

ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯ: ಪ್ರಧಾನಿಗೆ ಮಾರ್ಗರೇಟ್ ಆಳ್ವ ಪತ್ರ
ರಾಜಸ್ಥಾನ ಮತ್ತು ಉತ್ತರಾಖಂಡದ ಮಾಜಿ ರಾಜ್ಯಪಾಲರಾದ ಮಾರ್ಗರೆಟ್ ಆಳ್ವ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ರಾಜಸ್ಥಾನ ಮತ್ತು ಉತ್ತರಾಖಂಡದ ಮಾಜಿ ರಾಜ್ಯಪಾಲರಾದ ಮಾರ್ಗರೆಟ್ ಆಳ್ವ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಮಾಜಿ ಕೇಂದ್ರ ಸಚಿವರು, ನೀವು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವಾನ್ವಿತ ನಾಯಕ. ವಿಶ್ವದಾದ್ಯಂತ ಪ್ರಯಾಣಿಸುತ್ತೀರಿ. ರೋಮ್‌ನಲ್ಲಿರುವ ಹೋಲಿನೆಸ್ ಪೋಪ್ ಸೇರಿದಂತೆ ವಿಶ್ವದ ನಾಯಕರಿಗೆ ಭಾರತ ಪ್ರಜಾಸತಾತ್ಮಕ ರಾಜ್ಯ ಎಂದು ಹೇಳಿಕೊಳ್ಳುತ್ತೀರಿ. ನಿಮ್ಮ ಭಾಷಣ ಮತ್ತು ಹೇಳಿಕೆಗಳು ಮೆಚ್ಚುಗೆ ವ್ಯಕ್ತವಾಗಿ ಜಾಗತಿಕ ಮಾಧ್ಯಮಗಳಿಂದ ವರದಿಯಾಗುತ್ತವೆ. ದುರಾದೃಷ್ಟವಶಾತ್, ಇಲ್ಲಿನ ವಾಸ್ತವಿಕ ಪರಿಸ್ಥಿತಿ ಜಾಗತಿಕ ಸಮುದಾಯಕ್ಕೆ, ವಿಶೇಷವಾಗಿ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಜಾತ್ಯತೀತತೆ ಬಗ್ಗೆ ನೀವು ಭಾರತದ ಬಗ್ಗೆ ವ್ಯಕ್ತಪಡಿಸುವ ಚಿತ್ರಣಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ಕೆಲವು ಧಾರ್ಮಿಕ ಮುಖಂಡರು ಹಿಂದೂಯೇತರರನ್ನು ನರಮೇಧ ಮಾಡಿ, ಹಿಂದೂ ರಾಷ್ಟ್ರವನ್ನು ರಚಿಸಲು ಕರೆ ನೀಡುತ್ತಿರುವ ಹೇಳಿಕೆಗಳಿಂದ ತಾನು ದಿಗ್ಭ್ರಮೆಗೊಂಡಿದ್ದೇನೆ ಎಂದು ಆಳ್ವಾ ಹೇಳಿದ್ದಾರೆ. ಭಾರತದ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಬೆದರಿಕೆಗಳಿಗೆ ನಿಮ್ಮ ಮೌನ ಪ್ರೋತ್ಸಾಹ ಕೊಟ್ಟಂತೆ ಎಂದು ಅರಿಯಬೇಕಾಗುತ್ತದೆ ಎಂದಿದ್ದಾರೆ.
ಮತಾಂತರ ನಿಷೇಧ ಕುರಿತ ಮಸೂದೆಯ ಕುರಿತು ಮಾತನಾಡಿರುವ ಆಳ್ವ, ಇದು ನ್ಯಾಯಾಲಯ ಮತ್ತು ಸಂವಿಧಾನದ ಉಲ್ಲಂಘನೆಯ ನಿಬಂಧನೆಗಳನ್ನು ಹೊಂದಿದೆ ಎಂದು ಹೇಳಿದ್ದಾರೆ. ಇದು ಎಲ್ಲಾ ಅಲ್ಪಸಂಖ್ಯಾತರು, ನಮ್ಮ ಸಂಸ್ಥೆಗಳು, ಆಚರಣೆಗಳು, ಸೇವೆಗಳು ಮತ್ತು ದತ್ತಿಗಳನ್ನು ಅನುಮಾನಿಸುವಂತೆ ಮಾಡುತ್ತದೆ ಎಂದು ಅವರು ಪತ್ರದಲ್ಲಿ ಹೇಳಿಕೊಂಡಿದ್ದಾರೆ. (kpc)
