

ಬಾಳಿಗಾ ನಂತರ ರಾಜ್ಯಕಂಡ ಉತ್ತಮ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಶ್ಲಾಘಿಸಿದರು. ಅವರು ಸಿದ್ಧಾಪುರ ಕಲಗದ್ದೆ ಸಿದ್ಧಿವಿನಾಯಕ ದೇವಸ್ಥಾನ ಸಮೀತಿ ಈ ವರ್ಷದಿಂದ ಪ್ರಾರಂಭಿಸಿದ ರಾಜಮಾನ್ಯ ಪ್ರಶಸ್ತಿಯನ್ನು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರಿಗೆ ಪ್ರದಾನ ಮಾಡಿದ ನಂತರ ಅಭಿನಂದನಾ ಭಾಷಣದಲ್ಲಿ ಉಲ್ಲೇಖಿಸಿದರು.

ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ನಮ್ಮ ನಡುವಿನ ಸ್ನೇಹ ಸಂಬಂಧ ಹಳೆಯದು, ಕಾಗೇರಿ ವಿಧಾನಸಭಾ ಅಧ್ಯಕ್ಷರಾಗದಿದ್ದ ಸಂದರ್ಭದಲ್ಲಿ ಆ ಯೋಗ ತನಗೇ ಬರಬಹುದೆಂಬ ಅಳುಕಿತ್ತು. ಸದನ ನಿರ್ವಹಣೆ ಸವಾಲಿನ ಕೆಲಸ ಅದನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಸಮರ್ಥವಾಗಿ ನಿಭಾಯಿಸಲು ಕಲಿತದ್ದು ಅವರ ಅರ್ಹತೆಗೆ ಸಿಕ್ಕ ಅವಕಾಶ ಎಂದರು.
ಕಾಗೇರಿ ವಿಶ್ವೇಶ್ವರ ಹೆಗಡೆಯವರೊಂದಿಗಿನ ತಮ್ಮ ನಂಟನ್ನು ಹಂಚಿಕೊಂಡ ಅರಗಜ್ಞಾನೇಂದ್ರ ತಮ್ಮ ಸಾಮ್ಯತೆಗಳ ಬಗ್ಗೆ ಹೇಳಿಕೊಳ್ಳಲು ಹಿಂಜರಿಯಲಿಲ್ಲ. ಅರಗಜ್ಞಾನೇಂದ್ರರ ಭಾಷಣದ ನಂತರ ಮಾತನಾಡಿದ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅರಗಜ್ಞಾನೇಂದ್ರ ತಮಗಿಂತ ಹಿರಿಯರಾಗಿದ್ದು ಅವರ ಅನುಭವ ಅವರ ಕಾರ್ಯವೈಖರಿಯಲ್ಲಿ ಪ್ರತಿಬಿಂಬಿಸುತ್ತಿದೆ ಎಂದು ವ್ಯಾಖ್ಯಾನಿಸಿದರು.
