

ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ವಲಸಿಗರಿಗೆ ಉಂಟಾದ ಸಮಸ್ಯೆ ಈ ವರ್ಷ ಮರುಕಳಿಸುವುದಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

ಬೆಂಗಳೂರು: ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ವಲಸಿಗರಿಗೆ ಉಂಟಾದ ಸಮಸ್ಯೆ ಈ ವರ್ಷ ಮರುಕಳಿಸುವುದಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಸರ್ಕಾರ ಹೊರಡಿಸಿರುವ ಮಾರ್ಗಗಸೂಚಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ವಾಪಾಸ್ ತಮ್ಮ ತವರಿಗೆ ಮರಳುವ ಸಾಧ್ಯತೆಯಿಲ್ಲ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಇಲಾಖೆವತಿಯಿಂದ ಐಡಿ ಕಾರ್ಡ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಲಾಕ್ ಡೌನ್ ಹೇರಿದ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ವಲಸೆ ಕಾರ್ಮಿಕರು ವಾಪಸ್ ತೆರಳಿದ್ದರು. ಇವರಲ್ಲಿ ಹೆಚ್ಚಿನ ಪ್ರಮಾಣದವರು ಉತ್ತರ ಕರ್ನಾಟಕದವರಾಗಿದ್ದಾರೆ.
ಅದರಲ್ಲೂ ಪಶ್ಚಿಮ ಬಂಗಾಳ, ಒಡಿಶಾ, ಉತ್ತರ ಪ್ರದೇಶ ಮತ್ತು ತಮಿಳುನಾಡಿನವರಾಗಿದ್ದರು, ಇವರಲ್ಲಿ ಕೆಲವರು ಮತದಾನ ಮಾಡಲು ತೆರಳಿದ್ದವರು ಇನ್ನೂ ವಾಪಸ್ ಆಗಿಲ್ಲ.
ಮತ್ತೊಂದು ಲಾಕ್ ಡೌನ್ ಭಯದಿಂದಾಗಿ ರಾಜ್ಯದಲ್ಲಿ ವಾಸವಿರುವ ವಲಸೆ ಕಾರ್ಮಿಕರು ತಮ್ಮ ತವರಿಗೆ ತೆರಳಲು ಯೋಜಿಸುತ್ತಿದ್ದರು. 3,5 ಲಕ್ಷಕ್ಕೂ ಹೆಚ್ಚು ಕಟ್ಟಡ ನಿರ್ಮಾಣ ಕಾರ್ಮಿಕರು ರಾಜ್ಯದಲ್ಲಿದ್ದು, ಅವರಲ್ಲಿ ಹೆಚ್ಚಿನವರು ವಲಸೆ ಕಾರ್ಮಿಕರಾಗಿದ್ದಾರೆ. ಶನಿವಾರ ಮತ್ತು ಭಾನುವಾರ ಹೊರತು ಪಡಿಸದರೇ ಉಳಿದಂತೆ ನಿರ್ಮಾಣ ಕಾರ್ಯಕ್ಕೆ ಯಾವುದೇ
ಅಡ್ಡಿಯಿಲ್ಲ.
ಕಳೆದ ವರ್ಷದ ಅನುಭವದಿಂದ ಎಚ್ಚೆತ್ತಿದ್ದು, ಈ ಬಾರಿ ಕಾರ್ಮಿಕರು ತಮ್ಮ ತವರಿಗೆ ತೆರಳುವುದಿಲ್ಲ ಎಂದು ಸತಿವರು ಭರವಸೆ ನೀಡಿದ್ದಾರೆ.ಇಲಾಖೆವತಿಯಿಂದ ಬಿಲ್ಡರ್ಸ್ ಗಳ ಸಭೆ ಕರೆದಿದ್ದು, ಅಧಿಕಾರಿಗಳು ಗುರುತಿನ ಚೀಟಿ ನೀಡಲಿದ್ದಾರೆ, ಅದನ್ನು ಬಿಲ್ಡರ್ಸ್ ಗಳು ಕಾರ್ಮಿಕರಿಗೆ ನೀಡಬೇಕಾಗಿದೆ, ಕಾರ್ಮಿಕರು ಪ್ರಯಾಣಿಸುವಾಗ ಈ ಗುರುತಿನ ಚೀಟಿ
ತೋರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ವಸತಿ ಯೋಜನೆಗಳು ಮೊದಲಿನಂತೆ ನಡೆಯುತ್ತಿಲ್ಲ, ಹೊಸ ಪ್ರಾಜೆಕ್ಟ್ ಗಳು ಆರಂಭವಾಗುತ್ತಿಲ್ಲ, ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ತವರಿಗೆ ಮರಳಿದ್ದ ಹಲವು ಕಾರ್ಮಿಕರು ವಾಪಸ್ ಆಗದ ಕಾರಣ ಕಾರ್ಮಿಕರ ಕೊರತೆ ಎದುರಾಗಿದೆ ಎಂದು ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಕ್ರೆಡೈ), ಬೆಂಗಳೂರಿನ ಅಧ್ಯಕ್ಷ ಸುರೇಶ್ ಹರಿ ಹೇಳಿದ್ದಾರೆ.
ಈಗ ಸರ್ಕಾರ ಕೇವಲ 5 ದಿನ ಮಾತ್ರ ಕಾಮಗಾರಿಗೆ ಅವಕಾಶ ನೀಡಿರುವ ಕಾರಣ ಪ್ರಾಜೆಕ್ಟ್ ಗಳು ಮತ್ತಷ್ಟು ವಿಳಂಬವಾಗಲಿವೆ. ಕಾರ್ಮಿಕರಿಗೆ ಅವರು ಕೆಲಸ ಮಾಡಿದ ದಿನಗಳಲ್ಲಿ ಸಂಬಳ ನೀಡಲಾಗುತ್ತದೆ, ಅಂದರೆ ಅವರಿಗೆ ವಾರದಲ್ಲಿ ಎರಡು ದಿನಗಳವರೆಗೆ ವೇತನ ನೀಡಲಾಗುವುದಿಲ್ಲ. ಇದರಿಂದ ಕಾರ್ಮಿಕರು ತವರಿಗೆ ಮರಳಲು ಪ್ರೇರೇಪಿಸಿದಂತಾಗುತ್ತದೆ ಎಂದು ಸುರೇಶ್ ತಿಳಿಸಿದ್ದಾರೆ. (kpc)
