

ಹಿರಿಯ ಮಿತ್ರರಾದ ಡಾ ಗಜಾನನ ಶರ್ಮ ರವರಿಗೆ ಸಪ್ರೇಮ ನಮಸ್ಕಾರಗಳು. ಅಂಕಿತ ಪ್ರಕಾಶನ ಪ್ರಕಟಿಸಿರುವ ನಿಮ್ಮ ಹೊಸ ಐತಿಹಾಸಿಕ ಕಾದಂಬರಿ
“ಚನ್ನ ಭೈರಾದೇವಿ” ಧ್ಯಾನಸ್ಥನಾಗಿ ಓದಿ ಮುಗಿಸಿದೆ. ಚನ್ನ ಬೈರಾದೇವಿ ತನ್ನೆಲ್ಲಾ ಪಾತ್ರಗಳ ನಡುವೆ ಆವರಿಸಿಕೊಂಡು ನನ್ನ ಸಾಕಷ್ಟು ಅಂತರ್ಮುಖಿ ಮಾಡಿರುವ ಈ ಹೊತ್ತಿನಲ್ಲಿ ಕೃತಿಕಾರರಾದ ತಮಗೆ ಕೃತಜ್ಞತೆ ಮತ್ತು ಮೆಚ್ಚುಗೆಯ ಧನ್ಯವಾದಗಳ ಹೇಳಲೆಂದೇ ಈ ಪತ್ರ.
ನಿಂತ ನೆಲದ ಮೇಲೆ ಪ್ರೀತಿ ಇಲ್ಲದೆ ಕಟ್ಟುವುದಾದರೂ ಏನನ್ನು ಮತ್ತು ಸಾಗುವುದಾದರೂ ಎಲ್ಲಿಗೆ…?
ಕರ್ನಾಟಕದ ನದಿಗಳ ಇತಿಹಾಸದಲ್ಲಿ ನನ್ನ ನದಿ ಶರಾವತಿಗೆ ಘೋರ ಅನ್ಯಾಯವಾಗಿದೆ ಎಂದು ನಾನು ಹಲವು ಬಾರಿ ಹೇಳಿರುವೆ. ಜೀವನದಿ ಎಂದು ಕಾವೇರಿಗೆ ಬಿರುದು ಕೊಟ್ಟು ಹಾಡಿ ಹೊಗಳುವ ನಾವುಗಳು ಶರಾವತಿಯನ್ನ ಶಕ್ತಿ ನದಿಯೆಂದು ಕರೆಯುವುದಕ್ಕೆ ಏಕೆ ಮೀನಾಮೇಷ ಎಣಿಸಬೇಕು ಎಂಬುದು ನನ್ನ ಇನ್ನೊಂದು ಹಳೆಯ ಪ್ರಶ್ನೆ. ನೆಲ ಮುಳುಗಿದ ಕಾರಣ ನದಿ ದಂಡೆಯ ಚರಿತ್ರೆ ವಿಚಾರದಲ್ಲಿ ನಾವು ತಬ್ಬಲಿಗಳು. ಶರಾವತಿ ಇತಿಹಾಸ ಎಂದರೆ 80 ವರ್ಷಗಳ ಮುಳುಗಡೆ ಇತಿಹಾಸದ ಕಥೆ ಎಂಬ ಹಾಗಿದೆ. ಅದರಾಚೆಯ ನೆಲದ ನಡೆ ನಿಗೂಢವಾಗಿದೆ. ನೆಲದಲ್ಲಿ ಹುಡುಕಲು ಏನಿದೆ ಎಲ್ಲಾ ಮುಳುಗಿದೆ.
ಈ ನಡುವೆ ಶರಾವತಿ ಬಗ್ಗೆ ನನಗೆ ಉಳಿದುಕೊಂಡ ಬಹಳ ದೊಡ್ಡ ಪ್ರಶ್ನೆ ಈ ನನ್ನ ತಾಯಿ ನದಿ ತನ್ನ ಒಡಲಿನಲ್ಲಿ ತನ್ನ ದಂಡೆಯನ್ನು ಆಳುವ ಮಹಾರಾಜನನ್ನು ಹುಟ್ಟು ಹಾಕಲಿಲ್ಲವೇ..?
