

ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತ ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಚಾರದಲ್ಲಿ ಎಲ್ಲಾ ಪಕ್ಷಗಳೂ ಮೂಗಿಗೆ ತುಪ್ಪ ಸವರುತ್ತಿವೆ ಎಂದು ಆಕ್ಷೇಪಿಸಿರುವ ಹಾಲಕ್ಕಿ ಸಮಾಜದ ಮುಖಂಡ ಹನುಮಂತ ಗೌಡ ಬೆಳಂಬಾರ ಹಾಲಕ್ಕಿ ಸಮಾಜಕ್ಕೆ ನ್ಯಾಯ ಒದಗಿಸದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗ ಸಮಾಜ ಕರಾವಳಿಯ ನಾಲ್ಕು ತಾಲೂಕುಗಳಲ್ಲಿದ್ದರೂ ಹರಿದು ಹಂಚಿ ಹೋದಂತೆ ಚದುರಿದೆ. ಈ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ, ಸಾಮಾಜಿಕ ಅನುಕೂಲ, ಸಾಮಾಜಿಕ ನ್ಯಾಯದ ಅನುಕೂಲಗಳು ದಕ್ಕದೆ ಅನ್ಯಾಯವಾಗಿದ್ದರೂ ಆಳುವವರು ಈ ಸಮಾಜವನ್ನು ನಿರ್ಲಕ್ಷಿಸಲು ಬೇರೆಯದೇ ಕಾರಣಗಳಿವೆ.
ರಾಜಕೀಯ- ಹಿತಾಸಕ್ತಿ- ಉತ್ತರ ಕನ್ನಡ ಜಿಲ್ಲೆಯ ಸಿದ್ದಿಗಳನ್ನು ಪರಿಶಿಷ್ಟಕ್ಕೆ ವರ್ಗಕ್ಕೆ ಸೇರಿಸುವ ಕೆಲಸದಲ್ಲಿ ಯಶಸ್ವಿಯಾಗಿರುವ ಮಾಜಿ ಕೇಂದ್ರ ಸಚಿವೆ,ಮಾಜಿ ಸಂಸದೆ ಮಾರ್ಗರೇಟ್ ಆಳ್ವ ಹಾಲಕ್ಕಿಗಳ ವಿಚಾರದಲ್ಲಿ ಈ ಹಿತಾಸಕ್ತಿ-ಇಚ್ಛಾಸಕ್ತಿ ಪ್ರದರ್ಶಿಸಲಿಲ್ಲ. ಮಾರ್ಗರೇಟ್ ಆಳ್ವ ನಂತರ ಸಂಸದರಾಗಿ ಸುದೀರ್ಘ ಅವಧಿಯನ್ನು ಪೂರೈಸಿದ ಅನಂತಕುಮಾರ ಹೆಗಡೆ ಮತ್ತು ಮಾರ್ಗರೇಟ್ ಆಳ್ವ ಹಾಲಕ್ಕಿ ಒಕ್ಕಲಿಗ ಸಮೂದಾಯವನ್ನು ನಿರ್ಲಕ್ಷಿಸಿರುವ ಹಿಂದೆ ಅವರ ಸ್ಥಾನಕ್ಕೆ ಕುತ್ತು ಬರುವ ಮುಂದಾಲೋಚನೆ ಕಾರಣ ಎನ್ನಲಾಗುತ್ತಿದೆ.
