಲ್ಲಿ ಕೇಳುವ ಪ್ರಶ್ನೆಗಳೊಂದಿಗೆ ಪ್ರಾರಂಭವಾಗುತ್ತದೆ. ಮರಣ ಸ್ಥಿತಿಯಲ್ಲಿ ಇದ್ದಾಗ ಮನುಷ್ಯ ಏನು ಮಾಡಬೇಕೆಂದು ಪರೀಕ್ಷಿತ ಕೇಳಿದಾಗ ಸುಖದೇವರು ನಿರಂತರ ಭಗವಂತನನನ್ನು ನೆನೆಯಬೇಕೆಂದು ಹೇಳಿದರು. ಅದರಂತೆ ನಾವು ಸಹ ನಿರಂತರ ಭಗವಂತನ ನಾಮಸ್ಮರಣೆ ಮಾಡಬೇಕು ಎಂದು ಶ್ರೀಗಳು ನುಡಿದರು.
ಗಾಯನದಲ್ಲಿ ಜಯರಾಮ ಭಟ್ಟ ಹೆಗ್ಗಾರಳ್ಳಿ, ಹಾರ್ಮೋನಿಯಂನಲ್ಲಿ ಸಂಜಯ ಭಟ್ಟ ಹಾಗೂ ತಬಲಾದಲ್ಲಿ ನಿತಿನ್ ಕಲಗದ್ದೆ ಸಹಕರಿಸಿದರು. ಟಿ.ಜಿ.ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ಸಿದ್ದಾಪುರ
ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ವಾರ್ಷಿಕ ಸಮಾರಾಧನೆ ಪ್ರಯುಕ್ತ ವಿವಿಧ ಧಾರ್ಮಿಕ, ಅನ್ನಸಂತರ್ಪಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ದೇವಸ್ಥಾನದ ಅರ್ಚಕರಾದ ವಿ.ಶಿವರಾಮ ಜೋಶಿ ಹಾಗೂ ವಿ.ಗೋಪಾಲ ಜೋಶಿ ಅವರ ನೇತೃತ್ವದಲ್ಲಿ ಅಥರ್ವಶೀರ್ಷ ಹವನ, ಪಾರಾಯಣ, ದುರ್ಗಾಸೂಕ್ತ ಹವನ, ಧನ್ವಂತರಿ ಹವನ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು.
ನಂತರ ದುರ್ಗಾವಿನಾಯಕ ದೇವಸ್ಥಾನದ ಸಭಾಂಗಣದದಲ್ಲಿ ನಡೆದ ಗೌರವ ಸನ್ಮಾನದಲ್ಲಿ ಹಳೆ ಹಾಡಿನ ಸಂಗ್ರಹಕಾರ ಶ್ರೀಕಾಂತ ಹೆಗಡೆ ಪೇಟೆಸರ ಅವರು ಸುಮಿತ್ರಾ ಕಮಲಾಕರ ಹೆಗಡೆ ಹುಕ್ಲಮಕ್ಕಿ ಹಾಗೂ ರಾಧಾ ಕೃಷ್ಣ ಹೆಗಡೆ ಉಪ್ಪಡಿಕೆ ಅವರಿಗೆ ಗೌರವ ಸನ್ಮಾನ ಮಾಡಿದರು. ಇದೇ ಸಂದರ್ಭದಲ್ಲಿ ಗೋಪಾಲ ಹೆಗಡೆ ಹುಲಿಮನೆ ಅವರು ಶ್ರೀಕಾಂತ ಹೆಗಡೆ ಪೇಟೆಸರ ಅವರನ್ನು ಸನ್ಮಾನಿಸಿ ಗೌರವಿಸಿದರು.
ಸುಮಿತ್ರಾ ಹೆಗಡೆ ಹುಕ್ಲಮಕ್ಕಿ, ರಾಧಾ ಹೆಗಡೆ ಉಪ್ಪಿಡಿಕೆ ಹಾಗೂ ಸುಮಿತ್ರಾ ಹೆಗಡೆ ಹೊಂಡಗಾಸಿಗೆ ಅವರು ಹವ್ಯಕ ಹಳೆ ಹಾಡನ್ನು ಹಾಡಿ ರಂಜಿಸಿದರು. ದೇವಸ್ಥಾನದ ಮೊಕ್ತೇಸರ ಶ್ರೀಧರ ಎಂ.ಹೆಗಡೆ ಪೇಟೆಸರ ಅಧ್ಯಕ್ಷತೆವಹಿಸಿದ್ದರು. ಶ್ರೀಪಾದ ಹೆಗಡೆ ಕಲ್ಮನೆ ನಿರ್ವಹಿಸಿದರು.
ನಂತರ ವಾಜಗದ್ದೆ ಸಹಿಪ್ರಾ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ, ಗೀತಾ ಹೆಗಡೆ ಮುಂಡಿಗೇಸರ ಹಾಗೂ ಊರ ಮಹಿಳೆಯರಿಂದ ಹಳೆಯ ಹವ್ಯಕ ಹಾಡುಗಳ ಕಾರ್ಯಕ್ರಮ, ಸಂಜೆ ದಿಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದವು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