ಆಗಲು ನಮ್ಮವರು ಈಗಿನ ಹಾಗೆಯೇ ದೂರದವರು ಬಂದು ನಮ್ಮನ್ನು ಆಳಲಿ ನಮಗೇಕೆ ಉಸಾಬರಿ ಎನ್ನುವ ಮಹಾತ್ವಾಕಾಂಕ್ಷೆ ರಹಿತ ಬದುಕನ್ನೇ ಒಪ್ಪಿಕೊಂಡಿದ್ದರೆ ? ಶರಾವತಿ ನದಿ ಸಾಗುವ ನಿಟ್ಟೂರು, ಜಾಲ, ಕರೂರು ಬಾರಂಗಿ, ಜೋಗ, ಗೇರುಸೊಪ್ಪ, ಹೊನ್ನಾವರ ದಾರಿಯಲ್ಲಿ ಸಾಮ್ರಾಜ್ಯ ಕಟ್ಟಲಿಲ್ಲವೇ..? ಕಟ್ಟಿದ್ದರೆ ಅದೇಕೆ ಮುನ್ನೆಲೆ ಬರಲಿಲ್ಲ. ನನ್ನ ನದಿ ಜಲಪಾತ ಸೃಷ್ಟಿಸಲು ಮಾತ್ರ ಸೀಮಿತ ಆಯಿತೆ..? ಹೀಗೆಲ್ಲ ಪ್ರಶ್ನೆಗಳು ನನ್ನ ನಮ್ಮ ಕಾಡಿವೆ. ಕಾಡುತ್ತವೆ.
ಮೊನ್ನೆ ಚಂಡಮಾರುತದ ಕಾರಣ ಜೋರು ಮಳೆ. ನಿಮ್ಮ ಕಾದಂಬರಿಯನ್ನ ಲಾಕ್ ಡೌನ್ ನಡುವೆ ಸ್ನೇಹಿತರಾದ ರಾಮಸ್ವಾಮಿ ಕಳಸವಳ್ಳಿ ಯವರಿಂದ ತರಿಸಿಕೊಂಡು ಓದಲು ಕುಳಿತೆ. 431 ಪುಟಗಳ ಮುಕ್ತಾಯಕ್ಕೆ ಬರುವ ಹೊತ್ತಿಗೆ ಈ ಚಳಿ ಗಾಳಿಯ ನಡುವೆಯೂ ತಣ್ಣಗೆ ಬೆವರಿದ್ದೆ. ಕಾದಂಬರಿ ಓದಿನ ಮುಕ್ತಾಯದ ನಂತರ ಕೆಲ ಗಂಟೆ ಒಬ್ಬನೇ ಕುಳಿತು ಯೋಚಿಸಿದೆ. ಎಂಥ ಭವ್ಯ ಇತಿಹಾಸ.