ತಮಗೆ ಬೇಡದ ಕ್ಷೇತ್ರಗಳಲ್ಲಿ ಪರಿಶಿಷ್ಟರು, ಮಹಿಳೆಯರು, ಅಲ್ಫಸಂಖ್ಯಾತರಿಗೆ ಮೀಸಲಾತಿ ತರುವ ಉತ್ತರ ಕನ್ನಡ ಜಿಲ್ಲೆಯ ಆಳುವ ಮೇಲ್ವರ್ಗ ಪ.ಪಂ., ತಾ.ಪಂ., ಗ್ರಾ.ಪಂ. ಗಳಲ್ಲಿ ಬೆಳೆಯುವವರನ್ನು ತೆಗೆಯುತ್ತಾ ಪರಿಶಿಷ್ಟರ ಸಂಖ್ಯೆ ಇಲ್ಲದ ಶಿರಸಿ ಕ್ಷೇತ್ರವನ್ನು ಪರಿಶಿಷ್ಟರ ಕ್ಷೇತ್ರವಾಗಿಸಿ ಶಿರಸಿ ಕ್ಷೇತ್ರದ ಬಹುಸಂಖ್ಯಾತರ ರಾಜಕೀಯ ತುಳಿದ ಉಳ್ಳವರ ಕುತಂತ್ರ ಹಾಲಕ್ಕಿ ಮತ್ತು ದೀವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕೆಲಸಕ್ಕೂ ತಡೆ ಒಡ್ಡುತ್ತಿದೆ.
ಹಾಲಕ್ಕಿ ಒಕ್ಕಲಿಗರು ಅಥವಾ ದೀವರು ಪರಿಶಿಷ್ಟ ಪಂಗಡಕ್ಕೆ ಸೇರಿದರೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಪರಿಶಿಷ್ಟರ ಮೀಸಲು ಕ್ಷೇತ್ರವಾಗುವ ಅವಕಾಶವಿದೆ. ಹಾಗಾಗಿ ದೇವರು, ಧರ್ಮ, ದೇಶಪ್ರೇಮದ ಸೋಗಿನಲ್ಲಿ ಜಿಲ್ಲೆಯ ಬಹುಸಂಖ್ಯಾತ ಹಿಂದುಳಿದವರಿಗೆ ಚೊಂಬು ಹಿಡಿಸಿರುವ ಮೇಲ್ವರ್ಗದ ಸ್ವಾರ್ಥದ ರಾಜಕಾರಣ ಜಿಲ್ಲೆಯ ಅರ್ಹ ಪರಿಶಿಷ್ಟರಾದ ಹಾಲಕ್ಕಿಗಳು ಮತ್ತು ದೀವರನ್ನು ಪರಿಶಿಷ್ಟರನ್ನಾಗಿಸದೆ ಸತಾಯಿಸುತ್ತಿದೆ, ಮಾರ್ಗರೇಟ್ ಆಳ್ವ ಮತ್ತು ಅನಂತ ಹೆಗಡೆಯವರ ಮೇಲ್ವರ್ಗದ ರಾಜಕಾರಣದಿಂದಾಗಿ ಹಾಲಕ್ಕಿ ಒಕ್ಕಲಿಗರು, ದೀವರಿಗೆ ಅನ್ಯಾಯವಾಗಿದೆ. ಹಾಲಕ್ಕಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಗೌಡರ ಆಕ್ಷೇಪ ಅರ್ಥಪೂರ್ಣವಾಗಿದ್ದು ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಿ ಅವರ ಸಂಖ್ಯಾ ಬಾಹುಳ್ಯದ ಕುಮಟಾ ಅಥವಾ ಕಾರವಾರ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನು ಪರಿಶಿಷ್ಟವರ್ಗಕ್ಕೆ ಮೀಸಲು ಮಾಡಿದರೆ ಆಗ ಈವರೆಗಾದ ಅನ್ಯಾಯಕ್ಕೆ ಪರಿಹಾರ ಸೂಚಿಸಿದಂತಾಗಬಹುದೇನೋ?
