


ಕರಾವಳಿಯ ಜನರಿಗೆ ತುಸು ಆತ್ಮವಿಶ್ವಾಸ,ಅಹಂಕಾರಗಳೂ ಅಧಿಕ. ಬಿರುಬಿಸಿಲಿನ ಶೆಕೆಯ ವಾತಾವರಣದಲ್ಲಿ ಬೆವರಿನೊಂದಿಗೆ ರೋಗ-ರುಜಿನ ಕಳೆದುಕೊಳ್ಳುವ ಇಲ್ಲಿಯ ಜನ ಆತ್ಮವಿಶ್ವಾಸ,ಆತ್ಮಾಭಿಮಾನವನ್ನು ಬೆವರಿನಷ್ಟು ಸಲೀಸಾಗಿ ಬಿಡುವುದಿಲ್ಲ. ಈ ವಾತಾವರಣದಲ್ಲಿ ವಿಶಾಲದೃಷ್ಟಿಕೋನ,ಹೃದಯ ವೈಶಾಲ್ಯಕ್ಕೇನೂ ಕೊರತೆ ಇಲ್ಲ. ಹಳದಿಪುರದ ಅರವಿಂದ,ಮುರೂರಿನ ಎಂ.ಜಿ.ನಾಯ್ಕ, ಕೂಜಳ್ಳಿಯ ಡಾ.ಶ್ರೀಧರ ಮತ್ತು ಮೋಹನ ನಾಯ್ಕ,ಎಂಜಿ.ಹೆಗಡೆ,ಜಿ.ಯು.ಭಟ್, ಕೃಷ್ಣಮೂರ್ತಿ ಹೆಬ್ಬಾರ್,ವಕೀಲರಾದ ಸುಬ್ರಮಣ್ಯ ನಾಯ್ಕ, ಉದಯ ನಾಯ್ಕ,ವೆಂಕಟೇಶ್ ಮೇಸ್ತ, ತಾಂಡೇಲ್ ಸಹೋದರರು ಇಂಥ ಸದೃಯರೊಂದಿಗೆ ಬಹುಹಿಂದೆ ನಮ್ಮ ಸ್ನೇಹಿತ ಗಣದ ಸದಸ್ಯರಾದವರು ತೊಪ್ಪಲಕೇರಿಯ ವಿಜಯಕುಮಾರ್ ನಾಯ್ಕ.
ಶಿರಸಿಯ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರ ಸಂಬಂಧಿಯಾಗಿದ್ದ ವಿಜಯಕುಮಾರ ನಾಯ್ಕ ತನ್ನ ಸರಳ-ಮೃಧು ಸಂಪನ್ನತೆಯಿಂದಾಗಿ ಶಿರಸಿಯ ಮತೀಯವಾದಿಯೊಬ್ಬನ ರಾಷ್ಟ್ರೀಯವಾದದ ಮುಖವಾಡದ ಪತ್ರಿಕೆಯೊಂದಕ್ಕೆ ವರದಿಗಾರನಾಗಿದ್ದರು.ಮೊದಮೊದಲು ಸಂಘ ಜೀವಿಗಳ ವಲಯದ ಈ ವಿಜಯಕುಮಾರರನ್ನು ನಾವೊಂದಿಷ್ಟು ಜನ ತೀರಾ ಸಮೀಪಕ್ಕೆ ಬಿಟ್ಟುಕೊಂಡಿರಲಿಲ್ಲ. ಆದರೆ ಕ್ರಮೇಣ ವಿಜಯಕುಮಾರ ಪರಿವಾರದ ನಯವಂಚಕ ನಡೆಯವನಲ್ಲ ಎಂಬುದನ್ನು ಗುರುತಿಸಿ ಅವರ ಸ್ನೇಹ-ದೋಸ್ತಿಗಳು ಕುದುರಿದ್ದವು.
