

ಸಿದ್ಧಾಪುರ ತಾಲೂಕಿನಲ್ಲಿ ಗುಂಜಗೋಡು ಗ್ರಾಮ ಮತ್ತು ಗುಂಜಗೋಡು ಕುಟುಂಬಕ್ಕೆ ಮಹತ್ವದ ಸ್ಥಾನವಿದೆ. ತಾಲೂಕು ಕೇಂದ್ರದಿಂದ ತುಸುದೂರದ ಗುಂಜಗೋಡು ಲಾಯಾಯ್ತಿನಿಂದ ಸಮಾಜದ ಆಗುಹೋಗುಗಳೊಂದಿಗೆ ಸ್ಪಂದಿಸಿದೆ. ಸುಶಿಕ್ಷಿತ,ಸಮಾಜಮುಖಿ ಗ್ರಾಮವಾದ ಗುಂಜಗೋಡು ಈಗಲೂ ಬಿಳಗಿ ಸೀಮೆಯ ಪ್ರಸಿದ್ಧ ಗ್ರಾಮ. ಸ್ವಾತಂತ್ರ್ಯ ಹೋರಾಟ, ಧಾರ್ಮಿಕ ಕೆಲಸ, ಕಲೆ, ಸಾಂಸ್ಕೃತಿಕತೆ ಎಲ್ಲದರಲ್ಲೂ ಗುಂಜಗೋಡು ಗುರುತಿಸಿಕೊಂಡಿದೆ.
ಗುಂಜಗೋಡಿನ ಕೃಷಿ ಪ್ರಧಾನ ಕುಟುಂಬಗಳಲ್ಲಿ ಹಲವರು ಸಾಮಾಜಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲೂ ಹೆಸರು ಮಾಡಿ ದ್ದಾರೆ. ಅವರಲ್ಲಿ ಕೆಲವರು ಅಡಿಕೆ ವ್ಯಾಪಾರಿಗಳಾಗಿ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಸಹಕರಿಸಿದ್ದಾರೆ.
ಗುಂಜಗೋಡಿನ ಕೆಲವು ಅಡಿಕೆ ವರ್ತಕರಲ್ಲಿ ಈಗಿನ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಪ್ರಕಾಶ ಹೆಗಡೆಯವರ ತಂದೆ ಎಮ್.ಎಸ್. ಹೆಗಡೆ ಗುಂಜಗೋಡು ಹೆಗಡೆ ಎಂದೇ ಪ್ರಸಿದ್ಧರಾಗಿದ್ದರು. ಕಳೆದ ವರ್ಷ ಅಕ್ಟೋಬರ್ ಒಂದರಂದು ನಿಧನರಾಗಿದ್ದ ಎಮ್. ಎಸ್. ಹೆಗಡೆ ಸಿದ್ಧಾಪುರ ಪುರಸಭೆಯ ಸದಸ್ಯರಾಗಿ, ತಾಲೂಕು ಕಾಂಗ್ರೆಸ್ ಅಧ್ಯಕ್ಷರಾಗಿ ಹಿಂದೆ ಸೇವೆ ಸಲ್ಲಿಸಿದ್ದರು. ಇಂಥ ಸಾರ್ವಜನಿಕ ಸೇವೆಗೆ ಬರುವ ಮೊದಲು ಗುಂಜಗೋಡು ಹೆಗಡೆ ಅಡಿಕೆ ವ್ಯಾಪಾರಸ್ಥರಾಗಿ ಸಾಹಸ ಮಾಡಿದ ವ್ಯಾಪಾರಿ ಕೃಷಿಕ. 1970 ರ ದಶಕದ ಕಷ್ಟದ ದಿನಗಳಲ್ಲಿ ತಾಲೂಕಿನ ಹಳ್ಳಿಗಳಿಗೆ ಸೈಕಲ್ ನಲ್ಲಿ ತೆರಳಿ ವ್ಯಾಪಾರ ಮಾಡುತ್ತಾ ಗಣ್ಯ ವರ್ತಕರಾಗಿ ಬೆಳೆದದ್ದು ಅವರ ಸಾಧನೆ. ಕುಗ್ರಾಮದಂತಿದ್ದಗುಂಜಗೋಡಿನಿಂದ ತಮ್ಮ ಸಾಹಸದ ಪಯಣ ಪ್ರಾರಂಭಿಸಿದ ಎಮ್.ಎಸ್. ಹೆಗಡೆ ಕ್ರಮೇಣ ಸಿದ್ಧಾಪುರಕ್ಕೆ ತಮ್ಮವಾಸ್ತವ್ಯ ಬದಲಿಸಿ ಕೃಷಿ-ವ್ಯಾಪಾರದಲ್ಲಿ ಯಶಸ್ವಿಯಾಗಿದ್ದರು. ಈ ನಡುವೆ ಸಿದ್ಧಾಪುರ ಭಾನ್ಕುಳಿಮಠದ ಆಸ್ತಿಯನ್ನು ಉಳಿಸುವಲ್ಲಿ ಹೆಗಡೆಯವರ ಪಾತ್ರ ಗುರುತವಾಗಿತ್ತು. ಎ.ಪಿ.ಎಂ.ಸಿ.ಯಾರ್ಡ್ ನಿರ್ಮಾಣ, ಭೂನ್ಯಾಯ ಮಂಡಳಿ ಸದಸ್ಯರಾಗಿ ಸಲ್ಲಿಸಿದ ಸೇವೆ ಅವರನ್ನು ಪ್ರಸಿದ್ಧರನ್ನಾಗಿಸಿತ್ತು.