ಅಂದಹಾಗೆ… ಜಿಲ್ಲೆಯ ಗೌಳಿಗಳು, ಕುಂಬ್ರಿ ಮರಾಠರು, ಕುಣಬಿಗಳು ಸೇರಿದ ಕೆಲವು ಸಣ್ಣ ಸಂಖ್ಯೆಯ ಬುಡಕಟ್ಟುಗಳು ಪರಿಶಿಷ್ಟರ ಪಟ್ಟಿಗೆ ಸೇರದಿರುವುದು ಉತ್ತರ ಕನ್ನಡ ಜಿಲ್ಲೆಯ ಉಳ್ಳವರ, ಮತಾಂಧತೆಯ ಕೆಟ್ಟ ರಾಜಕಾರಣಕ್ಕೆ ಸಾಕ್ಷಿ


ರೈತವಿರೋಧಿಯಾಗಿ ವರ್ತಿಸುತ್ತಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರು, ಬಡವರು, ಜನಸಾಮಾನ್ಯರಿಗೆ ಮಾರಕವಾಗಿದೆ. ಈ ಮಹತ್ವದ ಕಾರಣಗಳಿಂದ ರೈತರ ಪರವಾಗಿ ದೇಶದಾದ್ಯಂತ ಪ್ರತಿಭಟಿಸುತ್ತಿರುವ ರೈತ ಸಂಘಟನೆಗಳು ಸಂಸದರಿಗೆ ಮತದಾರರ ವಿಪ್ ಜಾರಿ ಮಾಡಿವೆ. ಕೇಂದ್ರದ ಮಾಜಿ ಸಚಿವ,ಸಂಸದ ಅನಂತಕುಮಾರ ಹೆಗಡೆಯವರಿಗೆ ರೈತ ಸಂಘಟನೆಗಳ ಪರವಾಗಿ ರಾಜ್ಯ ರೈತ ಸಂಘದ ಸಿದ್ಧಾಪುರ ತಾಲೂಕಾಧ್ಯಕ್ಷ ವೀರಭದ್ರ ನಾಯಕ ಬರೆದ ಪತ್ರ ಇಲ್ಲಿದೆ.
ಸಂಸತ್ ಸದಸ್ಯರಿಗೆ ಮತದಾರರ ವಿಪ್
ಶ್ರೀ ಅನಂತ ಕುಮಾರ ಹೆಗಡೆ,
ಸದಸ್ಯರು ಲೋಕಸಭೆ, ಉತ್ತರ ಕನ್ನಡ,
ವಿಷಯ : ಆಳುವ ಎನ್ ಡಿ ಎ ಸಂಸತ್ ಸದಸ್ಯರಿಗೆ ಮತದಾರರ ವಿಪ್
ಪ್ರೀತಿಯ ಸಂಸತ್ ಸದಸ್ಯರೇ,
ಸೆಪ್ಟೆಂಬರ್ 2020 ರಲ್ಲಿ ಕೇಂದ್ರ ಸರ್ಕಾರವು ಸಂಸತ್ ಮೂಲಕ ಜಾರಿಗೆ ತಂದ ಮೂರು ರೈತ ವಿರೋಧಿ ಕಾನೂನುಗಳ ವಿರುದ್ಧ ದೇಶದ ರೈತರು ಪ್ರತಿಭಟಿಸುತ್ತಿರುವುದು ತಮಗೆ ತಿಳಿದಿದೆ.
ಈ ಮೂರು ಕಾಯ್ದೆಗಳನ್ನು ರದ್ದುಪಡಿಸಬೇಕು ಜೊತೆಗೆ ಎನ್ ಸಿ ಆರ್ ವಾಯು ಮಾಲಿನ್ಯ ಕಾಯ್ದೆಯಲ್ಲಿನ ರೈತ ವಿರೋಧಿ ಅಂಶಗಳನ್ನು ಹಾಗೂ ಕರಡು ವಿದ್ಯುತ್ ಮಸೂದೆಯನ್ನು ವಾಪಸ್ಸು ಪಡೆಯಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.
ದೇಶದ ಎಲ್ಲಾ ರೈತರ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲು ಖಾತರಿ ಪಡಿಸುವ ಶಾಸನವನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು ಎಂಬುದು ಸಹ ರೈತರ ಬೇಡಿಕೆಯಾಗಿದೆ.
