

ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಟಿತ ವಿಧಾನಸಭಾ ಕ್ಷೇತ್ರವಾಗಿರುವ ಶಿರಸಿ-ಸಿದ್ಧಾಪುರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಬದಲಾವಣೆ ವಿಚಾರ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
ಈ ಹಿಂದೆ ಶಿರಸಿ ಕ್ಷೇತ್ರದಲ್ಲಿ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರಿಗೆ ಕಾಂಗ್ರೆಸ್ ನಿಂದ ಭೀಮಣ್ಣ ನಾಯ್ಕ,ಜೆ.ಡಿ.ಎಸ್. ನಿಂದ ಶಶಿಭೂಷಣ ಹೆಗಡೆ ಸಾಂಪ್ರದಾಯಿಕ ಎದುರಾಳಿಗಳಾಗಿದ್ದರು. ಬದಲಾದ ಸ್ಥಿತಿಯಲ್ಲಿ ಹಿರಿಯ ಶಾಸಕ ವಿಶ್ವೇಶ್ವರ ಹೆಗಡೆ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ಹಿನ್ನೆಲೆಯಲ್ಲಿ ಅವರು ಕ್ಷೇತ್ರ ಬದಲುಮಾಡಿ ಬೆಂಗಳೂರಿನಿಂದ ಸ್ಫರ್ಧಿಸುತಿದ್ದಾರೆ ಎನ್ನುವ ಸುದ್ದಿ ಹರಿದಾಡತೊಡಗಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿ ಕ್ಷೇತ್ರ ತ್ಯಜಿಸಿದರೆ ಈ ಕ್ಷೇತ್ರಕ್ಕೆ ಬಿ.ಜೆ.ಪಿ. ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೂ ಸಿದ್ಧ ಉತ್ತರವಿದೆ. ರಾಜ್ಯ ಬಿ.ಜೆ.ಪಿ. ಕಾರ್ಯಕಾರಿಣಿ ಸಮೀತಿ ಸದಸ್ಯ ಕೆ.ಜಿ.ನಾಯ್ಕ ಹಣಜಿಬೈಲ್, ಮಾಜಿ ಸಚಿವ ಅನಂತಕುಮಾರ ಹೆಗಡೆ ಹಾಗೂ ಶ್ರೀನಿವಾಸ್ ಹೆಬ್ಬಾರ್ ರಲ್ಲಿ ಯಾರಾದರೊಬ್ಬರು ಈ ಕ್ಷೇತ್ರದ ಅಭ್ಯರ್ಥಿಗಳಾಗಲಿದ್ದಾರೆ ಎನ್ನುವ ವರ್ತಮಾನವಿದೆ.
ಅತ್ತ ಕಾಂಗ್ರೆಸ್ ನಲ್ಲಿಕೂಡಾ ಶ್ರೀನಿವಾಸ್ ಹೆಬ್ಬಾರ್, ಉಪೇಂದ್ರ ಪೈ ಅಪೇಕ್ಷೆಯ ಮಧ್ಯೆ ನಿವೇದಿತ್ ಆಳ್ವಾ,ಸುಷ್ಮಾ ರೆಡ್ಡಿ ಭೀಮಣ್ಣ ನಾಯ್ಕರಿಗೆ ಪ್ರಬಲ ಸ್ಫರ್ಧೆ ನೀಡಲಿದ್ದಾರೆ ಎನ್ನುವುದು ವಾಸ್ತವ.
ಹೊಸ ಮುಖ- ಜೆ.ಡಿ.ಎಸ್. ಕಾಂಗ್ರೆಸ್,ಬಿ.ಜೆ.ಪಿ. ಯಾವ ಪಕ್ಷವಾದರೂ ಓಕೆ ಗೊಂದಲ,ಭಯ ಯಾಕೆ ಎನ್ನುತ್ತಿರುವ ಶ್ರೀನಿವಾಸ್ ಹೆಬ್ಬಾರ್,ಉಪೇಂದ್ರ ಪೈ,ಶಶಿಭೂಷಣ ಹೆಗಡೆಗಳ ನಡುವೆ ಕಾಂಗ್ರೆಸ್ ನಿಂದ ಬಿ.ಕೆ.ಹರಿಪ್ರಸಾದ್ ಅಥವಾ ಕುಮಾರ ಬಂಗಾರಪ್ಪ ಶಿರಸಿ ಕ್ಷೇತ್ರದ ಅಭ್ಯರ್ಥಿಗಳಾದರೆ ಉತ್ತಮ ಎನ್ನುವ ಅಂದಾಜು ಕಾಂಗ್ರೆಸ್ ಗಿದೆಯಂತೆ!
ಇನ್ನೊಂದು ವರ್ಷದ ಒಳಗೆ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಬಿ.ಕೆ.ಹರಿಪ್ರಸಾದ್ ರನ್ನು ಶಿರಸಿಯಿಂದ ಗೆಲ್ಲಿಸಿಕೊಂಡರೆ ಕಾಂಗ್ರೆಸ್ ಮುಖ್ಯಮಂತ್ರಿಗಳ ಆಕಾಂಕ್ಷಿಗಳಲ್ಲಿ ಬಿ.ಕೆ.ಹರಿಪ್ರಸಾದ್ ಹೆಸರು ಸುಲಭವಾಗಿ ಸೇರ್ಪಡೆಯಾಗುತ್ತದೆ. ಬಿ.ಕೆ. ಹರಿಪ್ರಸಾದ್ ಮುಖ್ಯಮಂತ್ರಿಯಾಗುವುದಾದರೆ ಶಿರಸಿ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ತುಂಡಾಗುತ್ತದೆ.