ಶಿಕ್ಷಕನಾಗಬೇಕಾಗಿದ್ದ ವಿಜಯಕುಮಾರ ಧರ್ಮಾಂಧನ ಸಂಸ್ಥೆಯಲ್ಲಿದ್ದರೂ ವಿವೇಕ ಕಳೆದುಕೊಂಡಿರಲಿಲ್ಲ. ಕೆಲವು ವರ್ಷಗಳ ಸ್ನೇಹ-ಸಂಪರ್ಕಗಳ ನಂತರ ರಾಷ್ಟ್ರೀಯ ಹೆದ್ದಾರಿ ತಿರುವಿನ ಕರ್ಕಿ ಬಳಿಯ ಒಳರಸ್ತೆಯ ಬೇಲೆಬದಿಯ ತಮ್ಮೂರು ತೊಪ್ಪಲಕೇರಿಗೆ ವಿಜಯ ನನ್ನನ್ನು ಕರೆದೊಯ್ದಿದ್ದ. ರಾತ್ರಿ ನಮ್ಮ ಬೈಕ್ ಗಳ ಮೇಲೆ ತೆರಳಿದ್ದ ನನಗೆ ಒತ್ತಾಯದ ಉಳಪಾಯದ ನಂತರ ತೊಪ್ಪಲಕೇರಿಯ ಮುಂಜಾವು ಮಂಗಳೂರು,ಕೇರಳಗಳ ಅನುಭವ ನೀಡಿತ್ತು.
ಈ ಮುಂಜಾನೆಯ ಸೊಬಗು ಸವಿಯುವ ಮುನ್ನ ವಿಜಯ ತನ್ನ ತಾಯಿಯ ಕೈಯಿಂದ ಮಾಡಿಸಿದ್ದ ಮೀನ್ ಪಳ್ದಿ ಕರಾವಳಿಯ ಮೀನು ಸಾಂಬಾರದ ರುಚಿಯ ಗಮ್ಮತ್ತನ್ನು ನೆನಪಿಸಿತ್ತು. ಕರಾವಳಿಯ ಜನರ ಸಂಪರ್ಕದಲ್ಲಿರುವ ಅನೇಕರಿಗೆ ಕರಾವಳಿಯ ಮೀನುಸಾರಿನ ರುಚಿ ವಿಶೇಶವಲ್ಲ ಆದರೆ ಕರಾವಳಿಯ ಜನ ವಿಭಿನ್ನ ಜಾತಿಯ ಮೀನುಗಳಿಗೆ ಸಾಂಬಾರದ ವೈಶಿಷ್ಟ್ಯದೊಂದಿಗೆ ಅನನ್ಯ ರುಚಿ ಸೇರಿಸುವುದಿದೆ ನೋಡಿ ಅದನ್ನು ಉಂಡವನೇ ಬಲ್ಲ.( ಈ ಬಗ್ಗೆ ಆರ್.ವಿ.ಭಂಡಾರಿ ಬರೆದ ಮೀನ್ ಪಳ್ದಿ ಕತೆ ಓದಿದ ನೆನಪು) ನಮ್ಮ ಕಾಂಮ್ರೇಡ್ ಯಮುನಾ ಗಾಂವಕರ್ ಕೂಡಾ ಉತ್ತಮ ಮೀನ್ ಪಳ್ದಿ ಮಾಡುವ ಕಲೆ ಅರಿತ ಬಹುಮುಖಿ.
ಇಂಥ ಕರಾವಳಿಯ ಮೀನು ಪಳ್ದಿ ಸವಿ ಉಣ್ಣಿಸಿದ ಅನೇಕ ಸ್ನೇಹಿತರ ವಲಯದ ಪಟ್ಟಿಯೇ ಇದೆ. ಆದರೆ ಹೊನ್ನಾವರದಲ್ಲಿದ್ದು ಜಾಗತಿಕ ವಿದ್ಯಮಾನಗಳಿಗೆ ತೆರೆದುಕೊಂಡಿದ್ದ ಮಾಜಿ ಶಾಸಕ ಎಸ್.ವಿ.ನಾಯ್ಕ ನಮ್ಮ ಸಮಾಜಮುಖಿಗೆ ಬರೆಯುತ್ತಲೇ ಪ್ರತಿ ಬಾರಿ ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸುತಿದ್ದರು. ಹೊನ್ನಾವರದ ಎತ್ತರದ ಗುಡ್ಡ ಪ್ರಭಾತನಗರದಲ್ಲಿ ನೆಲೆನಿಂತಿದ್ದ ಎಸ್.ವಿ.ನಾಯ್ಕ ಆ ಪ್ರದೇಶದ ಆರ್.ಎನ್. ನಾಯ್ಕ, ಡಾ.ಶ್ರೀಪಾದ ಶೆಟ್ಟರಂತೆ ನನಗೆ ಆತಿಥ್ಯ ನೀಡಿ ಸಂಬ್ರಮಿಸುವ ಜೀವವಾಗಿದ್ದರು. ಅವರ ಪತ್ನಿ ನಿವೃತ್ತ ಶಿಕ್ಷಕಿ ಮತ್ತು ಡಾ. ಶಾಂತಿ ನಾಯಕ ಕೂಡಾ ತಮ್ಮ ಸವಿರುಚಿ ಉಣ್ಣಿಸಿ ಸಂಬ್ರಮಿಸಿದ ಮಹನೀಯರೇ.
