

ಸಂಸದ ಅನಂತ್ ಕುಮಾರ್ ಹೆಗಡೆ ಸತ್ತರೇನು? ಇದ್ದರೇನು? ಎಂದು ಮಾಜಿ ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಕಾರವಾರ: ಸಂಸದ ಅನಂತ್ ಕುಮಾರ್ ಹೆಗಡೆ ಸತ್ತರೇನು? ಇದ್ದರೇನು? ಎಂದು ಮಾಜಿ ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಸಂಸದ ಅನಂತಕುಮಾರ ಹೆಗಡೆ ಸತ್ರೇನು, ಬದುಕಿದ್ರೇನು, ಏನೂ ಲೆಕ್ಕಕ್ಕಿಲ್ಲ. ಹೇಗೋ ಅವನು ಐದು ವರ್ಷ ನಮ್ಮ ದೃಷ್ಟಿಯಲ್ಲೇ ಇರಲ್ಲ. ಹೀಗಾಗಿ ಅವನ ಅನಾರೋಗ್ಯದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ನಾಲಿಗೆ ಹರಿಬಿಟ್ಟಿದ್ದಾರೆ.
ಮಾಧ್ಯಮದೆದುರು ಮಾತನಾಡಿರುವ ಆನಂದ್ ಆಸ್ನೋಟಿಕರ್, ಅವನಿಗೆ ಅನಾರೋಗ್ಯ ಆಗಿದಕ್ಕೆ ನನ್ನ ಒಂದಿಷ್ಟು ಸ್ನೇಹಿತರು ಬಂದು ನನಗೆ ಬಿಜೆಪಿ ಹೋಗಿ ಎಂ.ಪಿ ಸೀಟ್ ಗೆ ಪ್ರಯತ್ನ ಮಾಡಿ ಎಂದರು. ನಾನು ಕೂಡಾ ಮನಸ್ಸು ಮಾಡಿದ್ದೆ ಆದರೆ, ಈಗ ಹೆಗಡೆ ಗಟ್ಟಿ ಆಗಿಬಿಟ್ಟಿದ್ದಾನೆ ಎಂದು ಹೇಳಿದ್ದಾರೆ.
ಈ ಹಿಂದೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಅಂದು ಹಿಂದುತ್ವದ ಅಲೆ ಇದ್ದಿದ್ದರಿಂದ ಗೆಲುವು ಕಷ್ಟವಾಯಿತು. ಇದೀಗ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಇತ್ತೀಚೆಗೆ ಆರೋಗ್ಯ ಸರಿ ಇರಲಿಲ್ಲ. ಶಸ್ತ್ರಚಿಕಿತ್ಸೆ ಆಗಿದೆ. ಸ್ಥಿತಿ ಗಂಭೀರವಾಗಿದೆ. ಮುಂದಿನ ರಾಜಕೀಯ ಜೀವನ ಕಷ್ಟ ಇದೆ ಎಂದು ಹೆಗಡೆ ಅನಾರೋಗ್ಯವನ್ನು ಟೀಕಿಸಿದ್ದಾರೆ.
ಹೇಗೂ ಆತ ಐದು ವರ್ಷ ಜನರಿಗೆ ಮುಖ ಕಾಣಿಸಲ್ಲ. ಬೋನ್ ಕ್ಯಾನ್ಸರ್ ಆಗಿದೆ ಎಂದು ಕೆಲವರು ಹೇಳುತ್ತಿದ್ದರು. ಎಲ್ಲಾದರೂ ಹಿಂದು- ಮುಸ್ಲಿಂ ಗಲಾಟೆ ಆಗಬೇಕು. ಯಾರಾದರೂ ಹಿಂದು ಸಾಯ್ಬೇಕು. ಯಾರಾದರೂ ಮೀನುಗಾರ ಯುವಕ ಸಾಯ್ಬೇಕು, ಅಂಥ ಪ್ರಸಂಗದಲ್ಲಿ ಮಾತ್ರ ಅವನನ್ನು ಕಾಣಬಹುದು. ಹಾಗಾಗಿ ಅವನು ಸತ್ರೇನು, ಬದುಕಿದ್ರೇನು? ಅವನ ಆರೋಗ್ಯ ಹೇಗಿದ್ಯೋ ಏನೋ, ನನಗ್ಯಾಕೆ ಬೇಕು? ಜನ ಹೇಳಿದ್ದನ್ನು ಹೇಳಿದ್ದೀನಿ ಎಂದು ಏಕವಚನದಲ್ಲೇ ಹೆಗಡೆ ವಿರುದ್ಧ ಹರಿಹಾಯ್ದಿದ್ದಾರೆ. (kpc)