ನವೆಂಬರ್ 26, 2020 ರಿಂದಲೂ ರೈತರು, ದೆಹಲಿ ಗಡಿಗಳಲ್ಲಿ ಹಾಗೂ ದೇಶದಾದ್ಯಂತ ನೂರಾರು ಸ್ಥಳಗಳಲ್ಲಿ ಶಾಂತಿಯುತ ಪ್ರತಿಭಟನೆಯ ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ ಹಕ್ಕುಗಳನ್ನು ಚಲಾಯಿಸುತ್ತಿದ್ದಾರೆ. ಈ ಪ್ರತಿಭಟನೆ ಭಾರತೀಯ ಸಮೂಹವನ್ನು ಜಾಗೃತಗೊಳಿಸಿದೆ. ಪ್ರಪಂಚದ ಗಮನವನ್ನು ಸಹ ಸೆಳೆದಿದೆ. ಆದಾಗ್ಯೂ ಕಲ್ಪಿಸಲೂ ಅಸಾಧ್ಯವಾದ ಕಷ್ಟಗಳನ್ನು ಎದುರಿಸಿ , ಸುಮಾರು ಕಳೆದ ಎಂಟು ತಿಂಗಳಿಂದಲೂ ನಡೆಯುತ್ತಿರುವ ಲಕ್ಷಾಂತರ ರೈತರ ಪ್ರತಿಭಟನೆಗೆ ನೀವು ಮತ್ತು ನಿಮ್ಮ ಪಕ್ಷ ಕುರುಡಾಗಿದೆ. ಮಾತ್ರವಲ್ಲಾ; ಅಗೌರವದಿಂದ ನಡೆಸಿಕೊಳ್ಳುವುದು, ಒಡಕು ಉಂಟು ಮಾಡುವುದು ಹಾಗೂ ಐತಿಹಾಸಿಕ ಚಳುವಳಿಗೆ ಕುಂದುಂಟು ಮಾಡಿ ರೈತರ ಸಂಕಟ ಹಾಗೂ ಬೇಡಿಕೆಗಳ ಕುರಿತ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಬೆಂಬಲಿಸುತ್ತಿದ್ದೀರಿ.
ಭಾರತದ ರೈತ ವಿರೋಧಿ ಕಾನೂನುಗಳು ಹಾಗೂ ರೈತರ ಬೇಡಿಕೆಗಳ ಕುರಿತು ಬ್ರಿಟನ್, ಕೆನಡಾ,ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾಗಳ ಸಂಸತ್ತಿನಲ್ಲಿ ಈಗಾಗಲೇ ಚರ್ಚೆಗೆ ಒಳಪಟ್ಟಿರುವುದನ್ನು ನೀವು ಗಮನಿಸಿದ್ದೀರಿ. ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳೂ ಗಮನವಿಟ್ಟು ನೋಡುತ್ತಿವೆ .ವಿಶ್ವಸಂಸ್ಥೆ ಕೂಡ ಗಮನಿಸುತ್ತಿದೆ.
ಆದರೆ ಈ ಐತಿಹಾಸಿಕ ಚಳುವಳಿಯ ಬೇಡಿಕೆಗಳು ದೇಶದ ಬಹುತೇಕ ಜನರಿಗೆ ಸಂಬಂದಿಸಿದ್ದರೂ ಭಾರತೀಯ ಸಂಸತ್ತಿಗೆ ಚರ್ಚಿಸಲು ಅಥವಾ ಚಳುವಳಿಯಲ್ಲಿ ಇದುವರೆಗೂ ಹುತಾತ್ಮ ರಾಗಿರುವ 600 ಕ್ಕೂ ಹೆಚ್ಚು ಪ್ರತಿಭಟನಾಕಾರರಿಗೆ ಗೌರವ ಸೂಚಿಸಲು ಸಹ ವೇಳೆ ಇಲ್ಲದಿರುವುದು ಅಘಾತಕಾರಿಯಾದುದ್ದಾಗಿದೆ.