ಇಂದು ಅವರಗುಪ್ಪಾದಲ್ಲಿ ನಡೆದ ಅವರ ವಾರ್ಷಿಕ ಸಂಸ್ಮರಣೆಯಲ್ಲಿ ಅವರ ಕುಟುಂಬಸ್ಥರು, ಹಿತೈಶಿಗಳು, ಗ್ರಾಮಸ್ಥರೆಲ್ಲಾ ಗುಂಜಗೋಡು ಹೆಗಡೆಯವರನ್ನು ಸ್ಮರಿಸಿದರು. ಸಿದ್ಧಾಪುರದಲ್ಲಿ ನೂರಾರು ಜನರಿಗೆ ಉದ್ಯೋಗ ನೀಡಿರುವ ಅಡಿಕೆ ವರ್ತಕರ ಕುಟುಂಬದ ಎಮ್.ಎಸ್. ಹೆಗಡೆ, ಅವರ ಪುತ್ರ ವರ್ತಕರ ಸಂಘದ ಅಧ್ಯಕ್ಷ ಪ್ರಕಾಶ ಹೆಗಡೆ ತಮ್ಮ ಕೃಷಿ-ವ್ಯಾಪಾರ, ವ್ಯವಹಾರಗಳೊಂದಿಗೆ ಸಾಮಾಜಿಕ, ಧಾರ್ಮಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದರು. ಮಕ್ಕಳಿಗೆ ವಿದ್ಯಾವಂತರನ್ನಾಗಿಸಿ ಅವರೂ ಕೂಡಾ ಸ್ಥಳೀಯತೆ, ಸಹಜತೆ ಅಳವಡಿಸಿಕೊಳ್ಳುವ ಹಿಂದೆ ಎಮ್.ಎಸ್. ಹೆಗಡೆಯವರ ಕುಟುಂಬದ ಕೊಡುಗೆ ಸ್ಮರಣೀಯ ಎಂದರು.
ಎಮ್.ಎಸ್. ಹೆಗಡೆಯವರ ಎರಡ್ಮೂರು ತಲೆಮಾರು ಕೃಷಿಕರು, ವರ್ತಕರೂ ಆಗಿ ಜನಮೆಚ್ಚುಗೆ ಪಡೆದಿದ್ದಾರೆ. ಹೊರ ಊರುಗಳಲ್ಲಿ ವಿದ್ಯಾಭ್ಯಾಸ,ಉದ್ಯೋಗ ಮಾಡಿ ಜನಮಾನಸದೊಂದಿಗೆ ಬೆರೆತ ಅವರ ಕುಟುಂಬದ ಕುಡಿಗಳೂ ಕೃಷಿ-ಅಡಿಕೆ ವ್ಯಾಪಾರಗಳ ಮೂಲಕ ತಾಲೂಕು, ಜಿಲ್ಲೆಯ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಿದ್ದಾರೆ. ಎಮ್.ಎಸ್. ಹೆಗಡೆಯವರ ಸಾಧನೆ, ಸಂಸ್ಮರಣೆಗಳ ಹಿಂದೆ ಅವರ ಗ್ರಾಮ, ಕುಟುಂಬ ಎಂದು ಮತ್ತೊಮ್ಮೆ ಅವರು ಸಾರ್ವಜನಿಕ ಸ್ಮೃತಿಯ ಭಾಗವಾಗಿದ್ದಾರೆ.