ಎಸ್.ವಿ.ನಾಯ್ಕ ಸಮುದ್ರದ ಏಡಿ,ಶಿಗಡಿ,ನಗ್ಲಿಗಳನ್ನೆಲ್ಲಾ ತರಿಸಿ ವಿಭಿನ್ನವಾಗಿ ರುಚಿ ಮಾಡಿಸಿ ನನಗೂ ತಿನ್ನಿಸುತ್ತಾ ʼಕನ್ನೇಶ್ ಅವರೆ ನೀವೂ ಮೀನುಪ್ರೀಯರಿರಬಹುದು ಆದರೆ ಕರಾವಳಿಯ ಮೀನಿನ ಮನೆಯೂಟದ ಮಸಾಲೆಗಳ ವೈವಿಧ್ಯತೆ ಬಗ್ಗೆ ನಿಮಗೆ ತಿಳಿದಿರಲಿಕ್ಕಿಲ್ಲ ʼ ಎಂದು ಮಡ್ಲೆ, ಶೆತಕ, ನೊಗ್ಲಿ,ದೋಡಿ.ಸುರಮಾ, ಶಾಡೆಗಳಿಗೆ ವಿಭಿನ್ನವಾಗಿ ಮಸಾಲೆ ಮಾಡಿ ತಯಾರಿಸುವ ಮೀನಿನ ರುಚಿಯ ಬಗ್ಗೆ ಅದ್ಭುತ ಉಪನ್ಯಾಸವನ್ನೇ ನೀಡಿದ್ದರು.
ಮೂಲತ: ಕರ್ಕಿಯ ರೈತ ಹೋರಾಟದ ಕುಟುಂಬದ ಎಸ್.ವಿ.ನಾಯಕ ಎಂಥಾ ವಿಶಿಷ್ಟ ಅಭಿರುಚಿಗಳ ಮನುಷ್ಯನಾಗಿದ್ದರೆಂದರೆ ಅವರ ಅನುಭವಗಳ ದಾಖಲಾತಿಯ ಬರಹಗಳ ಅಂಕಣಗಳ ಪುಸ್ತಕಗಳನ್ನು ಓದಿದರೆ ಅವರ ಅಪರೂಪದ ವ್ಯಕ್ತಿತ್ವವೇ ಬಿಚ್ಚಿಕೊಳ್ಳುತ್ತೆ. ಈ ಎಸ್.ವಿನಾಯಕ, ವಿಜಯ ಅಕ್ಕಪಕ್ಕದ ಊರಿನವರು ಇದೇ ತಾಲೂಕಿನ ಮಾವಿನಕುರ್ವಾ, ಪಾವಿನಕುರ್ವಾ, ಮಲ್ಲಕುರ್ವಗಳೆಲ್ಲಾ ಅಳಿದು ಹೋದವಲ್ಲ ಅಂಥದ್ದೇ ದುಸ್ಥಿತಿ ಈ ತೊಪ್ಪಲಕೇರಿ ಸೇರಿದಂತೆ ಅರಬ್ಬಿಯ ಕಡಲಕಿನಾರೆಯ ಅನೇಕ ಹಳ್ಳಿಗಳಿಗಿದೆ. ಹೊನ್ನಾವರ, ಕರ್ಕಿ ತೊಪ್ಪಲಕೇರಿ ಟೊಂಕ, ಕಾಸರಕೋಡುಗಳ ಬಗ್ಗೆ ಓದಿದಾಗ, ಯೋಚಿಸಿದಾಗಲೆಲ್ಲಾ ನೆನಪಾಗುವ ಅನೇಕ ನನ್ನ ಸ್ನೇಹಿತರಲ್ಲಿ ಬಹುಬೇಗ ನಮ್ಮನ್ನಗಲಿದ ವಿಜಯಕುಮಾರ ನೆನಪು ಒತ್ತರಿಸಿ ಬರುತ್ತದೆ. ಮನೆಯ ಮಗ, ಊರ ನೆನಪು ಕಳೆದುಕೊಳ್ಳುವ ಅಲ್ಲಿಯ ತಾಯಂದಿರು,ಅಪ್ಪಂದಿರೊಡಲ ನೋವಿಗೆ ಔಷಧಿಯಾಗಬಲ್ಲ ಮೀನ್ ಪಳ್ದಿ ಮಾದರಿಯ ಸೊಗಸಾದ ರಸಾಯನವೊಂದು ಸಿಗುವಂತಿದ್ದರೆ….. ಎನ್.ಎಚ್.೧೭ ನ ದೇವರ ಆಟದ ಹೋಟೆಲ್ ನವರೇ ಪೂರೈಸುತಿದ್ದರೇನೋ? ಎಲ್ಲಾ ನೆನಪುಗಳು ನೊಗ್ಲಿ,ಇಸ್ವಾಣ್ ಸಾರಿನಷ್ಟು ದಿವ್ಯಸ್ಮರಣೆಯ ಕನವರಿಕೆಗಳಾದರೆ ನೆನಪುಗಳ ಮಾತು ಮಧುರ ಎನ್ನಬಹುದಿತ್ತೇನೋ? -ಕನ್ನೇಶ್.