ಅದ್ದರಿಂದ, ಮತದಾರರಾದ ನಾವು ನಮ್ಮ ಸಾರ್ವಭೌಮತ್ವ ಅಧಿಕಾರವನ್ನು ಚಲಾಯಿಸಿ ನಿಮಗೆ ಈ ಕೆಳಗಿನಂತೆ ನಿರ್ದೇಶಿಸುತ್ತಿದ್ದೇವೆ.
- ಜುಲೈ 19,2021 ರಿಂದ ಆರಂಭವಾಗುವ ಮಾನ್ಸೂನ್ ಅಧಿವೇಶನದ ಎಲ್ಲಾ ದಿನಗಳಲ್ಲೂ ಸಂಸತ್ತಿನಲ್ಲಿ ತಪ್ಪದೇ ಹಾಜರಿರಬೇಕು.
2.ನೀವು ಮತ್ತು ನಿಮ್ಮ ಪಕ್ಷ ನಿರಂತರವಾಗಿ ರೈತರ ವಿಷಯಗಳನ್ನು ಎತ್ತಬೇಕು ಹಾಗೂ ಮೇಲೆ ತಿಳಿಸಿದ ರೈತ ಚಳುವಳಿಯ ಬೇಡಿಕೆಗಳನ್ನು ಸದನದಲ್ಲಿ ಬೆಂಬಲಿಸಬೇಕು.
3.ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸುವ ತನಕ ಯಾವುದೇ ಕಲಾಪಗಳಿಗೆ ಅವಕಾಶ ನೀಡಬಾರದು
ಹಾಗೂ
- ರೈತರ ಬೇಡಿಕೆಗಳ ಪರವಾದ ಯಾವುದೇ ನಿರ್ಣಯಗಳು ಸದನದಲ್ಲಿ ಮಂಡಿಸಿದಾಗ ನೀವಾಗಲಿ ಅಥವಾ ನಿಮ್ಮ ಪಕ್ಷದ ಬೇರೆ ಸದಸ್ಯರಾಗಲಿ ವಿರೋಧಿಸಬಾರದು ಅಥವಾ ಮತದಾನದಿಂದ ದೂರ ಉಳಿಯಬಾರದು.
ಇದನ್ನು ತಾವು ಮತದಾರರ ವಿಪ್ ಎಂದು ಪರಿಗಣಿಸಿ ನಿಮ್ಮ ಪಕ್ಷ ಜಾರಿ ಮಾಡುವ ವಿಪ್ ಅನ್ನು ಕಡೆಗಣಿಸಬಹುದು. ನೀವು ಈ ಮತದಾರರ ವಿಪ್ ಉಲ್ಲಂಘಿಸಿದರೆ ,ನಿಮ್ಮ ಎಲ್ಲಾ ಸಾರ್ವಜನಿಕ ವೇದಿಕೆಗಳಲ್ಲೂ ಭಾರತೀಯ ರೈತರ ತೀವ್ರವಾದ ಪ್ರತಿಭಟನೆ ಎದುರಿಸಬೇಕಾದ ಅನಿವಾರ್ಯತೆಯನ್ನು ಉಂಟು ಮಾಡಲಿದೆ .
ನಿಮ್ಮ ಮತದಾರರು
ದೇಶದ ಸಮಸ್ಥ ರೈತ ಬಾಂಧವರ ಪರವಾಗಿ,
ಸಂಯುಕ್ತ ಕಿಸಾನ್ ಮೋರ್ಚಾ . ಪರವಾಗಿ
ವೀರಭದ್ರ ನಾಯ್ಕ,
ತಾಲೂಕು ಅಧ್ಯಕ್ಷರು, ರೈತ ಸಂಘ ಹಾಗೂ ಹಸಿರು ಸೇನೆ.