ರಾಜ್ಯ ಗೆಲ್ಲುವುದೇ ಇತಿಹಾಸ ಎಂದು ಬರೆದವರಿಗೆ ಕರಿಮೆಣಸು ಸೇರಿ ಕೃಷಿಯನ್ನ ವಾಣಿಜ್ಯಗೊಳಿಸಿ ಲಾಭದಾಯಕ ಮಾಡಿ ಜನ ಸಾಮಾನ್ಯರ ಬದುಕು ಕಟ್ಟಿಕೊಡುವುದು ಬರೆಯುವುದಕ್ಕೆ ಮಹತ್ವ ಅನ್ನಿಸದೆ ಇರುವುದು ವಿಶೇಷವಲ್ಲ. ಶರ್ಮಾ ಜೀ ಕಾದಂಬರಿಯ ವಿಮರ್ಶೆಗಿಂತ ಮೊದಲು ನಮ್ಮ ಪ್ರೀತಿಯ ನದಿ ಶರಾವತಿ ದುಃಖವನ್ನು ನುಂಗಿ ದೇಶಕ್ಕೆ ಬೆಳಕಾಗುವ ತನ್ನನ್ನು ಹೋಲುವ ಮಹಾ ಮನುಷ್ಯವಾದಿ ಜನ ಸಾಮಾನ್ಯರ ಒಡನಾಟದ “ಚೆನ್ನ ಭೈರಾದೇವಿ” ಎಂಬ ತಾಯ್ತನದ ರಾಣಿಗೆ ಜನ್ಮವೆತ್ತಿಸಿದ್ದಳು ಎಂಬುದನ್ನ ಮರಳಿ ಮಣ್ಣಿಗೆ ನೆನಪಿಸಿದ್ದೀರಿ. ನನಗೆ ಇದು ಬಹಳ ಮುಖ್ಯ. ಹೊಸ ತಲೆಮಾರಿಗೂ ಮುಖ್ಯ. ಈ ನೆಲಕ್ಕೂ ಮುಖ್ಯ. ಈ ಕಾರಣಕೆ ಕಾದಂಬರಿಗೆ ಇರಬಹುದಾದ ಹಲವು ಮಿತಿ ನಡುವೆ ಇಂತಹ ಮಹತ್ವದ ಕೃತಿ ನೀಡಿದ್ದಕ್ಕೆ ತಮಗೆ ವಿಶೇಷ ಪ್ರೀತಿಯ ಕೃತಜ್ಞತೆಗಳನ್ನ ನೆಲದ ಪರವಾಗಿ ಸಲ್ಲಿಸಿ ಕಾದಂಬರಿ ಬಗ್ಗೆ ನನ್ನ ಅಭಿಪ್ರಾಯ ತಿಳಿಸುವೆ.
ನಾನು ಮೊದಲ ಅಧ್ಯಾಯದಲ್ಲಿ ಕುದುರೆ ಏರಿದೆ ಗೌರಿ ಜತೆಗೆ. ಕಾದಂಬರಿ ಆರಂಭವೇ ಒಂದು ಮೌಲ್ಯ. ಮಹಾರಾಣಿ ತನ್ನ ಸಾಮ್ರಾಜ್ಯದ ಪುಟ್ಟ ಹುಡುಗಿಯನ್ನು ಕಂಡು ನಿಲ್ಲಿಸಿ ಅವಳಿಗೆ ಕುದುರೆ ಏರುವ ಆಸೆ ಇರವುದನ್ನು ಗಮನಿಸಿ ಅದನ್ನು ಈಡೇರಿಸುವುದು. ಅಲ್ಲಿಂದಲೇ ಮಹಾರಾಣಿ ಯಾರು ಎಂದು ವಿವರಿಸುತ್ತಾ ಅವಳು ಮಹಾರಾಣಿಯಂತೆ ತೋರದ ಮಹಾರಾಣಿ ಎಂಬುದನ್ನ ದ್ವನಿಸುವ ಜತೆ ಆಕೆ ಜನಾನುರಾಗಿ ಎನ್ನುವುದನ್ನ ಹೇಳುತ್ತಲೇ ಕೆಳದಿ ಮತ್ತು ನಗಿರೆ ರಾಜ್ಯದ ನಡುವಿನ ಸಂಬಂಧ ಸ್ವರೂಪ ವಿವರಿಸುತ್ತದೆ. ಕಾದಂಬರಿ ಮುಕ್ತಾಯದಲ್ಲಿ ಅದೇ ಕೆಳದಿ ಅರಸು ಚನ್ನಮ್ಮನನ್ನು ಬಂಧಿಸುವ ಕ್ಷಣಕ್ಕೆ ಅದು ತಾರ್ಕಿಕ ಅಂತ್ಯ ಕಾಣುತ್ತದೆ. ಅದರ ನಡುವೆ ಇರುವುದೇ ಬೈರಾದೇವಿ ದೇವಿಯ ಬದುಕು ಭಾವ ಮತ್ತು ರಾಜ್ಯಬಾರ.