ಶಿಥಿಲಗೊಂಡ ತಡೆಗೋಡೆ: ಊರು ತೊರೆಯುತ್ತಿರುವ ತೊಪ್ಪಲಕೇರಿ ಗ್ರಾಮಸ್ಥರು
ಕಡಲ ತೀರಕ್ಕೆ ಹೊಂದಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತೊಪ್ಪಲಕೇರಿ ಗ್ರಾಮಕ್ಕೆ ಇದೀಗ ಸಮುದ್ರದಿಂದಲೇ ಆತಂಕ ಎದುರಾಗಿದೆ. ತೀರ ಪ್ರದೇಶಗಳ ಒಂದೊಂದೇ ಮನೆಗಳು ಖಾಲಿಯಾಗಿರುವುದು ಇದಕ್ಕೆ ನಿದರ್ಶನ.
ಕಾರವಾರ: ಅದು ಸಮುದ್ರ ಹಾಗೂ ನದಿ ಸಂಗಮದ ಪ್ರದೇಶಕ್ಕೆ ಸಮೀಪದಲ್ಲಿರುವ ಗ್ರಾಮ. ಸಮುದ್ರ ತೀರಕ್ಕೆ ಹೊಂದಿಕೊಂಡೇ ಗ್ರಾಮದ ಹಲವರ ಮನೆಗಳಿದ್ದು, ಕೆಲ ವರ್ಷಗಳವರೆಗೆ ಯಾವುದೇ ಸಮಸ್ಯೆಯಿರಲಿಲ್ಲ. ಆದರೆ ಇದೀಗ ತೀರಪ್ರದೇಶದಲ್ಲಿದ್ದ ಒಂದೊಂದೇ ಮನೆಗಳ ಜನರು ಮನೆ ಖಾಲಿ ಮಾಡಿ ತೆರಳುತ್ತಿದ್ದಾರೆ. ದಡದಲ್ಲಿನ ಮನೆಗಳು ಪಾಳು ಬಿದ್ದಿರುವುದು ಒಂದೆಡೆಯಾದ್ರೆ, ಮುಂದಿನ ದಿನಗಳಲ್ಲಿ ಗ್ರಾಮವೇ ನಾಶವಾಗುವ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ.
ತಡೆಗೋಡೆ ನಿರ್ಮಿಸುವಂತೆ ತೊಪ್ಪಲಕೇರಿ ಗ್ರಾಮಸ್ಥರ ಆಗ್ರಹ
ಹೌದು, ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತೊಪ್ಪಲಕೇರಿ ಗ್ರಾಮ ಶರಾವತಿ ನದಿ ಹಾಗೂ ಅರಬ್ಬೀ ಸಮುದ್ರ ಸೇರುವ ಸಂಗಮಕ್ಕೆ ಹೊಂದಿಕೊಂಡಿರುವ ಪ್ರದೇಶ. ನದಿ ಹಾಗೂ ಸಮುದ್ರ ಸೇರುವ ಸಂಗಮ ಪ್ರದೇಶವಾಗಿರುವ ಹಿನ್ನೆಲೆ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಗ್ರಾಮಕ್ಕೆ ಹೊಂದಿಕೊಂಡಿರುವ ತೀರದಲ್ಲಿ ಈ ಹಿಂದೆ ತಡೆಗೋಡೆಯೊಂದನ್ನ ನಿರ್ಮಿಸಲಾಗಿತ್ತು. ಈ ತಡೆಗೋಡೆ ಕಳೆದ ನಾಲ್ಕೈದು ವರ್ಷಗಳಲ್ಲಿ ಹಂತ ಹಂತವಾಗಿ ಶಿಥಿಲಗೊಂಡು ಸಂಪೂರ್ಣವಾಗಿ ಕಿತ್ತುಹೋಗಿದೆ. ಹೀಗಾಗಿ ಸಮುದ್ರದ ನೀರು ಒಳನುಗ್ಗುತ್ತಿದೆ.