ಕ್ಷೇತ್ರ,ರಾಜ್ಯ,ಪಕ್ಷದ ವಿಚಾರಗಳಲ್ಲಿ ಬಿ.ಕೆ.ಹರಿಪ್ರಸಾದ್ ಗೆ ಎದುರಾಳೀಗಳೇ ಇಲ್ಲ. ರಾಜ್ಯ ವಿಧಾನಪರಿಷತ್ ನಲ್ಲಿ ಪ್ರತಿಪಕ್ಷದ ನಾಯಕರಾಗಿ ಸಿಂಹಗರ್ಜನೆ ಮಾಡುತ್ತಿರುವ ಬಿ.ಕೆ.ಹರಿ ರಾಜ್ಯದ ಕಾಂಗ್ರೆಸ್ ಹೈಕಮಾಂಡ್ ಪ್ರೀತಿಯ ಜನರಲ್ಲಿ ಮೊದಲನೆಯವರು. ಅವರು ಇಷ್ಟಪಟ್ಟ ಕಡೆ ಕಾಂಗ್ರೆಸ್ ಟಿಕೇಟ್ ಪಡೆಯುವ ಅವಕಾಶ, ಅನುಕೂಲ ಇರುವ ಬಿ.ಕೆ.ಎಚ್. ಬೆಂಗಳೂರಿನಿಂದ,ಅವರ ಮೂಲ ದಕ್ಷಿಣ ಕನ್ನಡದಿಂದ ಅಥವಾ ಉತ್ತರ ಕನ್ನಡದಿಂದ ಸ್ಫರ್ಧಿಸಬೇಕೆಂಬುದು ಕಾಂಗ್ರೆಸ್ ಅಪೇಕ್ಷೆಯಂತೆ. ಈ ಪ್ರಸ್ತುತ ವಿದ್ಯಮಾನದ ಹಿನ್ನೆಲೆಯಲ್ಲಿ ಶಿರಸಿ ಕ್ಷೇತ್ರದಲ್ಲಿ ಹೊಸ ಸಂಚಲನ ಪ್ರಾರಂಭವಾಗಿದ್ದು ಶಿರಸಿ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳು ಶಿರಸಿ ಕ್ಷೇತ್ರಕ್ಕೆ ಬಿ.ಕೆ. ಹರಿಪ್ರಸಾದ್ ಅಭ್ಯರ್ಥಿಗಳಾಗದಿದ್ದರೆ ನಮ್ಮ ಪೈಪೋಟಿ ಇದೆ. ಬಿ.ಕೆ.ಎಚ್. ಇಲ್ಲಿಂದ ಸ್ಫರ್ಧಿಸುವುದಾದರೆ ನಾವು ಹಿಂದೆ ಸರಿಯುತ್ತೇವೆ ಎಂದು ಒಕ್ಕೋರಲಿನಿಂದ ಹೇಳಿದ್ದಾರಂತೆ.
ಕಾಂಗ್ರೆಸ್ ಪ್ರಮುಖರ ಪಾಲಿಗೆ ಕಬ್ಬಿಣದ ಕಡಲೆಯಾಗಿರುವ ಬಿ.ಕೆ. ಹರಿಪ್ರಸಾದ್ ಉತ್ತರ ಕನ್ನಡಕ್ಕೆ ಹೋಗುವುದಾದರೆ ನಮ್ಮ ಅಭ್ಯಂತರವೂ ಇಲ್ಲ ಎಂದು ಮುಖ್ಯಮಂತ್ರಿ ಸ್ಥಾನದ ಪ್ರಮುಖ ಆಕಾಂಕ್ಷಿಗಳೇ ಒಪ್ಪಿದ್ದಾರಂತೆ! ಅಲ್ಲಿಗೆ ಶಿರಸಿ-ಸಿದ್ಧಾಪುರ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳಾಗಿದ್ದ ಒಂದು ಡಜನ್ ನಾಯಕರು ಶಿರಸಿ, ಯಲ್ಲಾಪುರ, ಹಳಿಯಾಳ, ಭಟ್ಖಳ ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲುವ ಹಿನ್ನೆಲೆಯಲ್ಲಿ ಮಾಸ್ಟರ್ ಪ್ಲಾನ್ ಮಾಡುತಿದ್ದು ಅದರಂತೆ ಬಿ.ಕೆ.ಹರಿಪ್ರಸಾದ್ ಶಿರಸಿ ಕ್ಷೇತ್ರದ ಅಭ್ಯರ್ಥಿಯಾದರೆ ನಾವು ಕಾಂಗ್ರೆಸ್ ತೀರ್ಮಾನಕ್ಕೆ ತಲೆಬಾಗದೆ ಬೇರೆ ಸಾಧ್ಯತೆ ಇಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಪ್ರತಿಷ್ಟಿತ ಶಿರಸಿ ವಿಧಾನಸಭಾ ಕ್ಷೇತ್ರ ಹೊಸಮುಖಗಳಿಂದ ರಾಜ್ಯದ ಗಮನ ಸೆಳೆಯಲಿದೆ ಎನ್ನುವುದು ಸ್ಫಷ್ಟ. ಬಿ.ಕೆ.ಹರಿಪ್ರಸಾದ್ ರನ್ನು ಉತ್ತರ ಕನ್ನಡಕ್ಕೆ ಕಳುಹಿಸಿ ಕರಾವಳಿ,ಮಲೆನಾಡಿನಲ್ಲಿ ಮತ್ತೆ ಕಾಂಗ್ರೆಸ್ ವೈಭವ ಮರಳಿಸುವುದು ಕಾಂಗ್ರೆಸ್ ನ ಚುನಾವಣಾ ತಂತ್ರಗಳಲ್ಲಿ ಒಂದು ಎನ್ನುವ ಅಂಶವೂ ಈಗ ಸುದ್ದಿಯಲ್ಲಿದೆ.