ಶರ್ಮಾ ಜೀ…. ಕಾದಂಬರಿಯ ನರೇಷನ್ ಬಹಳ ರೋಚಕವಾಗಿದೆ. ಅದರ ತಿರುವುಗಳು ಕೂಡ. ಇಲ್ಲಾ ಅಂದರೆ ಐತಿಹಾಸಿಕ ಕಾದಂಬರಿಗಳಲ್ಲಿ ಕಾಣುವ ಭಾವ ತೀವ್ರತೆ ವಿವರಣೆ ಮಾತ್ರ ಉಳಿಯುತ್ತವೆ. ನನಗೆ ರಾಮಾಯಣ ದರ್ಶನಂ ನಲ್ಲಿ ಕುವೆಂಪುರವರು “ಅನಲಾ” ಪಾತ್ರ ನೆನಪಾಯ್ತು. ಅಲ್ಲಿ ರಾವಣ ಮತ್ತು ಸೀತೆ ಇಬ್ಬರೂ ಓದುಗರಿಗೆ ತೆರದುಕೊಳ್ಳುವುದೇ ಅನಲಾ ಮುಖಾಂತರ. ಅನಲಾ ವಿಭೀಷಣನ ಮಗಳು. ಬೈರಾದೇವಿ ತೆರೆದುಕೊಳ್ಳುವುದೇ ತಾನು ಕುದುರೆ ಏ ರಿಸಿಕೊಂಡ ಪುಟ್ಟ ಹುಡುಗಿ ಗೌರಿ ಮುಂದೆ ಶಬಲೆ ಆಗಿ ರಾಣಿಯ ಆಪ್ತ ಗುಡಾಚಾರಿ ಆಗಿ ಅವಳದೇ ಬದುಕಿನ ವಿಸ್ತಾರವಾದ ವಿವರಣೆಯಲ್ಲಿ ಕೊನೆಗೂ ಬೈರಾದೇವಿ ಚಿತೆಗೆ ಜನ್ಮತಾ ಒಬ್ಬಳು ಸಾಮಾನ್ಯ ಕುಟುಂಬದ ಹುಡುಗಿ ಅಗ್ನಿ ಸ್ಪರ್ಶ ಮಾಡುವುದು ಆಕೆ ಮಹಾರಾಣಿಯ ಜತೆ ಕೊನೆ ತನಕ ಉಳಿಯುವುದೇ ಒಂದು ಅದ್ಭುತ ಕಥಾನಕ. ಈ ಕಾರಣಕ್ಕೆ ಮಹಾರಾಣಿ ಪುಟ್ಟ ಗೌರಿಯನ್ನ ಕುದುರೆಗೆ ಮಾತ್ರ ಹತ್ತಿಸಲಿಲ್ಲ ತನ್ನ ಹೃದಯವನ್ನು ಏರಿಸಿದ್ದಾಳೆ. ಅದನ್ನು ಶಬಲೆ ಉಳಿಸಿಕೊಂಡಿದ್ದಾಳೆ. ಈ ನಿಟ್ಟಿನಲ್ಲಿ ಬೈರಾದೇವಿ ಜತೆ ಶಬಲೆ ಉಳಿದುಬಿಡುತ್ತಾಳೆ. ಕಾದಂಬರಿಯೊಂದು ವ್ಯಕ್ತಿ ಕೇಂದ್ರೀಕೃತದಿಂದ ಬಿಡುಗಡೆಯಾಗುವ ದಾರಿಯೂ ಕೂಡ ಇದು. ದರ್ಶನಂ ಅನಲಾ ಕೂಡ ಹಾಗೆ ಓದಿನ ಕೊನೆಗೆ ಸೀತೆ ಜತೆ ಉಳಿದುಬಿಡುತ್ತಾಳೆ.
