

ಸಿದ್ಧಾಪುರದ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಅವಶ್ಯವಿರುವ ಬಸ್ ಡಿಪೋ ನಿರ್ಮಾಣ ಪ್ರಕ್ರೀಯೆ ಅಂತಿಮಹಂತದಲ್ಲಿದ್ದು ಸ್ಥಳ ನಿರ್ಧಾರವಾಗುತ್ತಲೇ ಬಸ್ ಡಿಪೋಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತೇವೆ ಎಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ್ ಹೇಳಿದರು. ನಗರದ ನೂತನ ಬಸ್ ನಿಲ್ಧಾಣದ ಸಾಂಕೇತಿಕ ಉದ್ಘಾಟನೆ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಹಾನಿಯಲ್ಲಿವೆ. ಗ್ರಾಮೀಣ ಸೇವೆಯ ಹಾನಿಯಿಂದಾಗಿ ಸಾರಿಗೆ ಸಂಸ್ಥೆಗಳಿಗೆ ಚೇತರಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಈ ತೊಂದರೆಗಳ ಮಧ್ಯೆ ಸಂಸ್ಥೆ ಸುಧಾರಣಾ ಕ್ರಮಗಳನ್ನು ಜರುಗಿಸುತಿದ್ದು ಶಿರಸಿ ಬಸ್ ನಿಲ್ಧಾಣ, ಸಿದ್ಧಾಪುರ ಡಿಪೋ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದ್ದೇವೆ ಎಂದರು.
ಬಸ್ ಚಾಲನೆಗೆ ಹಸಿರು ನಿಶಾನೆ ತೋರಿಸುವ ಮೂಲಕ ನೂತನ ಬಸ್ ನಿಲ್ಧಾಣ ಉದ್ಘಾಟಿಸಿದ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿವೃದ್ಧಿಹೊಂದುತ್ತಿರುವ ಸಿದ್ಧಾಪುರ ತಾಲೂಕಿನ ನಂಜುಡಪ್ಪ ವರದಿ ಆಧಾರದ ಹಿಂದುಳಿದ ತಾಲೂಕಿನ ಅನುದಾನದ ಸಿದ್ಧಾಪುರ ನೂತನ ಬಸ್ ನಿಲ್ಧಾಣ ಸುವ್ಯವಸ್ಥಿತ, ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಸ್ವಚ್ಚತೆ ಸವಾಲಾಗಿದ್ದು ಸುಂದರ, ಸ್ವಚ್ಛ ಬಸ್ ನಿಲ್ಧಾಣವನ್ನಾಗಿ ಕಾಪಾಡಿಕೊಳ್ಳುವ ಹೊಣೆಗಾರಿಕೆ ಸ್ಥಳಿಯರದ್ದಾಗಿದೆ. ಸಿದ್ಧಾಪುರಕ್ಕೆ ಅವಶ್ಯವಿರುವ ಬಸ್ ಡಿಪೊ ನಿರ್ಮಾಣಕ್ಕೆ ತಾಲೂಕು ಕೇಂದ್ರದಿಂದ 6 ಕಿ.ಮೀ. ಅಂತರದಲ್ಲಿ ಜಾಗ ನಿಗದಿಯಾಗಲಿದೆ. ಈ ಸ್ಥಳ ನಿಗದಿ ಮುಗಿಸಿ ಇಷ್ಟರಲ್ಲೇ ಬಸ್ ಡಿಪೋ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಿದ್ದೇವೆ ಎಂದರು.