ತೀರ ಪ್ರದೇಶದಲ್ಲಿನ ಮನೆಗಳಿಗೆ ನುಗ್ಗುತ್ತಿರುವ ನೀರು:
ತಡೆಗೋಡೆ ಇಲ್ಲದ ಪರಿಣಾಮ ಮಳೆಗಾಲದ ವೇಳೆ ತೀರಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗುತ್ತಿದೆ. ಅಲ್ಲದೇ ಅಮವಾಸ್ಯೆ ಹಾಗೂ ಹುಣ್ಣೆಮೆ ಸಂದರ್ಭದಲ್ಲಿ ಕಡಲಿನ ಉಬ್ಬರ, ಇಳಿತ ಹೆಚ್ಚಿರುವುದರಿಂದ ಕಡಲ ಕೊರೆತ ಉಂಟಾಗುತ್ತಿದೆ. ಇದರಿಂದಾಗಿ ತೀರಪ್ರದೇಶದಲ್ಲಿದ್ದ ಕೆಲವರು ಈಗಾಗಲೇ ತಮ್ಮ ಮನೆಯನ್ನು ತೊರೆದು ಬೇರೆಡೆಗೆ ತೆರಳಿದ್ದಾರೆ.
ಕುಡಿಯುವ ನೀರಿಗಾಗಿ ಪರದಾಟ:
ಇನ್ನು ಅಲೆ ತಡೆಗೋಡೆ ಇಲ್ಲದ ಪರಿಣಾಮ ತೀರ ಪ್ರದೇಶಗಳಲ್ಲಿದ್ದ ತೆಂಗಿನ ಮರಗಳು ಒಣಗಿ ಹೋಗುತ್ತಿವೆ. ಅಲ್ಲದೇ ಸಮುದ್ರದ ಉಪ್ಪು ನೀರಿನಿಂದಾಗಿ ಕುಡಿಯುವ ನೀರಿಗೂ ತೊಂದರೆಯುಂಟಾಗಿದ್ದು, ಜನರು ನೀರಿಗಾಗಿ ಪರದಾಡುವಂತಾಗಿದೆ. ತಡೆಗೋಡೆ ಇಲ್ಲದ್ದರಿಂದ ಸಮುದ್ರದ ನೀರು ನುಗ್ಗಿ ನೂರಾರು ಎಕರೆ ಕೃಷಿ ಭೂಮಿ ಸಹ ಬಂಜರು ಬೀಳುವಂತಾಗಿದ್ದು, ಸುತ್ತಲಿನ ಗ್ರಾಮಸ್ಥರಿಗೂ ಇದರಿಂದ ಸಮಸ್ಯೆ ಉಂಟಾಗುತ್ತಿದೆ.
ಸಮುದ್ರ ಕೊರೆತಕ್ಕೆ ಬಲಿಯಾಗುವ ಆತಂಕ!
ಗ್ರಾಮಕ್ಕೆ ತಡೆಗೋಡೆ ನಿರ್ಮಿಸಿಕೊಡುವಂತೆ ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದು, ಒಂದು ಬಾರಿ ಹೆದ್ದಾರಿ ತಡೆದು ಪ್ರತಿಭಟನೆ ಸಹ ನಡೆಸಲಾಗಿದೆ. ಆದರೂ ಸಹ ಯಾವೊಬ್ಬ ಅಧಿಕಾರಿಗಳೂ ಇತ್ತ ಗಮನಹರಿಸುತ್ತಿಲ್ಲ. ಇದು ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಇಡೀ ಗ್ರಾಮವೇ ಸಮುದ್ರ ಕೊರೆತಕ್ಕೆ ಬಲಿಯಾಗುವ ಆತಂಕವಿದ್ದು, ಶೀಘ್ರವೇ ತಡೆಗೋಡೆ ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. (etbk)