ಬಾಲ್ಯ ನಮ್ಮನ್ನು ಆವರಿಸುವ ಪರಿಯೇ ಚಂದ. ಮಧ್ಯ ವಯಸ್ಸು ದಾಟಿದ ಮೇಲೆ ಬಾಲ್ಯದ ನೆನಪೇ ಧಾತು ಆಗುತ್ತದೆ. ಮನಸು ಭೂತ ಮುಖಿ ಆಗುತ್ತದೆ. ಇದು ಮಹಾರಾಣಿಗೂ ಹೊರತಲ್ಲ. ಮಹಾರಾಣಿಯ ಚೈತನ್ಯವೇ ಅವಳ ಬಾಲ್ಯ. ಜಿನದತ್ತ ಎನ್ನುವ ಸ್ಥಿತಪ್ರಜ್ಞ ಒಡನಾಡಿ ಗೆಳೆಯ. ಆತನ ಜತೆಗಿನ ಪ್ರೀತಿ ಪಯಣಕ್ಕೆ ಬಹಳ ದೊಡ್ಡ ಬಂಧವಿದೆ. ಆ ಬಂಧವೇ ಹಲವು ಹುಡುಕಾಟಕ್ಕೆ ಕಾರಣವಾಗಿ ಕಾದಂಬರಿ ಪತ್ತೇದಾರಿ ಸ್ವರೂಪ ಪಡೆಯುತ್ತದೆ. ತನ್ನ ಮಾವನ ಪಿತೂರಿಯಿಂದ ಅಪಹರಣವಾದ ತನ್ನ ಬಾಲ್ಯ ಸ್ನೇಹಿತನನ್ನ ಹುಡುಕುವ ತಡ ಪ್ರಯತ್ನ ಶಬಲೆ ಸಾರಥ್ಯದಲ್ಲಿ ಯಶಸ್ವಿಯಾಗುವ ಹಾದಿ ಕಾದಂಬರಿ ವಿಸ್ತಾರಕ್ಕೆ ಕಾರಣ ಆಗಿ ಕಾಡುತ್ತದೆ. ಕೌತುಕದ ನಡೆ ಅದು. ಕೊನೆಗೂ ಸಿಕ್ಕ ಜಿನದತ್ತ ಮತ್ತು ಆತನ ಗೆಳೆಯನ ಅಗಾಧ ಸ್ನೇಹ ಅದೇ ಮುಂದೆ ಶಬಲೆಯ ಗಂಡನಾಗಿ ರಾಜ್ಯದ ಪ್ರಧಾನಿಯಾಗಿ, ಮೆಣಸು ಬೆಳೆಯ ಪ್ರಗತಿ ಮತ್ತು ವಾಣಿಜ್ಯಕ್ಕೆ ಕಾರಣ ಆಗುವುದು ಕಾದಂಬರಿ ಇನ್ನೊಂದು ಘಟ್ಟ. ಇದು ವೇಗವಾಗಿ ಓಡಿಸುತ್ತದೆ.
ಶರ್ಮಾ ಜೀ… ನಾನು ಬಹಳ ಎಚ್ಚರಿಕೆಯಿಂದ ಓದಿದ್ದು ನೀವು ಮತಾಂತರ ಮತ್ತು ಪೋರ್ಚುಗೀಸ್ ಧಾರ್ಮಿಕ ನಡೆ ಹಾಗೂ ಜಿನದತ್ತನ ಪ್ರಕರಣವನ್ನು ವಿವರಿಸುವಾಗ. ಮೆಚ್ಚುಗೆಯ ಒಂದು ಸಲಾಂ ಶರ್ಮಾ ಜೀ. ಕಾರಣ ಇಷ್ಟೇ ನೀವು ಬರೆದದ್ದು ಶರಾವತಿ ನದಿ ತಟದ ಮನುಷ್ಯ ಪ್ರೀತಿಯ ಶ್ರಾವಕಿ ಮಹಾರಾಣಿಯ ಕಥನ. ಅಲ್ಲಿ ಮನುಷ್ಯ ಬದುಕಿನ ಸಾರ್ಥಕತೆಯ ದರ್ಶನ ಆಗಬೇಕಿದೆ. ಆಗಬೇಕಾದ್ದು. ನೀವದನ್ನು ಬೇರೆ ಬೇರೆ ಹಂತದಲ್ಲಿ ಆಧ್ಯಾತ್ಮಿಕ ಪುಟವಾಗಿ ತೆರೆಸಿದ್ದೀರಿ ಕೂಡ. ಅದರಲ್ಲಿ ತಾವು ಯಶಸ್ವಿಯೂ ಆಗಿದ್ದೀರಿ. ಆದರೆ ಮತಾಂತರ ಮತ್ತು ಪೋರ್ಚುಗೀಸ್ ಕ್ರೌರ್ಯ ಬರೆಯುವಾಗ ಕಾದಂಬರಿ ಮೂಲ ಬಂದಕ್ಕೆ ದಕ್ಕೆ ಆಗದ ಹಾಗೆ ಅಗತ್ಯ ನ್ಯಾಯ ನೀಡಿರುವಿರಿ. ಬರಹಗಾರನ ಒಳ ಪ್ರಜ್ಞೆ ಎಚ್ಚರ ಇದ್ದಾಗ ಮಾತ್ರ ಇದು ಸಾಧ್ಯ. ಮೆಚ್ಚುಗೆಗಳು. ಇನ್ನೊಂದು ಆವರಣ ಮಾಡುವ ಅವಕಾಶ ಅಲ್ಲಿ ಇತ್ತು. ಆದರೆ ಅದು ಮಹಾರಾಣಿಯ ಆವರಣದಲ್ಲಿಯೇ ಇದೆ. ಈ ಕಾರಣಕ್ಕೆ ನೀವು ರಾಜ್ಯದ ಈಗಿನ ಕಾದಂಬರಿಕಾರರಲ್ಲಿ ಭರವಸೆಯ ಕಾದಂಬರಿಕಾರ ಕೂಡ ಆಗಿದ್ದೀರಿ.ಗೆಳೆಯ ನಾಗಿ ಹೆಮ್ಮೆ ಎನ್ನಿಸುತ್ತದೆ ಈ ಮಾತು ಬರೆಯಲು.
ನನಗೆ ಬಹಳ ಖುಷಿ ಕೊಟ್ಟದ್ದು ನಿಮ್ಮ ವಿವರಣೆಗಳು. ಅದು ಹಲವು ರೀತಿಯಲ್ಲಿ. ಪಟ್ಟಾಭಿಷೇಕ, ಕತ್ತಲೆ ಕಾನಿನಲ್ಲಿ ಕೆಳದಿ ಜತೆ ಯುದ್ದ, ಪೋರ್ಚುಗೀಸ್ ಜತೆಗೆ ನಾಜೂಕಿನ ಯುದ್ದವೂ ಸೇರಿ ಪ್ರತಿ ಪುಟದಲ್ಲಿ ಬದುಕಿನ ಬಗ್ಗೆ ಅಪಾರವಾದ ವಿವರಣೆ ಇವೆ. ಐತಿಹಾಸಿಕ ಕಾದಂಬರಿಗಳಲಿ ಈ ರೀತಿಯ ಬಹುಕೋನದ ವಿವರಣೆ ಸಿಗುವುದು ಕಡಿಮೆ. ಅದು ಕ್ರಿ ಶಕ ಲೆಕ್ಕಾಚಾರ, ಪೋರ್ಚುಗಲ್ ಇತಿಹಾಸ, ಮೊಳೆ ಮತ್ತು ಸ್ಕ್ರು ಗಳ ಅನ್ವೇಷಣೆ, ಅಕ್ಬರ್, ಅಲ್ಬಕರ್ಕ್, ವಾಸ್ಕೊಡಿಗಾಮ, ಗೋವಾ ಇತಿಹಾಸ ಇವೆಲ್ಲ ನಮ್ಮ ಜ್ಞಾನವನ್ನು ಹೆಚ್ಚಿಸುವ ಜತೆ ಕಾದಂಬರಿಗೆ ಸ್ಪಷ್ಟತೆ ತರುತ್ತವೆ.
ಮಹಾರಾಣಿಯ ಮನೋವಲಯ ರಚನೆ ಮತ್ತು ಆಕೆಯ ಜತೆಗಿನ ಪೋಷಕ ಪಾತ್ರಗಳು ಉತ್ತಮವಾಗಿವೆ. ಅದು ರಾಣಿಯ ಕುಟಿಲ ಮಾವ, ಪ್ರಾಜ್ಞ ಪ್ರಧಾನಿಗಳು, ಶೆಣೈ ಎಂಬ ಯುವಕ, ಅಲ್ಲಿ ಬರುವ ಮಹಿಳಾ ಪಾತ್ರಗಳು ತಮ್ಮ ವಿವೇಕದ ನಡೆಯ ಕಾರಣಕ್ಕೆ ಕಾಡುತ್ತವೆ. ಮಹಿಳಾ ಪ್ರಧಾನ ಕಾದಂಬರಿ ಆಗಿಯೂ ಮಹತ್ವದ ಹೆಜ್ಜೆ ಎಂದು ನಾನು ಭಾವಿಸುವೆ.ಆಗಿನ ಕಾಲದಲ್ಲಿ ಮಹಿಳೆಯರಿಗೆ ಆತ್ಮ ರಕ್ಷಣೆ ವಿಧ್ಯೆ ಕಲಿಸಿ ಅಪಾಯ ಎದುರಿಸಲು ಶಾಲೆ ತೆರೆದದ್ದೂ ಬಹಳ ಮುಖ್ಯ ವಾದದ್ದು. ಜೈನ ಸಮುದಾಯದ ಮಟ್ಟಿಗೂ ಇದು ಸತ್ಯ.
ಇಷ್ಟೆಲ್ಲಾ ವೈಶಿಷ್ಟ್ಯತೆ ನಡುವೆ ಕಾದಂಬರಿ ಕೆಲವನ್ನು ಪ್ರಶ್ನೆಯಾಗಿ ಉಳಿಸುತ್ತದೆ.
ಜೈನ ಮತ್ತು ವೈದಿಕ ಧರ್ಮದ ನೀತಿ ನಿಯಮ ಅಡಿಯಲ್ಲಿ ಜಂಟಿಯಾಗಿ ರಾಣಿ ಪಟ್ಟಾಭಿಷೇಕ ಆಗುವುದು. ಈ ಧರ್ಮಗಳ ನಡುವೆ ಹೆಚ್ಚುಗಾರಿಕೆ ಮತ್ತು ಶ್ರೇಷ್ಠತೆ ಮತ್ತು ಇತರೆ ಕಾರಣಕ್ಕೆ ಈಗಲೇ ವಾಗ್ವಾದ ನಡೆಯುತ್ತಾ ಇರುವಾಗ1500 ರ ಹೊತ್ತಿಗೆ ವೈದಿಕ ಮತ್ತು ಜೈನ ಧರ್ಮ ತಿಕ್ಕಾಟ ನಡುವೆ ಅದು ಸಾಧ್ಯವಾಗಿತ್ತೆ..?
ನಲವತ್ತು ವರ್ಷಗಳ ಕಾಲ ಬ್ರಾಹ್ಮಣ ಪ್ರಧಾನಿಯ ಮಾರ್ಗದರ್ಶನ ಎಂಬುದು ಕಾದಂಬರಿ ಭಾಗವೇ ಅಥವಾ ನೈಜ ಇತಿಹಾಸವೇ..?
ಕಾದಂಬರಿ ಕೊನೆಯ ಭಾಗ ಹೃಶ್ವವಾಗಿದೆ ಎನ್ನಿಸಿತು. ಕಾರಣ ಕೆಳದಿ ರಾಜರ ಬಂಧನದ ನಂತರ ರಾಜನೀತಿ ಬಗ್ಗೆ ಕಾದಂಬರಿ ದ್ವನಿಸಬೇಕಾದಷ್ಟು ದ್ವನಿಸದೆ ಇರುವುದು ನಿರಾಶೆ ತಂದಿತು. ಇಡೀ ಕಾದಂಬರಿ ಮೌಲ್ಯ ದ್ವನಿಸುವಾಗ ಕೊನೆ ಕ್ಷಣದಲ್ಲಿ ನಗಿರೆ ರಾಜ್ಯ ಪ್ರಾಕೃತಿಕ ಹಾವಳಿ ಇರುವಾಗ ಯುದ್ಧ ಸಾರುವ ಕೆಳದಿ ರಾಜರ ರಾಜಧರ್ಮ ಬಗ್ಗೆ ಪ್ರಶ್ನೆ ಕೂಡ ಮುಖ್ಯವಾದುದ್ದೇ. ಮಹಾರಾಣಿ ಬಂಧನ ನಂತರ ವಿವರಣೆ ವೇಗ ಹೆಚ್ಚುತ್ತದೆ. ಅದು ಇನ್ನಷ್ಟು ಸಾವಧಾನವಾಗಿ ರಾಜಧರ್ಮ ಪಕ್ಷಪಾತಿ ಆಗಬೇಕಿತ್ತು. ಜಿನದತ್ತ ಕೂಡ ಕೊನೆಯ ಕ್ಷಣ ಪೂರ್ಣತೆ ಸಿಗಲಿಲ್ಲ.
ಇವೆಲ್ಲವುಗಳ ಮೀರಿಯೂ ಕಾದಂಬರಿ ಯಶಸ್ವಿಯಾಗಿದೆ. ಓದುಗನನ್ನು ಕಾಡುತ್ತಾ ಇಳಿಯುತ್ತದೆ. ಬದುಕಿನ ಸಾರ್ಥಕತೆ ಬಗ್ಗೆ ಹಲವು ಕಡೆ ವಿವರಣೆ ನೀಡುತ್ತಾ ಆಪ್ತ ಆಗುತ್ತದೆ. ರಾಜ್ಯದ ಚರಿತ್ರೆಯಲ್ಲಿ ಮುನ್ನೆಲೆಯಲ್ಲಿ ನಿಲ್ಲಬೇಕಾದ ಮಹಾರಾಣಿ ಭೈರವದೇವಿ ಪಟ್ಟವನ್ನ ಮೀರುವ ಮಹಾರಾಣಿ. ಅವಳ ಆಕಳಂಕ ಚರಿತ್ರೆಯ ಮೇಲೆ ಹರಡಿದ್ದ ಪೊರೆಯನ್ನ ಈ ಕಾದಂಬರಿ ಕಿತ್ತು ಹಾಕಿದೆ. ಈಗ ಕಾದಂಬರಿ ಓದಿನ ಮೂಲಕ ಅರಿವಿನ ಹಾದಿ ತೆರದುಕೊಳ್ಳುವುದು ನಮ್ಮ ಜವಾಬ್ದಾರಿ ಆಗಿದೆ ಎನ್ನುವೆ.
ಶರ್ಮ ಜೀ…ಕಾದಂಬರಿ ಓದಿದ ಮೇಲೆ ಕಾನೂರು, ಕಾರಣಿ, ಆ ಗುಡ್ಡ, ಗೇರುಸೊಪ್ಪ ಹೋಗಿಬರಬೇಕು ಅನ್ನಿಸಿದೆ. ನೆಲ ಕಾಡುವುದು ಹೀಗೆ ಅಲ್ಲವೇ..?
ಧನ್ಯವಾದಗಳು ಶರ್ಮ ಜೀ…
ಈ ವಿಷೇಶ ಪತ್ರ ಮುಗಿಸುವೆ
ಸಪ್ರೇಮ ನಮಸ್ಕಾರಗಳು
ಸತ್ಯನಾರಾಯಣ. ಜಿ. ಟಿ ಕರೂರು.
19-05-2021
ಬೆಳಿಗ್ಗೆ; 10: 45


